ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi: ಕಿಂಗ್ ಚಾರ್ಲ್ಸ್‌ಗೆ ಪ್ರಧಾನಿ ಮೋದಿ ಕೊಟ್ಟ ಉಡುಗೊರೆ ಏನು ಗೊತ್ತೇ?

ಯುಕೆ (United Kingdom) ಮತ್ತು ಭಾರತದ (India) ನಡುವಿನ ಸಮಗ್ರ ವ್ಯಾಪಾರ ಒಪ್ಪಂದವನ್ನು (Free Trade Agreement) ಅಂತಿಮಗೊಳಿಸುವ ಸಲುವಾಗಿ ಲಂಡನ್ (London) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಗುರುವಾರ ಸ್ಯಾಂಡ್ರಿಂಗ್ ಹ್ಯಾಮ್ ನಲ್ಲಿ ಕಿಂಗ್ ಚಾರ್ಲ್ಸ್ III (King Charles III) ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ಕಿಂಗ್ ಚಾರ್ಲ್ಸ್ ಅವರಿಗೆ ವಿಶೇಷವಾದ ಉಡುಗೊರೆಯೊಂದನ್ನು ನೀಡಿದರು.

ಪ್ರಧಾನಿ ಮೋದಿಯಿಂದ ಕಿಂಗ್ ಚಾರ್ಲ್ಸ್‌ಗೆ ವಿಶೇಷ ಉಡುಗೊರೆ

ನಾರ್ಫೋಕ್‌: ಯುಕೆ (United Kingdom) ಮತ್ತು ಭಾರತದ (India) ನಡುವಿನ ಸಮಗ್ರ ವ್ಯಾಪಾರ ಒಪ್ಪಂದವನ್ನು (Free Trade Agreement) ಅಂತಿಮಗೊಳಿಸುವ ಸಲುವಾಗಿ ಲಂಡನ್ (London) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಗುರುವಾರ ಸ್ಯಾಂಡ್ರಿಂಗ್ ಹ್ಯಾಮ್ ನಲ್ಲಿ ಕಿಂಗ್ ಚಾರ್ಲ್ಸ್ III (King Charles III) ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ಕಿಂಗ್ ಚಾರ್ಲ್ಸ್ ಅವರಿಗೆ ವಿಶೇಷವಾದ ಉಡುಗೊರೆಯೊಂದನ್ನು ನೀಡಿದರು. ತಾಯಿಯ ಹೆಸರಲ್ಲಿ ಒಂದು ಮರ (ಏಕ್ ಪೆಡ್ ಮಾ ಕೆ ನಾಮ್) ಅಭಿಯಾನದಿಂದ ಪ್ರೇರಿತವಾದ ಮರವನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದು, ಇದಕ್ಕೆ ಕಿಂಗ್ ಚಾರ್ಲ್ಸ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ನಾರ್ಫೋಕ್‌ನ ಸ್ಯಾಂಡ್ರಿಂಗ್ ಹ್ಯಾಮ್ ಹೌಸ್ ನಲ್ಲಿರುವ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾದ ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಚಾರ್ಲ್ಸ್ ಅವರೊಂದಿಗೆ ಎರಡು ರಾಷ್ಟ್ರಗಳ ನಡುವೆ ಇರುವ ಸಮಸ್ಯೆಗಳು, ಭಾರತ-ಯುಕೆ ಸಂಬಂಧಗಳಲ್ಲಿನ ಪ್ರಗತಿಯ ಕುರಿತು ಚರ್ಚೆ ನಡೆಸಿದರು. ಅಲ್ಲದೇ ಅವರಿಬ್ಬರೂ ಯುಕೆಯಲ್ಲಿ ಆಯುರ್ವೇದ, ಯೋಗ ಮತ್ತು ಪರಿಸರಕ್ಕಾಗಿ ಜೀವನಶೈಲಿಯನ್ನು ಉತ್ತೇಜಿಸುವ ವಿವಿಧ ಚಟುವಟಿಕೆಗಳ ಬಗ್ಗೆಯೂ ಚರ್ಚಿಸಿದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್, ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಂಗ್ಲೆಂಡ್‌ನ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ನಲ್ಲಿ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾದರು. ಅವರಿಬ್ಬರು ದ್ವಿಪಕ್ಷೀಯ ಸಮಸ್ಯೆಗಳು, ಭಾರತ-ಯುಕೆ ಸಂಬಂಧಗಳಲ್ಲಿನ ಪ್ರಗತಿಯ ಬಗ್ಗೆ ಚರ್ಚಿಸಿದರು. ಇವರಿಬ್ಬರ ಭೇಟಿಯ ಕುರಿತು ಬ್ರಿಟಿಷ್ ರಾಜಮನೆತನವು ಛಾಯಾಚಿತ್ರವನ್ನು ಕೂಡ ಹಂಚಿಕೊಂಡಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಈ ಶರತ್ಕಾಲದಲ್ಲಿ ನೆಡಬೇಕಾದ ಮರವನ್ನು ರಾಜನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಗೊರೆ ಅವರು ಪ್ರಾರಂಭಿಸಿದ ಪರಿಸರ ಅಭಿಯಾನವಾದ ಏಕ್ ಪೆಡ್ ಮಾ ಕೆ ನಾಮ್ ನಿಂದ ಪ್ರೇರಿತವಾಗಿದೆ. ಇದು ಜನರು ತಮ್ಮ ತಾಯಂದಿರಿಗೆ ಗೌರವ ಸಲ್ಲಿಸಲು ಮರವನ್ನು ನೆಡಲು ಪ್ರೋತ್ಸಾಹಿಸುತ್ತದೆ ಎಂದು ರಾಜಮನೆತನವು ತಿಳಿಸಿದೆ.



ಈ ಹಿಂದೆ ಕಿಂಗ್ ಚಾರ್ಲ್ಸ್ ಅವರು 2023ರ ಡಿಸೆಂಬರ್ ತಿಂಗಳಲ್ಲಿ ದುಬೈನಲ್ಲಿ ಆಯೋಜಿಸಲಾದ ಕಾಪ್28 ಯುಎನ್ ಹವಾಮಾನ ಬದಲಾವಣೆ ಶೃಂಗಸಭೆಯ ವೇಳೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.

ಕಿಂಗ್ ಚಾರ್ಲ್ಸ್ ಅವರನ್ನು ಭೇಟಿ ಮಾಡುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಎರಡೂ ರಾಷ್ಟ್ರಗಳ ನಡುವಿನ ಪ್ರಮುಖ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿದರು. ಇದು 2020ರಲ್ಲಿ ಯುರೋಪಿಯನ್ ಒಕ್ಕೂಟದಿಂದ ಹೊರಬಂದ ಅನಂತರ ಯುಕೆಗೆ ಸಿಕ್ಕಿರುವ ಅತಿದೊಡ್ಡ ವ್ಯಾಪಾರ ಒಪ್ಪಂದವಾಗಿದೆ.



ಪ್ರಧಾನಿ ಮೋದಿ ಮತ್ತು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ನಡುವಿನ ಉನ್ನತ ಮಟ್ಟದ ಚರ್ಚೆಗಳ ಅನಂತರ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ಮಾತನಾಡಿ, ಸಮಗ್ರ ಆರ್ಥಿಕ ವ್ಯಾಪಾರ ಒಪ್ಪಂದ ಇಂದು ಪೂರ್ಣಗೊಂಡಿದೆ. ಭಾರತೀಯ ಜವಳಿ, ಪಾದರಕ್ಷೆಗಳು, ರತ್ನಗಳು, ಆಭರಣಗಳು, ಸಮುದ್ರಾಹಾರ ಯುಕೆ ಮಾರುಕಟ್ಟೆಯಲ್ಲಿ ಉತ್ತಮ ಪ್ರವೇಶವನ್ನು ಪಡೆಯಲಿದೆ ಎಂದು ಹೇಳಿದರು. ಇದೊಂದು ಐತಿಹಾಸಿಕ ದಿನವಾಗಿದೆ. ಹಲವಾರು ವರ್ಷಗಳ ಕಠಿಣ ಪರಿಶ್ರಮದ ಅನಂತರ ಇಂದು ಎರಡೂ ರಾಷ್ಟ್ರಗಳು ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಹೇಳಲು ಸಂತೋಷವಾಗಿದೆ ಎಂದು ಅವರು ತಿಳಿಸಿದರು.