ಹೊಸದಿಲ್ಲಿ: ಪಾಕಿಸ್ತಾನದ ವಿರುದ್ದ ಭಾರತ ಮೇ 8ರಂದು 2ನೇ ದಿನವೂ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಈ ಮಧ್ಯೆ ಪಾಕಿಸ್ತಾನವೂ ಪ್ರತಿ ದಾಳಿ ನಡೆಸಿ ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿ ಸಂಪೂರ್ಣವಾಗಿ ವಿಫಲವಾಗಿದೆ. ಪಾಕ್ ಪ್ರಯೋಗಿಸಿದ ಜೆಟ್, ಡ್ರೋನ್ ಮತ್ತು ಕ್ಷಿಪಣಿಗಳನ್ನು ಭಾರತದ ಶಕ್ತಿಯುತವಾದ S 400 ಏರ್ ಡಿಫೆನ್ಸ್ ಸಿಸ್ಟಮ್ ಹೊಡೆದುರುಳಿಸಿದೆ. ಇದೀಗ ಪಾಕ್‌ಗೆ ತಕ್ಕ ಶಾಸ್ತಿ ಮಾಡಲು ಮುಂದಾಗಿರುವ ಭಾರತೀಯ ಸೇನೆಯು ಇದೇ ಮೊದಲ ಬಾರಿಗೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಮೇಲೆ ದಾಳಿ ನಡೆಸಲು ಮುಂದಾಗಿದೆ. ಸೇನೆಗೆ ನೌಕಾ ದಳವೂ ಸಂಪೂರ್ಣವಾದ ಸಾಥ್ ನೀಡುತ್ತಿದೆ.
ಭಾರತದಿಂದ ಪ್ರತಿ ದಾಳಿ: ಲಾಹೋರ್‌ನತ್ತ ಸೇನೆ
ಭಾರತದ ಗಡಿಯಿಂದ 24 ಕಿ.ಮೀ ದೂರದಲ್ಲಿರುವ ಲಾಹೋರ್‌ನತ್ತವೂ ಭಾರತದ ಕ್ಷಿಪಣಿಗಳು ಧಾವಿಸಿವೆ. ಉಗ್ರ ನೆಲೆಯನ್ನು ಗುರಿಯಾಗಿಸಿ ಈ ದಾಳಿ ನಡೆಯುತ್ತಿದೆ. ಈ ಮೂಲಕ ಭಾರತದ ಸೇನೆಯು ಪಾಕಿಸ್ತಾನಕ್ಕೆ ಖಡಕ್ ಉತ್ತರ ನೀಡಲು ಮುಂದಾಗಿದೆ.ಲಾಹೋರ್‌ನಲ್ಲಿ ಬೀಡು ಬಿಟ್ಟಿರುವ ಲಷ್ಕರ್ ಎ ತಯ್ಯಬ ಮುಖ್ಯಸ್ಥ ಉಗ್ರಗಾಮಿ ಹಫೀಸ್ ಸಯೀದ್ ಮನೆಯನ್ನು ಭಾರತೀಯ ಸೇನೆ ಟಾರ್ಗೆಟ್ ಮಾಡಿದೆ. ಅವನ ಮನೆಯನ್ನು ಧ್ವಂಸಗೊಳಿಸುವ ಎಲ್ಲಾ ಮುನ್ಸೂಚನೆಯೂ ಇದೆ.
ಜೈಶಂಕರ್ ಎಚ್ಚರಿಕೆ
ಪಾಕಿಸ್ತಾನದ ಪ್ರತಿದಾಳಿಯನ್ನು ವಿರೋಧಿಸಿರುವ ವಿದೇಶಾಂಗ ಸಚಿವ ಜೈಶಂಕರ್ ಯುದ್ಧ ಪ್ರಚೋದನೆಯನ್ನು ನಿಲ್ಲಿಸುವಂತೆ ಪಾಕ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಮೆರಿಕಾದ ಜತೆಗೂ ಈ ಕುರಿತು ಮಾತನಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪಾಕ್ ಪ್ರಧಾನಿ ಶೆಹಬಾಷ್ ಷರೀಫ್ ಜತೆಗೆ ಅಮೆರಿಕ ಮಾತನಾಡಿದೆ.