ನವದೆಹಲಿ: ಎಬಿವಿಪಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಸಬರಮತಿ(Sabarmati) ಧಾಬಾದಿಂದ ವಸಂತ್ ಕುಂಜ್(Vasant Kunj) ಠಾಣೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಜೆಎನ್‌ಯುಎಸ್‌ಯು(JNUSU) ಅಧ್ಯಕ್ಷ ನಿತೀಶ್ ಕುಮಾರ್(Nitish Kumar), ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಮೂವರು ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಲ್ಲದೇ ಒಟ್ಟು 27 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ವಿದ್ಯಾರ್ಥಿಗಳನ್ನು ಕಪಶೇರಾ(Kapashera) ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ಅಲ್ಲಿಯೇ ಅವರು ಪ್ರತಿಭಟನೆ ಮುಂದುವರಿಸಿದ್ದಾರೆ.
ಈ FIR ದಸರಾ ಹಬ್ಬ ಕುರಿತ ಸಾಮಾನ್ಯ ಸಭೆ (ಜೆನರಲ್ ಬಾಡಿ ಮೀಟಿಂಗ್) ವೇಳೆ ನಡೆದ ಗಲಾಟೆಗೆ ಸಂಬಂಧಿಸಿದ್ದಾಗಿದೆ. ಈ ಘಟನೆಯು ಬಲ ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ನಡುವಿನ ಘರ್ಷಣೆಗೆ ಕಾರಣವಾಯಿತು ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Viral News: 48 ವರ್ಷಗಳ ಹಿಂದೆ ಗೆಳತಿಗೆ ಚಾಕುವಿನಿಂದ ಇರಿದಿದ್ದ ವ್ಯಕ್ತಿಗೆ ಜಾಮೀನು; ವಿಚಾರಣೆ ಎದುರಿಸಲಿರುವ 81ರ ವೃದ್ಧ
ಈ ಘಟನೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಪಶ್ಚಿಮ ಗೇಟ್ ಬಳಿ ನಡೆದಿದ್ದು, ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು ತಡೆಯಲು ಮುಂದಾದಾಗ ಘರ್ಷಣೆ ಸಂಭವಿಸಿದೆ. ನಮ್ಮ ಪ್ರತಿಭಟನೆ ಶಾಂತಿಯುತವಾಗಿದ್ದು, ಎಬಿವಿಪಿ ಸದಸ್ಯರ ಹಲ್ಲೆ ಹಾಗೂ ಪೊಲೀಸರ ನಿಷ್ಕ್ರಿಯತೆಯ ವಿರುದ್ಧವಾಗಿದೆ ಎಂದು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ತಿಳಿಸಿವೆ. ಅಲ್ಲದೇ ನಮ್ಮ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಮತ್ತು ಈ ಘಟನೆಯಲ್ಲಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂಬುವುದು ಅವರ ಆರೋಪವಾಗಿದೆ.
ಆದರೆ, ಉಪ ಪೊಲೀಸ್ ಆಯುಕ್ತ ಅಮಿತ್ ಗೋಯೆಲ್(Amit Goel) ಹೇಳೋದೆ ಬೇರೆ. ಸಂಜೆ 6 ಗಂಟೆಗೆ ಹೊತ್ತಿಗೆ ಸುಮಾರು 70-80 ವಿದ್ಯಾರ್ಥಿಗಳು ಕ್ಯಾಂಪಸ್ ಬಿಟ್ಟು ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಲು ಹೊರಟಿದ್ದರು. ಅವರನ್ನು ತಡೆಯಲು ಬ್ಯಾರಿಕೇಡ್ ಹಾಕಿದಾಗ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಯಿತು. ಘಟನೆಯಲ್ಲಿ 6 ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಸಮಾಜ ವಿಜ್ಞಾನ ಶಾಲೆಯಲ್ಲಿ ನಡೆದ ಸಾಮಾನ್ಯ ಸಭೆಯ ವೇಳೆ ಉಂಟಾದ ಹಿಂಸಾಚಾರದ ಬಳಿಕ ಈ ಘಟನೆ ನಡೆದಿದೆ. ಎಬಿವಿಪಿ ಸದಸ್ಯರು ವಿದ್ಯಾರ್ಥಿನಿಯೋರ್ವಳ ಕುತ್ತಿಗೆ ಹಿಡಿದು ಎಳೆದಾಡಿದ್ದಾರೆ ಮತ್ತು ಹಲವಾರು ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ ಎಂದು ಎಡಪಂಥೀಯ ಸಂಘಟನೆಗಳು ಆರೋಪಿಸಿದರೆ, ಎಡಪಂಥೀಯ ವಿದ್ಯಾರ್ಥಿಗಳು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿ, ನಂತರ ಇತರರನ್ನು ಹೊಡೆದಿದ್ದಾರೆ ಎಂದು ಎಬಿವಿಪಿ ಹೇಳಿದೆ.
ಎಡಪಂಥೀಯ ವಿದ್ಯಾರ್ಥಿಗಳು ತಮ್ಮ ಶರ್ಟ್‌ಗಳನ್ನು ತಾವೇ ಹರಿದುಕೊಂಡು, ಹಲ್ಲೆ ನಡೆದಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಎಬಿವಿಪಿಯ ಪ್ರಕಟಣೆ ತಿಳಿಸಿದೆ.
ಜೆಎನ್‌ಯುಎಸ್‌ಯು ಚುನಾವಣೆಗಳು ಮುಂದಿನ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.