ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Caste Census: ಜಾತಿ ಗಣತಿ ಹೇಗೆ, ಯಾವಾಗ, ಏಕೆ? ಮುಂದಿರುವ ಸವಾಲುಗಳೇನು?

ವಿರೋಧ ಪಕ್ಷಗಳ ಸಾಕಷ್ಟು ಒತ್ತಾಯದ ಮೇರೆಗೆ ಈಗ ಕೇಂದ್ರ ಬಿಜೆಪಿ ಸರ್ಕಾರ ಜಾತಿ ಗಣತಿ ನಡೆಸಲು ಮುಂದಾಗಿದೆ. ಕಳೆದ ಹಲವು ದಶಕಗಳಿಂದ ಬಿಜೆಪಿ ಸರ್ಕಾರ ಜಾತಿ ಗಣತಿಯನ್ನು ವಿರೋಧಿಸುತ್ತಲೇ ಬಂದಿದೆ. ಇದೀಗ ಈ ಪಕ್ಷ ಜಾತಿ ಗಣತಿಗೆ ಮುಂದಾಗಿರುವುದು ಏಕೆ? ಇದರಿಂದ ಎದುರಾಗುವ ಸವಾಲುಗಳೇನು? ಎಂಬ ಮಾಹಿತಿ ಇಲ್ಲಿದೆ.

ಜಾತಿ ಗಣತಿಯ ನಡುವೆ ನಡೆಯುತ್ತಿದೆ ರಾಜಕೀಯ ಲೆಕ್ಕಾಚಾರ

ಸಾಂದರ್ಭಿಕ ಚಿತ್ರ.

ನವದೆಹಲಿ: ಮುಂದಿನ ಜನಗಣತಿಯಲ್ಲಿ (Census) ಜಾತಿ ಗಣತಿಯನ್ನು (Caste Census) ಸೇರಿಸುವುದಾಗಿ ಕೇಂದ್ರ ಸರ್ಕಾರ (Central Government) ಘೋಷಿಸಿದ್ದು, ಇದರಿಂದ ದೇಶದ ಜನಗಣತಿಯ ಹೊಸ ಲೆಕ್ಕಾಚಾರ ಬೆಳಕಿಗೆ ಬರಲಿದೆ. ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಜಾತಿ ಗಣತಿ ನಡೆಯಲಿದೆ. ಹಲವು ವರ್ಷಗಳಿಂದ ಇದು ಚರ್ಚೆಯಲ್ಲಿದ್ದರೂ ವಿರೋಧ ಪಕ್ಷಗಳ ಭಾರಿ ಒತ್ತಾಯದ ಬಳಿಕ ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸಲು ಮುಂದಾಗಿದೆ. ಜಾತಿ ಗಣತಿ ಬೇಡವೆನ್ನುತ್ತಲೇ ಇದ್ದ ಬಿಜೆಪಿಯ ಈ ನಡೆ ಸಾಕಷ್ಟು ಅಚ್ಚರಿ ಮೂಡಿಸಿದರೂ ಇದರಿಂದ ಎದುರಾಗುವ ಸವಾಲುಗಳ ಬಗ್ಗೆಯೂ ಚರ್ಚೆ ಪ್ರಾರಂಭವಾಗಿದೆ.

ಜನಗಣತಿಯೊಂದಿಗೆ ಜಾತಿ ಗಣತಿಯು ನಡೆಯಲಿರುವುದರಿಂದ ಭಾರತದ ಮುಂದಿನ ಜನಸಂಖ್ಯೆಯ ಎಣಿಕೆ ವೇಳೆ ಗಣತಿಗಾಗಿ ಮನೆಮನೆಗೆ ಬರುವವರು ಜಾತಿಯ ಕುರಿತಾಗಿ ಪ್ರಶ್ನೆಗಳನ್ನು ಕೇಳಲಿದ್ದಾರೆ. ವಿರೋಧ ಪಕ್ಷಗಳ ಒತ್ತಾಯದ ಮೇರೆಗೆ ಭಾರತೀಯ ಜನತಾ ಪಕ್ಷವು ಜಾತಿ ಗಣತಿಗೆ ನಿರ್ಧಾರವನ್ನು ಕೈಗೊಂಡಿದ್ದರೂ ಇದು ಬಿಜೆಪಿಯ ನಿಲುವನ್ನು ಪ್ರಶ್ನಿಸುವಂತೆ ಮಾಡಿದೆ. ಅಲ್ಲದೇ ಬಿಹಾರ ಚುನಾವಣೆಗೆ ಮುಂಚಿತವಾಗಿ ಬಂದಿರುವ ಈ ನಿರ್ಣಯ ಆಡಳಿತಾರೂಢ ಪಕ್ಷಕ್ಕೆ ಹಲವು ಸವಾಲುಗಳನ್ನು ಒಡ್ಡಲಿದೆ.

ಜಾತಿ ಗಣತಿ ಈ ಮೊದಲು ನಡೆದಿದೆಯೇ?

ಹಲವರು ದಶಕಗಳ ಹಿಂದೆ ಭಾರತದಲ್ಲಿ ಬ್ರಿಟಿಷರ ಆಡಳಿತದ ಕಾಲದಲ್ಲಿ ಭಾರತದಲ್ಲಿ ಜಾತಿ ಗಣತಿ ನಡೆಸಲಾಗಿತ್ತು. ಅದು 1881ರಲ್ಲಿ. ಈ ವೇಳೆ ಮೊದಲ ಬಾರಿಗೆ ಭಾರತದ ಜನಸಂಖ್ಯೆಯನ್ನು ಎಣಿಸಲು ಬ್ರಿಟಿಷರು ಮುಂದಾಗಿದ್ದರು. ಇದರೊಂದಿಗೆ ಜಾತಿ ಗಣತಿಯನ್ನು ನಡೆಸಲಾಗಿತ್ತು. ಕೊನೆಯ ಬಾರಿಗೆ 1931ರಲ್ಲಿ ಜಾತಿ ಗಣತಿ ನಡೆಸಿದ್ದು,ಈ ವೇಳೆ ದೇಶಾದ್ಯಂತ 4,147 ಜಾತಿಗಳು ಮತ್ತು ಉಪಜಾತಿಗಳನ್ನು ಗುರುತಿಸಲಾಗಿತ್ತು.

1941ರ ಜನಗಣತಿಯಲ್ಲಿ ಜಾತಿ ಗಣತಿ ನಡೆದಿದ್ದರೂ ಈ ಕುರಿತಾದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಿಲ್ಲ. ಭಾರತ ಸ್ವಾತಂತ್ರ್ಯದ ಬಳಿಕ ಸರ್ಕಾರವು ಜನಗಣತಿ ಮಾತ್ರ ನಡೆಸಿತು. ಪರಿಶಿಷ್ಟ ಜಾತಿ, ಪಂಗಡ, ಬುಡಕಟ್ಟು ಸಮುದಾಯದವರ ಅಂಕಿ ಅಂಶಗಳನ್ನು ಮಾತ್ರ ಸಂಗ್ರಹ ಮಾಡಿತ್ತು. ಯಾಕೆಂದರೆ ಜಾತಿ ಗಣತಿಯು ವಿಭಜನೆಯನ್ನು ಉಂಟು ಮಾಡುತ್ತದೆ ಎಂಬುದು ಹಲವರ ವಾದವಾಗಿತ್ತು.

1931ರಲ್ಲಿ ನಡೆಸಿದ ಜಾತಿ ಗಣತಿಯ ಆಧಾರದಲ್ಲಿ ಭಾರತ ಸ್ವಾತಂತ್ರ್ಯಗೊಂಡ ಬಳಿಕ ಅಂದರೆ ಸರಿಸುಮಾರು ಅರ್ಧ ಶತಮಾನದ ಅನಂತರ ಮೀಸಲಾತಿ ಕಾನೂನುಗಳನ್ನು ಜಾರಿಗೆ ತರಲಾಯಿತು. ಜಾತಿಯ ಹೆಸರು, ಭೌಗೋಳಿಕ ಪ್ರದೇಶಗಳಲ್ಲಿ ಜಾತಿ ಹೆಸರುಗಳಲ್ಲಿನ ವ್ಯತ್ಯಾಸಗಳನ್ನು ಈ ಸಂದರ್ಭದಲ್ಲಿ ಗುರುತಿಸಲಾಗಿತ್ತು. ಹೀಗಾಗಿ ಹಿಂದುಳಿದ ವರ್ಗ (OBC) ವರ್ಗದ ಅಡಿಯಲ್ಲಿ ದೇಶದ ಜನಸಂಖ್ಯೆಯ ಶೇ. 52ರಷ್ಟು ಮಂದಿ ಸೇರಿದರು. ಇವರಿಗೆ ಅನಂತರ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ. 27 ಮೀಸಲಾತಿಯನ್ನು ನೀಡಲು ಮಂಡಲ್ ಆಯೋಗ ಶಿಫಾರಸ್ಸು ಮಾಡಿತು.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು 2011ರಲ್ಲಿ ವಿಭಿನ್ನವಾಗಿ ಜಾತಿ ಗಣತಿಯನ್ನು ನಡೆಸಿತ್ತು. ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ (SECC)ಯಲ್ಲೇ ವಿಭಿನ್ನ ರೀತಿಯಲ್ಲಿ ಜಾತಿ ಎಣಿಕೆಯ ಪ್ರಾರಂಭಿಸಿತು. ಇದರಲ್ಲಿ ಸಂಗ್ರಹಿಸಲಾದ ಅಂಕಿ-ಅಂಶವನ್ನು ವಿವಿಧ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ವಿನ್ಯಾಸ ಮತ್ತು ಕಾರ್ಯಗತಗೊಳಿಸಲು ಬಳಸಲಾಯಿತು. ಈ ಅಂಕಿ ಅಂಶದ ಕೆಲವು ಭಾಗಗಳನ್ನು 2016ರಲ್ಲಿ ಪ್ರಕಟಿಸಲಾಗಿದ್ದರೂ ನಿರ್ದಿಷ್ಟ ಜಾತಿ ಗಣತಿಯ ಅಂಕಿ-ಅಂಶ ಸಂಗ್ರಹಿಸಿಲ್ಲ. ಇದರ ಜಾತಿ ಗಣತಿ ಪಟ್ಟಿಯ ಪ್ರಶ್ನೆಗಳನ್ನು ಬರೆಯಲು ಮುಕ್ತ ಅವಕಾಶ ನೀಡಿದ್ದರಿಂದ ಹೆಚ್ಚಿನವರು ತಮ್ಮ ಉಪನಾಮಗಳನ್ನು ನಮೂದಿಸಿದ್ದರು. ಹೀಗಾಗಿ ಇದರಲ್ಲಿ ಗಣತಿದಾರರು 46 ಲಕ್ಷಕ್ಕೂ ಹೆಚ್ಚು ವಿವಿಧ ಜಾತಿಗಳನ್ನು ಗುರುತಿಸಿದ್ದರು.

ರಾಜ್ಯವಾರು ಜಾತಿ ಎಣಿಕೆ

ಬಿಹಾರ, ತೆಲಂಗಾಣ ಮತ್ತು ಕರ್ನಾಟಕಗಳಲ್ಲಿ ಜಾತಿ ಗಣತಿ ನಡೆಸಲಾಗಿದೆ. ಬಿಹಾರದಲ್ಲಿ 2023ರಲ್ಲಿ ನಡೆದ ಜಾತಿ ಗಣತಿಯಲ್ಲಿ ಶೇ. 63ಕ್ಕಿಂತ ಹೆಚ್ಚು ಒಬಿಸಿ ಮತ್ತು ಅತ್ಯಂತ ಹಿಂದುಳಿದ ವರ್ಗಗಳನ್ನು (ಇಬಿಸಿಗಳು) ಗುರುತಿಸಲಾಯಿತು. ಇದರಿಂದ ರಾಜಕೀಯ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಈ ಜಾತಿಗಳು ಹೆಚ್ಚಿನ ಪ್ರಾತಿನಿಧ್ಯಕ್ಕಾಗಿ ಬೇಡಿಕೆಗಳನ್ನು ಇರಿಸಿದ್ದರಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡಗಳು ಹೆಚ್ಚಾಯಿತು.

ತೆಲಂಗಾಣದಲ್ಲಿ 2024ರಲ್ಲಿ ಪ್ರಕಟವಾದ ಜಾತಿ ಗಣತಿಯಲ್ಲಿ ರಾಜ್ಯದ ಜನಸಂಖ್ಯೆಯ ಶೇ. 56ಕ್ಕಿಂತ ಹೆಚ್ಚು ಹಿಂದುಳಿದ ವರ್ಗಗಳನ್ನು ಗುರುತಿಸಲಾಯಿತು.

2015ರಲ್ಲಿ ಕರ್ನಾಟಕದಲ್ಲಿ ನಡೆದ ಜಾತಿ ಸಮೀಕ್ಷೆಯ ವರದಿ ಒಂದು ದಶಕದ ಅನಂತರ ಪ್ರಕಟವಾಗಿದ್ದು, ಇದರಲ್ಲಿ ರಾಜ್ಯದ ಒಬಿಸಿ ಜನಸಂಖ್ಯೆಯು ಶೇ. 70ರಷ್ಟಿದೆ ಎನ್ನುವುದು ಬಹಿರಂಗವಾಗಿದೆ.

cs1

ಜಾತಿ ಗಣತಿ ಅಂಕಿಅಂಶ ಸಂಗ್ರಹ ಏನು ಪರಿಣಾಮ ?

ಶಿಕ್ಷಣ, ಕಲ್ಯಾಣ ಕಾರ್ಯಕ್ರಮಗಳ ಹೊರತಾಗಿ ಜಾತಿ ಗಣತಿಯು ಸಾರ್ವಜನಿಕ ಮತ್ತು ರಾಜಕೀಯ ಮೀಸಲಾತಿ ನೀತಿಗಳ ಮೇಲೂ ಪರಿಣಾಮ ಬೀರುತ್ತದೆ. ಈಗಾಗಲೇ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಿಗೆ ಶೇ. 27 ಒಬಿಸಿ ಕೋಟಾ ಇದ್ದು, ಈ ಬಾರಿ ಜಾತಿ ಗಣತಿಯಾದರೆ ಮೀಸಲಾತಿ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಕರ್ನಾಟಕದ ಜಾತಿ ಸಮೀಕ್ಷೆಯಲ್ಲಿ ಒಬಿಸಿ ಜನಸಂಖ್ಯೆಯು ಗಮನಾರ್ಹವಾಗಿ ಹೆಚ್ಚಾಗಿರುವುದು ಇದಕ್ಕೆ ಒಂದು ಉದಾಹರಣೆ. ಈಗಾಗಲೇ ರಾಜ್ಯದಲ್ಲಿ ಒಬಿಸಿ ಕೋಟಾವನ್ನು ಶೇ. 51ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆಗಳಿವೆ. ಇದು ಸುಪ್ರೀಂ ಕೋರ್ಟ್ ಆದೇಶಿಸಿದ ಮೀಸಲಾತಿ ಮಿತಿ ಶೇ. 50 ಅನ್ನು ಪ್ರಶ್ನಿಸುವಂತೆ ಮಾಡುತ್ತದೆ.

ಜಾತಿ ಗಣತಿಗೆ ಒತ್ತಾಯ ಏಕೆ?

ವಿರೋಧ ಪಕ್ಷದ ಚುನಾವಣಾ ಪ್ರಚಾರಗಳಲ್ಲಿ ಪ್ರಮುಖ ಅಂಶವಾಗಿದ್ದ ಜಾತಿ ಜನಗಣತಿಯನ್ನು ಬಿಜೆಪಿ ಪರಿಗಣಿಸಿರುವುದು ಅಚ್ಚರಿಯ ನಿರ್ಧಾರ ಎನಿಸಿಕೊಂಡಿದೆ. ಯಾಕೆಂದರೆ ಬಿಜೆಪಿಯು ಭಾರತೀಯರನ್ನು ವಿಭಜಿಸಲು ಕಾಂಗ್ರೆಸ್ ಜಾತಿಯನ್ನು ಬಳಸುತ್ತಿದೆ ಎಂದು ಬಹಳ ಹಿಂದಿನಿಂದಲೂ ಆರೋಪಿಸುತ್ತಿದೆ. ಅದರಲ್ಲೂ ಬಿಹಾರ ಚುನಾವಣೆ ವೇಳೆ ಜಾತಿ ಸಮೀಕ್ಷೆಯ ಘೋಷಣೆ ರಾಜಕೀಯ ಗೊಂದಲವನ್ನು ಹೆಚ್ಚಿಸಿದೆ.

2024ರ ಸಾರ್ವತ್ರಿಕ ಚುನಾವಣಾ ಪ್ರಚಾರದ ವೇಳೆ ವಿರೋಧ ಪಕ್ಷವು ಮೀಸಲಾತಿಯನ್ನು ತೆಗೆದುಹಾಕಲು ಮತ್ತು ಸಂವಿಧಾನವನ್ನು ತಿದ್ದುಪಡಿ ಮಾಡಲು ಬಿಜೆಪಿ ಹೆಚ್ಚಿನ ಬಹುಮತವನ್ನು ಬಯಸುತ್ತಿದೆ ಎಂಬ ಭಯವನ್ನು ಮತದಾರರಲ್ಲಿ ಹುಟ್ಟು ಹಾಕಿತ್ತು. ಇದರ ಪರಿಣಾಮ ಭಾರಿ ಅಂತರದ ಗೆಲುವಿನ ಲೆಕ್ಕಾಚಾರದಲ್ಲಿದ್ದ ಬಿಜೆಪಿಯ ಎಣಿಕೆ ತಪ್ಪಿತ್ತು. ಈ ಬಾರಿ ಬಿಹಾರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಬಿಜೆಪಿ ಜಾತಿ ಗಣತಿ ನಡೆಸುವುದಾಗಿ ಘೋಷಿಸಿದೆ. ಈ ಮೂಲಕ ಚುನಾವಣಾ ಪ್ರಚಾರದಲ್ಲಿ ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಪ್ರಯತ್ನ ನಡೆದಿದೆ.

ಈಗ ಇಲ್ಲಿ ಜಾತಿ ಗಣತಿ ಎನ್ನುವುದು ಚುನಾವಣೆ ವಿಷಯವಾಗಿ ಬದಲಾಗಿದೆ. ಯಾಕೆಂದರೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಷ್ಟ್ರಮಟ್ಟದಲ್ಲಿ ಎಂದೂ ಜಾತಿ ಜನಗಣತಿಯನ್ನು ಮಾಡಿಲ್ಲ. ಅವರು ಹೇಳುವುದು ಮಾತ್ರ ಕ್ರಮ ಕೈಗೊಳ್ಳುವುದಿಲ್ಲ ಎಂದು ಸದಾ ಆರೋಪಿಸುವ ಬಿಜೆಪಿ ಈಗ ಇದನ್ನು ಸತ್ಯವೆಂದು ಸಾಬೀತುಪಡಿಸಲು ಹೊರಟಿದೆ.

ಜಾತಿ ಗಣತಿ ನಡೆಸಲು ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿರುವ ಕ್ರೆಡಿಟ್ ಪಡೆಯಲು ವಿಪಕ್ಷಗಳು ಪ್ರಯತ್ನಿಸುತ್ತಿವೆ. ಇದರಿಂದ ಮುಂದೆ ವಿಪಕ್ಷಗಳು ಸುಪ್ರೀಂ ಕೋರ್ಟ್‌ ಆದೇಶಿಸಿರುವ ಮೀಸಲಾತಿ ಮಿತಿಯನ್ನು ಉಲ್ಲಂಘಿಸಿ ಮೀಸಲಾತಿಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Caste Census: ಜಾತಿ ಗಣತಿಯಿಂದ ಬದಲಾಗುವುದೇ ದೇಶದ ರಾಜಕೀಯ ನಕ್ಷೆ?

ಜನ ಗಣತಿ ಸವಾಲು ಯಾಕೆ?

ಕೇಂದ್ರ ಸರ್ಕಾರ ಜನಗಣತಿಯೊಂದಿಗೆ ಜಾತಿ ಗಣತಿ ನಡೆಸುವುದಾಗಿ ಹೇಳಿದ್ದರೂ ಅದಕ್ಕೆ ದಿನಾಂಕಗಳನ್ನು ನಿಗದಿಪಡಿಸಿಲ್ಲ. ಕೊನೆಯ ಬಾರಿಗೆ ಜನ ಗಣತಿಯನ್ನು 2011ರಲ್ಲಿ ನಡೆಸಲಾಯಿತು. ಕೋವಿಡ್ ಸಾಂಕ್ರಾಮಿಕದ ಕಾರಣ 2021ರ ಜನ ಗಣತಿಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಹೀಗಾಗಿ ಮುಂದೆ ಜನಗಣತಿಯೊಂದಿಗೆ ಜಾತಿ ಗಣತಿ ನಡೆದರೆ ಗಣತಿ ಅಧಿಕಾರಿಗಳಿಗೆ ಕೆಲಸದ ಹೊರೆ ಹೆಚ್ಚಾಗಲಿದೆ. ಇದಕ್ಕಾಗಿ ಜನ ಗಣತಿಯಲ್ಲಿ ಬಳಸಬೇಕಾದ ಜಾತಿಗಳ ಕೋಡ್ ಡೈರೆಕ್ಟರಿಯನ್ನು ರಚಿಸಬೇಕು, ಜಾತಿಗಳ ಡ್ರಾಪ್‌ಡೌನ್ ಪಟ್ಟಿಯನ್ನು ಸಿದ್ಧಪಡಿಸಬೇಕಿದೆ. ಅಲ್ಲದೆ ಕೇಂದ್ರ ಮತ್ತು ರಾಜ್ಯಗಳು ವಿಭಿನ್ನ ಒಬಿಸಿ ಪಟ್ಟಿಗಳನ್ನು ಹೊಂದಿದ್ದು, ಇದನ್ನು ಹೊಂದಿಸುವುದು ರಾಜಕೀಯವಾಗಿಯೂ ಸವಾಲನ್ನು ತಂದೊಡ್ಡಬಹುದು.

ಜಾತಿ, ಉಪಜಾತಿಗಳ ವಿಭಜನೆ, ನಿರ್ದಿಷ್ಟ ಜಾತಿಗಳು ಎಸ್ ಸಿ, ಒಬಿಸಿ ಅಥವಾ ಸಾಮಾನ್ಯ ವರ್ಗಗಳಿಗೆ ಹೊಂದಿಕೊಳ್ಳುತ್ತವೆಯೇ ಎಂಬುದರ ಕುರಿತು ಇರುವ ಭಿನ್ನಾಭಿಪ್ರಾಯಗಳು, ಹಿಂದೂಯೇತರರ ಗುರುತಿಸುವಿಕೆ ಮಾತ್ರವಲ್ಲ ಜಾತಿ ಜನಗಣತಿಯಿಂದ ನಮಗೇನು ಪ್ರಯೋಜನ ಸಿಗುತ್ತವೆ ಎನ್ನುವ ಪ್ರಶ್ನೆಗಳು ಉದ್ಭವವಾಗುವುದರಿಂದ ಎಲ್ಲವೂ ಸವಾಲಾಗಿ ಪರಿಣಮಿಸಲಿದೆ.