ಕೆಲವು ಪ್ರವಾಸಿ ತಾಣಗಳನ್ನು ನಾವು ನೋಡುತ್ತೇವೆ. ಕೆಲವು ತಾಣಗಳನ್ನು ನಾವು ಅನುಭವಿಸುತ್ತೇವೆ. ಆದರೆ, ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಾವು ಒಂದು ದಿನದ ಮಟ್ಟಿಗೆ ಮತ್ತೊಂದು ಲೋಕದ ಪಾತ್ರವಾಗಿಬಿಡುತ್ತೇವೆ. ಬೆಳಗ್ಗೆ ಒಂದು ಹಳೆಯ ಕಾಲದ ಅರಮನೆಯ ಮುಂದೆ ನಿಂತಿರುತ್ತೇವೆ. ಕೆಲವೇ ನಿಮಿಷಗಳಲ್ಲಿ ಅದೇ ಪ್ರವಾಸದಲ್ಲಿ ವಿಮಾನ ನಿಲ್ದಾಣವನ್ನೂ ನೋಡಬಹುದು. ಅಲ್ಲಿಂದ ರೈಲು ನಿಲ್ದಾಣ, ಆಸ್ಪತ್ರೆ, ಜೈಲು, ದೇವಸ್ಥಾನ, ಹಳ್ಳಿ, ನಗರ, ವಿದೇಶಿ ಬೀದಿ... ಹೀಗೆ ಒಂದೇ ದಿನದಲ್ಲಿ ಹಲವು ಲೋಕಗಳನ್ನು ಸುತ್ತಿ ಬರಬಹುದು. ಮಧ್ಯೆ ಸಿನಿಮಾದ ಸಾಹಸ ಪ್ರದರ್ಶನ, ಸಂಗೀತ, ನೃತ್ಯ, ಮಕ್ಕಳ ಆಟ, ಪಕ್ಷಿಗಳ ಲೋಕ, ಚಿಟ್ಟೆಗಳ ಉದ್ಯಾನ, ಥೀಮ್ ಗಾರ್ಡನ್‌ಗಳು, ರೋಮಾಂಚಕಾರಿ ರೈಡ್‌ಗಳು ಇವೆಲ್ಲವೂ ನಿಮ್ಮ ಪ್ರವಾಸದ ಭಾಗವಾಗುತ್ತವೆ.
ಹೀಗಾಗಿ ರಾಮೋಜಿ ಫಿಲ್ಮ್ ಸಿಟಿ ಕೇವಲ ಫಿಲ್ಮ್ ಸ್ಟುಡಿಯೋ ಅಲ್ಲ. ಅದು ಒಂದು ಅದ್ಭುತ ಪ್ರವಾಸದ ಅನುಭವ. ಹೈದರಾಬಾದ್ ಸಮೀಪದ ಸುಮಾರು 2,000 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ರಾಮೋಜಿ ಫಿಲ್ಮ್ ಸಿಟಿ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ ವಿಶ್ವದ ಅತಿ ದೊಡ್ಡ ಫಿಲ್ಮ್ ಸಿಟಿ/ಫಿಲ್ಮ್ ಸ್ಟುಡಿಯೋ ಸಂಕೀರ್ಣವಾಗಿ ಗುರುತಿಸಲ್ಪಟ್ಟಿದೆ. 1996ರಲ್ಲಿ ಆರಂಭವಾದ ಈ ತಾಣ ಇಂದು ಸಿನಿಮಾ ನಿರ್ಮಾಣದ ಕೇಂದ್ರದ ಜೊತೆಗೆ ಪ್ರಮುಖ ಪ್ರವಾಸಿ ತಾಣವಾಗಿಯೂ ಬೆಳೆದಿದೆ. ಸಂಸ್ಥೆಯ ಪ್ರಕಾರ, ಇಲ್ಲಿ ವರ್ಷಕ್ಕೆ ಸುಮಾರು 200 ಚಿತ್ರತಂಡಗಳು ಕೆಲಸ ಮಾಡುತ್ತವೆ ಮತ್ತು ವಿವಿಧ ಭಾರತೀಯ ಭಾಷೆಗಳಲ್ಲಿ 3,500ಕ್ಕೂ ಹೆಚ್ಚು ಚಿತ್ರಗಳ ಚಿತ್ರೀಕರಣ ನಡೆದಿದೆ. ಪ್ರತಿವರ್ಷ ಸುಮಾರು 15 ಲಕ್ಷ ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿಯೂ ಇದು ಬೆಳೆದಿದೆ.
ರಾಮೋಜಿ ರಾವ್ ಕನಸಿನ ಸಾಮ್ರಾಜ್ಯ
ಚೆರೂಕುರಿ ರಾಮೋಜಿ ರಾವ್ ಕೇವಲ ಉದ್ಯಮಿಯಲ್ಲ; ಮಾಧ್ಯಮ, ಪತ್ರಿಕೋದ್ಯಮ, ಸಿನಿಮಾ ಮತ್ತು ಉದ್ಯಮಶೀಲತೆಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದ ದೂರದೃಷ್ಟಿಯ ವ್ಯಕ್ತಿ. 1936ರ ನವೆಂಬರ್ 16ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆಡಪರುಪುಡಿಯಲ್ಲಿ ಜನಿಸಿದ ರಾಮೋಜಿ ರಾವ್, ನಂತರ ಭಾರತದ ಮಾಧ್ಯಮ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದರು. ಈನಾಡು, ಈಟಿವಿ, ಉಷಾಕಿರಣ್ ಮೂವೀಸ್ ಸೇರಿದಂತೆ ರಾಮೋಜಿ ಗ್ರೂಪ್‌ನ ಹಲವು ಸಂಸ್ಥೆಗಳ ಹಿಂದೆ ಅವರ ದೃಷ್ಟಿ ಮತ್ತು ಉದ್ಯಮಶೀಲತೆ ಇತ್ತು.
ಗೌಡಗೆರೆಯ ಶಕ್ತಿ ಧಾಮ; ಕರುಣೆ ತೋರುವ ಚಾಮುಂಡೇಶ್ವರಿ
ಸಿನಿಮಾ ನಿರ್ಮಾಣಕ್ಕೆ ಬೇಕಾದ ಸೌಲಭ್ಯಗಳು ಒಂದೇ ಕಡೆ ಸಿಗಬೇಕು; ಚಿತ್ರತಂಡವೊಂದು ಸ್ಕ್ರಿಪ್ಟ್‌ನೊಂದಿಗೆ ಬಂದು ಸಂಪೂರ್ಣ ಚಿತ್ರ ನಿರ್ಮಾಣದ ಅನುಭವ ಪಡೆಯಬೇಕು ಎಂಬ ಕಲ್ಪನೆಯಿಂದ ರಾಮೋಜಿ ಫಿಲ್ಮ್ ಸಿಟಿ ರೂಪುಗೊಂಡಿತು. 1996ರಲ್ಲಿ ಆರಂಭವಾದ ಈ ಕನಸು ಇಂದು 2,000 ಎಕರೆಗಳಷ್ಟು ವಿಸ್ತಾರಗೊಂಡು, ಸಿನಿಮಾ ನಿರ್ಮಾಣದ ಕೇಂದ್ರದಿಂದ ಪ್ರವಾಸಿಗರ ಕನಸಿನ ಲೋಕವಾಗಿ ಬೆಳೆದಿದೆ. 2016ರಲ್ಲಿ ರಾಮೋಜಿ ರಾವ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಭಾರತ ಸರಕಾರ ಗೌರವಿಸಿತು. 2024ರ ಜೂನ್ 8ರಂದು 87ನೆಯ ವಯಸ್ಸಿನಲ್ಲಿ ಅವರು ನಿಧನರಾದರು. ಆದರೆ ಅವರ ಕನಸಿನ ನಗರ ಇಂದಿಗೂ ಜೀವಂತವಾಗಿದೆ. ರಾಮೋಜಿ ಫಿಲ್ಮ್ ಸಿಟಿ ಅವರ ಉದ್ಯಮಶೀಲತೆಯ ಸ್ಮಾರಕ ಮಾತ್ರವಲ್ಲ; ಒಂದು ದೊಡ್ಡ ಕನಸನ್ನು ಹೇಗೆ ವಾಸ್ತವಕ್ಕೆ ತರಬಹುದು? ಎಂಬುದಕ್ಕೆ ನಿಂತಿರುವ ಉದಾಹರಣೆ.

ದಕ್ಷ ಉತ್ತರಾಧಿಕಾರಿ ವಿಜಯೇಶ್ವರಿ
ರಾಮೋಜಿ ಫಿಲ್ಮ್ ಸಿಟಿಯ ಇಂದಿನ ಬೆಳವಣಿಗೆಯ ಕಥೆಯಲ್ಲಿ ಚ. ವಿಜಯೇಶ್ವರಿ ಅವರ ಪಾತ್ರ ಮಹತ್ವದ್ದು. 1996ರಲ್ಲಿ ಆರಂಭವಾದ ಸಂಸ್ಥೆಯ ಬೆಳವಣಿಗೆಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ವಿಜಯೇಶ್ವರಿ ಅವರ ನಾಯಕತ್ವ ಪ್ರಮುಖವಾಗಿದೆ.ಡಾಲ್ಫಿನ್ ಹೊಟೇಲ್ಸ್ ಪ್ರೈ.ಲಿ ಸಮೂಹದ ಎಂ.ಡಿ ಕೂಡ ಆಗಿರುವ ವಿಜಯೇಶ್ವರಿ ಅವರು ರಾಮೋಜಿ ಫಿಲ್ಮ್ ಸಿಟಿಯನ್ನು ಕೇವಲ ಫಿಲ್ಮ್ ಸ್ಟುಡಿಯೋ ಆಗಿ ನೋಡುವ ಬದಲು, ಪ್ರವಾಸಿಗರಿಗೆ ಸಂಪೂರ್ಣ ಅನುಭವ ನೀಡುವ ಡೆಸ್ಟಿನೇಷನ್ ಆಗಿ ರೂಪಿಸುವ ದೃಷ್ಟಿಕೋನಕ್ಕೆ ಒತ್ತು ನೀಡಿದ್ದಾರೆ. ಸಿನಿಮಾ ನಿರ್ಮಾಣದ ಮೂಲ ಶಕ್ತಿಯನ್ನು ಉಳಿಸಿಕೊಂಡೇ ಪ್ರವಾಸೋದ್ಯಮ, ಮನೋರಂಜನೆ, ಸಾಹಸ, ಆತಿಥ್ಯ, ಕಾರ್ಯಕ್ರಮಗಳು ಮತ್ತು ಕುಟುಂಬ ಆಧಾರಿತ ಅನುಭವಗಳನ್ನು ವಿಸ್ತರಿಸುವುದು ಅವರ ನಾಯಕತ್ವದ ಪ್ರಮುಖ ಯೋಜನೆಯಾಗಿದೆ. ಇಂದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸ್ಟುಡಿಯೋ ಟೂರ್‌ನಿಂದ ಸಾಹಸ, ಬರ್ಡ್ ಪಾರ್ಕ್, ಲೈವ್ ಶೋಸ್, ಹೊಟೇಲ್ಸ್, ಡೆಸ್ಟಿನೇಶನ್ ವೆಡ್ಡಿಂಗ್ಸ್, ಕಾರ್ಪೊರೆಟ್ ಕಾರ್ಯಕ್ರಮಗಳು ಇವೆಲ್ಲದರೆಡೆಗೆ ವಿಸ್ತರಿಸಿರುವುದು ಅವರ ಮಹತ್ವಾಕಾಂಕ್ಷೆ ಮತ್ತು ದೂರದರ್ಶಿತ್ವಕ್ಕೆ ಸಾಕ್ಷಿ.
ರಾಮೋಜಿ ರಾವ್ ಬಿತ್ತಿದ ಕನಸನ್ನು ಮುಂದಿನ ತಲೆಮಾರಿನ ಪ್ರವಾಸೋದ್ಯಮದ ಅಗತ್ಯಗಳಿಗೆ ತಕ್ಕಂತೆ ವಿಸ್ತರಿಸುವ ಜವಾಬ್ದಾರಿ ವಿಜಯೇಶ್ವರಿ ಅವರ ನಾಯಕತ್ವದಲ್ಲಿ ಮುಂದುವರಿದಿದೆ.
ನಗರ ಒಂದು- ಲೋಕ ಹಲವು
ರಾಮೋಜಿ ಫಿಲ್ಮ್ ಸಿಟಿಗೆ ಪ್ರವೇಶಿಸಿದ ಕ್ಷಣದಿಂದಲೇ ಪ್ರವಾಸಿಗನ ಅನುಭವ ಬದಲಾಗುತ್ತದೆ. ಸಾಮಾನ್ಯ ಪ್ರವಾಸಿ ತಾಣದಲ್ಲಿ ನಾವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತೇವೆ. ಆದರೆ ಇಲ್ಲಿ ಒಂದು ಕಥೆಯಿಂದ ಮತ್ತೊಂದು ಕಥೆಗೆ ಪ್ರಯಾಣಿಸುತ್ತೇವೆ. ಅದರ ಪ್ರಮುಖ ಅನುಭವವೇ Studio Tour. ಗೈಡೆಡ್ ಪ್ರವಾಸದಲ್ಲಿ ಪ್ರವಾಸಿಗರನ್ನು ವಿಶೇಷ ಬಸ್‌ಗಳ ಮೂಲಕ ಫಿಲ್ಮ್ ಸಿಟಿಯ ವಿವಿಧ ಭಾಗಗಳಿಗೆ ಕರೆದೊಯ್ಯಲಾಗುತ್ತದೆ. ಖಾಸಗಿ ಕಾರುಗಳಿಗೆ ಮುಖ್ಯ ಪ್ರದೇಶಗಳಲ್ಲಿ ಪ್ರವೇಶವಿಲ್ಲ. ಬಸ್ ಸಾಗುತ್ತಿದ್ದಂತೆ ಕಾಣಿಸಿಕೊಳ್ಳುವ ದೃಶ್ಯಗಳು ಸಿನಿಮಾದ ಸೆಟ್‌ಗಳೆಂದು ಗೊತ್ತಿದ್ದರೂ, ಅವುಗಳ ನೈಜತೆಯೇ ಪ್ರವಾಸಿಗನನ್ನು ಅಚ್ಚರಿಗೊಳಿಸುತ್ತದೆ. ರೈಲು ನಿಲ್ದಾಣ… ವಿಮಾನ ನಿಲ್ದಾಣ… ಆಸ್ಪತ್ರೆ… ಜೈಲು… ದೇವಸ್ಥಾನ… ಮಸೀದಿ… ಗುರುದ್ವಾರ… ಹಳ್ಳಿ… ಸಣ್ಣ ಪಟ್ಟಣ… ಆಧುನಿಕ ನಗರ… ವಿದೇಶಿ ಬೀದಿಗಳು.. ಒಂದು ಚಿತ್ರಕ್ಕೆ ಬೇಕಾದ ಹಿನ್ನೆಲೆಯನ್ನು ಸೃಷ್ಟಿಸುವುದಕ್ಕಾಗಿ ನಿರ್ಮಿಸಿದ ಈ ಲೋಕಗಳು, ಪ್ರವಾಸಿಗರಿಗೆ ಒಂದು ದಿನದ ಅನುಭವದ ತಾಣಗಳಾಗಿ ಮಾರ್ಪಟ್ಟಿವೆ.
ರ‍್ಯಾಡಿಸನ್ ಬ್ಲೂ ಏಟ್ರಿಯಾ; 3 ದಶಕಗಳ ಆತಿಥ್ಯ ಪರಂಪರೆ
ಮಿಸ್ ಮಾಡದಿರಿ 'ಬಾಹುಬಲಿ' ಸೆಟ್
ರಾಮೋಜಿ ಫಿಲ್ಮ್ ಸಿಟಿಯ ಪ್ರವಾಸವನ್ನು ಪೂರ್ಣಗೊಳಿಸುವ ಮುನ್ನ ಬಹುತೇಕ ಪ್ರವಾಸಿಗರು ಕಾತರದಿಂದ ಕಾಯುವ ಪ್ರಮುಖ ತಾಣವೆಂದರೆ ಬಾಹುಬಲಿ ಸೆಟ್. ತೆರೆಯ ಮೇಲೆ ಕಂಡ ಮಹಾಕಾವ್ಯದ ಜಗತ್ತು, ಇಲ್ಲಿ ಕಣ್ಣೆದುರು ಭವ್ಯವಾಗಿ ನಿಂತಿರುವ ಅನುಭವ ನೀಡುತ್ತದೆ. ಮಾಹಿಷ್ಮತಿ ಸಾಮ್ರಾಜ್ಯದ ವೈಭವವನ್ನು ನೆನಪಿಸುವ ಬೃಹತ್ ವಿನ್ಯಾಸಗಳು, ಅರಮನೆಯ ವಾತಾವರಣ, ಭವ್ಯ ಕಲಾಕೃತಿಗಳು, ಸಿನಿಮಾ ಹೇಗೆ ಒಂದು ಕಲ್ಪನೆಯನ್ನು ವಾಸ್ತವದಂತೆ ರೂಪಿಸುತ್ತದೆ ಎಂಬುದಕ್ಕೆ ಇದು ಅದ್ಭುತ ಉದಾಹರಣೆ. ಸಿನಿಮಾ ಪ್ರೇಮಿಗಳಿಗೆ ಇದು ಒಂದು ಸೆಟ್ ಮಾತ್ರವಲ್ಲ. ನಾವು ಸಿನಿಮಾದ ಭಾಗ ಅನಿಸುವ ಕ್ಷಣ.
ಇಲ್ಲಿನ ಪ್ರತಿಯೊಂದು ಮೂಲೆಗೂ ಫೊಟೋಗೆ ಅವಕಾಶ ಇರುವುದರಿಂದ ಕುಟುಂಬ, ಸ್ನೇಹಿತರು ಮತ್ತು ಯುವ ಪ್ರವಾಸಿಗರಿಗೆ ಇದು ವಿಶೇಷ ಆಕರ್ಷಣೆ.

ಸಂಭ್ರಮಕ್ಕೆ ಸ್ವಾಗತಿಸುವ ಯುರೇಕಾ
ರಾಮೋಜಿ ಫಿಲ್ಮ್ ಸಿಟಿಯ ಮತ್ತೊಂದು ಪ್ರಮುಖ ಆಕರ್ಷಣೆ ಯುರೇಕಾ. ಇಲ್ಲಿ ವಿವಿಧ ಕಾಲಘಟ್ಟಗಳು ಮತ್ತು ಸಂಸ್ಕೃತಿಗಳ ಛಾಯೆಗಳನ್ನು ಒಂದೇ ಪ್ರವಾಸದಲ್ಲಿ ಅನುಭವಿಸಬಹುದು. ಮೊಘಲರ ವೈಭವದಿಂದ ಮೌರ್ಯರ ನೆನಪುಗಳವರೆಗೆ, ವೈಲ್ಡ್‌ವೆಸ್ಟ್‌ನ ಸಾಹಸಮಯ ವಾತಾವರಣದಿಂದ ಮನೋರಂಜನೆಯ ವಿವಿಧ ಪ್ರದರ್ಶನಗಳವರೆಗೆ ಇದು ಪ್ರವಾಸಿಗರ ಕುತೂಹಲವನ್ನು ಜೀವಂತವಾಗಿರಿಸುವ ಪ್ರದೇಶ. ಮಕ್ಕಳಿಗೆ ಇದು ಕಲಿಕೆಯ ಜೊತೆಗೆ ಆಟದ ಅನುಭವ. ದೊಡ್ಡವರಿಗೆ ಇದು ಸಿನಿಮಾದ ಹಿಂದಿರುವ ಕಲ್ಪನಾ ಜಗತ್ತನ್ನು ಅರಿಯುವ ಅವಕಾಶ.
ಸಿನಿಮಾ ಹೇಗೆ ಹುಟ್ಟುತ್ತದೆ?
ರಾಮೋಜಿ ಫಿಲ್ಮ್ ಸಿಟಿಯ ವಿಶೇಷತೆಯೇ ಇಲ್ಲಿ ಪ್ರವಾಸಿಗರು ಸಿನಿಮಾವನ್ನು ನೋಡುವುದಿಲ್ಲ; ಸಿನಿಮಾದ ನಿರ್ಮಾಣದ ಪ್ರಕ್ರಿಯೆಯನ್ನು ಅನುಭವಿಸುತ್ತಾರೆ. ರಾಮೋಜಿ ಮೂವೀ ಮ್ಯಾಜಿಕ್ ವಲಯದಲ್ಲಿ ಸಿನಿಮಾದ ತಂತ್ರಜ್ಞಾನ, ಸಾಹಸ, ಕಲ್ಪನೆ ಮತ್ತು ಮನೋರಂಜನೆಯ ವಿವಿಧ ಮುಖಗಳನ್ನು ಪರಿಚಯಿಸುವ ಅನುಭವಗಳಿವೆ.
ಇಲ್ಲಿ ಆಕ್ಷನ್ ಮೂಲಕ ಸಿನಿಮಾ ನಿರ್ಮಾಣದ ಹಿಂದಿರುವ ಸಾಹಸ ಮತ್ತು ತಂತ್ರಗಳನ್ನು ಅರಿಯಬಹುದು. ಫಿಲ್ಮಿ ದುನಿಯಾ ಕಲ್ಪನಾ ಲೋಕಕ್ಕೆ ಕರೆದೊಯ್ಯುತ್ತದೆ. ಸ್ಪೇಸ್ ಯಾತ್ರಾ ನಿಮಗೆ ಬಾಹ್ಯಾಕಾಶದ ಅನುಭವವನ್ನು ಮನೋರಂಜನೆಯ ರೂಪದಲ್ಲಿ ನೀಡುತ್ತದೆ.
ಸಾಹಸ ಬೇಕೇ? ವೈಲ್ಡ್ ವೆಸ್ಟ್‌ಗೆ ಬನ್ನಿ!
ಸಿನಿಮಾದಲ್ಲಿ ಹೀರೋ-ವಿಲನ್‌ಗಳ ಹೊಡೆದಾಟವನ್ನು ನೋಡುತ್ತಾ ರೋಮಾಂಚನಗೊಳ್ಳುವವರಿಗೆ ನೈಜ ಸಾಹಸ ಪ್ರದರ್ಶನ ಇನ್ನಷ್ಟು ವಿಶೇಷ. ವೈಲ್ಡ್ ವೆಸ್ಟ್ ಸ್ಟಂಟ್ ಶೋ ರಾಮೋಜಿಯ ಜನಪ್ರಿಯ ಲೈವ್ ಪ್ರದರ್ಶನಗಳಲ್ಲಿ ಒಂದು. ಸಾಹಸ, ವೇಗ, ಶೂಟೌಟ್‌ಗಳ ವಾತಾವರಣ ಮತ್ತು ಸ್ಟಂಟ್‌ಗಳ ಮೂಲಕ ಹಳೆಯ ವೈಲ್ಡ್ ವೆಸ್ಟ್ ಜಗತ್ತನ್ನು ಕಣ್ಣೆದುರು ಕಟ್ಟಿಕೊಡಲಾಗುತ್ತದೆ. ಅದರ ಜೊತೆಗೆ ಲೈಟ್ಸ್ಸ ಕ್ಯಾಮೆರಾ ಆಕ್ಷನ್ ಸೇರಿದಂತೆ ವಿವಿಧ ಲೈವ್ ಶೋಗಳು ದಿನದ ಪ್ರವಾಸಕ್ಕೆ ಮತ್ತಷ್ಟು ಬಣ್ಣ ತುಂಬುತ್ತವೆ. ನೂರಾರು ಕಲಾವಿದರು ಭಾಗವಹಿಸುವ ಪ್ರದರ್ಶನಗಳು ರಾಮೋಜಿಯ ಪ್ರವಾಸಿ ಅನುಭವದ ಪ್ರಮುಖ ಭಾಗವಾಗಿವೆ.
ಮಕ್ಕಳಿಗಾಗಿ ಫಂಡುಸ್ತಾನ್
ಮಕ್ಕಳನ್ನು ಕರೆದುಕೊಂಡು ಪ್ರವಾಸಕ್ಕೆ ಹೊರಡುವ ಕುಟುಂಬಗಳಿಗೆ ರಾಮೋಜಿ ಫಿಲ್ಮ್ ಸಿಟಿಯ ದೊಡ್ಡ ಪ್ಲಸ್ ಪಾಯಿಂಟ್ ಫಂಡುಸ್ತಾನ್. ರೈಡ್‌ಗಳು, ಆಟಗಳು, ಮನೋರಂಜನಾ ಚಟುವಟಿಕೆಗಳು, ಮಕ್ಕಳಿಗಾಗಿ ರೂಪಿಸಿರುವ ವಿಶೇಷ ಪ್ರದೇಶಗಳು ಇವೆಲ್ಲದರಿಂದ ಮಕ್ಕಳು ತಮ್ಮದೇ ಲೋಕದಲ್ಲಿ ಮುಳುಗಿ ಹೋಗುತ್ತಾರೆ. ದಾದಾಜಿನ್ ಎಂಬ ಮ್ಯಾಸ್ಕಾಟ್ ಮಕ್ಕಳನ್ನು ಆಕರ್ಷಿಸುತ್ತದೆ. ಮತ್ತೊಂದು ಕುತೂಹಲಕಾರಿ ಅನುಭವವೆಂದರೆ ಬೋರಾಸುರ ಎಂಬ ಮಾಯಾಜಾಲದ ವಾತಾವರಣದಲ್ಲಿ ರೂಪಿಸಿರುವ ಥೀಮ್ಡ್ ವಾಕ್-ಥ್ರೂ. ಇದನ್ನು ಮಕ್ಕಳು ಮಾತ್ರವಲ್ಲ ಹಿರಿಯರೂ ಎಂಜಾಯ್ ಮಾಡುತ್ತಾರೆ.

ಚಿಟ್ಟೆಗಳೂ ಹಕ್ಕಿಗಳೂ!
ರಾಮೋಜಿ ಫಿಲ್ಮ್ ಸಿಟಿಯ ಪ್ರವಾಸದ ನಡುವೆ ಇದ್ದಕ್ಕಿದ್ದಂತೆ ಸಿನಿಮಾ ಲೋಕದಿಂದ ಪ್ರಕೃತಿಯ ಲೋಕಕ್ಕೆ ಪ್ರವೇಶಿಸಿದ ಅನುಭವ ನೀಡುವ ತಾಣವೇ ವಿಂಗ್ಸ್- ಬರ್ಡ್ ಪಾರ್ಕ್. ಇಲ್ಲಿ ವಿವಿಧ ದೇಶಗಳ ಪಕ್ಷಿಗಳೊಂದಿಗೆ ಹಸಿರಿನ ವಾತಾವರಣದಲ್ಲಿ ಸಮಯ ಕಳೆಯಬಹುದು. ವರ್ಣರಂಜಿತ ಪಕ್ಷಿಗಳು, ಹಸಿರು ಸಸ್ಯವರ್ಗ, ಜಲಪಾತದಂಥ ವಿನ್ಯಾಸಗಳು ಪ್ರಕೃತಿ ಪ್ರಿಯರಿಗೆ ವಿಶ್ರಾಂತಿಯ ಅನುಭವ ನೀಡುತ್ತದೆ. ಇದರ ಜತೆಗೆ ಬಟರ್‌ಫ್ಲೈ ಪಾರ್ಕ್, ಹೂವು-ಸಸ್ಯಗಳ ಆಕರ್ಷಣೆಯ ಕಲರ್ಸ್, ಚಿಕ್ಕ ಗಿಡಗಳ ಸೌಂದರ್ಯವನ್ನು ಪರಿಚಯಿಸುವ ವಾಮನ್ ಬೋನ್ಸಾಯ್ ಪಾರ್ಕ್ ಕೂಡ ಪ್ರವಾಸಿಗರ ಗಮನ ಸೆಳೆಯುತ್ತವೆ.
ಫಿಲ್ಮಿ ದುನಿಯಾ-ಇಲ್ಲೇ ಇದೆ ವಿದೇಶ
ವಿದೇಶ ಪ್ರವಾಸಕ್ಕೆ ಹೋಗಲು ಸಾಧ್ಯವಾಗದಿದ್ದರೂ, ಒಂದೇ ದಿನದಲ್ಲಿ ಜಗತ್ತಿನ ವಿವಿಧ ಕಲ್ಪಿತ ತಾಣಗಳನ್ನು ನೋಡಬೇಕೇ? ಫಿಲ್ಮಿ ದುನಿಯಾ ನಿಮ್ಮನ್ನು ಮತ್ತೊಂದು ಕಲ್ಪನಾ ಪ್ರವಾಸಕ್ಕೆ ಕರೆದೊಯ್ಯುತ್ತದೆ. ಐಫೆಲ್ ಟವರ್, ಸ್ಟ್ಯಾಚ್ಯೂ ಆಫ್ ಲಿಬರ್ಟಿ. ರಿಯೋ ಕಾರ್ನಿವಲ್ ಸೇರಿದಂತೆ ವಿಶ್ವದ ಪ್ರಸಿದ್ಧ ದೃಶ್ಯಗಳ ಕಲ್ಪನಾತ್ಮಕ ರೂಪಗಳು ಇಲ್ಲಿ ಮನೋರಂಜನೆಯ ಭಾಗವಾಗಿವೆ. ಮಕ್ಕಳಿಗೆ ಇದು ಫ್ಯಾಂಟಸಿ. ಯುವಕರಿಗೆ ಫೊಟೋ ಸ್ಪಾಟ್.ಕುಟುಂಬಕ್ಕೆ ನೆನಪಿನ ಕ್ಷಣ.
ಕೃಪಾಳು ಕೇವ್ಸ್ ಎಂಬ ರಹಸ್ಯ ಲೋಕ
ಸಿನಿಮಾ ಸೆಟ್‌ಗಳು, ರೈಡ್‌ಗಳು ಮತ್ತು ಲೈವ್ ಶೋಗಳ ನಡುವೆ ಸ್ವಲ್ಪ ವಿಭಿನ್ನ ಅನುಭವ ಬೇಕಾದರೆ ಕೃಪಾಳು ಗುಹೆಗಳನ್ನು ಮಿಸ್ ಮಾಡುವಂತಿಲ್ಲ. ಬಂಡೆಗಳ ವಿನ್ಯಾಸ, ಕೆತ್ತನೆಗಳು ಮತ್ತು ಗುಹೆಯಂಥ ವಾತಾವರಣ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತದೆ. ಮಂಜುಮೆಲ್ ಬಾಯ್ಸ್ ಚಿತ್ರದ ಗುಣ ಕೇವ್ಸ್ ನೆನಪಾದರೆ ಅಚ್ಚರಿ ಇಲ್ಲ.
ತೋಟಗಳ ನಡುವೆ ಒಂದು ಸಿನಿಮಾ ನಗರ
ರಾಮೋಜಿ ಫಿಲ್ಮ್ ಸಿಟಿಯ ಮತ್ತೊಂದು ದೊಡ್ಡ ವಿಶೇಷತೆ ಅದರ ಥೀಮ್ ಗಾರ್ಡನ್‌ಗಳು ಮತ್ತು ಲ್ಯಾಂಡ್‌ಸ್ಕೇಪ್‌ಗಳು. ಹವಾ ಮಹಲ್, ಮೊಘಲ್ ಗಾರ್ಡನ್, ಸನ್ ಕಾರಂಜಿ, ಜಪಾನೀಸ್ ಗಾರ್ಡನ್, ಭಾಗವತಂ ಸೆಟ್‌ಗಳು ಸೇರಿದಂತೆ ಹಲವು ಪ್ರದೇಶಗಳು ಪ್ರವಾಸಿಗರ ಕಣ್ಣಿಗೆ ಹಬ್ಬ ನೀಡುತ್ತವೆ.
ಸಾಹಸ ಪ್ರಿಯರಿಗೆ ಸಾಹಸ್
ಸಿನಿಮಾ ಸಾಕು, ಈಗ ಸ್ವಲ್ಪ ಅಡ್ವೆಂಚರ್ ಬೇಕು ಎನ್ನುವವರಿಗೆ ರಾಮೋಜಿ ಅಡ್ವೆಂಚರ್@ ಸಾಹಸ್ ಮತ್ತೊಂದು ಆಯ್ಕೆ. ನೈಸರ್ಗಿಕ ಭೂಪ್ರದೇಶವನ್ನು ಬಳಸಿಕೊಂಡು ರೂಪಿಸಿರುವ ಸಾಹಸ ವಲಯದಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಕುಟುಂಬಗಳು, ಯುವಕರು, ವಿದ್ಯಾರ್ಥಿಗಳು ಮತ್ತು ಕಾರ್ಪೊರೆಟ್ ಗುಂಪುಗಳು ರೋಮಾಂಚನಕಾರಿ ಅನುಭವ ಪಡೆಯಬಹುದು. ರಾಮೋಜಿ ಫಿಲ್ಮ್ ಸಿಟಿ ಇದನ್ನು ಏಷ್ಯಾದ ಪ್ರಮುಖ ಅಡ್ವೆಂಚರ್ ಲ್ಯಾಂಡ್‌ಗಳಲ್ಲಿ ಒಂದಾಗಿ ಪ್ರಚಾರ ಮಾಡುತ್ತಿದೆ.
ಒಂದು ದಿನ ಸಾಕೇ?
ರಾಮೋಜಿ ಫಿಲ್ಮ್ ಸಿಟಿಯನ್ನು ನೋಡಲು ಹೋಗುವ ಪ್ರವಾಸಿಗರಿಗೆ ಅತ್ಯಂತ ಮುಖ್ಯವಾದ ಸಲಹೆ ಎಂದರೆ, ಬೆಳಗ್ಗೆಯೇ ಹೋಗಿ. ಸಂಸ್ಥೆಯ ಅಧಿಕೃತ ಮಾಹಿತಿಯ ಪ್ರಕಾರ, ಪ್ರವಾಸಿಗರಿಗೆ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಸಿಟಿ ತೆರೆದಿರುತ್ತದೆ. ವಿಶೇಷ ಕಾರ್ನಿವಲ್ ಸಂದರ್ಭಗಳಲ್ಲಿ ಸಮಯ ವಿಸ್ತರಿಸಬಹುದು. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಹೆಚ್ಚು ಜನಸಂದಣಿ ಇರುವ ಸಾಧ್ಯತೆ ಇರುವುದರಿಂದ ವಾರದ ದಿನಗಳಲ್ಲಿ ಭೇಟಿ ನೀಡುವುದು ಹೆಚ್ಚು ಆರಾಮದಾಯಕವಾಗಬಹುದು. ಒಂದೇ ದಿನದಲ್ಲಿ ಸಾಧ್ಯವಾದಷ್ಟು ಅನುಭವಗಳನ್ನು ಪಡೆಯಬೇಕಾದರೆ, ಪ್ರವಾಸವನ್ನು ಮುಂಚಿತವಾಗಿ ಯೋಜಿಸುವುದು ಉತ್ತಮ.

ವಾಸ್ತವ್ಯ ಉಪಚಾರಕ್ಕೆ ತಾರಾ ಸಿತಾರಾ!
ರಾಮೋಜಿ ಫಿಲ್ಮ್ ಸಿಟಿಯ ಪ್ರವಾಸದ ಮತ್ತೊಂದು ವಿಶೇಷತೆ ಎಂದರೆ, ಪ್ರವಾಸಿಗರಿಗೆ ವಾಸ್ತವ್ಯದ ವ್ಯವಸ್ಥೆಯೂ ಇದೆ. ತಾರಾ, ಸಿತಾರಾ, ಗ್ರೀನ್ ಇನ್ನ್, ಶಾಂತಿನಿಕೇತನ್, ಸಹಾರಾ, ವಸುಂಧರಾ ವಿಲ್ಲಾ ಈ ಆತಿಥ್ಯತಾಣಗಳಲ್ಲಿ ಅದ್ಭುತ ಊಟ ತಿಂಡಿ ಮತ್ತು ವಾಸ್ತವ್ಯಕ್ಕೆ ವ್ಯವಸ್ಥೆ ಇದೆ. ಅದರರ್ಥ ರಾಮೋಜಿ ಫಿಲ್ಮ್ ಸಿಟಿಯನ್ನು ಕೇವಲ ಒಂದು ದಿನದ ಪ್ರವಾಸವಾಗಿ ನೋಡುವ ಅಗತ್ಯವಿಲ್ಲ. ಸಿನಿಮಾ, ಮನೋರಂಜನೆ, ವಸತಿ, ಆಹಾರ, ಶಾಪಿಂಗ್ ಮತ್ತು ಕಾರ್ಯಕ್ರಮಗಳನ್ನು ಒಟ್ಟಿಗೆ ಸೇರಿಸಿ ಪೂರ್ಣ ಅನುಭವದ ಪ್ರವಾಸವನ್ನಾಗಿ ರೂಪಿಸಬಹುದು.
ಸಿನಿಮಾ ಥೀಮ್ ಫುಡ್ ಹಬ್!
ಪ್ರವಾಸದಲ್ಲಿ ಊಟವೂ ಒಂದು ಅನುಭವ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಥೀಮ್ ಆಧಾರಿತ ಮಲ್ಟಿ-ಕ್ಯೂಸಿನ್ ರೆಸ್ಟೋರೆಂಟ್‌ಗಳು ಮತ್ತು ಫುಡ್ ಔಟ್‌ಲೆಟ್‌ಗಳಿವೆ. ಬಾಹುಬಲಿ ಸೆಟ್ ಸಮೀಪದ ಥೀಮ್ ರೆಸ್ಟೋರೆಂಟ್ ಸೇರಿದಂತೆ ವಿಭಿನ್ನ ವಾತಾವರಣದಲ್ಲಿ ಊಟ ಮಾಡುವ ಅವಕಾಶವಿದೆ. ಪ್ರವಾಸ ಮುಗಿಯುವ ಮುನ್ನ ಥೀಮ್ ಬಜಾರ್‌ಗಳಲ್ಲಿ ಸ್ಮರಣಿಕೆಗಳು, ಉಡುಪುಗಳು, ಕರಕುಶಲ ವಸ್ತುಗಳು ಮತ್ತು ರಾಮೋಜಿ ಫಿಲ್ಮ್ ಸಿಟಿಗೆ ಸಂಬಂಧಿಸಿದ ನೆನಪಿನ ವಸ್ತುಗಳನ್ನು ಖರೀದಿಸಬಹುದು.
ಹೈದರಾಬಾದ್‌ಗೆ ಪ್ರವಾಸ ಹೋದಾಗ ಚಾರ್ಮಿನಾರ್, ಗೋಲ್ಕೊಂಡಾ, ಹುಸೇನ್ ಸಾಗರ್‌ಗಳ ಪಟ್ಟಿ ಮಾಡುವಾಗ ಅವೆಲ್ಲಕ್ಕಿಂತ ಪ್ರಥಮ ಆದ್ಯತೆಯಾಗಿ ರಾಮೋಜಿ ಫಿಲ್ಮ್ ಸಿಟಿ ಇಡಿ. ಈ ಪ್ರವಾಸ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ಒಂದು ದಿನದ ಮಟ್ಟಿಗೆ ನಿಮ್ಮದೇ ಸಿನಿಮಾದೊಳಗೆ ನೀವು ಪ್ರವೇಶಿಸುತ್ತೀರಿ. ಖಂಡಿತ.
ಮೂಲ್ಕಿ ಅರಮನೆ: ಪ್ರತಿ ಪ್ರವಾಸಿಯೂ ಭೇಟಿ ನೀಡಲೇಬೇಕಾದ ಐತಿಹಾಸಿಕ ತಾಣ
ಇದು ಯಾರಿಗಾಗಿ?
ರಾಮೋಜಿ ಫಿಲ್ಮ್ ಸಿಟಿಯ ದೊಡ್ಡ ಶಕ್ತಿ ಅದರ ವೈವಿಧ್ಯ.
- ಸಿನಿಮಾ ಪ್ರಿಯರಿಗೆ- ಶೂಟಿಂಗ್ ಸೆಟ್‌ಗಳು, ಬಾಹುಬಲಿ ಸೆಟ್, ಬ್ಯಾಕ್‌ಲಾಟ್ ಟೂರ್ ಮತ್ತು ಸಿನಿಮಾ ನಿರ್ಮಾಣದ ಅನುಭವ.
- ಕುಟುಂಬಗಳಿಗೆ- ಮಕ್ಕಳ ರೈಡ್‌ಗಳು, ಲೈವ್ ಶೋಗಳು, ಗಾರ್ಡನ್‌ಗಳು, ಪಕ್ಷಿಗಳ ಉದ್ಯಾನ ಮತ್ತು ಮನೋರಂಜನೆ.
- ಮಕ್ಕಳಿಗೆ- ಫಂಡುಸ್ತಾನ್, ಫಿಲ್ಮಿ ದುನಿಯಾ, ರೈಡ್ಸ್, ಗೇಮ್ಸ್, ವಿಂಗ್ಸ್ ಬರ್ಡ್ ಪಾರ್ಕ್.
- ಯುವಕ ಯುವತಿಯರಿಗೆ- ಭರ್ಜರಿ ಫೊಟೋ ಸ್ಪಾಟ್‌ಗಳು, ರೀಲ್ಸ್ ಸ್ಪಾಟ್ ಗಳು, ಥೀಮ್ ಸೆಟ್‌ಗಳು ಮತ್ತು ಸಾಹಸ ಚಟುವಟಿಕೆಗಳು.
- ಪ್ರಕೃತಿ ಪ್ರಿಯರಿಗೆ- ಬರ್ಡ್ ಪಾರ್ಕ್, ಬಟರ್ ಫ್ಲೈ ಪಾರ್ಕ್, ಬೋನ್ಸಾಯ್ ಪಾರ್ಕ್.
- ಕಾರ್ಪೊರೆಟ್‌ಗಳಿಗೆ- ಅನುಭವಾಧಾರಿತ ಕಾರ್ಯಕ್ರಮಗಳು, ಕಾನ್‌ಫರೆನ್ಸ್‌ಗಳು ಮತ್ತು ತಂಡದ ಚಟುವಟಿಕೆಗಳಿಗೆ ಅವಕಾಶ.
- ವಿಶೇಷ ಸಂದರ್ಭಗಳಿಗೆ- ಡೆಸ್ಟಿನೇಶನ್ ವೆಡ್ಡಿಂಗ್, ಪ್ರಿ ವೆಡ್ಡಿಂಗ್ ಫೊಟೋಶೂಟ್ ಮತ್ತು ವಿವಿಧ ಕಾರ್ಯಕ್ರಮಗಳಿಗೆ ಅವಕಾಶ
ಒಟ್ಟಾರೆ ರಾಮೋಜಿ ಫಿಲ್ಮ್ ಸಿಟಿ ಸಿನಿಮಾ, ಪ್ರವಾಸೋದ್ಯಮ, ಆತಿಥ್ಯ, ಸಾಹಸ ಮತ್ತು ಕಾರ್ಯಕ್ರಮಗಳನ್ನು ಒಂದೇ ತಾಣದಲ್ಲಿ ಸಂಯೋಜಿಸಿರುವ ಬಹುಮುಖ ಪ್ರವಾಸಿ ತಾಣವಾಗಿದೆ.
ಪ್ರವಾಸಿಗರು ಮಿಸ್ ಮಾಡಬಾರದ 10 ಅನುಭವಗಳು
- ಸ್ಟುಡಿಯೋ ಟೂರ್.
- 'ಬಾಹುಬಲಿ' ಸೆಟ್.
- ಬ್ಯಾಕ್ ಲಾಟ್ ಟೂರ್.
- ವೈಲ್ಡ್ ವೆಸ್ಟ್ ಸ್ಟಂಟ್ ಶೋ.
- ರಾಮೋಜಿ ಮೂವಿ ಮ್ಯಾಜಿಕ್.
- ಫಂಡುಸ್ತಾನ್.
- ವಿಂಗ್ಸ್ ಬರ್ಡ್ ಪಾರ್ಕ್.
- ಬಟರ್ ಫ್ಲೈ ಮತ್ತು ಬೋನ್ಸಾಯ್ ಪಾರ್ಕ್.
- ಫಿಲ್ಮಿ ದುನಿಯಾ.
- ಥೀಮ್ ಗಾರ್ಡನ್ಸ್ ಮತ್ತು ಸೆಟ್‌ಗಳು.

ರಾಮೋಜಿ ಫಿಲ್ಮ್ ಸಿಟಿಗೆ ಹೋಗುವವರು ಗಮನಿಸಿ
- ಬೆಳಗ್ಗೆ ಬೇಗ ತಲುಪಿ: ಒಂದು ದಿನದ ಪ್ರವಾಸವಾಗಿರುವುದರಿಂದ ಸಮಯವನ್ನು ಗರಿಷ್ಠವಾಗಿ ಬಳಸಿಕೊಳ್ಳಿ.
- ಮುಂಚಿತವಾಗಿ ಯೋಜಿಸಿ: ಮುಖ್ಯ ಆಕರ್ಷಣೆಗಳು ಮತ್ತು ಶೋಗಳ ಸಮಯವನ್ನು ಗಮನಿಸಿ.
- ವಾರದ ದಿನ ಆಯ್ಕೆ ಮಾಡಿದರೆ ಉತ್ತಮ: ವಾರಾಂತ್ಯ ಮತ್ತು ರಜಾದಿನಗಳಲ್ಲಿ ಜನಸಂದಣಿ ಹೆಚ್ಚಾಗಬಹುದು.
- ಆರಾಮದಾಯಕ ಉಡುಪು ಮತ್ತು ಶೂ: ದಿನವಿಡೀ ಸಾಕಷ್ಟು ಸುತ್ತಾಟವಿರುವುದರಿಂದ ಅನುಕೂಲಕರ ಉಡುಪು ಮುಖ್ಯ.
- ಕ್ಯಾಮೆರಾ/ಮೊಬೈಲ್ ಸಿದ್ಧವಾಗಿರಲಿ: 'ಬಾಹುಬಲಿ' ಸೆಟ್‌ನಿಂದ ಥೀಮ್ ಗಾರ್ಡನ್‌ಗಳವರೆಗೆ ಫೊಟೋ ಅವಕಾಶಗಳು ಸಾಕಷ್ಟಿವೆ.
- ಕುಟುಂಬದೊಂದಿಗೆ ಹೋಗಿ: ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಪ್ರತ್ಯೇಕ ಅನುಭವಗಳಿವೆ.
- ಪೂರ್ಣ ದಿನ ಮೀಸಲಿಡಿ: ರಾಮೋಜಿ ಸಿಟಿಯನ್ನು ಕೆಲವು ಗಂಟೆಗಳಲ್ಲಿ ನೋಡಿ ಮುಗಿಸಲಾಗದು. ಇಡೀ ದಿನ ಮೀಸಲಿಡಿ.