ದೆಹಲಿ, ಜು. 26: ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಯುವ ಜನತೆಗೆ ಇನ್ನಷ್ಟು ಹತ್ತಿರವಾಗುವ ಉದ್ದೇಶದಿಂದ ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಬಿರುಗಾಳಿಗೆ ಸಿಕ್ಕಿ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ಸೀಡಿದ ಬಳಿಕ ಜೆನ್ ಝೀ ತಲೆಮಾರಿನ ಜತೆ ಮತ್ತಷ್ಟು ಸಂವಾದ ನಡೆಸಲು ಮೋದಿ ಮುಂದಾಗಿದ್ದಾರೆ. ಇದರ ಭಾಗವಾಗಿ ಭಾನುವಾರ (ಜುಲೈ 26) ವಿಕಸಿತ್ ವೈಬ್ರಂಟ್ ವಿಲೇಜ್-2026 (Viksit Vibrant Village 2026) ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಯುವಜನರೊಂದಿಗೆ ನೇರ ಸಂವಾದ ನಡೆಸಿದರು. ಈ ವೇಳೆ ಅವರು, ಯುವಜನರು ಭಾರತದ ಗಡಿ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜೀವನಾನುಭವ ಪಡೆದುಕೊಳ್ಳುವುದು ಮುಖ್ಯ ಎಂದು ಕರೆ ನೀಡಿದರು. ಗಡಿ ಗ್ರಾಮಗಳ ಜನರ ಆದ್ಯತೆ ದೇಶವಾಗಿರುತ್ತದೆ ಎಂದರು.
ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವನ್ನು ಪ್ರತಿನಿಧಿಸುವ ಆಯ್ದ 400ಕ್ಕೂ ಹೆಚ್ಚು ಯುವ ಜನರೊಂದಿಗೆ ಮೋದಿ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿದರು. ದೇಶಾದ್ಯಂತ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆ ನಡೆಸಿ 3 ಲಕ್ಷಕ್ಕೂ ಅಧಿಕ ಯುವಜನರ ಪೈಕಿ ಅಂತಿಮವಾಗಿ 400 ಅರ್ಹ ವಿದ್ಯಾರ್ಥಿ-ಯುವಜನರನ್ನು ಆಯ್ಕೆ ಮಾಡಲಾಗಿತ್ತು.
ಸಂವಾದ ನಡೆಸಿದ ಪ್ರದಾನಿ ಮೋದಿ:
ಜೂನ್ 4ರಿಂದ ಜೂನ್ 30ರವರೆಗೆ ವಿಕಸಿತ್ ವೈಬ್ರಂಟ್ ವಿಲೇಜ್ ಪ್ರೋಗ್ರಾಂ-2026 ಆಯೋಜಿಸಿ ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ 74 ವೈಬ್ರಂಟ್ ಗಡಿ ಗ್ರಾಮಗಳ ಅರ್ಹ ಯುವ ಜನರನ್ನು ಆಯ್ಕೆ ಮಾಡಲಾಗಿದೆ.
ಪರೀಕ್ಷಾ ಗುಣಮಟ್ಟ ಸುಧಾರಣೆಗೆ ಟಾಸ್ಕ್‌ಫೋರ್ಸ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ
ಮೋದಿ ಹೇಳಿದ್ದೇನು?
ವಿಕಸಿತ್ ವೈಬ್ರಂಟ್ ವಿಲೇಜ್-2026 ಕಾರ್ಯಕ್ರಮದಲ್ಲಿ ಯುವ ಜನತೆ ಸಕ್ರಿಯವಾಗಿ ಭಾಗವಹಿಸಿದ್ದು ನೋಡಿ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. ಇದು 'ಏಕ್ ಭಾರತ್ ಶ್ರೇಷ್ಠ ಭಾರತ್'ನ ಮನೋಭಾವಕ್ಕೆ ಸಾಕ್ಷಿ ಎಂದು ಅವರು ಹೇಳಿದರು. ದೀಪಾವಳಿಯಂದು ಗಡಿಗಳಲ್ಲಿ ಸೈನಿಕರೊಂದಿಗೆ ಹಬ್ಬ ಆಚರಿಸುವ ಅನುಭವವನ್ನು ಸ್ಮರಿಸಿಕೊಂಡರು.
ವಿಕಸಿತ ಭಾರತದ (ಅಭಿವೃದ್ಧಿ ಹೊಂದಿದ) ಗುರಿ ಸಾಧಿಸಲು ಯುವಜನತೆಯ ಭಾಗವಹಿಸುವಿಕೆ ನಿರ್ಣಾಯಕ ಎಂದು ಪ್ರಧಾನಿ ಪುನರುಚ್ಚರಿಸಿದರು. ಗಡಿ ಗ್ರಾಮಗಳೊಂದಿಗೆ ಯುವಕರು ಹೆಚ್ಚು ಸಂಪರ್ಕ ಹೊಂದಿದಷ್ಟು ಅದು ಭಾರತವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.
"ನೀವೆಲ್ಲರೂ ದೂರದ ಹಳ್ಳಿಗಳಲ್ಲಿ ಒಂದು ವಾರ ಕಳೆದಿದ್ದೀರಿ-ನಿಮಗೆ ಹಿಂದೆ ಪರಿಚಯವಿಲ್ಲದ ಸ್ಥಳಗಳು ಅವು. ನೀವು ಅಲ್ಲಿನ ಜೀವನ ಅನುಭವ ಪಡೆದಿದ್ದೀರಿ. ಸ್ಥಳೀಯ ಸಮುದಾಯದೊಂದಿಗೆ ಮುಖಾಮುಖಿಯಾಗಿದ್ದೀರಿ. ನಿಮ್ಮ ಸಂಸ್ಕೃತಿ ಅವರ ಸಂಸ್ಕೃತಿಯೊಂದಿಗೆ ಬೆರೆತಿದೆ. ʼಏಕ ಭಾರತ ಶ್ರೇಷ್ಠ ಭಾರತʼಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಯಾವುದೂ ಇಲ್ಲ" ಎಂದರು.
ಸಿಜೆಪಿ ಪ್ರತಿಭಟನಾಕಾರರು ಗಲಾಟೆ ಮಾಡುತ್ತಿದ್ದರೂ ತಾಳ್ಮೆಯಿಂದ ನಿಂತ ಮಾಧ್ಯಮ ಪ್ರತಿನಿಧಿ
ಅನುಭವ ಹಂಚಿಕೊಂಡ ಯುವ ಜನತೆ
ಸಂವಾದದ ವೇಳೆ ಯುವಜನರು ವಿವಿಧ ಗಡಿ ಗ್ರಾಮಗಳಿಗೆ ಭೇಟಿ ನೀಡಿದ ಅನುಭವ ಹಂಚಿಕೊಂಡರು. ʼʼಜೆನ್ ಝೀ ಎಂದರೆ ರಾಷ್ಟ್ರ ನಿರ್ಮಾಣ, ಜೆನ್ ಝೀ ಎಂದರೆ ಸೇವೆಗೆ ಸಮಾನಾರ್ಥಕ ಪದ, ಜೆನ್ ಝೀ ಎಂದರೆ ನಾವೀನ್ಯತೆ. ಒಟ್ಟಿನಲ್ಲಿ ಜೆನ್ ಝೀಗೆ 'ರಾಷ್ಟ್ರ ಮೊದಲು" ಎಂದು ದಿವ್ಯಾಂಶು ಜೋಶಿ ತಿಳಿಸಿದರು.
ʼʼಗಡಿ ಗ್ರಾಮಗಳಲ್ಲಿ ಮೊಬೈಲ್ ನೆಟ್‌ವರ್ಕ್ ಅಥವಾ ವಿದ್ಯುತ್ ಇರುವುದಿಲ್ಲ ಎಂದು ಭಾವಿಸಿದ್ದೆವು. ಆದರೆ ಅಲ್ಲಿನ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿರುವುದನ್ನು ನೋಡಿ ಅಚ್ಚರಿಯಾಯ್ತು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಿಂದಾಗಿ ಈ ಪರಿವರ್ತನೆ ಸಾಧ್ಯವಾಗಿದೆʼʼ ಎಂದು ಮತ್ತೊಬ್ಬರು ಹೇಳಿದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.