Cheetah Project: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರಲಿವೆ ಎಂಟು ಚಿರತೆ
ದಕ್ಷಿಣ ಆಫ್ರಿಕಾದಿಂದ (south africa) ಮತ್ತೆ ಎಂಟು ಚಿರತೆಗಳನ್ನು (Cheetah Project) ಭಾರತಕ್ಕೆ ತರಲು ಸಿದ್ಧತೆ ನಡೆಯುತ್ತಿದೆ. 2022ರ ಸೆಪ್ಟೆಂಬರ್ 17ರಂದು ನಮೀಬಿಯಾದಿಂದ (Namibia) ಐದು ಹೆಣ್ಣು ಮತ್ತು ಮೂರು ಗಂಡು ಚಿರತೆಗಳನ್ನು ತರಲಾಗಿತ್ತು. ಬಳಿಕ 2023ರ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳನ್ನು ತರಲಾಗಿತ್ತು. ಇದೀಗ ಮೇ ತಿಂಗಳೊಳಗೆ ಎರಡು ಹಂತಗಳಲ್ಲಿ ಒಟ್ಟು ಎಂಟು ಚಿರತೆಗಳನ್ನು ದಕ್ಷಿಣ ಆಫ್ರಿಕಾದ ಬೋಟ್ಸ್ ವಾನಾದಿಂದ ಭಾರತಕ್ಕೆ ತರಲಾಗುತ್ತಿದೆ.


ಭೋಪಾಲ್: ದಕ್ಷಿಣ ಆಫ್ರಿಕಾದಿಂದ (South africa) ಮತ್ತೆ ಎಂಟು ಚಿರತೆಗಳನ್ನು (Cheetah Project) ಭಾರತಕ್ಕೆ ತರಲು ಸಿದ್ಧತೆ ನಡೆಯುತ್ತಿದೆ. 2022ರ ಸೆಪ್ಟೆಂಬರ್ 17ರಂದು ನಮೀಬಿಯಾದಿಂದ (Namibia) ಐದು ಹೆಣ್ಣು ಮತ್ತು ಮೂರು ಗಂಡು ಚಿರತೆಗಳನ್ನು ತರಲಾಗಿತ್ತು. ಬಳಿಕ 2023ರ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳನ್ನು ತರಲಾಗಿದೆ. ಈ ಚಿರತೆಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಇರಿಸಲಾಗಿದ್ದು, ಸದ್ಯ ಭಾರತದಲ್ಲಿ ಜನಿಸಿದ 14 ಮರಿಗಳನ್ನು ಒಳಗೊಂಡಂತೆ ದಕ್ಷಿಣ ಆಫ್ರಿಕಾದಿಂದ ತರಿಸಿರುವ 26 ಚಿರತೆಗಳಿವೆ. ಇದೀಗ ಮೇ ತಿಂಗಳೊಳಗೆ ಎರಡು ಹಂತಗಳಲ್ಲಿ ಒಟ್ಟು ಎಂಟು ಚಿರತೆಗಳನ್ನು ದಕ್ಷಿಣ ಆಫ್ರಿಕಾದ ಬೋಟ್ಸ್ ವಾನಾದಿಂದ (Botswana) ಭಾರತಕ್ಕೆ ತರಲಾಗುತ್ತಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸಮ್ಮುಖದಲ್ಲಿ ಶುಕ್ರವಾರ ನಡೆದ ಚಿರತೆ ಯೋಜನೆಯ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದಾರೆ ಎಂದು ಮಧ್ಯಪ್ರದೇಶ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ದಕ್ಷಿಣ ಆಫ್ರಿಕಾ, ಬೋಟ್ಸ್ ವಾನಾ ಮತ್ತು ಕೀನ್ಯಾದಿಂದ ಹೆಚ್ಚಿನ ಚಿರತೆಗಳನ್ನು ಭಾರತಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ಇದೀಗ ಎರಡು ಹಂತಗಳಲ್ಲಿ ಎಂಟು ಚಿರತೆಗಳನ್ನು ಭಾರತಕ್ಕೆ ತರಲಾಗುವುದು. ಮೇ ತಿಂಗಳೊಳಗೆ ಬೋಟ್ಸ್ ವಾನಾದಿಂದ ನಾಲ್ಕು ಚಿರತೆಗಳನ್ನು ಭಾರತಕ್ಕೆ ತರುವ ಯೋಜನೆ ಇದೆ. ಇದರ ಬಳಿಕ ಇನ್ನೂ ನಾಲ್ಕು ಚಿರತೆಗಳನ್ನು ತರಲಾಗುವುದು. ಈ ನಿಟ್ಟಿನಲ್ಲಿ ಪ್ರಸ್ತುತ ಭಾರತ ಮತ್ತು ಕೀನ್ಯಾ ನಡುವೆ ಮಾಡಿರುವ ಒಪ್ಪಂದವನ್ನು ವಿಸ್ತರಿಸಲಾಗುತ್ತಿದೆ ಎಂದು ಎನ್‌ಟಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ಚಿರತೆ ಯೋಜನೆಗೆ ಇದುವರೆಗೆ 112 ಕೋಟಿ ರೂ. ಗೂ ಹೆಚ್ಚು ಖರ್ಚು ಮಾಡಲಾಗಿದೆ. ಅದರಲ್ಲಿ ಶೇ. 67ರಷ್ಟನ್ನು ಮಧ್ಯಪ್ರದೇಶದ ಚಿರತೆ ಪುನರ್ವಸತಿಗೆ ಖರ್ಚು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಿರತೆ ಯೋಜನೆಯಡಿಯಲ್ಲಿ ಚಿರತೆಗಳನ್ನು ಗಾಂಧಿ ಸಾಗರ್ ಅಭಯಾರಣ್ಯಕ್ಕೆ ಹಂತ ಹಂತವಾಗಿ ಸ್ಥಳಾಂತರಿಸಲಾಗುವುದು. ಈ ಅಭಯಾರಣ್ಯವು ರಾಜಸ್ಥಾನದ ಗಡಿಯ ಪಕ್ಕದಲ್ಲಿದೆ. ಆದ್ದರಿಂದ ಅಂತರ್ ರಾಜ್ಯ ಚಿರತೆ ಸಂರಕ್ಷಣಾ ಪ್ರದೇಶವನ್ನು ಸ್ಥಾಪಿಸಲು ಮಧ್ಯಪ್ರದೇಶ ಮತ್ತು ರಾಜಸ್ಥಾನದ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: Viral Video: ವ್ಯಾಘ್ರನ ಹಸಿವಿಗೆ ಹೆಬ್ಬಾವೇ ಫುಲ್ ಮೀಲ್ಸ್- ಆಮೇಲೇನಾಯ್ತು ಗೊತ್ತಾ? ಇಲ್ಲಿದೆ ಶಾಕಿಂಗ್ ವಿಡಿಯೊ
ಕುನೋ ರಾಷ್ಟ್ರೀಯ ಉದ್ಯಾನ ಮತ್ತು ಗಾಂಧಿ ಸಾಗರ್ ಅಭಯಾರಣ್ಯದಲ್ಲಿ "ಚಿರತೆ ಮಿತ್ರ" ಗಳ ಸಾಮರ್ಥ್ಯವನ್ನು ಹೆಚ್ಚಿಸಲು ವಿಶೇಷ ತರಬೇತಿ ನೀಡಲಾಗುತ್ತಿದೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 26 ಚಿರತೆಗಳಿದ್ದು ಅವುಗಳಲ್ಲಿ 16 ತೆರೆದ ಕಾಡಿನಲ್ಲಿ ಮತ್ತು 10 ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಿರತೆಗಳನ್ನು ಮೇಲ್ವಿಚಾರಣೆ ಮಾಡಲು ಉಪಗ್ರಹ ಕಾಲರ್ ಐಡಿಗಳನ್ನು ಬಳಸಿಕೊಂಡು 24 ಗಂಟೆಗಳ ಟ್ರ್ಯಾಕಿಂಗ್ ನಡೆಸಲಾಗುತ್ತಿದೆ. ಜ್ವಾಲಾ, ಆಶಾ, ಗಾಮಿನಿ ಮತ್ತು ವೀರಾ ಎಂಬ ಹೆಣ್ಣು ಚಿರತೆಗಳು ಮರಿಗಳಿಗೆ ಜನ್ಮ ನೀಡಿವೆ. ಎರಡು ವರ್ಷಗಳಲ್ಲಿ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುನೊದಲ್ಲಿ ಚಿರತೆ ಸಫಾರಿ ಆರಂಭಿಸಲು ಅನುಮತಿ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಅರಣ್ಯ ಪ್ರದೇಶಗಳಲ್ಲಿ ಅಥವಾ ಪರಿಸರ ಸೂಕ್ಷ್ಮ ವಲಯಗಳಲ್ಲಿ ಸಫಾರಿ ಆರಂಭಿಸಲು ಈ ಅನುಮತಿ ಅಗತ್ಯ. ಈ ಅರ್ಜಿಯ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ.