ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚಂಡೀಗಢ ಬಿಜೆಪಿ ಕಚೇರಿ ಮೇಲೆ ಗ್ರೆನೇಡ್‌ ಎಸೆದ ದುಷ್ಕರ್ಮಿಗಳು: ಖಲಿಸ್ತಾನಿ ಉಗ್ರರ ಕೃತ್ಯ?

Punjab News: ಪಂಜಾಬ್‌ನ ಚಂಡೀಗಢದಲ್ಲಿರುವ ಬಿಜೆಪಿ ಕಚೇರಿಯ ಹೊರಗೆ ಬುಧವಾರ (ಏಪ್ರಿಲ್ 1) ಸಂಜೆ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಸಂಜೆ 5:20ರ ಸುಮಾರಿಗೆ ಸಂಭವಿಸಿದ ಸ್ಫೋಟದಲ್ಲಿ ಕಾರು ಮತ್ತು ಸ್ಕೂಟರ್‌ನ ವಿಂಡ್‌ಶೀಲ್ಡ್ ಹಾನಿಗೊಳಗಾಗಿದೆ.

ಚಂಡೀಗಢದ ಬಿಜೆಪಿ ಕಚೇರಿ ಹೊರಗೆ ಭಾರಿ ಸ್ಫೋಟ

ಚಂಡೀಗಢ, ಏ. 1: ಪಂಜಾಬ್‌ನ ಚಂಡೀಗಢದಲ್ಲಿರುವ ಬಿಜೆಪಿ ಕಚೇರಿಯ ಹೊರಗೆ ಬುಧವಾರ (ಏಪ್ರಿಲ್ 1) ಸಂಜೆ ಸ್ಫೋಟ ಸಂಭವಿಸಿದೆ (Punjab News). ಸಂಜೆ 5:20ರ ಸುಮಾರಿಗೆ ಸಂಭವಿಸಿದ ಸ್ಫೋಟದಲ್ಲಿ ಕಾರು ಮತ್ತು ಸ್ಕೂಟರ್‌ನ ವಿಂಡ್‌ಶೀಲ್ಡ್ ಹಾನಿಗೊಳಗಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಟೈಮ್ಸ್ ನೌಗೆ ತಿಳಿಸಿದ್ದಾರೆ. ಭದ್ರತಾ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಪಕ್ಕದ ಪ್ರದೇಶವನ್ನು ಸುತ್ತುವರಿದಿದ್ದಾರೆ. ಬೈಕ್‌ನಲ್ಲಿ ಆಗಮಿಸಿದ ಇಬ್ಬರು ಗ್ರೆನೇಡ್‌ ಎಸೆದು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ʼʼಚಂಡೀಗಢದಲ್ಲಿರುವ ಬಿಜೆಪಿ ಕಚೇರಿಯ ಹೊರಗೆ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. ಸೆಕ್ಟರ್ 37ರಲ್ಲಿರುವ ಕಚೇರಿಯ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ ಸ್ಫೋಟವು ಸಣ್ಣ ಪ್ರಮಾಣದಲ್ಲಿತ್ತು. ಹೀಗಾಗಿ ಜೀವ ಹಾನಿ, ಹೆಚ್ಚಿನ ಪ್ರಮಾಣದ ನಾಶ ಸಂಭವಿಸಿಲ್ಲʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾಳಿ ದೃಶ್ಯ ಇಲ್ಲಿದೆ:



ಘಟನೆಗೆ ಸಂಬಂಧಿಸಿದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗ್ರೆನೇಡ್‌ ಎಸೆದಿರುವುದು ಕಂಡು ಬಂದಿದೆ. ಈ ಪೈಕಿ ಓರ್ವ ಹೆಲ್ಮೆಟ್‌ ಕೈಯಲ್ಲಿ ಹಿಡಿದು ಬೈಕ್‌ ಚಲಾಯಿಸುತ್ತಿದ್ದರೆ ಇನ್ನೋರ್ವ ವಿಡಿಯೊ ರೆಕಾರ್ಡ್‌ ಮಾಡುತ್ತ ಗ್ರೆನೇಡ್‌ ಎಸೆಯುತ್ತಿರುವುದು ಕಾಣಿಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. ಈ ಘಟನೆ ಸ್ಥಳೀಯರನ್ನು ಆತಂಕಕ್ಕೆ ದೂಡಿದ್ದು, ದುಷ್ಕರ್ಮಿಗಳ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ.

ಇಬ್ಬರು ಲಷ್ಕರ್ ಉಗ್ರರ ಬಂಧನ; ಶಸ್ತ್ರಾಸ್ತ್ರ ಮತ್ತು ಗ್ರೆನೇಡ್‌ಗಳು ವಶಕ್ಕೆ

ಪೊಲೀಸರು ಹೇಳಿದ್ದೇನು?

ಸಣ್ಣ ಪ್ರಮಾಣದ, ಕಚ್ಚಾ ರೀತಿಯ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಚಂಡೀಗಢದ ಎಸ್‌ಎಸ್‌ಪಿ ಕನ್ವರ್‌ದೀಪ್ ಕೌರ್ ಹೇಳಿದ್ದಾರೆ. ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ ತಂಡಗಳು ಸ್ಥಳಕ್ಕೆ ತಲುಪಿದ್ದು, ಸ್ಫೋಟಕದ ಮಾದರಿ ಸಂಗ್ರಹಿಸುತ್ತಿವೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡವೂ ಧಾವಿಸಿದೆ ಎಂದು ಮೂಲಗಳು ತಿಳಿಸಿವೆ.

"ಸಂಜೆ 5:20ರ ಸುಮಾರಿಗೆ, ಸೆಕ್ಟರ್ 37ರಲ್ಲಿರುವ ಬಿಜೆಪಿ ಕಚೇರಿ ಬಳಿ ಸ್ಫೋಟ ಸಂಭವಿಸಿದೆ ಎಂಬ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಧಾವಿಸಿದೆವು. ಪ್ರಾಥಮಿಕ ತನಿಖೆ ಪ್ರಕಾರ ಸಣ್ಣ, ಕಚ್ಚಾ ಮಾದರಿಯ ಗ್ರೆನೇಡ್‌ ಅನ್ನು ಕೃತ್ಯಕ್ಕರ ಬಳಸಲಾಗಿದೆ. ಎನ್‌ಐಎ, ಎಫ್‌ಎಸ್‌ಎಲ್‌, ಚಂಡೀಗಢ ಪೊಲೀಸ್ ತಂಡಗಳು ಧಾವಿಸಿದ್ದು, ತನಿಖೆ ನಡೆಸಲಾಗುತ್ತಿದೆʼʼ ಎಂದು ಮಾಹಿತಿ ನೀಡಿದರು.

ಸರ್ಪಗಾವಲು

ಕಚೇರಿಯ ಸುತ್ತಲೂ ಭದ್ರತೆಯನ್ನು ಬಲಪಡಿಸಲು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಸಾವು-ನೋವುಗಳು ಅಥವಾ ಗಾಯದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ.

ಆಘಾತ ವ್ಯಕ್ತಪಡಿಸಿದ ಬಿಜೆಪಿ

ಘಟನೆ ಬಗ್ಗೆ ಬಿಜೆಪಿ ಆಘಾತ ವ್ಯಕ್ತಪಡಿಸಿದೆ. ಗ್ರೆನೇಡ್ ದಾಳಿಗೆ ಪ್ರತಿಕ್ರಿಯಿಸಿದ ಪಂಜಾಬ್ ಬಿಜೆಪಿ ಮುಖ್ಯಸ್ಥ ಸುನಿಲ್ ಜಾಖರ್, ಇದು ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ. "ಪಂಜಾಬ್‌ನಲ್ಲಿ ಪೊಲೀಸ್ ಠಾಣೆಗಳ ಮೇಲೆ ನಿರಂತರವಾಗಿ ಗ್ರೆನೇಡ್ ದಾಳಿಗಳು ನಡೆಯುತ್ತಿವೆ. ಇತ್ತೀಚೆಗೆ ಹೋಶಿಯಾರ್‌ಪುರದಲ್ಲಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಲಾಯಿತು. ಇದೀಗ ಚಂಡೀಗಢದಲ್ಲಿರುವ ಬಿಜೆಪಿ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ. ಈ ಘಟನೆಗಳ ಸರಣಿಯು ರಾಜ್ಯದ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನ" ಎಂದಿದ್ದಾರೆ.

ದೇಶಾದ್ಯಂತ ಮತ್ತೊಂದು ಭಾರೀ ಗ್ರೆನೇಡ್‌ ದಾಳಿಗೆ ಬಿಗ್‌ ಪ್ಲ್ಯಾನ್‌! 10 ಮಂದಿ ಶಂಕಿತರ ಅರೆಸ್ಟ್‌

"ರಾಜ್ಯ ಸರ್ಕಾರವು ಈ ದಾಳಿಗಳನ್ನು ತಡೆಯುವಲ್ಲಿ ವಿಫಲವಾಗಿದೆ. ಪಂಜಾಬ್‌ನಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಈಗ ಚಂಡೀಗಢದ ಮೇಲೂ ಪರಿಣಾಮ ಬೀರಲು ಪ್ರಾರಂಭಿಸಿದೆ. ಪ್ರತ್ಯೇಕತಾವಾದಿ ಶಕ್ತಿಗಳು ಎಷ್ಟೇ ಪ್ರಯತ್ನಿಸಿದರೂ ಪಂಜಾಬ್‌ನ ಕೋಮು ಏಕತೆಯನ್ನು ಮುರಿಯಲು ಸಾಧ್ಯವಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.

ದಾಳಿಯ ಹಿಂದೆ ಸಂಭಾವ್ಯ ಖಲಿಸ್ತಾನಿ ಉಗ್ರ ಕೈವಾಡದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 2024ರಿಂದಲೂ ಪಂಜಾಬ್‌ನಲ್ಲಿ ಖಲಿಸ್ತಾನಿ ಸಂಘಟನೆಗಳು ಸರ್ಕಾರಿ ಕಚೇರಿ, ಬಿಜೆಪಿ, ಆರ್‌ಎಸ್‌ಎಸ್ ಕಚೇರಿ ಮತ್ತು ಹಿಂದೂ ಸಂಘಟನೆ ನಾಯಕರನ್ನು ನಿರಂತರವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಲೇ ಇವೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author