ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Jan Vishwas Bill 2026: ಉದ್ಯಮಸ್ನೇಹಿ ಕಾನೂನಿಗೆ ಜನ ವಿಶ್ವಾಸ ವಿಧೇಯಕ ಸಹಕಾರಿ

ಲೋಕಸಭೆಯಲ್ಲಿ ಮಹತ್ವದ ಜನ ವಿಶ್ವಾಸ (ತಿದ್ದುಪಡಿ) ವಿಧೇಯಕ 2026 ಅಂಗೀಕಾರವಾಗಿದೆ. ರಾಜ್ಯಸಭೆಯಲ್ಲಿ ಅನುಮೋದನೆಯನ್ನೂ ಪಡೆದಿದೆ. ಇದು ಸಣ್ಣ ಪುಟ್ಟ ತಾಂತ್ರಿಕ ತಪ್ಪುಗಳಿಗೆ ಜೈಲು ಶಿಕ್ಷೆಯ ಬದಲು ದಂಡ ವಿಧಿಸುವ ಮೂಲಕ ಉದ್ಯಮಸ್ನೇಹಿ ಕಾನೂನು ಸುಧಾರಣೆಯಾಗಿದೆ. ಇದು 80 ಕೇಂದ್ರೀಯ ಕಾನೂನುಗಳು ಮತ್ತು 784 ನಿಬಂಧನೆಗಳನ್ನು ಬದಲಿಸಿ ಸುಧಾರಿಸಿದೆ.

ಸಾಂದರ್ಭಿಕ ಚಿತ್ರ

-ಚೈತನ್ಯ ಕುಮಾರ್‌, ಬೆಂಗಳೂರು

ದೆಹಲಿ, ಏ. 3: ಲೋಕಸಭೆಯಲ್ಲಿ 2026ರ ಮಾರ್ಚ್‌ 27ರಂದು ಮಹತ್ವದ ಜನ ವಿಶ್ವಾಸ (ತಿದ್ದುಪಡಿ) ವಿಧೇಯಕ 2026 ಮಂಡನೆಯಾಗಿತ್ತು. ಏಪ್ರಿಲ್‌ 1ರಂದು ಅಂಗೀಕಾರವೂ ಆಗಿತ್ತು. ರಾಜ್ಯಸಭೆಯಲ್ಲಿ ಮರುದಿನ ಅನುಮೋದನೆ ಪಡೆಯಿತು. ಇದು ಸಣ್ಣ ಪುಟ್ಟ ತಾಂತ್ರಿಕ ತಪ್ಪುಗಳಿಗೆ ಜೈಲು ಶಿಕ್ಷೆಯ ಬದಲು ದಂಡ ವಿಧಿಸುವ ಮೂಲಕ ಉದ್ಯಮಸ್ನೇಹಿ ಕಾನೂನು ಸುಧಾರಣೆಯಾಗಿದೆ. ಇದು 80 ಕೇಂದ್ರೀಯ ಕಾನೂನುಗಳು ಮತ್ತು 784 ನಿಬಂಧನೆಗಳನ್ನು ಬದಲಿಸಿ ಸುಧಾರಿಸಿದೆ. ಏಕರೂಪದ ಆಡಳಿತಾತ್ಮಕ ವ್ಯವಸ್ಥೆಯನ್ನು ಜಾರಿಗೊಳಿಸಲಿದೆ. ನಿಯಂತ್ರಕ ವ್ಯವಸ್ಥೆಯನ್ನು ಸುಧಾರಿಸುವುದು, ಬಿಸಿನೆಸ್‌ ಸ್ನೇಹಿ ವಾತಾವರಣ ಸೃಷ್ಟಿ ಇದರ ಉದ್ದೇಶವಾಗಿದೆ.

24 ಸದಸ್ಯರ ಆಯ್ಕೆ ಸಮಿತಿಯು 49 ಸಭೆಗಳನ್ನು ನಡೆಸಿ ನಾನಾ ಸಚಿವಾಲಯಗಳು, ಉದ್ಯಮ ವಲಯ ಮತ್ತು ತಜ್ಞರ ಜತೆಗೆ ಸಮಾಲೋಚನೆ ನಡೆಸಿತ್ತು.

ವಿಧೇಯಕದ ಪ್ರಕಾರ, 42 ಕೇಂದ್ರೀಯ ಕಾನೂನುಗಳಲ್ಲಿನ 183 ನಿಬಂಧನೆಗಳಲ್ಲಿದ್ದ ಕ್ರಿಮಿನಲ್‌ ದಂಡಗಳನ್ನು ರದ್ದುಪಡಿಸಲಾಗಿದೆ. ಹೊಸ ವಿಧೇಯಕದ ಅನುಸಾರ 80 ಕೇಂದ್ರೀಯ ಕಾಯಿದೆಗಳಲ್ಲಿ 784 ನಿಬಂಧನೆಗಳಲ್ಲಿ ಬದಲಾವಣೆ ತರಲಾಗಿದೆ. 717 ನಿಬಂಧನೆಗಳನ್ನು ಕ್ರಿಮಿನಲ್‌ ದಂಡನೆಯಿಂದ ಮುಕ್ತಗೊಳಿಸಲಾಗಿದೆ. ಉಳಿದ 67 ನಿಬಂಧನೆಗಳು ಜನ ಜೀವನ ಸುಗಮಗೊಳಿಸುವ ಗುರಿಯನ್ನು ಹೊಂದಿವೆ.

ಜನ ವಿಶ್ವಾಸ ವಿಧೇಯಕವು ಅರ್ಥ ವ್ಯವಸ್ಥೆಯ ಹಲವಾರು ವಲಯಗಳಿಗೆ ಅನುಕೂಲ ಕಲ್ಪಿಸಿದೆ. ಉದಾಹರಣೆಗೆ ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆ 1940ರಲ್ಲಿ ಬದಲಾವಣೆ ತರಲಾಗಿದ್ದು, ರಿಟರ್ನ್‌ ಸಲ್ಲಿಸದಿರುವುದು, ಹೇಳಿಕೆ ನೀಡದಿರುವುದು ಇತ್ಯಾದಿ ಸಣ್ಣಪುಟ್ಟ ಪ್ರಮಾದಗಳನ್ನು ಕ್ರಿಮಿನಲ್‌ ಅಪರಾಧಗಳೆಂದು ಇನ್ನು ಮುಂದೆ ಪರಿಗಣನೆಯಾಗುವುದಿಲ್ಲ. ಇದರಿಂದ ಔಷಧ ತಯಾರಕ ಕಂಪನಿಗಳ ವಿರುದ್ಧದ ಖಟ್ಲೆಗಳ ಸಂಖ್ಯೆ ಕಡಿಮೆಯಾಗಲಿದೆ.

ದಿಲ್ಲಿ ಅಭಿವೃದ್ಧಿ ಕಾಯಿದೆ- 1957 ಮತ್ತು ದಿಲ್ಲಿ ಮುನಿಸಿಪಲ್‌ ಕೌನ್ಸಿಲ್‌ ಕಾಯಿದೆ 1994 ಅಡಿಯಲ್ಲಿ ಸಣ್ಣಪುಟ್ಟ ನಾಗರಿಕ ನಿಯಮಗಳ ಉಲ್ಲಂಘನೆಗಳಿಗೆ ಜೈಲು ಶಿಕ್ಷೆ ವಿಧಿಸುವುದನ್ನು ರದ್ದುಪಡಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಕಾಯಿದೆ 1956 ಅನ್ನೂ ಸುಧಾರಿಸಲಾಗಿದೆ. ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್‌ ವಲಯದಲ್ಲಿ ದಂಡಗಳನ್ನು ಸರಳಗೊಳಿಸಲಾಗಿದೆ. ಈ ಸುಧಾರಣೆಗಳು ಕೋರ್ಟ್‌ ಪ್ರಕರಣಗಳ ಕುರಿತ ವೆಚ್ಚಗಳನ್ನು ತಗ್ಗಿಸಲಿದೆ. ನಿಯಂತ್ರಕ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸಲಿದೆ. ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.

12 ವರ್ಷಗಳಿಂದ ಶಾಲೆ-ಕಾಲೇಜು ನಡೆಯುತ್ತಿರುವ ಖಾಸಗಿ ಜಾಗ ಇನ್ನು ಸರ್ಕಾರದ ಸ್ವತ್ತು: ಹೊಸ ವಿಧೇಯಕ

ಮೋಟಾರು ವಾಹನಗಳ ವಿಧೇಯಕ 1988 ಅಡಿಯಲ್ಲಿ ಉದಲಾವಣೆಗಳನ್ನು ತರಲಾಗಿದೆ. ರಾಜ್ಯ ವ್ಯಾಪಿ ರಿಜಿಸ್ಟ್ರೇಶನ್‌ಗಳಿಗೆ ಹಾದಿ ಸುಗಮಗೊಳಿಸಿದೆ. ರಸ್ತೆ ಸುರಕ್ಷತೆಗೆ ಸಂಬಂಧಿಸಿ, ಸಣ್ಣ ಪುಟ್ಟ ಉಲ್ಲಂಘನೆಗಳು ಮತ್ತು ಗಂಭೀರ ಅಪರಾಧಗಳು ಯಾವುದು ಎಂಬುದನ್ನು ಸ್ಪಷ್ಟವಾಗಿ ಪರ್ತ್ಯೇಕಿಸಿವೆ. ಹಾಗೂ ಸಣ್ಣ ಪುಟ್ಟ ಉಲ್ಲಂಘನೆಗಳನ್ನು ಕ್ರಿಮಿನಲ್‌ ದಂಡನೆಯಿಂದ ಮುಕ್ತಗೊಳಿಸಲಾಗಿದೆ. ಜೈಲು ಶಿಕ್ಷೆಯ ಬದಲಿಗೆ ಹಣಕಾಸು ದಂಡವನ್ನು ವಿಧಿಸಲಾಗಿದೆ. ರಸ್ತೆಯ ಸುರಕ್ಷತೆಗೆ ಮತ್ತು ಸಾರ್ವಜನಿಕರ ಕಲ್ಯಾಣಕ್ಕೆ ಧಕ್ಕೆಯಾಗಬಲ್ಲ ಅಪರಾಧಗಳಿಗೆ ಕ್ರಿಮಿನಲ್‌ ದಂಡ ಮುಂದುವರಿಯಲಿದೆ.

ಜನ ವಿಶ್ವಾಸ ವಿಧೇಯಕ 2026 ಮೇಕ್‌ ಇನ್‌ ಇಂಡಿಯಾ, ಸ್ಟಾರ್ಟಪ್‌ ಇಂಡಿಯಾ ಅಭಿಯಾನವನ್ನು ಬೆಂಬಲಿಸುತ್ತದೆ. ಬಿಸಿನೆಸ್‌ ನಡೆಸುವವರಿಗೆ ನಿಬಂಧನೆಗಳು ಹೊರೆಯಾಗದಂತೆ ಇಳಿಸಿದೆ. ಭಾರತದಲ್ಲಿ 2.12 ಲಕ್ಷ ಡಿಪಿಐಐಟಿ ಮಾನ್ಯತೆ ಪಡೆದಿರುವ ಸ್ಟಾರ್ಟಪ್‌ಗಳು ಇವೆ. ಇವುಗಳಿಗೆ ಮುಂದಿನ ಹಂತದ ಬೆಳವಣಿಗೆಗೆ ಹಾದಿ ಸುಗಮವಾದಂತಾಗಿದೆ. ಸರಕಾರ ಸಣ್ಣ ಪುಟ್ಟ ಪ್ರಮಾದಗಳನ್ನು ಸರಿಪಡಿಸಿಕೊಳ್ಳಲು ಬಿಸಿನೆಸ್‌ ಮಾಡುವವರಿಗೆ ಅವಕಾಶ ಕೊಡುತ್ತದೆ ಮತ್ತು ಸುದೀರ್ಘ ಕಾನೂನು ಪ್ರಕರಣಗಳನ್ನು ಎದುರಿಸುವುದರ ಬದಲಿಗೆ ಈ ಅನುಕೂಲ ಒದಗಿಸಿದೆ. ಇದು ಉದ್ದಿಮೆಗಳ ಬೆಳವಣಿಗೆಗೆ ಅನುಕೂಲಕಾರಿಯಾಗಿದೆ.

ಕಾನೂನು ಮಾಪನ ಕಾಯಿದೆ ಅಡಿಯಲ್ಲಿ ಸುಧಾರಣೆ ತರಲಾಗಿದೆ. ಸಣ್ಣ ಲೇಬಲಿಂಗ್‌ ಅಥವಾ ಪ್ಯಾಕೇಜಿಂಗ್‌ ನಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಕ್ರಿಮಿನಲ್‌ ಅಪರಾಧಮುಕ್ತಗೊಳಿಸಲಾಗಿದೆ. ಈ ಹಿಂದೆ ಅವುಗಳಿಗೆ ಒಂದು ವರ್ಷದ ತನಕ ಸೆರೆವಾಸ ಇರುತ್ತಿತ್ತು.

ತಪ್ಪು ಸರಿಪಡಿಸಲು ಅವಕಾಶ

ಹೊಸ ಪದ್ಧತಿಯಡಿಯಲ್ಲಿ ಈ ಹಿಂದಿನ ಹಲವು ಸಣ್ಣ ಪುಟ್ಟ ಪ್ರಮಾದಗಳಿಗೆ ವಿಧಿಸುತ್ತಿದ್ದ ಕ್ರಿಮಿನಲ್‌ ದಂಡನೆಯನ್ನು ತೆರವುಗೊಳಿಸಿ ಅವುಗಳನ್ನು ನಾಗರಿಕ ಉಲ್ಲಂಘನೆಗಳೆಂದು ಪರಿಗಣಿಸಲಾಗಿದೆ. ಇದರಿಂದ ಅಂಥ ತಪ್ಪುಗಳನ್ನು ಸರಿಪಡಿಸಲು ಅವಕಾಶ ಸಿಗಲಿದೆ. ಸಾವಿರಾರು ನಿಬಂಧನೆಗಳನ್ನು ಕಡಿಮೆ ಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಂಪನಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಈ ಸುಧಾರಣಾ ಕ್ರಮಗಳಿಂದ ಉದ್ಯಮಶೀಲತೆಗೆ ಹೆಚ್ಚು ಉತ್ತೇಜನ ಸಿಗಲಿದೆ. ಅನಗತ್ಯವಾಗಿ ಕಾನೂನುಕ್ರಮಗಳೂ ತಪ್ಪುತ್ತವೆ.

ಜನ ವಿಶ್ವಾಸ (ತಿದ್ದುಪಡಿ) ವಿಧೇಯಕ 2026 ಮೂಲಕ ಸರಕಾರವು "ಕನಿಷ್ಠ ಸರಕಾರ ಗರಿಷ್ಠ ಆಡಳಿತʼದ ಆಶಯವನ್ನು ಸಾಕಾರಗೊಳಿಸಿದೆ. ಸಣ್ಣಪುಟ್ಟ ಮತ್ತು ತಾಂತ್ರಿಕ ಪ್ರಮಾದಗಳ ಪರಿಣಾಮ ಸುದೀರ್ಘ ವ್ಯಾಜ್ಯಗಳನ್ನು ಎದುರಿಸುವ ಭೀತಿ ಇಲ್ಲವಾಗುತ್ತದೆ. ಉದ್ಯಮಶೀಲತೆಗೆ ಉತ್ತೇಜನ ನೀಡಿದಂತಾಗುತ್ತದೆ.

ಜನ ವಿಶ್ವಾಸ ಸುಧಾರಣೆಯಿಂದಾಗಿ ಮೋದಿ ಸರಕಾರವು ದಂಡ ಆಧಾರಿತ ವ್ಯವಸ್ಥೆಯಿಂದ ವಿಶ್ವಾಸ ಆಧರಿತ ಆಡಳಿತ ಮಾದರಿಗೆ ಪರಿವರ್ತನೆಯಾಗುತ್ತಿದೆ. ಇದರಿಂದ ಭಾರತದ ಉದ್ದಿಮೆಗಳ ಸ್ಪರ್ಧಾತ್ಮಕತೆ ವೃದ್ಧಿಸುತ್ತದೆ. ಮತ್ತು ಅದು ನಾಗರಿಕ ಸ್ನೇಹಿಯಾಗುತ್ತದೆ.

ಭಾರತವು ವಿಶ್ವಬ್ಯಾಂಕ್‌ ನ "ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌ ರ‍್ಯಾಂಕಿಂಗ್‌ನಲ್ಲಿ ತನ್ನ ಸ್ಥಾನವನ್ನು ಸುಧಾರಿಸಿದೆ. 2025-26ರಲ್ಲಿ 790.86 ಶತಕೋಟಿ ಡಾಲರ್‌ ರಫ್ತು ಮಾಡಿದೆ. ಜನ ವಿಶ್ವಾಸ ವಿಧೇಯಕದಿಂದ ಕೋರ್ಟ್‌ಗಳ ಮೇಲೆ ಒತ್ತಡ ಕಡಿಮೆಯಾಗಲಿದೆ. ಏಕೆಂದರೆ ಸಣ್ಣ ಪುಟ್ಟ ಪ್ರಮಾದಗಳಿಗೆ ಸಂಬಂಧಿಸಿ ಕೋರ್ಟ್‌ ಬದಲಿಗೆ ಸಂಬಂಧಿಸಿದ ಅಧಿಕಾರಿಗಳು ತೀರ್ಪು ನೀಡಲಿದ್ದಾರೆ. ಕೋರ್ಟ್‌ ಗಳಲ್ಲಿ 4.8 ಕೋಟಿ ಕೇಸ್‌ಗಳು ಬಾಕಿ ಇವೆ. ಅಧಿಕಾರಿಗಳು ತೀರ್ಪು ನೀಡುವುದರಿಂದ ಕೋರ್ಟ್‌ಗಳಲ್ಲಿ ಕೆಲಸದೊತ್ತಡ 25-30 ಪರ್ಸೆಂಟ್‌ ಕಡಿಮೆಯಾಗಲಿದೆ.

ರಾಜ್ಯ ಸರಕಾರ vs ರಾಜ್ಯಪಾಲ: ದ್ವೇಷ ಭಾಷಣ ಬಿಲ್‌ಗೆ ಸಹಿ ಹಾಕದೇ ರಾಷ್ಟ್ರಪತಿಗೆ ಕಳಿಸಿದ ರಾಜ್ಯಪಾಲರು

ವಿಧೇಯಕವು 700 ಸಣ್ಣಪುಟ್ಟ ಕ್ರಿಮಿನಲ್‌ ಅಪರಾಧಗಳನ್ನು ರದ್ದುಪಡಿಸಿದೆ. ಜೈಲು ವಾಸ ಶಿಕ್ಷೆಯನ್ನು ಕಡಿಮೆ ಮಾಡಿದೆ. ನಾಗರಿಕರು ಮತ್ತು ಉದ್ಯಮಿಗಳಿಗೆ ಇದು ಅನುಕೂಲಕಾರಿಯಾಗಿದೆ. ಈ ಹಿಂದೆ ಕಾಂಗ್ರೆಸ್‌ ಸರಕಾರದಲ್ಲಿ ಲೈಸೆನ್ಸ್‌ ಕೋಟಾ ವ್ಯವಸ್ಥೆಯಡಿಯಲ್ಲಿ ಸಂಕೀರ್ಣ ನಿಬಂಧನೆಗಳು ಇದ್ದವು. ಇದು ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿಗೆ ಕಾರಣವಾಗಿತ್ತು. 2012ರ ಪೂರ್ವಾನ್ವಯ ತೆರಿಗೆ ತಿದ್ದುಪಡಿಯಿಂದ ವೊಡಾಫೋನ್‌ ಮತ್ತು ಕೈರ್ನ್‌ ಎನರ್ಜಿಯಂಥ ಜಾಗತಿಕ ಕಂಪನಿಗಳಿಗೆ ಹಿನ್ನಡೆಯಾಗಿತ್ತು. ಹೂಡಿಕೆದಾರರ ವಲಯದಲ್ಲಿ ಭಾರತದ ವರ್ಚಸ್ಸು ಇಳಿದಿತ್ತು. ಆದರೆ ಕಳೆದೊಂದು ದಶಕದಿಂದ ಮೋದಿ ಸರಕಾರವು ಕಾನೂನುಗಳನ್ನು ಸರಳಗೊಳಿಸಿದೆ. ಹೂಡಿಕೆದಾರರ ವಿಶ್ವಾಸ ಮತ್ತೆ ವೃದ್ಧಿಸಿದೆ. ಜನ ವಿಶ್ವಾಸ 2026 ಸುಧಾರಣೆಯು ನಿಯಂತ್ರಕ ವ್ಯವಸ್ಥೆಯನ್ನು ಸರಳಗೊಳಿಸಿದೆ. ಅದರಿಂದಾಗಬಹುದಾದ ಸಮಸ್ಯೆ ನಿವಾರಿಸಿದೆ.

Ramesh Ballamoole

View all posts by this author