- ಶ್ರೀನಿವಾಸ ಶರ್ಮ
ಚೆನ್ನೈ, ಡಿ. 12: ತಮಿಳುನಾಡಿನ ತಿರುಪಾರನುಕುಂಡ್ರಮ್ (Thiruparankundram hilltop) ಎಂಬಲ್ಲಿ 'ಕಾರ್ತಿಕ ದೀಪಂʼ ಅಥವಾ 'ಕಾರ್ತಿಗೈ ದೀಪಂʼ (Karthigai Deepam Row) ಉತ್ಸವ ಕುರಿತು ಉಂಟಾಗಿರುವ ವಿವಾದವು ಡಿಎಂಕೆ (DMK) ಪಕ್ಷದ ಅಸಲಿ ಬಣ್ಣವನ್ನು ಬಯಲಿಗೆಳೆದಿದೆ. ತಿರುಪಾರನುಕುಂಡ್ರಮ್‌ನ ಬೆಟ್ಟದಲ್ಲಿ ಶತಶತಮಾನಗಳಿಂದಲೂ ಪರಂಪರಾನುಗತವಾಗಿ ಭಕ್ತಾದಿಗಳು ಕಾರ್ತಿಕ ದೀಪಂ ಉತ್ಸವವನ್ನು ಸಂಭ್ರಮ, ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ. ಸ್ವತಃ ವಕ್ಫ್ ಮಂಡಳಿ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ ಸ್ವತಃ ಡಿಎಂಕೆ ಸರಕಾರ ಮಾತ್ರ ಕಾರ್ತಿಕ ದೀಪಂ ಉತ್ಸವ ನಡೆಸದಂತೆ ಹೇಳಿರುವುದು ಭಾರಿ ವಿವಾದ ಸೃಷ್ಟಿಸಿದೆ. ಹೈಕೋರ್ಟ್ ಕೂಡ ಕಾರ್ತಿಕ ದೀಪ ಬೆಳಗಿಸುವ ಪರಂಪರೆಯನ್ನುಪುರಸ್ಕರಿಸಿದ್ದರೂ, ಡಿಎಂಕೆ ಸರಕಾರ ಮಾತ್ರ ಕಾರ್ತಿಕ ದೀಪ ಬೆಳಗುವುದನ್ನು ಅಪರಾಧದಂತೆ ಕಾಣುತ್ತಿರುವುದು ಆ ಪಕ್ಷದ ಮುಖವಾಡವನ್ನು ಕಳಚಿಟ್ಟಿದೆ. ಇದು ಖಂಡಿತ ಆಡಳಿತವಲ್ಲ, ಹಿಂದೂ ನಂಬಿಕೆಗಳ ವಿರುದ್ಧ ಮಾಡಿರುವ ಘೋರ ಅಪಚಾರ. ಮಾತ್ರವಲ್ಲದೆ ಇದು ನ್ಯಾಯಾಂಗದ ನಿಂದನೆಯೂ ಆಗಿದೆ. ನ್ಯಾಯಾಂಗವನ್ನೇ ಧಿಕ್ಕರಿಸು ಪ್ರಯತ್ನಕ್ಕೆ ಡಿಎಂಕೆ ಕೈ ಹಾಕಿದಂತಾಗಿದೆ.
ತಮಿಳುನಾಡಿನ ಡಿಎಂಕೆ ನೇತೃತ್ವದ ಸರಕಾರದಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ (ಎಚ್‌ಆರ್ & ಸಿಇ) ಸಚಿವರಾದ ಪಿ.ಕೆ. ಶೇಖರ್ ಬಾಬು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಿರುಪಾರನ್ ಕುಂದ್ರಮ್ ನಲ್ಲಿ ದೀಪ ಬೆಳಗುವುದರಿಂದ ಬೀದಿಯಲ್ಲಿ ರಕ್ತ ಹರಿಯಲಿದೆ ಎಂದು ಇಲ್ಲ ಸಲ್ಲದ ಲೂಸ್ ಟಾಕ್ ಆಡಿದ್ದಾರೆ. ಯಾವುದೇ ಸಮುದಾಯವು ಇಂಥ ಬಾಲಿಶ ಹೇಳಿಕೆಯನ್ನು ನೀಡಿಲ್ಲ. ಡಿಎಂಕೆ ಸರಕಾರ ಮಾತ್ರ ಖುದ್ದಾಗಿ ಇಂಥ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ.
ಕಾರ್ತಿಗೈ ದೀಪಂ ಕುರಿತು ಮಾತನಾಡಿದ ಅನುರಾಗ್ ಠಾಕೂರ್:
ದೇವಾಲಯದಲ್ಲಿ ದೀಪ ಬೆಳಗಿಸುವುದಕ್ಕೆ ಡಿಎಂಕೆ ವಿರೋಧ
ಹಿಂದೂ ಧಾರ್ಮಿಕ ಪರಂಪರೆಯೊಂದನ್ನು ಸ್ಥಗಿತಗೊಳಿಸಲು ನಕಲಿ ಬೆದರಿಕೆಯನ್ನು ಡಿಎಂಕೆ ನಾಯಕರು ಒಡ್ಡುತ್ತಿದ್ದಾರೆ. ದೇವಾಲಯದ ವ್ಯಾಪ್ತಿಯಲ್ಲಿ ದೀಪ ಬೆಳಗುವುದರಿಂದ ಯಾರಿಗೂ ಸಮಸ್ಯೆಯಾಗುವುದಿಲ್ಲ. ಆದರೆ ಡಿಎಂಕೆ ವರ್ತನೆ ಮಾತ್ರ ಹಿಂದೂಗಳ ವಿರುದ್ಧವಾಗಿದೆ.
ಸತ್ಯ ಸರಳವಾಗಿದೆ. ಡಿಎಂಕೆ ಜಾತ್ಯತೀತತೆಯ ಬಗ್ಗೆ ಮಾತನಾಡುತ್ತದೆ. ಆದರೆ ಸ್ವತಃ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತದೆ. ಅವರ ದರ್ಗಾವನ್ನಾಗಲಿ, ಅದರ ಸಹ ಸಂಸ್ಥೆಗಳನ್ನಾಗಲಿ ಸವಾಲಿಗೆ ಒಳಪಡಿಸುವುದಿಲ್ಲ. ಇತರ ಯಾವುದೇ ಧರ್ಮದ ನಂಬಿಕೆಗಳನ್ನು ಅವರು ಪ್ರಶ್ನಿಸುವುದಿಲ್ಲ. ಆದರೆ ಶತ ಶತಮಾನಗಳಿಂದ ಅಸ್ತಿತ್ವದಲ್ಲಿರುವ, ಭಗವಂತ ಮುರುಗನ್ ಸ್ವಾಮಿಯ ಕುರಿತ ಭಕ್ತರ ಆಚರಣೆ ವಿರುದ್ಧ ಕೋರ್ಟ್ ಮೆಟ್ಟಿಲೇರುತ್ತಾರೆ. ದೇವಾಲಯದಲ್ಲಿ ದೀಪ ಬೆಳಗಿದ ಹಿಂದೂಗಳು ಕೋರ್ಟಿಗೆ ಹೋಗಬೇಕಾದ ತಪ್ಪೇನು ಮಾಡಿದ್ದಾರೆ? ಡಿಎಂಕೆ ಸರಕಾರದ ಅಡಿಯಲ್ಲೇ ಏಕೆ ಇಂಥ ವಿವಾದಗಳು ಉದ್ಭವಿಸುತ್ತವೆ?
ಮಧುರೈ ದೇವಸ್ಥಾನದಲ್ಲಿ ಗಲಾಟೆಗೆ ಕಾರಣವಾಯಿತು ಕಾರ್ತಿಗೈ ದೀಪಂ
ತಿರುಪಾರನ್‌ಕುಂಡ್ರಮ್ ಕ್ಷೇತ್ರದಲ್ಲಿ ಕಾರ್ತಿಕ ದೀಪವನ್ನು ಬೆಳಗುವ ನಿಟ್ಟಿನಲ್ಲಿ ಭಕ್ತಾದಿಗಳ ಪರವಾಗಿ ಹೈಕೋರ್ಟ್ ತನ್ನ ತೀರ್ಪು ನೀಡಿತ್ತು. ಆದರೆ ಈ ಆದೇಶದ ವಿರುದ್ಧ ಡಿಎಂಕೆ ಸರಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ದೀಪ ಬೆಳಗುವುದರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಡಿಎಂಕೆ ಸರಕಾರ ವಾದಿಸಿದೆ. ಆದರೆ ಇದು ಗೊಂದಲವನ್ನು ಸೃಷ್ಟಿಸುವ ಪ್ರಯತ್ನ ಎಂದು ಭಕ್ತಾದಿಗಳು ಹೇಳಿದ್ದಾರೆ.
ಅತ್ಯಂತ ಆಘಾತಕರ ಬೆಳವಣಿಗೆ ಏನೆಂದರೆ, ಡಿಎಂಕೆ ಸಂಸದರು, ಕಾರ್ತಿಕ ದೀಪ ಬೆಳಗಿಸುವ ಹಿಂದೂಗಳ ಹಕ್ಕಿನ ಪರವಾಗಿ ನಿಂತಿದ್ದ ಹೈಕೋರ್ಟ್ ನ್ಯಾಯಾಧೀಶ ಜಿ.ಆರ್ ಸ್ವಾಮಿನಾಥನ್ ವಿರುದ್ಧ ವಾಗ್ದಂಡನೆಗೆ ಆಗ್ರಹಿಸಿ ನಿಲುವಳಿಯನ್ನು ಮಂಡಿಸಲು ಮುಂದಾಗಿರುವುದು. ಐವತ್ತಕ್ಕೂ ಹೆಚ್ಚು ನಿವೃತ್ತ ನ್ಯಾಯಾಧೀಶರು ಇದೀಗ ನ್ಯಾಯಮೂರ್ತಿ ಜಿಆರ್ ಸ್ವಾಮಿನಾಥನ್ ಅವರ ಬೆಂಬಲಕ್ಕೆ ಮುಂದಾಗಿದ್ದಾರೆ. ಡಿಎಂಕೆಯು ನ್ಯಾಯಾಂಗದ ವಿರುದ್ಧ ಹೋಗುತ್ತಿರುವುದನ್ನು ಇದು ಬಿಂಬಿಸಿದೆ. ಇದು ನ್ಯಾಯಾಂಗಕ್ಕೆ ಮಾಡುವ ಅವಮಾನವೂ, ಅಗೌರವವೂ ಆಗಿದೆ. ಅತಿ ದೊಡ್ಡ ವಿಪರ್ಯಾಸವೇನೆಂದರೆ ಡಿಎಂಕೆ ಮತ್ತು ಅದರ ಮೈತ್ರಿಕೂಟ ಐ.ಎನ್.ಡಿ.ಐ ಒಕ್ಕೂಟವು "ಸಂವಿಧಾನ ಅಪಾಯದಲ್ಲಿದೆʼʼ ಎಂಬ ಬೆದರಿಕೆ ಒಡ್ಡುತ್ತಿದೆ. ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸುತ್ತಿದೆ. ರಾಜಕೀಯ ಬೆದರಿಕೆಗೆ ಜಗ್ಗದೆ ತೀರ್ಪು ನೀಡಿದ ನ್ಯಾಯಾಧೀಶರಿಗೇ ಡಿಎಂಕೆ ಅವಮಾನಿಸುತ್ತಿದೆ. ಇದು ನ್ಯಾಯಾಂಗದ ಸಾಂಸ್ಥಿಕ ವ್ಯವಸ್ಥೆಯನ್ನೇ ತಿರುಚಲು ಮಾಡುವ ಯತ್ನವಾಗಿದೆ.
ಹಿಂದೂ ಪರ ಕೋರ್ಟ್ ತೀರ್ಪಿದ್ದರೂ, ಡಿಎಂಕೆ ವಿರೋಧ
ತಿರುಪಾರನುಕುಂಡ್ರಮ್ ಕ್ಷೇತ್ರದಲ್ಲಿ ಹಿಂದೂಗಳು ಕಾರ್ತಿಕ ದೀಪವನ್ನು ಬೆಳಗಳು ಹೈಕೋರ್ಟ್ ತೀರ್ಪು ನೀಡಿದ್ದರೂ, ಐ.ಎನ್.ಡಿ.ಐ ಒಕ್ಕೂಟವು ಇದರ ವಿರುದ್ಧ ನಿಂತಿರುವುದು ಹಿಂದೂ ವಿರೋಧಿ ಕೃತ್ಯವಾಗಿದೆ. ಈ ತೀರ್ಪು ನೀಡಿದ ನ್ಯಾಯಾಧೀಶರನ್ನು ಪಕ್ಷಪಾತಿ, ಕೋಮುವಾದಿ ಎಂದು ಆರೋಪಿಸುವುದು ಪೂರ್ವಾಗ್ರಹಪೀಡಿತವಾಗಿದೆ. ಇಂಥ ಚಾಳಿ ಕಾಂಗ್ರೆಸ್, ಡಿಎಂಕೆಯ ಚಾಳಿಯಾಗಿ ಬಿಟ್ಟಿದೆ.
ನ್ಯಾಯಮೂರ್ತಿ ರಂಜನ್ ಗಗೋಯ್ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭ ಕಾರ್ಯಕ್ರಮವನ್ನು ಐ.ಎನ್.ಡಿ.ಐ ಬಹಿಷ್ಕರಿಸಿತ್ತು. ಜಸ್ಟೀಸ್ ರಂಜನ್ ಗಗೋಯ್ ಅವರು ಶ್ರೀರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಿಸುವುದರ ಪರವಾಗಿ ತೀರ್ಪು ಕೊಟ್ಟಿದ್ದುದೇ ಈ ವಿರೋಧಕ್ಕೆ ಕಾರಣವಾಗಿತ್ತು. ಇದು ಐ.ಎನ್.ಡಿ.ಐ ಒಕ್ಕೂಟದ ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ.
ಹಲವಾರು ದಶಕಗಳ ಹಿಂದೆ 1973ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಮೂವರು ನ್ಯಾಯಾಧೀಶರನ್ನು ಬೈಪಾಸ್ ಮಾಡಿ ನ್ಯಾಯಮೂರ್ತಿ ಎ.ಎನ್ ರಾಯ್ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದರು. ಸರಕಾರದ ವಿರುದ್ಧ ತೀರ್ಪು ನೀಡಿದ್ದ ಹಿರಿಯ ನ್ಯಾಯಾಧೀಶರುಗಳನ್ನು ಅವಗಣನೆ ಮಾಡಿದ್ದರು. 1977ರಲ್ಲಿ ಎರಡನೇ ಬಾರಿಗೆ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಅವರನ್ನು ಟಾರ್ಗೆಟ್ ಮಾಡಿ ಅವರನ್ನು ಬೈಪಾಸ್ ಮಾಡಲಾಯಿತು. ತುರ್ತುಪರಿಸ್ಥಿತಿಯ ಸಂದರ್ಭ ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿದಿದ್ದಕ್ಕೆ ಈ ಪ್ರತೀಕಾರದ ಕ್ರಮವನ್ನು ಸರಕಾರ ಕೈಗೊಂಡಿತ್ತು. ಇಂಥ ಡಿಎನ್‌ಎ ಈಗ ಡಿಎಂಕೆ ಪಕ್ಷದಲ್ಲಿದೆ.
ಇಂದಿರಾಗಾಂಧಿ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದ ಮೋಹನ್ ಕುಮಾರಮಂಗಲಮ್ ಅವರು ನ್ಯಾಯಾಂಗವು ಆಡಳಿತಾರೂಢ ಸರಕಾರದ ಐಡಿಯಾಲಜಿಗಳಿಗೆ ಬದ್ಧವಾಗಿರಬೇಕು ಎಂದು ಬಹಿರಂಗವಾಗಿಯೇ ಪ್ರತಿಪಾದಿಸಿದ್ದರು. ಡಿಎಂಕೆಯು ತಮಿಳುನಾಡಿನಲ್ಲಿ ಇದೇ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆ. ಈಗ ಅವರು ಹಿಂದೂ ಧಾರ್ಮಿಕ ನಂಬಿಕೆಗಳ ಪರವಾಗಿ ತೀರ್ಪು ನೀಡಿರುವ ನ್ಯಾಯಾಧೀಶರ ಪದಚ್ಯುತಿಗೆ ಯತ್ನಿಸುತ್ತಿದ್ದಾರೆ. ನಾಳೆ ಅವರ ರಾಜಕೀಯ ಸಿದ್ಧಾಂತಗಳಿಗೆ ವಿರುದ್ಧವಾಗಿ ತೀರ್ಪು ನೀಡುವ ಪ್ರತಿಯೊಬ್ಬ ನ್ಯಾಯಾಧೀಶರನ್ನೂ ಪದಚ್ಯುತಿಗೊಳಿಸಲು ಹುನ್ನಾರ ನಡೆಸಬಹುದು.
ಹೈಕೋರ್ಟ್ ನ್ಯಾಯಮೂರ್ತಿ ಜಿಆರ್ ಸ್ವಾಮಿನಾಥನ್ ವಿರುದ್ಧ ವಾಗ್ದಂಡನೆಗೆ ಆಗ್ರಹಿಸಿರುವ ಡಿಎಂಕೆಯ ರಾಜಕೀಯ ಪ್ರೇರಿತ ದಾಳಿಯಲ್ಲದೆ ಇನ್ನೇನು? ವಾಗ್ದಂಡನೆ ಎಂದರೆ ಸಾಮಾನ್ಯವಲ್ಲ. ಇದು ನ್ಯಾಯಾಂಗವನ್ನೇ ಹತ್ತಿಕ್ಕುವ ಯತ್ನ. ಮುಖ್ಯವಾಗಿ ಹಿಂದೂ ಪರ ಹಕ್ಕುಗಳನ್ನು ಎತ್ತಿ ಹಿಡಿದಿರುವ ನ್ಯಾಯಮೂರ್ತಿಗಳ ವಿರುದ್ಧದ ನಡೆಯಾಗಿದೆ. ಎನ್‌ಡಿಎ ನ್ಯಾಯಾಂಗದ ಪರ ಇರುವುದನ್ನು ಇಲ್ಲಿ ಗಮನಿಸಬಹುದು.
ಡಿಎಂಕೆಯ ಒಟ್ಟಾರೆ ಉದ್ದೇಶ ಒಂದು ಸಮುದಾಯದ ಓಲೈಕೆಯೇ ಆಗಿದೆ. ವಕ್ಫ್ ಭೂ ಕಬಳಿಕೆ ಬಗ್ಗೆ ಅದು ಮಾತನಾಡುವುದಿಲ್ಲ. ಆದರೆ ಹಿಂದೂ ದೇವಾಲಯಗಳಿಗೆ ಸಂಬಂಧಿಸಿ ಅನಗತ್ಯ ವಿಚಾರಗಳಿಗೆ ಮಧ್ಯಪ್ರವೇಶಿಸುತ್ತಿದೆ. ಹಿಂದೂ ದೇವಾಲಯಗಳನ್ನು ಸರಕಾರ ನಿಯಂತ್ರಿಸುತ್ತಿದೆ. ದೇವಾಲಯಗಳಿಗೆ ಬರುವ ಕಾಣಿಕೆಯನ್ನು ಬೇರೆ ಯಾವುದೋ ಉದ್ದೇಶಕ್ಕೆ ಖರ್ಚು ಮಾಡುತ್ತಾರೆ. ದೇವಾಲಯಗಳ ಸಂಸ್ಕೃತಿ, ಆಚರಣೆಗಳನ್ನು ನಿರ್ಬಂಧಿಸಲಾಗುತ್ತಿದೆ. ಈ ದೌರ್ಜನ್ಯ ಡಿಎಂಕೆ ಸರಕಾರದ ಅಡಿಯಲ್ಲಿ ನಡೆಯುತ್ತಿದೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಇರುವುದೇ ಹಿಂದೂ ದೇವಾಲಯಗಳ ಸಂಸ್ಕೃತಿ ರಕ್ಷಣೆಗೆ. ಆದರೆ ಅದನ್ನೇ ಹಿಂದೂಗಳ ವಿರುದ್ಧ ಆಯುಧವಾಗಿ ಬಳಸಲಾಗುತ್ತಿದೆ. ತಮಿಳುನಾಡಿನಲ್ಲಿ ಈ ಇಲಾಖೆಯೇ ಹಿಂದೂ ನಂಬಿಕೆಗಳನ್ನು ಘಾಸಿಗೊಳಿಸುತ್ತಿದೆ. ಇದೆಂಥಾ ಜಾತ್ಯತೀತತೆ?
ಚುನಾವಣೆಯಲ್ಲಿ ಜಯಗಳಿಸಲು ಡಿಎಂಕೆ ಮತದಾರರಿಗೆ ಉಚಿತ ಪತ್ನಿಯರನ್ನೂ ಘೋಷಿಸಲಿದೆ; ಎಐಎಡಿಎಂಕೆ
ತಮಿಳುನಾಡಿನಲ್ಲಿ ನಡೆದಿರುವುದು ಇಂಡಿ ಒಕ್ಕೂಟದ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡುವುದು, ನಿಯಂತ್ರಿಸುವುದು, ಬಳಿಕ ಸೆಕ್ಯುಲರಿಸಂ ಎಂದು ಅದನ್ನೇ ಬಿಂಬಿಸುವುದು ಇವರ ದುರುದ್ದೇಶ. ಅವರ ಕೃತ್ಯಗಳನ್ನು ಬೆಂಬಲಿಸುವ ನ್ಯಾಯಾಂಗ ಅವರಿಗೆ ಬೇಕಾಗಿದೆ. ನಿಜವಾದ ನ್ಯಾಯಾಂಗ ಅವರಿಗೆ ಬೇಕಿಲ್ಲ. ಸಾಂವಿಧಾನಿಕ ಸಂಸ್ಥೆಗಳನ್ನು ಈ ರೀತಿ ಬೆದರಿಸಬಾರದು. ಬಿಜೆಪಿ ಹಿಂದೂಗಳ ಸಂಸ್ಕೃತಿ, ಆಚರಣೆಗಳನ್ನು ಸಂರಕ್ಷಿಸುತ್ತಿದೆ. ಜತೆಗೆ ಪ್ರಜಾಪ್ರಭುತ್ವ, ನ್ಯಾಯಾಂಗ, ಒಕ್ಕೂಟ ವ್ಯವಸ್ಥೆಯ ರಕ್ಷಣೆಗೂ ಬದ್ಧವಾಗಿದೆ. ಜನರು ಎಲ್ಲವನ್ನೂ ಸ್ಪಷ್ಟವಾಗಿ ನೋಡುತ್ತಿದ್ದಾರೆ. ಭಕ್ತರ ಪರ-ವಿರೋಧ ಯಾರು ಇದ್ದಾರೆ ಎಂಬುದು ಅವರಿಗೆ ತಿಳಿದಿದೆ. ಭಾರತೀಯರು ತಮಿಳುನಾಡಿನಲ್ಲಿ ಮುಂಬರುವ ತಿಂಗಳುಗಳಲ್ಲಿ ಐ.ಎನ್.ಡಿ.ಐ ಒಕ್ಕೂಟದ ಪಕ್ಷಗಳಿಗೆ ತಕ್ಕ ಶಾಸ್ತಿ ಕಲಿಸಲಿದ್ದಾರೆ.