Viral Video: ವಿನಾಯಕನಿಗೆ ಒಂದು ಲಕ್ಷ ಪೆನ್ನುಗಳ ಅರ್ಪಣೆ; ಏನಿದು ವಸಂತ ಪಂಚಮಿ?
ಫೆಬ್ರವರಿ 3 ರಂದು ಆಚರಿಸಲಾದ ವಸಂತ ಪಂಚಮಿಯಂದು ಆಂಧ್ರಪ್ರದೇಶದ ಐನವಿಲ್ಲಿಯ ವಿನಾಯಕನಿಗೆ ಒಂದು ಲಕ್ಷ ಪೆನ್ನುಗಳನ್ನು ಅರ್ಪಿಸಿದ ಅಪರೂಪದ ಘಟನೆಯೊಂದು ನಡೆದಿದೆ. ಈ ಹಬ್ಬದ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ವಿಡಿಯೊದಲ್ಲಿ ಅರ್ಚಕರು ಗಣೇಶನ ಪಾದಗಳಿಗೆ ಪೆನ್ನುಗಳನ್ನು ಅರ್ಪಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ.
ಅಮರಾವತಿ: ಮಕ್ಕಳ ವಿದ್ಯೆಗಾಗಿ ತಂದೆ-ತಾಯಿ ಸಾಕಷ್ಟು ಕಷ್ಟಪಡುತ್ತಾರೆ. ಹಾಗೇ ವಿದ್ಯಾದೇವತೆಗಳಾದ ಸರಸ್ವತಿ ಹಾಗೂ ಗಣಪತಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಇನ್ನು ವಸಂತ ಪಂಚಮಿ ಎಂದರೆ ತುಂಬಾ ವಿಶೇಷವಾದದ್ದು.ಇದು ವಿದ್ಯಾ ದೇವತೆಯಾದ ಸರಸ್ವತಿಗೆ ಸಮರ್ಪಿತವಾದ ಹಬ್ಬವಾಗಿದೆ. ಫೆಬ್ರವರಿ 3 ರಂದು ಆಚರಿಸಲಾದ ವಸಂತ ಪಂಚಮಿಯ ಅಂಗವಾಗಿ, ಆಂಧ್ರಪ್ರದೇಶದ ದೇವಾಲಯವೊಂದರಲ್ಲಿ ಭಕ್ತರು ವಿದ್ಯೆ ದೇವರಾದ ಗಣೇಶನಿಗೆ ಪೆನ್ನುಗಳನ್ನು ಅರ್ಪಿಸಿದ್ದಾರಂತೆ. ಈ ದಿನ ಭಕ್ತರು ಐನವಿಲ್ಲಿ ಗಣಪತಿಗೆ ಒಂದು ಲಕ್ಷ ಪೆನ್ನುಗಳನ್ನು ಅರ್ಪಿಸಿದ್ದಾರೆ ಎನ್ನಲಾಗಿದೆ. ಈ ಹಬ್ಬದ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಆಂಧ್ರಪ್ರದೇಶದ ಐನವಿಲ್ಲಿ ವಿನಾಯಕ ದೇವಸ್ಥಾನದಲ್ಲಿ ಚಿಕ್ಕ ಮಕ್ಕಳ ಶಿಕ್ಷಣಕ್ಕಾಗಿ ವಸಂತ ಪಂಚಮಿಯ ಈ ಸಮಯದಲ್ಲಿ ಮೂರು ದಿನಗಳ ಕಾಲ ಧಾರ್ಮಿಕ ಆಚರಣೆಯನ್ನು ನಡೆಸಲಾಗಿತ್ತು. ಈ ಹಬ್ಬದ ಸಮಯದಲ್ಲಿ, ಮಕ್ಕಳು ತಮ್ಮ ಹೆತ್ತವರ ಜೊತೆ ಬಂದು ಸರಸ್ವತಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರಂತೆ. ಹಾಗೇ ಸ್ಲೇಟ್‍ಗಳನ್ನು ತೆಗೆದುಕೊಂಡು ಬಂದು ಅಕ್ಷರಾಭ್ಯಾಸ ಮಾಡಿ ಶಿಕ್ಷಣ ಮತ್ತು ಜ್ಞಾನದ ದೇವತೆಯ ಆಶೀರ್ವಾದ ಕೋರಿದ್ದಾರೆ.
ಇನ್ನು ವಿಡಿಯೊದಲ್ಲಿ ಅರ್ಚಕರು ಗಣೇಶನ ಪಾದಗಳಿಗೆ ಪೆನ್ನುಗಳನ್ನು ಅರ್ಪಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ. ವಸಂತ ಪಂಚಮಿ ಹಿನ್ನೆಲೆ ದೇವರಿಗೆ ಒಂದು ಲಕ್ಷ ಪೆನ್ನುಗಳನ್ನು ಅರ್ಪಿಸಲಾಗಿದೆಯಂತೆ. ವರದಿಗಳ ಪ್ರಕಾರ, ಈ ದೇವಾಲಯವು ಪ್ರತಿ ಬಾರಿ ವಸಂತ ಪಂಚಮಿಯ ಸಂದರ್ಭದಲ್ಲಿ ಈ ವಿಶೇಷ ಪ್ರಾರ್ಥನೆಯನ್ನು ನಡೆಸುತ್ತದೆ. ಅಂದು ದೇವರಿಗೆ ಪೆನ್ನುಗಳನ್ನು ಅರ್ಪಿಸಲಾಗುತ್ತದೆ ಎನ್ನಲಾಗಿದೆ.
ವಸಂತ ಪಂಚಮಿಯ ವಿಶೇಷತೆ ಏನು?
ಈ ಹಬ್ಬವು ಸರಸ್ವತಿ ದೇವಿಗೆ ಸಮರ್ಪಿತವಾಗಿದೆ ಮತ್ತು ಭಕ್ತರು ಈ ದಿನ ಸರಸ್ವತಿ ದೇವಿಯ ಪೂಜೆಯನ್ನು ಮಾಡುತ್ತಾರೆ. ವಿದ್ಯಾಭ್ಯಾಸಕ್ಕಾಗಿ ಅವಳ ಆಶೀರ್ವಾದವನ್ನು ಕೋರುತ್ತಾರೆ. ಅಲ್ಲದೆ, ವಸಂತ ಪಂಚಮಿ ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ಈ ವರ್ಷ, ವಸಂತ ಪಂಚಮಿಯನ್ನು ಫೆಬ್ರವರಿ 3 ರಂದು ಆಚರಿಸಲಾಯಿತು. ಮಹಾ ಕುಂಭ ಮೇಳದಲ್ಲಿ ಈ ದಿನವನ್ನು 'ಶಾಹಿ ಸ್ನಾನ' ಎಂದು ಗುರುತಿಸಲಾಯಿತು
ಈ ಸುದ್ದಿಯನ್ನೂ ಓದಿ: Mahakumbh 2025: ಮಹಾ ಕುಂಭಮೇಳಕ್ಕೆ ಚಾಲನೆ– ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರು; ಮೊದಲ ಶಾಹಿ ಸ್ನಾನ ಅವಕಾಶ ಯಾವ ಅಖಾಡಕ್ಕೆ?
ಐನವಿಲ್ಲಿ ಗಣೇಶ ದೇವಸ್ಥಾನ
ಐನವಿಲ್ಲಿ ಶ್ರೀ ವಿಘ್ನೇಶ್ವರ ಸ್ವಾಮಿ ದೇವಾಲಯವು ಪೂರ್ವ ಗೋದಾವರಿ ಜಿಲ್ಲೆಯ ಕೋನಸೀಮಾ ಪ್ರದೇಶದಲ್ಲಿದೆ. ಸ್ಥಳ ಪುರಾಣದ ಪ್ರಕಾರ, ವ್ಯಾಸ ಮುನಿಗಳು ದಕ್ಷಿಣ ಭಾರತಕ್ಕೆ ಪ್ರಯಾಣಿಸುವ ಮೊದಲು ಇಲ್ಲಿ ವಿನಾಯಕನ ವಿಗ್ರಹವನ್ನು ಮೊದಲು ಸ್ಥಾಪಿಸಿದ್ದಾರಂತೆ. ಈ ದೇವಾಲಯವು ಮಾಘ ಶುದ್ಧ ಪಂಚಮಿ ಅಥವಾ ವಸಂತ ಪಂಚಮಿಯಂದು 'ಕಲಿಕಾ ಹಬ್ಬ'ದ ಭವ್ಯ ಆಚರಣೆಗೆ ಹೆಸರುವಾಸಿಯಾಗಿದೆ.