ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜಮ್ಮು ಕಾಶ್ಮೀರದ ಕಥುವಾದಲ್ಲಿ ಎನ್‌ಕೌಂಟರ್‌; ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

Kathua Encounter: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಭಾರತೀಯ ಸೇನೆ ಮತ್ತು ಪೊಲೀಸರು ಶುಕ್ರವಾರ (ಜನವರಿ 23) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಈ ಎನ್‌ಕೌಂಟರ್‌ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಉಸ್ಮಾನ್‌ ಮತ್ತು ಭಾರತೀಯ ಸೇನೆ (ಸಂಗ್ರಹ ಚಿತ್ರ)

ಶ್ರೀನಗರ, ಜ. 23: ಜಮ್ಮು ಮತ್ತು ಕಾಶ್ಮೀರದ ಕಥುವಾ (Kathua) ಜಿಲ್ಲೆಯಲ್ಲಿ ಭಾರತೀಯ ಸೇನೆ ಶುಕ್ರವಾರ (ಜನವರಿ 23) ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕನನ್ನು ಹೊಡೆದುರುಳಿಸಿದೆ (Kathua Encounter). ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ವಿಶೇಷ ಕಾರ್ಯಾಚರಣೆ ಗುಂಪು (Special Operations Group) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸತ್ತ ಭಯೋತ್ಪಾದಕನ್ನು ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ, ಪಾಕಿಸ್ತಾನ ನಿವಾಸಿ ಉಸ್ಮಾನ್‌ ಎಂದು ಗುರುತಿಸಲಾಗಿದೆ. ಬಿಲ್ಲಾವರ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ವರದಿಯೊಂದು ಹೇಳಿದೆ.

ಅಧಿಕಾರಿ ಹೇಳಿದ್ದೇನು?

ಭಯೋತ್ಪಾದಕನನ್ನು ಹೊಡೆದುರುಳಿಸಿರುವ ವಿಚಾರವನ್ನು ಅಧಿಕಾರಿಗಳು ದೃಡಪಡಿಸಿದ್ದಾರೆ. ʼʼಕಥುವಾ ಜಿಲ್ಲೆಯ ಬಿಲ್ಲಾವರ ಪ್ರದೇಶದಲ್ಲಿ ಸೇನೆ ಮತ್ತು ಸಿಆರ್‌ಪಿಎಫ್‌ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನನ್ನು ಹತ್ಯೆ ಮಾಡಲಾಗಿದೆʼʼ ಎಂದು ಐಜಿಪಿ ತಿಳಿಸಿದ್ದಾರೆ. ರೈಸಿಂಗ್‌ ಸ್ಟಾರ್‌ ಕಾರ್ಪ್ಸ್‌ ಕೂಡ ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ʼʼಜನವರಿ 23ರಂದು ನಿಖರ ಮಾಹಿತಿ ಪಡೆದು ಭಾರತೀಯ ಸೇನೆಯ ಸಿಬ್ಬಂದಿ ಮತ್ತು ಪೊಲೀಸ್‌ ಸಿಬ್ಬಂದಿ ಕಥುವಾ ಜಿಲ್ಲೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ. ಶೋಧ ಕಾರ್ಯ ಮುಂದುವರಿದಿದೆʼʼ ಎಂದು ತಿಳಿಸಿದೆ.

ಕಥುವಾ ಎನ್‌ಕೌಂಟರ್‌ ಬಗ್ಗೆ ಮಾಹಿತಿ:



ಶಸ್ತ್ರಾಸ್ತ್ರ ವಶ

ಎನ್‌ಕೌಂಟರ್‌ ನಡೆದ ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ವಶಕ್ಕೆ ಪಡೆಯಲಾಗಿದೆ. ಅಮೆರಿಕ ನಿರ್ಮಿತ ಎಂ4 ರೈಫಲ್‌ ಸೇರಿದಂತೆ ಹಲವು ಆಯುಧಗಳು ಪತ್ತೆಯಾಗಿವೆ. ಸದ್ಯ ಅರಣ್ಯ ಪ್ರದೇಶದಲ್ಲಿ ಅವಿತುಗೊಂಡಿರುವ ಉಗ್ರರನ್ನು ಶೋಧಿಸಲು ಕಾರ್ಯಾಚರಣೆ ಮುಂದುವರಿದಿದೆ. ಸ್ಥಳೀಯರು ಎಚ್ಚರಿಕೆ ವಹಿಸುವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಪಾಕ್ ಬೆಂಬಲಿತ ಮೂರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಸುತ್ತುವರಿದ ಭದ್ರತಾ ಪಡೆ

ವಾರದಿಂದ ನಡೆಯುತ್ತಿದೆ ಕಾರ್ಯಾಚರಣೆ

ವಾರದಿಂದ ಸ್ಥಳದಲ್ಲಿ ಆಪರೇಷನ್‌ ನಡೆಯುತ್ತಿದ್ದು, ಇತ್ತೀಚೆಗೆ ನಡೆದ ಎನ್‌ಕೌಂಟರ್‌ನಲ್ಲಿ 8 ಮಂದಿ ಸೈನಿಕರು ಗಾಯಗೊಂಡಿದ್ದರು. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯಲ್ಲಿ ಜನವರಿ 18ರಂದು ಈ ಎನ್‌ಕೌಂಟರ್‌ ನಡೆಯಿತು. ಕಿಶ್ತ್ವಾರ್‌ ಜಿಲ್ಲೆಯ ಛಟ್ರು ಪ್ರದೇಶ ದಟ್ಟ ಅರಣ್ಯದಲ್ಲಿಯೂ ಭದ್ರತಾ ಪಡೆಯ ಶೋಧ ಕಾರ್ಯ ನಡೆಯುತ್ತಿದೆ. ಮೂಲಗಳ ಪ್ರಕಾರ ಪಾಕಿಸ್ತಾನ ನಿವಾಸಿಗಳಾದ ಸೈಫುಲ್ಲಾ ಮತ್ತು ಆದಿಲ್‌ ನೇತೃತ್ವದಲ್ಲಿ ಭಯೋತ್ಪಾದಕರ 2 ಗುಂಪು ಕಳೆದ 2 ವರ್ಷಗಳಿಂದ ಈ ಪ್ರದೇಶದಲ್ಲಿ ಸಕ್ರಿಯವಾಗಿದೆ. ಅಲ್ಲಿದೆ ಸುಮಾರು 35 ಪಾಕ್‌ ಉಗ್ರರು ದೋಡಾ ಮತ್ತು ಕಿಶ್ತ್ವಾರ್‌ ಜಿಲ್ಲೆಯ ಚಿನಾಬ್‌ ಕಣಿವೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತೀವ್ರ ಚಳಿಯ ಹಿನ್ನೆಲೆಯಲ್ಲಿ ಇವರೆಲ್ಲ ಒಂದೇ ಕಡೆ ಸೇರಿದ್ದಾರೆ ಎನ್ನಲಾಗಿದೆ. ‌

ತೀವ್ರಗೊಂಡ ಕಾರ್ಯಾಚರಣೆ

ಸಾಮಾನ್ಯವಾಗಿ ತೀವ್ರ ಚಳಿಗಾಲದ ಅವಧಿಯಲ್ಲಿ ಭಾರತೀಯ ಸೇನೆ ಭದ್ರತಾ ಕಾರ್ಯಾಚರಣೆಗಳನ್ನು ಕಡಿಮೆ ಮಾಡುತ್ತದೆ. ಅದರ ಬದಲಾಗಿ ಇದೀಗ ಹಿಮದಿಂದ ಆವೃತಗೊಂಡಿರುವ ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆಗಳನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ʼʼಭಯೋತ್ಪಾದಕರು ಇಂತಹ ಎತ್ತರದ, ಹಿಮಾಚ್ಛಾದಿತ ಪ್ರದೇಶಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಿರುವ ಸಾಧ್ಯತೆ ಇರುವುದರಿಂದ, ಭಾರತೀಯ ಸೇನೆ ಈ ಹೊಸ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದೆʼʼ ಎಂದು ಅದಿಕಾರಿಗಳು ಮಾಹಿತಿ ನೀಡಿದ್ದಾರೆ.