ದೆಹಲಿ, ನ. 16: “ಬಿಲಾಂಗಿಂಗ್ ಎಂದರೆ ನೀವು ಆ ಗುಂಪಿನ ಭಾಗವಾಗಿದ್ದೀರಿ ಎಂದರ್ಥ. ನೀವು ಹೊರಗಿನವರಾದಾಗ, ನಿಮ್ಮನ್ನು ಯಾರೂ ಇಷ್ಟಪಡುವುದಿಲ್ಲ ಎಂದೂ, ನಿಮ್ಮನ್ನು ಸದಾ ಗಮನಿಸಲಾಗುತ್ತಿದೆ ಎಂದೂ ನಿಮಗೆ ಎನಿಸುತ್ತದೆ”- ತಮ್ಮ ಆತ್ಮಕಥೆಯ ಟೈಟಲ್ ಬಗ್ಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿವರಿಸಿದ್ದು ಹೀಗೆ. ಸೋನಿಯಾ ಗಾಂಧಿ ಅವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಸೋಮವಾರ (ನವೆಂಬರ್ 16) ದೆಹಲಿಯಲ್ಲಿ ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಈ ಸಂದರ್ಭದಲ್ಲಿ ಅವರು ತಮ್ಮ ಪುಸ್ತಕದ ಬಗ್ಗೆ, ಬರೆಯಲು ಕಾರಣವದವರ ಬಗ್ಗೆ ಮುಕ್ತವಾಗಿ ಮಾತನಾಡಿದರು.
ವರ್ಷಗಳ ಕಾಲ ತಮ್ಮ ವೈಯಕ್ತಿಕ ಜೀವನವನ್ನು ಬಹುತೇಕ ಖಾಸಗಿಯಾಗಿ ಇರಿಸಿಕೊಂಡಿದ್ದರೂ, ಈ ಆತ್ಮಕಥೆಯನ್ನು ಬರೆಯಲು ತಮಗೆ ಪ್ರೇರಣೆ ನೀಡಿದ ಅಂಶಗಳ ಬಗ್ಗೆಯೂ ಅವರು ವಿವರಿಸಿದರು. ತಮ್ಮ ಸುತ್ತಲೂ ನಡೆಯುತ್ತಿರುವ ಊಹಾಪೋಹಗಳು ಮತ್ತು ಚರ್ಚೆಯೂ ಇದಕ್ಕೆ ಒಂದು ಕಾರಣ ಎಂದು ಅವರು ಹೇಳಿದರು. "ನನ್ನ ಕುಟುಂಬ, ನನ್ನ ಅತ್ತೆ, ನನ್ನ ಪತಿ, ನನ್ನ ಮಗ, ನನ್ನ ಮಗಳು ಮತ್ತು ಸ್ವತಃ ನನ್ನ ಬಗ್ಗೆ ಸಾಕಷ್ಟು ವಿಷಯಗಳನ್ನು ಹೇಳಲಾಗುತ್ತಿದೆ. ಆದರೆ ಬಹುತೇಕ ಸಂಗತಿಗಳು ವಾಸ್ತವಕ್ಕೆ ದೂರವಾದುದು. ನಾವು ಹೇಗಿದ್ದೇವೆಯೋ ಅದಕ್ಕೂ ಈ ಹೇಳಿಕೆಗಳಿಗೂ ಯಾವುದೇ ಸಂಬಂಧವಿಲ್ಲ" ಎಂದರು.
ಆತ್ಮಕಥೆ ಬಗ್ಗೆ ಸೋನಿಯಾ ಗಾಂಧಿ ಮಾತು:
"ರಾಜಕೀಯದಲ್ಲಿರುವ ನನ್ನ ಸಹೋದ್ಯೋಗಿಗಳು ಮತ್ತು ಸ್ನೇಹಿತರು ಬಹುಶಃ ಇದೇ ರೀತಿಯ ಅನುಭವವನ್ನು ಹೊಂದಿರಬಹುದು. ನಿಮ್ಮ ಸುತ್ತಲೂ ಕಟ್ಟುಕಥೆಗಳನ್ನು ಹೆಣೆಯಲಾಗುತ್ತದೆ, ಅಸತ್ಯಗಳನ್ನು ಸೃಷ್ಟಿಸಲಾಗುತ್ತದೆ ಮತ್ತು ಸತ್ಯಕ್ಕೂ ದೂರವಾದ, ಮನಸ್ಸಿಗೆ ನೋವುಂಟು ಮಾಡುವ ಮಾತುಗಳನ್ನು ಆಡಲಾಗುತ್ತದೆ. ನನ್ನ ಭಾವನೆಗಳನ್ನು ಹೊರಹಾಕಲು ಮತ್ತು ನನ್ನ ಕುಟುಂಬದ ಬಗ್ಗೆ ನನಗೆ ತಿಳಿದಿರುವ ವಿಷಯಗಳನ್ನು ಹಂಚಿಕೊಳ್ಳಲು ಇದೊಂದು ಮಾರ್ಗ ಎಂದು ನಾನು ಭಾವಿಸಿದೆ" ಎಂದು ಅವರು ಹೇಳಿದರು.
ಸೋನಿಯಾ ಗಾಂಧಿ ಆತ್ಮಚರಿತ್ರೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿವರ ಹಂಚಿಕೊಂಡ ರಾಹುಲ್ ಗಾಂಧಿ
ಪತಿ ರಾಜೀವ್ ಗಾಂಧಿ ಅವರ ನಿಧನದಿಂದ ಉಂಟಾದ ವೈಯಕ್ತಿಕ ನಷ್ಟದ ಬಗ್ಗೆಯೂ ಅವರು ಮಾತನಾಡಿದರು ಮತ್ತು ಅವರ ಸಾವಿನ ದುಃಖದಿಂದ ಹೊರಬರಲು ತಮ್ಮ ಮಕ್ಕಳು ಹೇಗೆ ಸಹಾಯ ಮಾಡಿದರು ಎಂಬುದನ್ನು ವಿವರಿಸಿದರು. "ರಾಜೀವ್ ಅವರ ನಿಧನದ ನಂತರ ನಾನು ಸಂಪೂರ್ಣವಾಗಿ ಕುಗ್ಗಿಹೋಗಿದ್ದೆ. ಅಂತಹ ಸಮಯದಲ್ಲಿ ನನ್ನ ಮಕ್ಕಳು ನನಗೆ ಆಸರೆಯಾಗಿ ನಿಂತರು" ಎಂದು ಅವರು ನೆನಪಿಸಿಕೊಂಡರು.
ಜೀವನ ಚರಿತ್ರೆಯನ್ನು ಹಂಚಿಕೊಳ್ಳಲು ಅಂತಿಮವಾಗಿ ಒಪ್ಪಿಕೊಂಡಿದ್ದೇಕೆ ಎಂದು ವಿವರಿಸುತ್ತಾ, "ನನ್ನ ಅನೇಕ ಸ್ನೇಹಿತರು, ನೀನು ನಿನ್ನ ಕಥೆಯನ್ನು ಬರೆಯಲೇಬೇಕು. ಇದೊಂದು ಬಹಳ ಆಸಕ್ತಿದಾಯಕ ಕಥೆ. ನೀನು ಅಲ್ಲಿಂದ, ಅಂದರೆ ಹೊರಗಿನಿಂದ ಬಂದವಳು ಎಂದು ಪದೇ ಪದೆ ಹೇಳುತ್ತಿದ್ದರು. ಆದರೆ ನನ್ನ ಆಂತರಿಕ ಭಾವನೆಗಳನ್ನು ಹಂಚಿಕೊಳ್ಳಲು ಹಿಂಜರಿಕೆ ಇತ್ತು. ಹಾಗಾಗಿ ಆರಂಭದಲ್ಲಿ ನಾನು ಆ ಮಾತನ್ನು ಅಷ್ಟಾಗಿ ಗಣನೆಗೆ ತೆಗೆದುಕೊಂಡಿರಲಿಲ್ಲ" ಎಂದು ಅವರು ಹೇಳಿದರು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಆಪ್ತ ಸ್ನೇಹಿತೆ ಮಂಜುಲಿಕಾ ದುಬೆ ಅವರ ನಿರಂತರ ಪ್ರೋತ್ಸಾಹದ ಮೇರೆಗೆ ಅಂತಿಮವಾಗಿ ಆತ್ಮಕಥೆಯನ್ನು ಬರೆಯಲು ಒಪ್ಪಿಕೊಂಡಿದ್ದಾಗಿ ಅವರು ತಿಳಿಸಿದರು.
ಇಂಡಿಯಾ ಒಕ್ಕೂಟದ ಶಕ್ತಿ ಪ್ರದರ್ಶನ
ವಿಶೇಷ ಎಂದರೆ ಈ ಸಮಾರಂಭ ವಿಪಕ್ಷಗಳ ಇಂಡಿಯಾ ಒಕ್ಕೂಟದ ಶಕ್ತಿ ಪ್ರದರ್ಶನದ ವೇದಿಕೆಯಾಗಿಯೂ ಹೊರ ಹೊಮ್ಮಿತು. ಡಿ.ಕೆ. ಶಿವಕುಮಾರ್ ಸಹಿತ ತಮಿಳುನಾಡು, ತೆಲಂಗಾಣ, ಕೇರಳಂ, ಜಾರ್ಖಂಡ್ ಮತ್ತು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಗಳು ಭಾಗವಹಿಸಿದರು. ಅಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತಿತರರು ಉಪಸ್ಥಿತರಿದ್ದರು.