ಭುವನೇಶ್ವರ: ಗೂಡ್ಸ್ ರೈಲೊಂದರ ಮೂರು ಬೋಗಿಗಳು ಹಳಿ ತಪ್ಪಿ ಸಮೀಪದಲ್ಲಿದ್ದ ಜನ ವಸತಿಯ ಕಾಲೊನಿಯೊಂದಕ್ಕೆ ನುಗ್ಗಿದ ಘಟನೆ ಫೆ. 5ರಂದು ಒಡಿಶಾದ (Odisha) ರೂರ್ಕೆಲಾದಲ್ಲಿ (Rourkela) ನಡೆದಿದೆ. ಈ ಘಟನೆಯಿಂದಾಗಿ ಈ ಭಾಗದ ನಿವಾಸಿಗಳು ಕ್ಷಣಕಾಲ ಆತಂಕಕ್ಕೊಳಗಾದರು. ಹಳಿತಪ್ಪಿದ ಈ ಗೂಡ್ಸ್ ರೈಲು ಇನ್ನು ಐದು ಮೀಟರ್ ಮುಂದೆ ಚಲಿಸಿದ್ದರೂ ಸಹ ಈ ಭಾಗದಲ್ಲಿ ಭಾರೀ ಅನಾಹುತವೇ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಈ ಘಟನೆಗೆ ಸಂಬಂಧಿಸಿದಂತೆ ಸ್ಥಳಿಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬುಧವಾರ ಬೆಳಗ್ಗೆ 6 ಗಂಟೆಯ ಸುಮಾರಿಗೆ ಈ ಅವಘಡ ಸಂಭವಿಸಿದೆ. ರೈಲು ಬೋಗಿಗಳನ್ನು ಸಂಚಾರಕ್ಕೆ ಜೋಡಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರುವ ಅಥವಾ ಪ್ರಾಣ ಹಾನಿಯಾಗಿರುವ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ರೈಲು ನುಗ್ಗಿಬಂದ ಸ್ಥಳದಲ್ಲಿದ್ದ ಟೆಂಪೋ ಒಂದು ಅಪಘಾತದ ರಭಸಕ್ಕೆ ನಜ್ಜುಗುಜ್ಜಾಗಿದೆ. ಘಟನೆಯ ಬಳಿಕ ಈ ಗೂಡ್ಸ್ ರೈಲಿ ಚಾಲಕ ಘಟನಾ ಸ‍್ಥಳದಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ: Viral Video: ವಿನಾಯಕನಿಗೆ ಒಂದು ಲಕ್ಷ ಪೆನ್ನುಗಳ ಅರ್ಪಣೆ; ಏನಿದು ವಸಂತ ಪಂಚಮಿ?
ಈ ಘಟನೆಯ ಬಳಿಕ ಗೇಟ್-ಬಸಂತಿ ಕಾಲೊನಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಹಳಿ ತಪ್ಪಿದ ಗೂಡ್ಸ್ ರೈಲಿನ ಮೂರು ಬೋಗಿಗಳು ರಸ್ತೆಗೆ ಬಿದ್ದಿದ್ದೇ ಸಂಚಾರ ಅಸ್ತವ್ಯಸ್ತಗೊಳ್ಳಲು ಕಾರಣವಾಗಿದೆ.
ಘಟನೆ ನಡೆದ ತಕ್ಷಣ ರೈಲ್ವೇ ಸಿಬ್ಬಂದಿ ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಯಿತು.
ಇನ್ನೊಂದು ಮೂಲಗಳ ಪ್ರಕಾರ ಇಲ್ಲಿದ್ದ ಕಾಲೋನಿಗಳು ಅಕ್ರಮವಾಗಿ ನಿರ್ಮಿಸಲ್ಪಟ್ಟಿದ್ದಾಗಿದ್ದು, ಇವರನ್ನೆಲ್ಲ ಇಲ್ಲಿಂದ ಒಕ್ಕಲು ಎಬ್ಬಿಸಲೆಂದು ಈ ಅಪಘಾತದ ಘಟನೆಯನ್ನು ಉದ್ದೇಶಪೂರ್ವಕವಾಗಿ ನಡೆಸಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ರೈಲು ಹಳಿ ತಪ್ಪಿದ ಘಟನೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.