ದೆಹಲಿ, ಜೂ. 2: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE)ಯ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ವ್ಯವಸ್ಥೆಯ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಂಗಳವಾರ (ಜೂನ್ 2) ಸಿಬಿಎಸ್‌ಇ ಅಧ್ಯಕ್ಷ ರಾಹುಲ್ ಸಿಂಗ್ ಮತ್ತು ಕಾರ್ಯದರ್ಶಿ ಹಿಮಾಂಶು ಗುಪ್ತ ಅವರನ್ನು ವರ್ಗಾಯಿಸಿದೆ ಮತ್ತು ತನಿಖೆಗಾಗಿ ಏಕವ್ಯಕ್ತಿ ಸಮಿತಿಯನ್ನು ರಚಿಸಿದೆ (CBSE OSM Row). ರಾಹುಲ್ ಸಿಂಗ್ ಸಿಬಿಎಸ್‌ಇಯ ಮುಖ್ಯ ಕಾರ್ಯನಿರ್ವಾಹಕರಾಗಿ ಮಂಡಳಿಯ ಒಟ್ಟಾರೆ ಕಾರ್ಯನಿರ್ವಹಣೆ ಮತ್ತು ಆಡಳಿತದ ಮೇಲ್ವಿಚಾರಣೆ ನಡೆಸುತ್ತಿದ್ದರು. ಹಿಮಾಂಶು ಗುಪ್ತ ಸಿಬಿಎಸ್‌ಇಯ ಕಾರ್ಯದರ್ಶಿ ಮತ್ತು ಮುಖ್ಯ ಆಡಳಿತ ಅಧಿಕಾರಿಯಾಗಿ ಕಾನೂನು, ಲೆಕ್ಕ ಪರಿಶೋಧನೆ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯಗಳ ಜವಾಬ್ದಾರಿ ನಿರ್ವಹಿಸುತ್ತಿದ್ದರು.
ಸಿಬಿಎಸ್‌ಇ ಹೊಸದಾಗಿ ಪರಿಚಯಿಸಿದ ಆನ್-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಹೆಚ್ಚುತ್ತಿರುವ ವಿವಾದದ ಮಧ್ಯೆ ಈ ಬೆಳವಣಿಗೆ ಸಂಭವಿಸಿದೆ. ಒಎಸ್‌ಎಂ ವಿವಾದದ ಬಗ್ಗೆ ವಿರೋಧ ಹೆಚ್ಚುತ್ತಿರುವುದರಿಂದ ಸಿಬಿಎಸ್‌ಇ ಮಂಗಳವಾರ ವಿದ್ಯಾರ್ಥಿಗಳಿಗಾಗಿ ಮರು-ಮೌಲ್ಯಮಾಪನ ಪೋರ್ಟಲ್ ಕೂಡ ತೆರೆದಿದೆ.
ಸಿಬಿಎಸ್‌ಇ ಅಧಿಕಾರಿಗಳ ವರ್ಗಾವಣೆ:
ತನಿಖೆಗೆ ಸಮಿತಿ ರಚಿಸಿದ ಕೇಂದ್ರ
ಈ ವರ್ಷ ಸಿಬಿಎಸ್‌ಇ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಪ್ರಾಯೋಗಿಕವಾಗಿ ಜಾರಿಗೆ ತಂದ ಈ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಭಾರಿ ಗೊಂದಲ ಸೃಷ್ಟಿಯಾಗಿತ್ತು. ಈ ವ್ಯವಸ್ಥೆಯಡಿ ಮೌಲ್ಯಮಾಪಕರು ಭೌತಿಕ ಉತ್ತರ ಪುಸ್ತಕಗಳ ಬದಲಿಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಮೌಲ್ಯಮಾಪನ ನಡೆಸಿದರು. ವ್ಯತಿರಿಕ್ತ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪೋರ್ಟಲ್‌ನಲ್ಲಿ ಸಿಕ್ಕ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆ ಅವರ ಕೈಬರಹದ್ದೇ ಅಲ್ಲ, ಬೇರೆ ವಿದ್ಯಾರ್ಥಿಗಳಿಗೆ ಸೇರಿದ್ದು ಎನ್ನುವುದು ಬೆಳಕಿಗೆ ಬಂದ ಬಳಿಕ ವಿವಾದದ ಕಿಡಿ ಹೊತ್ತಿಕೊಂಡಿತು.
ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ, ಹೀಗೆ ನೋಡಿ
ಮೌಲ್ಯಮಾಪನ ಮಾಡಿದ ಪತ್ರಿಕೆಗಳು ಓದಲಾಗದಷ್ಟು ಬ್ಲರ್ ಆಗಿದ್ದವು ಹಾಗೂ ಪೋರ್ಟಲ್ ಕೂಡ ಕ್ರಾಶ್ ಆಗಿತ್ತು ಎಂದು ವಿದ್ಯಾರ್ಥಿಗಳು ದೂರಿದ್ದರು. ಇದೀಗ ಈ ಆನ್-ಸ್ಕ್ರೀನ್ ಮಾರ್ಕಿಂಗ್‌ನ ಅವ್ಯವಸ್ಥೆಯ ಬಗ್ಗೆ ತನಿಖೆ ನಡೆಸಲು ಕೇಂದ್ರ ಸಮಿತಿಯನ್ನು ರಚಿಸಿದೆ. ಈ ಸಮಿತಿಯ ಅಧ್ಯಕ್ಷತೆಯನ್ನು ಸಾಮರ್ಥ್ಯ ನಿರ್ಮಾಣ ಆಯೋಗದ (ಸಿಬಿಸಿ) ಅಧ್ಯಕ್ಷೆ ಎಸ್. ರಾಧಾ ಚೌಹಾಣ್ ವಹಿಸಲಿದ್ದಾರೆ. ಸಮಿತಿಯು 30 ದಿನಗಳಲ್ಲಿ ತನಿಖಾ ವರದಿಯನ್ನು ಸಲ್ಲಿಸಲಿದೆ.
ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಪ್ರಥಮ ಭಾಷೆ ಕನ್ನಡ !
ರಾಹುಲ್ ಗಾಂಧಿ ವಾಗ್ದಾಳಿ
ಸಿಬಿಎಸ್‌ಇಯ ಈ ಅವ್ಯವಸ್ಥೆಯ ವಿರುದ್ಧ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದರು. ʼʼಸಿಬಿಎಸ್‌ಇ ಪರೀಕ್ಷೆಯಲ್ಲಿ ಹಗರಣ ನಡೆದಿದೆ. ಇದರ ಹಿಂದಿನ ರಹಸ್ಯ ಹೊರಬರಲು ಸ್ವತಂತ್ರ ನ್ಯಾಯಾಂಗ ತನಿಖೆ ಹಾಗೂ ವಿಶೇಷ ತನಿಖಾ ತಂಡವನ್ನು (SIT) ರಚಿಸಬೇಕುʼʼ ಎಂದು ಆಗ್ರಹಿಸಿದ್ದರು.
ಜವಾಬ್ದಾರಿ ಹೊತ್ತ ಕೇಂದ್ರ ಸಚಿವ
ಇನ್ನು ಆನ್-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಉಂಟಾಗಿರುವ ಅನಾನುಕೂಲತೆಗೆ ಸರ್ಕಾರದ ಪರವಾಗಿ ತಾವು ಜವಾಬ್ದಾರಿ ಹೊರುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.