ನವದೆಹಲಿ, ಅ. 12: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಮತ್ತು ಎಸ್‌ಐಆರ್ (SIR) ಪ್ರಕ್ರಿಯೆ ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಹಮ್ಮಿಕೊಂಡಿರುವ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನೆ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದು ಬಿಡುಗಡೆಗೊಳಿಸಲಾಗಿದ್ದ ಪ್ರಮುಖ ಯುಟ್ಯೂಬರ್ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಧ್ರುವ್ ರಾಠಿ (Dhruv Rathee) ಬಿಡುಗಡೆಯಾದ ಬಳಿಕ ಹೊಸ ವಿಡಿಯೊ ಒಂದನ್ನು ಹಂಚಿಕೊಂಡು ಪೊಲೀಸರ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ತಮ್ಮನ್ನು ಗೃಹಬಂಧನದಲ್ಲಿ ಇರಿಸಿರುವುದಾಗಿ ಹೇಳಿದ್ದಾರೆ.
ಮನೆಯ ಸುತ್ತ ಪೊಲೀಸರನ್ನು ನಿಯೋಜಿಸಿ, ತಮ್ಮನ್ನು ಅನಧಿಕೃತವಾಗಿ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ʼʼಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸಲಾಗುತ್ತಿದೆ ಹಾಗೂ ನನ್ನ ಪ್ರತಿ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧ್ರುವ್ ರಾಠಿ ಮನೆ ಮೇಲೆ ಕಣ್ಗಾವಲು:
ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು
ʼʼನನ್ನನ್ನು ಯಾವುದೇ ಸರಿಯಾದ ಕಾನೂನು ಪ್ರಕ್ರಿಯೆಯಡಿ ಬಂಧಿಸಿರಲಿಲ್ಲ, ಬದಲಾಗಿ ನನ್ನನ್ನು ಅಪಹರಿಸುವ ರೀತಿಯಲ್ಲಿ ಕರೆದೊಯ್ದರುʼʼ ಎಂದು ಧ್ರುವ್ ರಾಠಿ ಆರೋಪಿಸಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ, ಗುರುಗ್ರಾಮದ ಸೆಕ್ಟರ್ 56ರಲ್ಲಿರುವ ಕೇಂದ್ರೀಯ ವಿಹಾರ್ ಸೊಸೈಟಿಯಲ್ಲಿರುವ ಧ್ರುವ್ ರಾಠಿ ಅವರ ಮನೆಗೆ ಶನಿವಾರ (ಅಕ್ಟೋಬರ್ 10) ಮುಂಜಾನೆ 30ಕ್ಕೂ ಹೆಚ್ಚು ಪೊಲೀಸರು ಆಗಮಿಸಿದ್ದರು. ಯಾವುದೇ ಅಧಿಕೃತ ವಾರಂಟ್ ಅಥವಾ ಸಮರ್ಪಕ ಕಾರಣ ನೀಡದೆ ಪೊಲೀಸರು ತಮ್ಮನ್ನು ಎಳೆದಾಡಿದರು ಎಂದು ಅವರು ದೂರಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಹೋರಾಟ, ಸಿಜೆಪಿಗೆ ಬೆಂಬಲ: ಯಾರು ಈ ಯುಟ್ಯೂಬರ್ ಧ್ರುವ್ ರಾಠಿ?
ʼʼನನ್ನನ್ನು ಮಲಗುವ ಕೋಣೆಯಿಂದ ಎಳೆದುಕೊಂಡು ಬಂದು, ಮೆಟ್ಟಿಲು ಮೂಲಕ ಕೆಳಗೆ ಕರೆದೊಯ್ದರು. ನನ್ನ ಇಡೀ ದೇಹಕ್ಕೆ ಗಾಯಗಳಾಗಿವೆ. ನನ್ನ ಪೋಷಕರ ಮೊಬೈಲ್‌ಗಳನ್ನೂ ಕಸಿದುಕೊಳ್ಳಲಾಯಿತು" ಎಂದು ಅವರು ತಮ್ಮ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಸುಮಾರು 22 ಗಂಟೆ ತಮ್ಮ ಮೊಬೈಲ್ ಕೊಡದೆ ಹಾಗೂ ವಕೀಲರನ್ನು ಸಂಪರ್ಕಿಸಲು ಅವಕಾಶ ನೀಡದೆ ಕಸ್ಟಡಿಯಲ್ಲಿಡಲಾಗಿತ್ತು ಎಂದೂ ಅವರು ಆರೋಪಿಸಿದ್ದಾರೆ.
ಕಾನೂನು ಪ್ರಕ್ರಿಯೆಗಳ ಬಳಿಕ ತಡರಾತ್ರಿ ಬಿಡುಗಡೆಯಾಗಿ ಮನೆಗೆ ಮರಳಿದ್ದರೂ, ಇದು ತಮ್ಮ ಸ್ವಾತಂತ್ರ್ಯಕ್ಕೆ ವಿಧಿಸಿದ ಕಠಿಣ ನಿರ್ಬಂಧ ಎಂದು ಧ್ರುವ್ ರಾಠಿ ಕಿಡಿಕಾರಿದ್ದಾರೆ. ಮನೆಯ ಸುತ್ತಲೂ ಸುಮಾರು 15ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ತಮ್ಮ ಚಲನವಲನಗಳ ಮೇಲೆ ನಿರಂತರ ಕಣ್ಗಾವಲಿಡಲಾಗಿದೆ ಎಂದಿದ್ದಾರೆ. ʼʼಸರ್ಕಾರ ಎಷ್ಟೇ ನಿರ್ಬಂಧಗಳನ್ನು ಹೇರಿದರೂ, ದೇಶದ ಜನರ ಪರವಾಗಿ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಾನು ಎಂದಿಗೂ ಧ್ವನಿ ಎತ್ತುವುದನ್ನು ನಿಲ್ಲಿಸುವುದಿಲ್ಲ" ಎಂದು ಧ್ರುವ್ ರಾಠಿ ಸ್ಪಷ್ಟಪಡಿಸಿದ್ದಾರೆ.
ಸಿಜೆಪಿ ಪ್ರತಿಭಟನೆಗೂ ಮುನ್ನ ಯೂಟ್ಯೂಬರ್ ಧ್ರುವ್ ರಾಠಿ ಬಂಧನ; ದೆಹಲಿಯಲ್ಲಿ ಹೆಚ್ಚಿದ ಭದ್ರತೆ
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಹಾಗೂ ಎಸ್‌ಐಆರ್ ಅಕ್ರಮಗಳ ಖಂಡಿಸಿ ಸಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಪ್ರತಿಭಟನೆಗೆ ದೆಹಲಿ ಪೊಲೀಸರು ಮೊದಲೇ ಅನುಮತಿ ನಿರಾಕರಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ದೆಹಲಿಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಲು ಮುಂದಾದ ವಿರೋಧ ಪಕ್ಷಗಳ ಮುಖಂಡರು ಸೇರಿ ಸಾವಿರಾರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಬೆಳವಣಿಗೆಯಿಂದ ರಾಷ್ಟ್ರೀಯ ರಾಜಕಾರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.