ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻತನ್ನನ್ನು ನಿಂದಿಸಿದ ಯುವಕರನ್ನು ಕ್ಷಮಿಸಿದ್ದೇನೆʼ: ತಡರಾತ್ರಿ ವಿಡಿಯೊ ಹಂಚಿಕೊಂಡ ಪ್ರಧಾನಿ ಮೋದಿ!

ಜಂತರ್ ಮಂತರ್‌ನಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ ತಮ್ಮ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿದ ಯುವಕರನ್ನು ಕ್ಷಮಿಸಲು ಬಯಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರನ್ನು ಶಿಕ್ಷಿಸುವ ಬದಲು ಸಮಾಜವು ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ಕರೆ ನೀಡಿದ ಪ್ರಧಾನಿ ಮೋದಿ, ಯುವಕರು ಸರಿದಾರಿಗೆ ಬರಲು ಪ್ರೋತ್ಸಾಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಯುವಕರಿಗೆ ವಿಡಿಯೊ ಸಂದೇಶ ರವಾನಿಸಿದ ಪಿಎಂ ಮೋದಿ.

ನವದೆಹಲಿ: ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದಿದ್ದ ನೀಟ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ (NEET-UG Paper) ವಿವಾದ ಕುರಿತಂತೆ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ತನ್ನನ್ನು ನಿಂದಿಸಿದ್ದಾರೆನ್ನಲಾದ ಯುವಕರನ್ನು ಕ್ಷಮಿಸಲು ಬಯಸಿದ್ದೇನೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಶುಕ್ರವಾರ ಹೇಳಿದ್ದಾರೆ. ಅವರನ್ನು ಶಿಕ್ಷಿಸಬಾರದು ಹಾಗೂ ಅವರು ತಮ್ಮ ತಪ್ಪಿನ ಅರಿವಾಗಿ ಪಾಠ ಕಲಿಯಲಿ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೊ ಸಂದೇಶದಲ್ಲಿ ಈ ಘಟನೆ ಕುರಿತು ದೇಶದ ಜನರೊಂದಿಗೆ ನೇರವಾಗಿ ಮಾತನಾಡಲು ಬಯಸಿದ್ದೇನೆ ಎಂದು ಪಿಎಂ ಮೋದಿ ತಿಳಿಸಿದ್ದಾರೆ.

"ನಮಸ್ಕಾರ ಸ್ನೇಹಿತರೇ, ಇಂದು ನಿಮ್ಮೊಂದಿಗೆ ಕೆಲವು ಮಾತುಗಳನ್ನು ಹಂಚಿಕೊಳ್ಳಬೇಕೆಂದು ಬಯಸುತ್ತಿದ್ದೇನೆ. ಜಂತರ್ ಮಂತರ್‌ನಲ್ಲಿ ನಡೆದಿದ್ದ ಘಟನೆ ಇಡೀ ದೇಶ ಮತ್ತು ಜಗತ್ತಿನ ಗಮನ ಸೆಳೆದಿದೆ. ಕೆಲ ದಾರಿತಪ್ಪಿದ ಯುವಕರು ನಾಗರಿಕ ಸಮಾಜ ತಲೆ ತಗ್ಗಿಸುವ ಅತ್ಯಂತ ಅವಾಚ್ಯ ಪದಗಳನ್ನು ಬಳಸಿದ್ದಾರೆ. ಅವರು ನನ್ನನ್ನು ಮಾತ್ರವಲ್ಲ, ನನ್ನ ದಿವಂಗತ ತಾಯಿಯನ್ನೂ ನಿಂದಿಸಿದ್ದಾರೆ," ಎಂದು ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.

"ನಮ್ಮ ಮಗಳಿಂದ ತಪ್ಪಾಗಿದೆ ಪ್ಲೀಸ್‌ ಕ್ಷಮಿಸಿ"; ಪ್ರಧಾನಿಯನ್ನು ನಿಂದಿಸಿದ್ದ ಯುವತಿ ತಾಯಿಯಿಂದ ಕ್ಷಮೆಯಾಚನೆ

ಘಟನೆಯ ಸಂಬಂಧ ಕಠಿಣ ಕ್ರಮಕ್ಕೆ ಒತ್ತಾಯಿಸುವ ಬದಲು, ಯುವಕರು ತಪ್ಪು ಮಾಡುವುದು ಸಹಜ ಮತ್ತು ಅವರಿಗೆ ತಿದ್ದಿಕೊಳ್ಳಲು ಅವಕಾಶ ನೀಡಬೇಕು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು. "ಅವರು ಯಾವ ಮನಸ್ಥಿತಿಯಲ್ಲಿ ಇದ್ದರು ಎಂಬುದು ನನಗೆ ಗೊತ್ತಿಲ್ಲ. ಆದರೆ ಬಾಲ್ಯ ಮತ್ತು ಯೌವ್ವನದಲ್ಲಿ ತಪ್ಪುಗಳು ಆಗುವುದು ಸಹಜ. ಆ ವಯಸ್ಸಿನಲ್ಲಿ ತಮ್ಮ ತಪ್ಪುಗಳಿಂದ ಪಾಠ ಕಲಿಯುವ ಅವಕಾಶವೂ ಇರುತ್ತದೆ. ಅದೇ ಯೌವ್ವನದ ವಿಶೇಷತೆ," ಎಂದು ಅವರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿರುವುದನ್ನು ಒಪ್ಪಿಕೊಂಡ ಪ್ರಧಾನಿ ಮೋದಿ, ದ್ವೇಷದಿಂದ ಪ್ರತಿಕ್ರಿಯಿಸುವ ಬದಲು ಸಮಾಜವು ಸಹಾನುಭೂತಿ ಮತ್ತು ತಿಳುವಳಿಕೆಯಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.



‘ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ’: ಮೋದಿ

ಜಂತರ್ ಮಂತರ್ ಪ್ರತಿಭಟನೆಯಲ್ಲಿ ತಮ್ಮನ್ನು ನಿಂದಿಸಿದ ಯುವಕರನ್ನು ಕ್ಷಮಿಸಲು ಬಯಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಸಮಾಜವೂ ಅದೇ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

"ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ಸಮಾಜವೂ ನನ್ನ ಮನವಿಯನ್ನು ಸ್ವೀಕರಿಸುತ್ತದೆ ಎಂದು ಆಶಿಸುತ್ತೇನೆ. ಕೆಲವೊಮ್ಮೆ ನಮ್ಮ ನಾಲಿಗೆ ನಮ್ಮ ಹಲ್ಲಿನ ನಡುವೆ ಸಿಲುಕಿ ರಕ್ತ ಬಂದರೂ, ನಾವು ಹಲ್ಲನ್ನು ಮುರಿಯುವುದಿಲ್ಲ. ಏಕೆಂದರೆ ಹಲ್ಲೂ ನಮ್ಮದೇ, ನಾಲಿಗೆಯೂ ನಮ್ಮದೇ. ಅದೇ ರೀತಿ ಈ ಮಕ್ಕಳು ಕೂಡ ನಮ್ಮವರೇ. ಅವರಿಗೆ ಸರಿಯಾದ ದಾರಿ ತೋರಿಸುವುದು ನಮ್ಮ ಕರ್ತವ್ಯ," ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಯುವಕರ ವಿರುದ್ಧ ಕೇವಲ ಕಾನೂನು ಕ್ರಮ ಕೈಗೊಳ್ಳುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

"ಅವರಿಗೆ ಶಿಕ್ಷೆ ವಿಧಿಸುವುದು, ನ್ಯಾಯಾಲಯದ ಪ್ರಕರಣಗಳಲ್ಲಿ ಸಿಲುಕಿಸುವುದು ಅಥವಾ ಅವರ ಕುಟುಂಬಗಳನ್ನು ಕಿರುಕುಳ ನೀಡುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ," ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮುಂದಿನ ವರ್ಷ ಪಾಕಿಸ್ತಾನಕ್ಕೆ ಭೇಟಿ? ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತ SCO ಸುಮ್ಮಿಟ್?

ನಿಮ್ಮ ಉತ್ತಮ ಭವಿಷ್ಯಕ್ಕಾಗಿ ನನ್ನನ್ನು ಸಮರ್ಪಿಸಿಕೊಂಡಿದ್ದೇನೆ

ಯುವಕರು ತಮ್ಮ ಭವಿಷ್ಯ ನಿರ್ಮಾಣದತ್ತ ಗಮನಹರಿಸಬೇಕು ಎಂದು ಕರೆ ನೀಡಿದ ಪ್ರಧಾನಿ ಮೋದಿ, ತಮ್ಮ ತಪ್ಪುಗಳಿಂದ ಪಾಠ ಕಲಿತು ದೇಶದ ಅಭಿವೃದ್ಧಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

"ಆದ್ದರಿಂದ ನಾನು ಈ ಯುವಕರಿಗೆ ಹೇಳುವುದೇನೆಂದರೆ, ಬನ್ನಿ... ದೇಶಕ್ಕಾಗಿ ಒಟ್ಟಾಗಿ ಮುಂದೆ ಸಾಗೋಣ. ಹೊಸದನ್ನು ಕಲಿಯಿರಿ, ನಿಮ್ಮ ತಪ್ಪುಗಳಿಂದ ಪಾಠ ಕಲಿಯಿರಿ, ನಿಮ್ಮ ಕನಸುಗಳನ್ನು ಬೆನ್ನಟ್ಟಿರಿ. ನಮ್ಮ ದೇಶ ಪ್ರಗತಿಯತ್ತ ಸಾಗುತ್ತಿದೆ, ಮುಂದೆಯೂ ಸಾಗಲಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂಬುದೇ ನನ್ನ ಕನಸು. ನಾನು ನಿಮಗಾಗಿಯೇ ಬದುಕುತ್ತಿದ್ದೇನೆ. ನಿಮ್ಮ ಉತ್ತಮ ಭವಿಷ್ಯಕ್ಕಾಗಿ ನನ್ನನ್ನು ಸಮರ್ಪಿಸಿಕೊಂಡಿದ್ದೇನೆ. ಬನ್ನಿ, ದೇಶವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಒಟ್ಟಾಗಿ ಕೆಲಸ ಮಾಡೋಣ," ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.