ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಮಂಗಳವಾರ (ಸ್ಥಳೀಯ ಸಮಯ) ಶ್ವೇತಭವನದಲ್ಲಿ (Whitehouse) ದೀಪಾವಳಿ (Deepavali festival) ಆಚರಣೆಯಲ್ಲಿ ಭಾಗವಹಿಸಿ ದೀಪಗಳನ್ನು ಬೆಳಗಿಸಿದರು. ಈ ಸಂದರ್ಭದಲ್ಲಿ ಅವರು ಭಾರತದ ಜನರಿಗೆ ಮತ್ತು ಭಾರತೀಯ-ಅಮೆರಿಕನ್ನರಿಗೆ ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿದರು. ಜೊತೆಗೆ ಟ್ರಂಪ್ ಅವರು ತಮ್ಮ “ಉತ್ತಮ ಸ್ನೇಹಿತ” ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೊಂದಿಗೆ “ಉತ್ತಮ ಸಂಭಾಷಣೆ” ನಡೆಸಿದ್ದೇನೆ ಎಂದು ಮಾಹಿತಿ ನೀಡಿದರು.
ಭಾರತ- ಅಮೆರಿಕಗಳ ನಡುವಿನ ತೆರಿಗೆ ಸಮರದ ನಡುವೆಯೇ ಇದು ಘಟಿಸಿದೆ. ದೀಪಾವಳಿ ಆಚರಣೆ ಸಮಯದ ಹೇಳಿಕೆಯಲ್ಲಿ ಡೊನಾಲ್ಡ್ ಟ್ರಂಪ್, “ಭಾರತದ ಜನರಿಗೆ ನಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ” ಎಂದು ಹೇಳಿದರು. “ನಾನು ಇಂದು ನಿಮ್ಮ ಪ್ರಧಾನಿಯೊಂದಿಗೆ ಮಾತನಾಡಿದ್ದೇನೆ. ಉತ್ತಮ ಸಂಭಾಷಣೆ ನಡೆಸಿದೆ. ನಾವು ವ್ಯಾಪಾರದ ಬಗ್ಗೆ ಮಾತನಾಡಿದ್ದೇವೆ. ಅವರು ಅದರಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ” ಎಂದು ಟ್ರಂಪ್ ಹೇಳಿದರು.
“ನಾವು ಸ್ವಲ್ಪ ಸಮಯದ ಹಿಂದೆ ಪಾಕಿಸ್ತಾನದೊಂದಿಗೆ ಯುದ್ಧ ಮಾಡಬಾರದು ಎಂಬ ಬಗ್ಗೆ ಮಾತನಾಡಿದ್ದರೂ ವ್ಯಾಪಾರವು ಒಳಗೊಂಡಿತ್ತು. ನಾನು ಅದರ ಬಗ್ಗೆ ಮಾತನಾಡಲು ಸಾಧ್ಯವಾಯಿತು. ಪಾಕಿಸ್ತಾನ ಮತ್ತು ಭಾರತದೊಂದಿಗೆ ನಮಗೆ ಯಾವುದೇ ಯುದ್ಧವಿಲ್ಲ. ಅದು ತುಂಬಾ ಒಳ್ಳೆಯದು” ಎಂದು ಟ್ರಂಪ್ ಹೇಳಿದ್ದಾರಲ್ಲದೆ, ಪ್ರಧಾನಿ ಮೋದಿಯವರನ್ನು “ಶ್ರೇಷ್ಠ ವ್ಯಕ್ತಿ” ಮತ್ತು “ಉತ್ತಮ ಸ್ನೇಹಿತ” ಎಂದು ಕರೆದಿದ್ದಾರೆ.