ದೆಹಲಿ, ಮಾ. 15: ಇರಾನ್ ಯುದ್ಧ ಆರಂಭವಾದ ಬಳಿಕ ಹೊರ್ಮುಜ್ ಜಲಸಂಧಿ (Strait of Hormuz) ಸ್ಥಗಿತಗೊಂಡಿದ್ದು, ಇಂಧನ, ಅಡುಗೆ ಅನಿಲ ಸರಾಗ ಸಾಗಾಟಕ್ಕೆ ತಡೆ ಬಿದ್ದಿದೆ. ಇದರಿಂದ ಭಾರತದಲ್ಲೂ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಿಲಿಂಡರ್‌ಗೆ ಕೊರತೆ ಉಂಟಾಗಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಸಿಗದೆ ದೇಶಾದ್ಯಂತ ಹೋಟೆಲ್, ಕ್ಯಾಟರಿಂಗ್ ಉದ್ಯಮ ತತ್ತರಿಸಿದೆ. ಮತ್ತೊಂದೆಡೆ ದೇಶದಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಪೂರೈಕೆ ಸರಾಗವಾಗಿದೆ. ಪಿಎನ್‌ಜಿ ಸಂಪರ್ಕ ಹೊಂದಿದ ಮನೆಗಳಿಗೆ ಗ್ಯಾಸ್ ಕೊರತೆಯ ಬಿಸಿ ತಟ್ಟಿಲ್ಲ. ಹಾಗಾದರೆ ಪಿಎನ್‌ಜಿಗೆ ಸಮಸ್ಯೆ ಆಗಿಲ್ಲವೇಕೆ? ಎಲ್‌ಪಿಜಿಗೂ ಪಿಎನ್‌ಜಿಗೂ ಇರುವ ವ್ಯತ್ಯಾಸವೇನು? (LPG vs PNG) ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಭಾರತೀಯರ ಪಾಲಿಗೆ ಎಲ್‌ಪಿಜಿ ಅನೇಕ ವರ್ಷಗಳಿಂದ ಅತ್ಯಂತ ಸಾಮಾನ್ಯ ಅಡುಗೆ ಇಂಧನ ಎನಿಸಿಕೊಂಡಿದೆ. ದೇಶದಲ್ಲಿ ಇದರ ಬಳಕೆ ಶೇಕಡಾ 90ರಷ್ಟು. ಅದಾಗ್ಯೂ ಪಿಎನ್‌ಜಿ ಅಥವಾ ಪೈಪ್ಡ್ ನ್ಯಾಚುರಲ್ ಗ್ಯಾಸ್ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಅಡುಗೆ ಇಂಧನದ ಮಾದರಿ.
ಏನಿದು ಪಿಎನ್‌ಜಿ?
ಪಿಎನ್‌ಜಿ ಎಂಬುದು ನೀರು ಸರಬರಾಜು ಮಾಡುವ ಪೈಪ್‌ನಂತೆ ಮನೆಗಳು ಮತ್ತು ಇತರ ಕಟ್ಟಡಗಳಿಗೆ ನೇರವಾಗಿ ನೈಸರ್ಗಿಕ ಅನಿಲವನ್ನು ಪೂರೈಸುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ನೀರಿನ ಪೈಪ್ ಥರಾನೇ ನೇರವಾಗಿ ನಮ್ಮ ಮನೆ, ಫ್ಯಾಕ್ಟರಿಗಳಿಗೆ ಪೈಪ್‌ಲೈನ್ ಮೂಲಕ ಬರುವ ಗ್ಯಾಸ್ ಇದು. ಅಂದರೆ ನಾವು ಸಿಲಿಂಡರ್ ಬುಕ್ ಮಾಡಿ ಕಾಯಬೇಕಾಗಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಎಲ್‌ಪಿಜಿ ಎಂಬುದು ದ್ರವೀಕೃತ ಇಂಧನವಾಗಿದ್ದು, ಸಿಲಿಂಡರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಅನಿಲ ಏಜೆನ್ಸಿಗಳ ಮೂಲಕ ತಲುಪಿಸಲಾಗುತ್ತದೆ.
ಪ್ರಸ್ತುತ ಪಿಎನ್‌ಜಿ ಜಾಲಗಳು ಭಾರತದ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ತಲುಪಿವೆ. ಭಾರತ ಸರ್ಕಾರದ ಪ್ರಕಾರ, ಸುಮಾರು 1.59 ಕೋಟಿ ಮನೆಗಳು ಪಿಎನ್‌ಜಿ ಸಂಪರ್ಕ ಹೊಂದಿವೆ. 2034ರ ವೇಳೆಗೆ ಇದನ್ನು 12.63 ಕೋಟಿ ವಿಸ್ತರಿಸುವ ಗುರಿ ಹೊಂದಲಾಗಿದೆ.
ಹೊರ್ಮುಜ್ ಜಲಸಂಧಿ ದಾಟಿ ಭಾರತದತ್ತ ಹೊರಟ 40,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗು
ಯಾಕಾಗಿ ಕೊರತೆಯಾಗಿಲ್ಲ?
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಹಕರು ಅಡುಗೆ ಅನುಲ ಮಾದರಿಯನ್ನು ಪಿಎನ್‌ಜಿಗೆ ಬದಲಾಯಿಸುವಂತೆ ಮನವಿ ಮಾಡಿದ್ದಾರೆ. "ಎಲ್‌ಪಿಜಿ ಪೂರೈಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಬಳಕೆದಾರರು ಪಿಎಲ್‌ಜಿ ಸಂಪರ್ಕ ಹೊಂದಬೇಕು" ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ಬಳಕೆಯಾಗುವ ನೈಸರ್ಗಿಕ ಅನಿಲದ ಅರ್ಧದಷ್ಟು ದೇಶದಲ್ಲೇ ಉತ್ಪಾದಿಸಲಾಗುತ್ತದೆ. ಹೀಗಾಗಿ ಪಿಎನ್‌ಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಇತ್ತ ಎಲ್‌ಪಿಜಿಗಾಗಿ ನಾವು ವಿದೇಶವನ್ನೇ ಅವಲಂಬಿಸಿದ್ದೇವೆ.
ಭಾರತದಲ್ಲಿ ಪ್ರಸ್ತುತ ನ್ಯಾಚುರಲ್ ಗ್ಯಾಸ್ ಅರ್ಥಾತ್ ನೈಸರ್ಗಿಕ ಅನಿಲ ಬಳಕೆ ಸುಮಾರು 189 MMSCMD (ದಿನಕ್ಕೆ ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್). ಈ ಪೈಕಿ ಸುಮಾರು ಶೇಕಡಾ 50ರಷ್ಟು ಅಂದರೆ ಸುಮಾರು 97.5 MMSCMD ದೇಶೀಯವಾಗಿ ಉತ್ಪಾದಿಸಲ್ಪಡುತ್ತದೆ. ದೇಶೀಯ ಉತ್ಪಾದನೆಯೇ ಪೂರೈಕೆ ಸ್ಥಿರವಾಗಿರಲು ಕಾರಣ ಎಂದು ತಜ್ಞರು ಹೇಳಿದ್ದಾರೆ.
ಇನ್ನುಳಿದ ಪಿಎನ್‌ಜಿ ವಿವಿಧ ದೇಶಗಳಿಂದ ಆಮದಾಗುತ್ತವೆ. ಅಂದರೆ ಇದಕ್ಕಾಗಿ ನಾವು ಎಲ್‌ಪಿಜಿಯಂತೆ ಕೆಲವೇ ದೇಶಗಳನ್ನು ಅವಲಂಬಿಸಿಲ್ಲ. ಅಮೆರಿಕ, ರಷ್ಯಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಿಂದ ತರಿಸಿಕೊಳ್ಳುತ್ತಿದ್ದೇವೆ. ಈ ವಿಧಾನವು ಯಾವುದೇ ಒಂದು ಪ್ರದೇಶದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಹೊರ್ಮುಜ್ ಜಲಸಂಧಿ ದಾಟಲು ಭಾರತದ 2 ಹಡಗುಗಳಿಗೆ ಇರಾನ್ ಅನುಮತಿ ನೀಡಿದ್ದೇಗೆ?
ಎಲ್‌ಪಿಜಿಗೆ ಕೊರತೆಯಾಗಿದ್ದೇಕೆ?
ಎಲ್‌ಪಿಜಿ ಕೊರತೆ ಈ ಮಟ್ಟಿಗೆ ಹೋಗಿದ್ದೇಕೆ ಎನ್ನುವ ಪ್ರಶ್ನೆಗೂ ಇಲ್ಲಿದ ಉತ್ತರ. ಮೊದಲೇ ಹೇಳಿದಂತೆ ಭಾರತವು ತನ್ನ ಎಲ್‌ಪಿಜಿ ಅಗತ್ಯಗಳ ಪೈಕಿ ಸುಮಾರು ಶೇಕಡಾ 62ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಈ ಆಮದಿನ ಪೈಕಿ ಸುಮಾರು ಶೇಕಡಾ 90ರಷ್ಟು ಹೊರ್ಮುಜ್ ಜಲಸಂಧಿಯ ಮೂಲಕವೇ ಬರುತ್ತದೆ. ಇರಾನ್ ಈ ಜಲಸಂಧಿಯನ್ನು ಸ್ಥಗಿತಗೊಳಿಸಿದ್ದು, ರಾಜಕೀಯ ಉದ್ವಿಗ್ನತೆಗಳು ಎಲ್‌ಪಿಜಿ ಪೂರೈಕೆ ಸರಪಳಿಗಳನ್ನು ದುರ್ಬಲಗೊಳಿಸಿದೆ. ಪರಿಸ್ಥಿತಿಯನ್ನು ನಿರ್ವಹಿಸಲು ಸರ್ಕಾರವು ವಾಣಿಜ್ಯ ಬಳಕೆಯ ಎಲ್‌ಪಿಜಿಯನ್ನು ನಿರ್ಬಂಧಿಸಿ ಗೃಹ ಬಳಕೆಯ ಎಲ್‌ಪಿಜಿಗೆ ಆದ್ಯತೆ ನೀಡಿದೆ. ಸದ್ಯ ಇರಾನ್ ಅನಿಲ ಹೊತ್ತ 2 ಭಾರತೀಯ ಹಡಗಿಗೆ ಹೊರ್ಮುಜ್ ಜಲಸಂಧಿ ತೆರದುಕೊಟ್ಟಿದ್ದು, ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಮೂಡಿದೆ.