ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

39 ಲಕ್ಷ ರೂಪಾಯಿ ದಾಖಲೆ ಬೆಲೆಗೆ ಹರಾಜಾಯ್ತು ಹೈದರಾಬಾದ್‌ನ ಪ್ರಸಿದ್ಧ ಬಾಲಾಪುರ್ ಗಣೇಶನ ಲಡ್ಡು ಪ್ರಸಾದ

Balapur Ganesh: ಹೈದರಾಬಾದ್‌ನ ಪ್ರಸಿದ್ಧ ಬಾಲಾಪುರ್ ಗಣೇಶನ ಪವಿತ್ರ ಲಡ್ಡು ಪ್ರಸಾದ ಈ ಬಾರಿಯ ವಾರ್ಷಿಕ ಹರಾಜಿನಲ್ಲಿ ಭಾರಿ ಪೈಪೋಟಿಯ ನಡುವೆ 39 ಲಕ್ಷ ರೂಪಾಯಿಗೆ ಮಾರಾಟವಾಗುವ ಮೂಲಕ ನೂತನ ದಾಖಲೆ ಬರೆದಿದೆ. ಅರ್ಬನ್ ಗ್ರೂಪ್ ಸಂಸ್ಥಾಪಕ ಸಾಮಾ ಪ್ರಣೀತ್ ರೆಡ್ಡಿ ಈ ಬಾರಿಯ ಬಿಡ್‌ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹೈದರಾಬಾದ್‌ನ ಪ್ರಸಿದ್ಧ ಬಾಲಾಪುರ್ ಗಣೇಶ

ಹೈದರಾಬಾದ್, ಸೆ. 25: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ವಿಶ್ವ ಪ್ರಸಿದ್ಧ ಬಾಲಾಪುರ್ ಗಣೇಶನ 21 ಕೆಜಿ ತೂಕದ 'ಪವಿತ್ರ ಲಡ್ಡು ಪ್ರಸಾದ' ಈ ಬಾರಿಯ ವಾರ್ಷಿಕ ಹರಾಜಿನಲ್ಲಿ ಬರೋಬ್ಬರಿ 39 ಲಕ್ಷ ರೂಪಾಯಿಗೆ ಮಾರಾಟವಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ತೀವ್ರ ಪೈಪೋಟಿಯ ನಡುವೆ ಅತ್ಯಧಿಕ ಬಿಡ್ ಕೂಗಿದ 'ಅರ್ಬನ್ ಗ್ರೂಪ್' ಸಂಸ್ಥಾಪಕ ಸಾಮಾ ಪ್ರಣೀತ್ ರೆಡ್ಡಿ ಕಳೆದ ವರ್ಷದ 35 ಲಕ್ಷ ರೂಪಾಯಿ ದಾಖಲೆಯನ್ನು ಮುರಿದು ಈ ಪವಿತ್ರ ಪ್ರಸಾದವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹರಾಜಿನಲ್ಲಿ ಗೆದ್ದ ಬಳಿಕ ಮಾತನಾಡಿದ ಸಾಮಾ ಪ್ರಣೀತ ರೆಡ್ಡಿ, ʼʼನನಗೆ ತುಂಬಾ ಸಂತೋಷವಾಗಿದೆ. ಬಾಲಾಪುರ ಲಡ್ಡು ಹರಾಜಿನಲ್ಲಿ ನಾನು ಸ್ಪರ್ಧಿಸುತ್ತಿರುವುದು ಇದು ನಾಲ್ಕನೇ ಬಾರಿ. ಬಾಲಾಪುರ ಉತ್ಸವ ಸಮಿತಿ ಮಾಡುತ್ತಿರುವ ಸೇವೆಯನ್ನು ನಾನು ಶ್ಲಾಘಿಸುತ್ತೇನೆ. ಲಡ್ಡು ಹರಾಜಿನಲ್ಲಿ ಭಾಗವಹಿಸಲು ಅವರು ನನಗೆ ಬೆಂಬಲ ನೀಡದರು. ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಲಡ್ಡುವನ್ನು ಅಗತ್ಯವಿರುವವರಿಗೆ ಹಂಚಲು ಬಯಸುತ್ತೇನೆʼ ಎಂದು ಹೇಳಿದರು.

39 ಲಕ್ಷ ರೂಪಾಯಿಗೆ ಲಡ್ಡು ಮಾರಾಟ:



ಬಾಲಾಪುರ್ ಲಡ್ಡು ಹರಾಜಿನ ಇತಿಹಾಸ

ಬಾಲಾಪುರ್ ಗಣೇಶನ ಲಡ್ಡುವಿಗೆ ವಿಶೇಷವಾದ ಧಾರ್ಮಿಕ ಮಹತ್ವವಿದೆ. ಈ ಲಡ್ಡು ಪ್ರಸಾದವನ್ನು ಪಡೆದರೆ ಆರೋಗ್ಯ, ಸಂಪತ್ತು, ಸಮೃದ್ಧಿ ಮತ್ತು ಶ್ರೇಯಸ್ಸು ಸಿಗುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ. ಬಾಲಾಪುರ್‌ನಲ್ಲಿ ಲಡ್ಡು ಹರಾಜು ಪರಂಪರೆ 1994ರಲ್ಲಿ ಪ್ರಾರಂಭವಾಯಿತು. ಮೊದಲ ವರ್ಷ ಸ್ಥಳೀಯ ರೈತ ಕೊಲನ್ ಮೋಹನ್ ರೆಡ್ಡಿ ಕೇವಲ 450 ರೂ.ಗೆ ಈ ಲಡ್ಡು ಪಡೆದಿದ್ದರು. ನಂತರ ಕಳೆದ ವರ್ಷ (2025ರಲ್ಲಿ) ಲಿಂಗಾಲ ದಶರಥ್ ಗೌಡ್ 35 ಲಕ್ಷ ರೂ.ಗೆ ಈ ಲಡ್ಡುವನ್ನು ಹರಾಜಿನಲ್ಲಿ ಪಡೆದುಕೊಂಡಿದ್ದರು.

ಭೋಪಾಲ್‌ನಲ್ಲಿ ʼಕಾಂತಾರʼ ಚಿತ್ರ ವೈಭವ: ‌ಗುಳಿಗ, ಪಂಜುರ್ಲಿ ದೈವದೊಂದಿಗೆ ಗಣಪತಿ ವಿಗ್ರಹವಿಟ್ಟು ಚೌತಿ ಆಚರಣೆ

ಹರಾಜಿನ ಹಣದ ಬಳಕೆ ಹೇಗೆ?

ಬಾಲಾಪುರ್ ಗಣೇಶ ಉತ್ಸವ ಸಮಿತಿಯು ಈ ಹರಾಜಿನಿಂದ ಸಂಗ್ರಹವಾಗುವ ಹಣದಲ್ಲಿ ಒಂದು ಭಾಗವನ್ನು ಮುಂದಿನ ವರ್ಷದ ಗಣೇಶ ಪೂಜಾ ಆಚರಣೆಗೆ ಮೀಸಲಿಡುತ್ತದೆ. ಇನ್ನುಳಿದ ಬಹುಪಾಲು ಮೊತ್ತವನ್ನು ಬಾಲಾಪುರ ಗ್ರಾಮದ ರಸ್ತೆ, ಕುಡಿಯುವ ನೀರು, ಶಾಲೆ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ. ಹರಾಜು ಪ್ರಕ್ರಿಯೆ ಮುಗಿದ ನಂತರ, ಸಾವಿರಾರು ಭಕ್ತರ ಜಯಘೋಷಗಳ ನಡುವೆ ಬಾಲಾಪುರ್ ಗಣೇಶನ ವಿಗ್ರಹದ ವೈಭವದ ವಿಸರ್ಜನ ಮೆರವಣಿಗೆ ಸುಸಜ್ಜಿತ ಭದ್ರತೆಯೊಂದಿಗೆ ಹೊರಟಿತು.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author