ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Iran- israel war: ಹೊರ್ಮುಜ್‌ ಜಲಸಂಧಿಯತ್ತ ಭಾರತದ ಯುದ್ಧನೌಕೆಗಳು! ಕಾರಣವೇನು?

ಹಡಗುಗಳನ್ನು ಸುರಕ್ಷಿತವಾಗಿ ಕರೆತರಲು ಭಾರತೀಯ ನೌಕಾಪಡೆ ಒಮಾನ್ ಗಲ್ಫ್ ಭಾಗದತ್ತ ಯುದ್ಧನೌಕೆಗಳನ್ನು ರವಾನಿಸಿದೆ ಎಂದು ವರದಿಯಾಗಿವೆ. ತೈಲ ಹಡಗುಗಳಿಗೆ ಎಸ್ಕಾರ್ಟ್ ನೀಡಲು 6ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಲಾಗಿದೆ ಎಂದು ‘ಬ್ಲೂಮ್​ಬರ್ಗ್’ ಹಾಗೂ ಇತರೆ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಹೊರ್ಮುಜ್‌ ಜಲಸಂಧಿ

ನವದೆಹಲಿ, ಮಾರ್ಚ್ 19: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ದುಷ್ಪರಿಣಾಮ (USA, Iran-Israel war) ಜಾಗತಿಕ ತೈಲ ಹಾಗೂ ಅನಿಲ ಸರಬರಾಜಿನ (LPG crisis) ಮೇಲೆ ಉಂಟಾಗಿದೆ. ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ನೂರಾರು ತೈಲ ಹಾಗೂ ಅನಿಲ ಹಡಗುಗಳು ಅಲ್ಲಿ ಸಿಲುಕಿಕೊಂಡಿವೆ. ಭಾರತದ 22ಕ್ಕೂ ಹೆಚ್ಚು ಹಡಗುಗಳು ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಸಿಲುಕಿರುವುದಾಗಿ ಕೇಂದ್ರ ಸರ್ಕಾರದ ಶಿಪ್ಪಿಂಗ್ ಸಚಿವಾಲಯ ಮಾಹಿತಿ ನೀಡಿದೆ. ಭಾರತದ ತೈಲ ಹಡಗುಗಳಿಗೆ ಎಸ್ಕಾರ್ಟ್ ನೀಡಲು ನಮ್ಮ 4ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಲಾಗಿದೆ.

ಹೊರ್ಮುಜ್‌ನಲ್ಲಿರುವ ಭಾರತದ ನೌಕೆಗಳಲ್ಲಿ 6 ಎಲ್‌ಪಿಜಿ ಹಡಗುಗಳು, 4 ಕಚ್ಚಾ ತೈಲ ಹಡಗುಗಳು, 3 ಕಂಟೇನರ್ ಹಡಗುಗಳು, 2 ಕಚ್ಚಾ ವಸ್ತು ಸಾಗಣೆ ಹಡಗುಗಳು, 1 ಎಲ್‌ಎನ್‌ಜಿ ಹಡಗು ಹಾಗೂ 1 ರಾಸಾಯನಿಕ ವಸ್ತು ಸಾಗಣೆ ಹಡಗು ಸೇರಿವೆ.

ಹೊರ್ಮುಜ್‌ನಲ್ಲಿ ಭಾರತದ ಹಡಗುಗಳು

ಪರ್ಷಿಯನ್‌ ಗಲ್ಫ್‌ನಲ್ಲಿ – 22 ಹಡಗು

LPG ತುಂಬಿದ ಹಡಗುಗಳು – 6 ಹಡಗು

ಕಚ್ಚಾ ತೈಲ ತುಂಬಿದ ಹಡಗು – 4 ಹಡಗು

ಕಂಟೇನರ್‌ ಹಡಗುಗಳು – 3 ಹಡಗು

ಕಚ್ಚಾ ವಸ್ತುಗಳ ಸಾಗಿಸುವ ಹಡಗು – ಹಡಗು

LNG ತುಂಬಿದ ಹಡಗುಗಳು – 1 ಹಡಗು

ರಾಸಾಯನಿಕ ವಸ್ತುಗಳ ಹಡಗು – 1 ಹಡಗು

ಭಾರತಕ್ಕೆ ಅಗತ್ಯವಾದ ಅನಿಲ ಸರಬರಾಜು ಮುಂದುವರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ‘ಶಿವಾಲಿಕ್’ ಮತ್ತು ‘ನಂದಾದೇವಿ’ ಹಡಗುಗಳು ಸೇರಿ ಸುಮಾರು 92 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಭಾರತಕ್ಕೆ ತಲುಪಿಸಿವೆ. ‘ಜಗ್ ಲಾಡ್ಕಿ’ ಸೇರಿದಂತೆ ಇನ್ನೂ ಕೆಲವು ಹಡಗುಗಳು ಕಚ್ಚಾ ತೈಲವನ್ನು ಹೊತ್ತು ದೇಶ ತಲುಪಿವೆ.

ಮತ್ತಷ್ಟು ಹಡಗುಗಳನ್ನು ಸುರಕ್ಷಿತವಾಗಿ ಕರೆತರಲು ಭಾರತೀಯ ನೌಕಾಪಡೆ ಒಮಾನ್ ಗಲ್ಫ್ ಭಾಗದತ್ತ ಯುದ್ಧನೌಕೆಗಳನ್ನು ರವಾನಿಸಿದೆ ಎಂದು ವರದಿಯಾಗಿವೆ. ತೈಲ ಹಡಗುಗಳಿಗೆ ಎಸ್ಕಾರ್ಟ್ ನೀಡಲು 6ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಲಾಗಿದೆ ಎಂದು ‘ಬ್ಲೂಮ್​ಬರ್ಗ್’ ಹಾಗೂ ಇತರೆ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಕುರಿತು ಕೇಂದ್ರ ಸರ್ಕಾರ ಅಧಿಕೃತ ದೃಢೀಕರಣ ನೀಡಿಲ್ಲ.

ಹೊರ್ಮುಜ್ ಜಲಸಂಧಿಯ ಬಳಿ ಇರಾನ್ ಕ್ಷಿಪಣಿ ತಾಣಗಳ ಮೇಲೆ ಅಮೆರಿಕದಿಂದ ಬೃಹತ್ ಬಾಂಬ್ ದಾಳಿ

ಏತನ್ಮಧ್ಯೆ, ಹೊರ್ಮುಜ್ ಜಲಸಂಧಿ ಸಂಪೂರ್ಣವಾಗಿ ಬಂದ್ ಆಗಿಲ್ಲ ಎಂದು ಹೇಳಲಾಗುತ್ತಿದೆ. ಇರಾನ್ ಪ್ರತಿ ಹಡಗಿನ ದಾಖಲೆಗಳನ್ನು ಪರಿಶೀಲಿಸಿ ಬಳಿಕವೇ ಸಾಗಲು ಅನುಮತಿ ನೀಡುತ್ತಿದೆ. ಅಮೆರಿಕಕ್ಕೆ ಸಂಬಂಧಿಸಿದ ಹಡಗುಗಳನ್ನು ಮಾತ್ರ ತಡೆಯಲಾಗುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಭಾರತ ಸೇರಿದಂತೆ ಹಲವು ದೇಶಗಳ ಹಡಗುಗಳನ್ನು ಪರಿಶೀಲನೆ ಬಳಿಕ ಬಿಡುಗಡೆ ಮಾಡಲಾಗಿದೆ.

ಗ್ಯಾಸ್ ಕೊರತೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ಇತ್ತ ದೇಶದಲ್ಲಿ ಗ್ಯಾಸ್ ಕೊರತೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಎಲ್‌ಪಿಜಿ ಉತ್ಪಾದನೆಯನ್ನು ಶೇಕಡಾ 40ರಷ್ಟು ಹೆಚ್ಚಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಈಗಾಗಲೇ 15 ರಾಜ್ಯಗಳಲ್ಲಿ ಕಮರ್ಷಿಯಲ್ ಎಲ್‌ಪಿಜಿ ವಿತರಣೆ ಆರಂಭಗೊಂಡಿದ್ದು, ಸುಮಾರು 7,200 ಟನ್ ಅನಿಲವನ್ನು ಹೆಚ್ಚುವರಿಯಾಗಿ ಪೂರೈಸಲಾಗಿದೆ ಎಂದು ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಹೇಳಿದ್ದಾರೆ.

ಕರ್ನಾಟಕದಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಕಳೆದ ಒಂದು ವಾರದಿಂದ ಕಮರ್ಷಿಯಲ್ ಗ್ಯಾಸ್ ಕೊರತೆಯಿಂದ ಅನೇಕ ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ಬೆಂಗಳೂರಿನಲ್ಲಿಯೂ ಹಲವು ಪ್ರಸಿದ್ಧ ಹೋಟೆಲ್‌ಗಳು ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿವೆ. ಶೇಷಾದ್ರಿಪುರ, ವಿಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೋಟೆಲ್‌ಗಳು ಬಂದ್ ಆಗಿವೆ.

LPG black market: ಮನೆಬಳಕೆ ಎಲ್‌ಪಿಜಿ ಕಾಳಸಂತೆಯಲ್ಲಿ ಬಿಕರಿ, 12 ಸಾವಿರ ಸಿಲಿಂಡರ್‌ ವಶ

ರಾಜ್ಯ ವಿಧಾನಸಭೆಯಲ್ಲಿಯೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ‘ಒಂದು ವಾರ ತಾಳ್ಮೆಯಿಂದ ಇರಬೇಕು’ ಎಂದು ಮನವಿ ಮಾಡಿದ್ದಾರೆ. ಸಿಲಿಂಡರ್ ಪೂರೈಕೆ ಸೀಮಿತವಾಗಿರುವುದರಿಂದ ಹೋಟೆಲ್ ಮಾಲೀಕರು ಸಂಕಷ್ಟದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇನ್ನೊಂದೆಡೆ, ಬೆಂಗಳೂರಿನ ಶಾಸಕರ ಭವನದಲ್ಲಿಯೂ ಗ್ಯಾಸ್ ಸಮಸ್ಯೆ ತಟ್ಟಿದ್ದು, ಶಾಸಕರಿಗೆ ಆಹಾರ ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂಬ ಅಳಲು ಕೇಳಿಬಂದಿದೆ. ಶಿವಾಜಿನಗರ ಬಸ್ ನಿಲ್ದಾಣದ ಬಳಿ ಸಿಲಿಂಡರ್‌ಗಾಗಿ ನೂಕುನುಗ್ಗಲು ಉಂಟಾದ ಘಟನೆ ಕೂಡ ವರದಿಯಾಗಿದೆ.

ಒಟ್ಟಿನಲ್ಲಿ, ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಕೇವಲ ಜಾಗತಿಕ ಮಟ್ಟದಲ್ಲೇ ಅಲ್ಲದೆ, ಕರ್ನಾಟಕದ ಸಾಮಾನ್ಯ ಜನಜೀವನ ಮತ್ತು ಹೋಟೆಲ್ ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀರುತ್ತಿರುವುದು ಸ್ಪಷ್ಟವಾಗಿದೆ.

ಹರೀಶ್‌ ಕೇರ

View all posts by this author