ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Attack: ಪಹಲ್ಗಾಮ್‌ ದಾಳಿ ನಡೆದ ವಾರದೊಳಗೆ ಮತ್ತೆ ಪ್ರವಾಸಿಗರ ಕಲರವ; ಚಿಗುರಿದ ಭರವಸೆ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಉಗ್ರರು ಅಟ್ಟಹಾಸ ಮೆರೆದು ನೆತ್ತರು ಹರಿಸಿದ 5 ದಿನಗಳಲ್ಲಿ ಮತ್ತೆ ಪ್ರವಾಸಿಗರ ಕಲರವ ಕಂಡು ಬಂದಿದೆ. ದಾಳಿ ನಡೆದ 5ನೇ ದಿನವಾದ ಭಾನುವಾರ (ಏ. 27) ವಿದೇಶಿ ಮತ್ತು ದೇಶೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಹಲ್ಗಾಮ್‌ನಲ್ಲಿ ಕಂಡುಬಂದಿದ್ದು, ಪರಿಸ್ಥಿತಿ ಸುಧಾರಿಸುತ್ತಿರುವ ಸೂಚನೆ ನೀಡಿದೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರಕೃತಿ ರಮಣೀಯತೆಯನ್ನು ಆಸ್ವಾದಿಸಲು ಪಹಲ್ಗಾಮ್‌ನ ಬೈಸರನ್ ಕಣಿವೆಗೆ ಆಗಮಿಸಿದ್ದ ಪ್ರವಾಸಿಗರನ್ನು ನಡುಗಿಸಿ ಏ. 22ರಂದು ಭಯೋತ್ಪಾದಕರು ಗುಂಡಿನ ಮಳೆಗರೆದು 26 ಮಂದಿಯನ್ನು ಬಲಿ ತೆಗೆದುಕೊಂಡಿದ್ದರು. ಇದರಿಂದ ದೇಶವೇ ಬೆಚ್ಚಿ ಬಿದ್ದಿತ್ತು (Pahalgam Attack). ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಉಗ್ರರ ಅಟ್ಟಹಾಸಕ್ಕೆ ಅಕ್ಷರಶಃ ನಲುಗಿತ್ತು. ಸದ್ಯಕ್ಕಂತೂ ಪ್ರವಾಸಿಗರು ಜಮ್ಮು ಕಾಶ್ಮೀರಕ್ಕೆ ತೆರಳುವುದು ಸಂಶಯ ಎನ್ನುವ ಲೆಕ್ಕಾಚಾರ ಆರಂಭವಾಗಿತ್ತು. ಆದರೆ ಅಚ್ಚರಿ ಎನ್ನುವಂತೆ ಇದೀಗ ಈ ಲೆಕ್ಕಾಚಾರ ಬುಡಮೇಲಾಗಿದ್ದು, ಪಹಲ್ಗಾಮ್‌ಗೆ ಪ್ರವಾಸಿಗರು ಮತ್ತೆ ಬರಲಾರಂಭಿಸಿದ್ದಾರೆ. ಆ ಮೂಲಕ ಕಣಿವೆ ರಾಜ್ಯದೊಂದಿಗೆ ನಾವಿದ್ದೇವೆ ಎನ್ನುವ ಭರವಸೆ ತುಂಬಿದ್ದಾರೆ. ʼʼಕಹಿ ಘಟನೆ ಆಗಿ ಹೋಗಿದೆ. ಹೀಗಾಗಿ ಇಲ್ಲಿಗೆ ಬರಲೇ ಬೇಕು ಎಂದು ನಿರ್ಧಿರಿಸಿ ಆಗಮಿಸಿದ್ದೇವೆʼʼ ಎಂದು ಪ್ರವಾಸಿಗರು ತಿಳಿಸಿದ್ದಾರೆ.

ನಿಸರ್ಗ ಸೌಂದರ್ಯದಿಂದ ಕಂಗೊಳಿಸಿ ಮಿನಿ ಸ್ವಿಜರ್‌ಲ್ಯಾಂಡ್‌ ಎಂದೇ ಕರೆಯಲ್ಪಡುವ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏ. 22ರಂದು ರಕ್ತದ ಹೊಳೆಯೇ ಹರಿದಿತ್ತು. ದಾಳಿ ನಡೆದ ಬಳಿಕ ಮುಚ್ಚಲಾಗಿದ್ದ ಪಹಲ್ಗಾಮ್‌ ಅನ್ನು ಇದೀಗ ಪ್ರವಾಸಿಗರಿಗಾಗಿ ತೆರೆಯಾಗಿದೆ. ಪಹಲ್ಗಾಮ್‌ನ ಲಿಡ್ಡಾರ್‌ ನದಿ ದಂಡೆಯ ಪ್ರಸಿದ್ಧ ಸೆಲ್ಫಿ ಪಾಯಿಂಟ್‌ನಲ್ಲಿ ಪ್ರವಾಸಿಗರ ಕಲರವ ಮತ್ತೆ ಆರಂಭವಾಗಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಅದಾಗ್ಯೂ ಶೂಟೌಟ್‌ ನಡೆದ ಬೈಸರನ್ ಹುಲ್ಲುಗಾವಲು ಇನ್ನೂ ಮುಚ್ಚಲ್ಪಟ್ಟಿದೆ.



ಈ ಸುದ್ದಿಯನ್ನೂ ಓದಿ: Rajnath Singh: ಪಹಲ್ಗಾಮ್‌ ದಾಳಿ; ಸೇನಾ ಮುಖ್ಯಸ್ಥರೊಂದಿಗೆ ರಾಜನಾಥ್‌ ಸಿಂಗ್‌ ಮಹತ್ವದ ಮಾತುಕತೆ

ಹುಲ್ಲುಗಾವಲಿನ ಸುತ್ತಲಿನ ಪೈನ್ ಕಾಡುಗಳಿಂದ ಭಯೋತ್ಪಾದಕರ ಗುಂಪು ಹೊರಬಂದು ಪ್ರವಾಸಿಗರ ಮೇಲೆ ಗುಂಡು ಹಾರಿಸಿತ್ತು. ಇದರಿಂದ ಕೆಲವು ದಿನಗಳವರೆಗೆ ಗದ್ದಲದಿಂದ ಕೂಡಿದ್ದ ಪ್ರವಾಸಿ ಕೇಂದ್ರ ಬಳಿಕ ಬಹುತೇಕ ಖಾಲಿಯಾಗಿತ್ತು. ʼʼಸೀಸನ್‌ ವೇಳೆ ಇಲ್ಲಿಗೆ ದಿನಕ್ಕೆ 5,000ರಿಂದ 7,000 ಪ್ರವಾಸಿಗರು ಆಗಮಿಸುತ್ತಿದ್ದರು. ಹತ್ಯಾಕಾಂಡದ ನಂತರ ಪ್ರವಾಸಿಗರ ಸಂಖ್ಯೆ 100ಕ್ಕೆ ಇಳಿದಿತ್ತು. ಇದು ಹೆಚ್ಚಾಗಿ ಪ್ರವಾಸೋದ್ಯಮವನ್ನು ಅವಲಂಬಿಸಿರುವ ಸ್ಥಳೀಯರಲ್ಲಿ ನಿರುದ್ಯೋಗದ ಬೀತಿ ಮೂಡಿಸಿತ್ತು. ಸದ್ಯ ಮತ್ತೆ ಪ್ರವಾಸಿಗರ ಸಂಖ್ಯೆ ತುಸು ಹೆಚ್ಚಾಗಿದ್ದು ಆಶಾವಾದ ಮೂಡಿಸಿದೆʼʼ ಎಂದು ಸ್ಥಳೀಯರು ವಿವರಿಸಿದ್ದಾರೆ.



ದಾಳಿ ನಡೆದ 5ನೇ ದಿನವಾದ ಭಾನುವಾರ (ಏ. 27) ವಿದೇಶಿ ಮತ್ತು ದೇಶೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಹಲ್ಗಾಮ್‌ನಲ್ಲಿ ಕಂಡುಬಂದಿದ್ದು, ಪರಿಸ್ಥಿತಿ ಸುಧಾರಿಸುತ್ತಿರುವ ಸೂಚನೆ ನೀಡಿದೆ. ಆಶಾವಾದವನ್ನು ಪ್ರದರ್ಶಿಸಿದ ಪ್ರವಾಸಿಗರು, ಇಂತಹ ಘಟನೆಗಳು ಎಲ್ಲಿ ಬೇಕಾದರೂ ಸಂಭವಿಸಬಹುದು ಎಂದು ಹೇಳಿದ್ದಾರೆ.

ಟ್ರಾವೆಲ್ ಏಜೆಂಟರ ಬೆಂಬಲ ಇರುವುದರಿಂದ ತಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಮಹಾರಾಷ್ಟ್ರದ ಗುಂಪೊಂದು ತಿಳಿಸಿದೆ. ಮುಖ್ಯವಾಗಿ ಕ್ರೊಯೇಷಿಯನ್ ಮತ್ತು ಸರ್ಬಿಯನ್ ಪ್ರವಾಸಿಗರು ಪಹಲ್ಗಾಮ್‌ನ ಬೀದಿಗಳಲ್ಲಿ ನಿರ್ಭೀತಿಯಿಂದ ಓಡಾಡುತ್ತಿರುವುದು ಕಂಡು ಬಂದಿದೆ. ಕ್ರೊಯೇಷಿಯಾದ ಪ್ರವಾಸಿ ವ್ಲಾಟ್ಕೊ, "ಇದು ಕಾಶ್ಮೀರಕ್ಕೆ ನನ್ನ 10ನೇ ಭೇಟಿ. ಪ್ರತೀ ಬಾರಿ ಬಂದಾಗಲೂ ಅದ್ಭುತ ಅನುಭವ ನೀಡುತ್ತಿದೆ. ಇದು ನನ್ನ ಪಾಲಿಗೆ ವಿಶ್ವದ ನಂಬರ್ ಒನ್ ತಾಣʼʼ ಎಂದು ವಿವರಿಸಿದ್ದಾರೆ. "ನಾನು ಸಂಪೂರ್ಣವಾಗಿ ಸುರಕ್ಷಿತವಾಗಿದ್ದೇನೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲೆಡೆ, ಜನರು ಹಲೋ ಹೇಳುತ್ತಾರೆ. ಸದ್ಯ ಶೂನ್ಯ ಭಯ ಇಲ್ಲಿದೆʼʼ ಎಂದಿದ್ದಾರೆ. ಇಲ್ಲಿ ಯಾವುದೇ ಸಮಸ್ಯೆ ತಮಗೆ ಎದುರಾಗಿಲ್ಲ ಎಂದು ತಿಳಿಸಿದ್ದಾರೆ.