ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಫ್ಲಾಪ್‌ ಶೋ, ಗ್ರೌಂಡ್‌ ಖಾಲಿ, ಖಾಲಿʼʼ: ಇಂಡಿಯಾ ಒಕ್ಕೂಟದ ದೆಹಲಿ ರ‍್ಯಾಲಿಗೆ ಬಿಜೆಪಿ ವ್ಯಂಗ್ಯ; ವಿಡಿಯೊ ಮೂಲಕ ಕೌಂಟರ್‌

Ramlila Maidan Rally: ಚುನಾವಣಾ ಆಯೋಗದ ವಿರುದ್ಧದ ಆರೋಪಗಳನ್ನು ಮುಂದಿಟ್ಟು ಇಂಡಿಯಾ ಒಕ್ಕೂಟ ದೆಹಲಿಯ ರಾಮ್‌ಲಿಲಾ ಮೈದಾನದಲ್ಲಿ ಆಯೋಜಿಸಿದ್ದ ಪ್ರತಿಭಟನೆ ವಿಫಲವಾಗಿದೆ, ಮೈದಾನ ಖಾಲಿಯಾಗಿತ್ತು ಎಂದು ಬಿಜೆಪಿ ವ್ಯಂಗ್ಯವಾಡಿದೆ. ಶೇ. 40ರಷ್ಟು ಮೈದಾನ ಖಾಲಿಯಾಗಿತ್ತು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಟಾಂಗ್‌ ತಿವಿದರು.

ಬಿಜೆಪಿ ವಕ್ತಾರ ಸಂಬಿತ್ ಪಾತ್ರ

ದೆಹಲಿ, ನ. 1: ಚುನಾವಣಾ ಆಯೋಗದ ವಿರುದ್ಧದ ಆರೋಪಗಳನ್ನು ಮುಂದಿಟ್ಟು ಇಂಡಿಯಾ ಒಕ್ಕೂಟ ತನ್ನ ಹೋರಾಟವನ್ನು ತೀವ್ರಗೊಳಿಸಿದ್ದು, ಇದರ ಭಾಗವಾಗಿ ಭಾನುವಾರ (ನವೆಂಬರ್‌ 1) ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದೆ. 'ವೋಟ್ ಬಚಾವೋ, ದೇಶ್ ಬಚಾವೋ' (ಮತ ಉಳಿಸಿ, ದೇಶ ಉಳಿಸಿ) ಎಂಬ ಘೋಷಣೆ ಅಡಿ ನಡೆದ ಈ ಪ್ರತಿಭಟನಾ ರ‍್ಯಾಲಿ ಸಂಪೂರ್ಣ ವಿಫಲವಾಗಿದೆ (Ramlila Maidan Rally) ಎಂದು ಬಿಜೆಪಿ (BJP) ಇದೀಗ ಕೌಂಟರ್‌ ಕೊಟ್ಟಿದೆ. ಮೈದಾನ ಖಾಲಿಯಾಗಿರುವ ವಿಡಿಯೊವನ್ನು ಶೇರ್‌ ಮಾಡಿ ಇದು ಫ್ಲಾಪ್‌ ಶೋ ಎಂದು ವ್ಯಂಗ್ಯವಾಡಿದೆ. ರಾಮ್‌ಲೀಲಾ ಮೈದಾನ ಶೇ. 40ರಷ್ಟು ಖಾಲಿಯಾಗಿತ್ತು ಎಂದಿದೆ.

ʼʼರಾಮ್‌ಲೀಲಾ ಮೈದಾನದಲ್ಲಿ ಸುಮಾರು 10 ಲಕ್ಷ ಮಂದಿ ಜಮಾಯಿಸಿದ್ದಾರೆ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ. ಆದರೆ ಶೇ. 40ರಷ್ಟು ಮೈದಾನ ಖಾಲಿಯಾಗಿತ್ತು. ಜನ ಜಮಾಯಿಸಿದ್ದಾರೆ ಎಂದು ಹೇಳಿ ಕಾಂಗ್ರೆಸ್‌ ತೋರಿಸುತ್ತಿರುವ ಫೋಟೊ ಟ್ರಿಕ್‌ ಮಾತ್ರ. ಇಂತಹ ಟ್ರಿಕ್‌ ಯಾರನ್ನೂ ಪ್ರಧಾನಿಯನ್ನಾಗಿಸುವುದಿಲ್ಲʼʼ ಎಂದು ಪರೋಕ್ಷವಾಗಿ ರಾಹುಲ್‌ ಗಾಂಧಿ ಅವರನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಟಾಂಗ್‌ ತಿವಿದರು.

ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರ ಪತ್ರಿಕಾಗೋಷ್ಠಿ:



ದೆಹಲಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಮ್‌ಲೀಲಾ ಮೈದಾನ ಅರ್ಧದಷ್ಟು ಖಾಲಿ ಇರುವ ವಿಡಿಯೊವನ್ನು ಪ್ರದರ್ಶಿಸಿದರು. ʼʼರಾಮ್‌ಲೀಲಾ ಮೈದಾನ ಶೇ. 40ರಷ್ಟು ಖಾಲಿಯಾಗಿರುವುದನ್ನು ನೀವು ವಿಡಿಯೊದಲ್ಲಿ ನೋಡಬಹುದು. ರಾಹುಲ್‌ ಗಾಂಧಿ ಮತ್ತು ಅವರ ತಂಡದವರು 10 ಲಕ್ಷ ಮಂದಿ ಭಾಗಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಅಪರಾಹ್ನ 3:30-4 ಗಂಟೆಯ ವೇಳೆಗೆ 28,000 ಚೇರ್‌ಗಳ ಪೈಕಿ 5,000–7,000 ಚೇರ್‌ ಖಾಲಿಯಾಗಿತ್ತು.10 ಲಕ್ಷ ಮಂದಿ ಭಾಗಿಯಾಗಿದ್ದಾರೆ ಎಂದು ಹೇಳುವ ಕಾಂಗ್ರೆಸ್‌ನ ನಿಜಮುಖ ಇದುʼʼ ಎಂದು ಸಂಬಿತ್ ಪಾತ್ರ ತಿಳಿಸಿದರು.

''2024ರ ಲೋಕಸಭಾ ಚುನಾವಣೆ ಕಾನೂನು ಬಾಹಿರವಾಗಿತ್ತುʼʼ: ರಾಹುಲ್‌ ಗಾಂಧಿ ಹೊಸ ಬಾಂಬ್‌

2024ರ ಲೋಕಸಭಾ ಚುನಾವಣೆ ಕಾನೂನುಬಾಹಿರ ಎಂದಿರುವ ರಾಹುಲ್‌ ಗಾಂಧಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ʼʼಕಾನೂನುಬಾಹಿರ ಎನ್ನುವ ಅನುಮಾನ ಬಂದಿದ್ದರೆ ಚುನಾವಣೆ ನಡೆದ ಕೂಡಲೇ ಪ್ರಶ್ನಿಸಬೇಕು. ಚುನಾವಣೆಯನ್ನು ಪ್ರಶ್ನಿಸುವ ರೀತಿ ಇದಲ್ಲ. 2024ರ ಚುನಾವಣೆ ಕಾನೂನುಬಾಹಿರ ಎಂದು ಕೋರ್ಟ್‌ ಮೆಟ್ಟಿಲೇರಿರುವ ಸಾಕ್ಷಿ ಇದ್ದರೆ ತೋರಿಸಿʼʼ ಎಂದು ಸವಾಲು ಹಾಕಿದರು. ಅಲ್ಲದೆ ಜ್ಞಾನೇಶ್‌ ಕುಮಾರ್‌ ಚುನಾವಣಾ ಆಯುಕ್ತರಾಗಿ ಆಯ್ಕೆಯಾಗಿದ್ದು 2024ರ ಚುನಾವಣೆ ಬಳಿಕ ಎನ್ನುವುದನ್ನು ನೆನಪಿಸಿದರು.

ಯಶಸ್ವಿ ರ‍್ಯಾಲಿ ಎಂದ ಕಾಂಗ್ರೆಸ್‌

ಇತ್ತ ಕಾಂಗ್ರೆಸ್‌ ಈ ರ‍್ಯಾಲಿ ಯಶಸ್ವಿಯಾಗಿದೆ ಎಂದು ಹೇಳಿದೆ. ಕಾಂಗ್ರೆಸ್‌ ಸಂಸದ ಅಭಿಷೇಕ್‌ ಮನು ಸಿಂಘ್ವಿ ಮಾತನಾಡಿ, ʼʼಇದು ಅತ್ಯಂತ ಯಶಸ್ವಿ ರ‍್ಯಾಲಿ. ಇಂದು ಬೃಹತ್‌ ಸ‍ಂಖ್ಯೆಯಲ್ಲಿ ಜನ ಸೇರಿರುವುದನ್ನು ನೋಡಿ ಬಿಜೆಪಿ ನಾಯಕರಿಗೆ ಚಿಂತೆಯಾಗಿದೆ. ಜ್ಞಾನೇಶ್‌ ಕುಮಾರ್‌ ರಾಜೀನಾಮೆ ನೀಡಬೇಕುʼʼ ಎಂದು ಪಟ್ಟು ಹಿಡಿದರು. ಮತ್ತೊಬ್ಬ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಕೂಡ ಜ್ಞಾನೇಶ್‌ ಕುಮಾರ್‌ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಹಬ್ಬದ ಸೀಸನ್‌ನಲ್ಲೇ ಇಂಡಿಯಾ ಒಕ್ಕೂಟದ ರ್‍ಯಾಲಿ; ದೆಹಲಿ ವ್ಯಾಪಾರಿಗಳಿಗೆ 12,000 ಕೋಟಿ ರೂ ನಷ್ಟದ ಭೀತಿ

ಪೊಲೀಸ್‌ ಸರ್ಪಗಾವಲು

ಪೊಲೀಸರು ಈ ಬೃಹತ್ ಪ್ರತಿಭಟನೆಗೆ ಕೆಲವು ಕಠಿಣ ಷರತ್ತುಗಳೊಂದಿಗೆ ಅನುಮತಿ ನೀಡಿದ್ದು, ಕಠಿಣ ಬಂದೋಬಸ್ತ್ ಮತ್ತು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ರಾಮಲೀಲಾ ಮೈದಾನ ಮತ್ತು ಅದರ ಸುತ್ತಲಿನ ಪ್ರದೇಶಗಳನ್ನು 14 ಸುರಕ್ಷತಾ ವಲಯಗಳಾಗಿ ವಿಂಗಡಿಸಿ ಭದ್ರತೆಗಾಗಿ ಸುಮಾರು 3,000ರಿಂದ 3,500 ದೆಹಲಿ ಪೊಲೀಸ್ ಸಿಬ್ಬಂದಿ ಹಾಗೂ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author