ಗೋವಾ, ಆ.11: ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ, ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವುದಕ್ಕಾಗಿ, ಕಲೆ-ಸಂಸ್ಕೃತಿಯ ಉಳಿವಿಗಾಗಿ ಕಳೆದ 30 ವರ್ಷಗಳಿಂದ ಶ್ರೀ ಅಖಿಲ ಹವ್ಯಕ ಮಹಾಸಭಾ ಪ್ರತಿಬಿಂಬ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಇದೇ ಮೊಟ್ಟಮೊದಲ ಬಾರಿಗೆ ಗೋವಾ ಪ್ರಾಂತ್ಯದ ಪ್ರತಿಬಿಂಬ ಕಾರ್ಯಕ್ರಮ ಮಡಗಾಂವನಲ್ಲಿ ಈಚೆಗೆ ಅದ್ಧೂರಿಯಾಗಿ ಜರುಗಿತು.
ಗೋವಾ ಪ್ರತಿಬಿಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಮಾತಾನಾಡಿ, ಪ್ರತಿಬಿಂಬ ಕಾರ್ಯಕ್ರಮ ಪ್ರತಿಭೆಗಳಿಗೆ ಸ್ಫೂರ್ತಿ ನೀಡುತ್ತದೆ, ಪ್ರೇರಣೆ ನೀಡುತ್ತದೆ ಹಾಗೂ ಕಳೆದ ಮೂರು ದಶಕಗಳಿಂದ ಹವ್ಯಕ ಮಹಾಸಭೆ ನಿರಂತರವಾಗಿ ಈ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿರುವುದೇ ಇದರ ಪ್ರಾಮುಖ್ಯತೆಯನ್ನು ದೃಢೀಕರಿಸುತ್ತಿದೆ ಎಂದು ತಿಳಿಸಿದರು. ಈ ಸಾಲಿನಲ್ಲಿ 14 ಪ್ರಾಂತ್ಯಗಳಲ್ಲಿ ಪ್ರತಿಬಿಂಬ ಸ್ಪರ್ಧಾ ಸೌರಭ ನಡೆಯಲಿದೆ. ಈ ಸಾಂಸ್ಕೃತಿಕ ಉತ್ಸವ ಪ್ರತಿ ವರ್ಷವೂ ನಡೆಯಲಿ ಎಂದು ಕರೆ ನೀಡಿದರು. ಯಲ್ಲಾಪುರದ ಹವ್ಯಕ ಮಹಾಸಭಾ ಆಯೋಜಿಸಿದ್ದ ಸಂಸ್ಕಾರೋತ್ಸವ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸನ್ನು ಸ್ಮರಿಸಿದರು. ಆಚಾರ್ಯ ಶಂಕರರ ತತ್ತ್ವಗಳ ಪ್ರಸಾರಕ್ಕಾಗಿ ಹವ್ಯಕ ಮಹಾಸಭೆ ಶಂಕರೋತ್ಸವ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸುತ್ತಿದೆ ಎಂದರು.
ಶ್ರೀ ಅಖಿಲ ಹವ್ಯಕ ಮಹಾಸಭೆ ಹವ್ಯಕ ಮಹಿಳೆಯರ ಸಂಘಟನೆಗಾಗಿ ಬೇರೆ ಬೇರೆ ಪ್ರಾಂತ್ಯಗಳಲ್ಲಿ, ದೇಶ- ವಿದೇಶಗಳಲ್ಲಿ 83 ಹವ್ಯಕ ಮಹಿಳಾ ವೇದಿಕೆಗಳನ್ನು ಆರಂಭಗೊಳಿಸಲಿದೆ. ತನ್ಮೂಲಕ ಹವ್ಯಕ ಮಹಿಳಾ ಸಂಘಟನಾ ಶಕ್ತಿಯನ್ನು ಸಮಾಜಕ್ಕೆ ತೋರಿಸಿದಂತಾಗುತ್ತದೆ. ಇದೇ ವರ್ಷ ಡಿಸೆಂಬರ್ 20ರಂದು ರಾಜಧಾನಿಯಲ್ಲಿ ಹವ್ಯಕ ಮಹಾಸಭೆ ಆಯೋಜನೆಯ ಬೃಹತ್ ಹವ್ಯಕ ಮಹಿಳಾ ಸಮಾವೇಶ ನಡೆಯಲಿದೆ ಎಂದರು.
ಡಾ.ದರ್ಬೆ ಜಯರಾಮ ಭಟ್, ಡಾ. ರಘುರಾಮಚಂದ್ರ ಭಟ್, ಗಜಾನನ ಪದ್ಮನಾಭಯ್ಯ, ಪ್ರೊ. ಡಾ. ಗಣೇಶ ಹೆಗಡೆ ಅಭ್ಯಾಗತರಾಗಿ ಭಾಗವಹಿಸಿ, ಹವ್ಯಕ ಸಂಸ್ಕೃತಿ ಉಳಿಸಿ ಬೆಳೆಸುವುದರ ಕುರಿತಾಗಿ ಮಾತನಾಡಿದರು. ಗೋವಾ ಪ್ರಾಂತ್ಯ ಪ್ರತಿಬಿಂಬ ಸಂಚಾಲಕ ಎಸ್. ಪಿ. ಭಟ್ ಮತ್ತು ರೇಖಾ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಾಬಲ ಭಟ್ ಮತ್ತು ಗಿರೀಶ ಹೆಗಡೆ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಪ್ರತಿಬಿಂಬ ಕೇಂದ್ರ ಸಂಚಾಲಕ ದೀಪಕ ಹೆಗಡೆ ಗೋಳಿಕೈ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗೋವಾ ಪ್ರಾಂತ್ಯದ ಹವ್ಯಕ ಮಹಿಳಾ ವೇದಿಕೆಯನ್ನು ಸುಲೋಚನಾ ಹೆಗಡೆ ಉದ್ಘಾಟಿಸಿದರು. ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ, ಶಾಂತಾ ಭಟ್ ಮತ್ತೂ ಅನೂರಾಧಾ ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೋವಾ ಹವ್ಯಕ ಮಹಿಳಾ ವೇದಿಕೆಯ ಸಂಚಾಲಕಿಯಾಗಿ ರೇಖಾ ಹೆಗಡೆ, ಸಹ ಸಂಚಾಲಕಿಯಾಗಿ ವಿದ್ಯಾ ರಾಮಚಂದ್ರ ಹೆಗಡೆ ಹೆಗ್ನೂರು ಮುಂತಾದ 18 ಮಹಿಳಾ ಪದಾಧಿಕಾರಿಗಳು ಹವ್ಯಕ ಮಹಿಳಾ ವೇದಿಕೆಯ ಕೇಂದ್ರ ಸಂಚಾಲಕಿ ಮಧುರಾ ಗಾಂವ್ಕರ್ ನೇತೃತ್ವದಲ್ಲಿ ನೇಮಕಗೊಂಡು ನಿಯುಕ್ತಿಪತ್ರ ಪಡೆದರು.
ಪ್ರತಿಬಿಂಬ ಕೇಂದ್ರ ಸಂಚಾಲಕ ದೀಪಕ ಹೆಗಡೆ ಗೋಳಿಕೈ ಮಾತನಾಡಿ, ಪ್ರತಿಬಿಂಬ ಕೇವಲ ಸ್ಪರ್ಧೆ, ಪಾರಿತೋಷಕಕ್ಕೆ ಸೀಮಿತವಾಗಿರದೆ ಸಂಸ್ಕೃತಿ, ಸಂಪ್ರದಾಯ, ಸದ್ವಿಚಾರಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ, ಧಾರೆ ಯೆರೆಯುವ ಕಾರ್ಯವಾಗಬೇಕೆಂಬ ಆಶಯ ವ್ಯಕ್ತಪಡಿಸಿದರು. ಶ್ರೀ ಅಖಿಲ ಹವ್ಯಕ ಮಹಾಸಭೆಯ ಸಮಾಜದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾ ಪ್ರೋತ್ಸಾಹ ಧನ, ಆರ್ಥಿಕವಾಗಿ ಹಿಂದುಳಿದ ಸಮಾಜದ ಅಶಕ್ತರಿಗೆ ನೀಡುವ ಆರ್ಥಿಕ ಸಹಾಯ ನಿಧಿ, ಬೆಂಗಳೂರಿನಲ್ಲಿರುವ ವಿದ್ಯಾರ್ಥಿ ನಿಲಯಗಳು, ಮಹಾಸಭೆಯ ಸಭಾಭವನಗಳು ಮುಂತಾದ ಸೌಲಭ್ಯಗಳ ಬಗ್ಗೆ ಹಾಗೂ ಮಹಾಸಭಾ ಆಯೋಜಿಸುತ್ತಿರುವ ವಿಜಯೀಭವ, ಸಂಸ್ಕಾರೋತ್ಸವ, ಗಾಯತ್ರಿ ಮಹೋತ್ಸವ ಮುಂತಾದ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಯಲ್ಲಿ ಉಲ್ಲೇಖಿಸಿದರು.
ಮಹಾಬಲ ಭಟ್, ವಿದ್ಯಾ ಹೆಗಡೆ ಹಾಗೂ ಗಂಗಾ ಭಟ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಐ. ಕೆ. ಹೆಗಡೆ, ಎಂ.ಕೆ. ಹೆಗಡೆ, ಗಿರೀಶ ಹೆಗಡೆ, ಎಸ್.ಎನ್. ಭಟ್, ಜಿ.ಆರ್. ಹೆಗ್ಡೆ, ವಿಜಯಾ ಹೆಗಡೆ, ಮಂಜುನಾಥ ಹೆಗಡೆ, ರಾಮಚಂದ್ರ ಹೆಗಡೆ, ಶ್ರೀಪಾದ ರಾವ್, ವಿನಾಯಕ ಭಟ್, ಚಿನ್ಮಯ ಹೆಗ್ಡೆ ಮುಂತಾದ ಸ್ಥಳೀಯರು ಸಹಕಾರ ನೀಡಿ ಗೋವಾ ಪ್ರತಿಬಿಂಬವನ್ನು ಯಶಸ್ವಿಗೊಳಿಸಿದರು.