ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ

Public Examinations (Prevention of Unfair Means) Amendment Bill, 2026: ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು. ಪರೀಕ್ಷೆಯಲ್ಲಿ ಅಕ್ರಮ ಕಂಡುಬಂದರೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವ ಕಾನೂನು ಇದಾಗಿದೆ.

ಚಾಟ್‌ಜಿಪಿಟಿ ರಚಿತ ಚಿತ್ರ

ದೆಹಲಿ, ಜು. 29: ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ (Public Examinations (Prevention of Unfair Means) Amendment Bill, 2026) ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು. ಪರೀಕ್ಷೆಯಲ್ಲಿ ಅಕ್ರಮ ಕಂಡುಬಂದರೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವ ಕಾನೂನು ಇದಾಗಿದೆ. ಇದರ ಅನ್ವಯ ಆರೋಪ ಸಾಬೀತಾದರೆ 10 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 10 ಕೋಟಿ ರುಪಾಯಿವರೆಗೆ ದಂಡ ವಿಧಿಸಬಹುದಾಗಿದೆ.

ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ನಡೆದ ಜಿದ್ದಾಜಿದ್ದನಿನ ಚರ್ಚೆಯ ಬಳಿಕ ಈ ಮಸೂದೆ ಅಂಗೀಕಾರಗೊಂಡಿದೆ. 2026ನೇ ಸಾಲಿನ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನಂತರ ನಡೆದ ಭಾರಿ ಪ್ರತಿಭಟನೆ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಕಾರಣವಾಯ್ತು. ಇದೀಗ ಮಸೂದೆಯೂ ಅಂಗೀಕಾರಗೊಂಡಿದೆ. ಈ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡರೆ ಕಾನೂನು ಜಾರಿಯಾಗಲಿದೆ.

ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ ಪಾಸ್‌:



ಈ ಮಸೂದೆಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲು ಪ್ರತಿ ರಾಜ್ಯದಲ್ಲಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವ ಗುರಿ ಹೊಂದಿದೆ ಮತ್ತು ಎರಡು ತಿಂಗಳೊಳಗೆ ತನಿಖೆಗಳನ್ನು ಪೂರ್ಣಗೊಳಿಸಬೇಕೆಂದು ಆದೇಶಿಸುತ್ತದೆ. ಜತೆಗೆ ಅಪರಾಧಿಗಳ ಶಿಕ್ಷೆಯನ್ನು ಗಮನಾರ್ಹವಾಗಿ ಹೆಚ್ಚಿಸುವುದಲ್ಲದೆ ಪರೀಕ್ಷಾ ಪತ್ರಿಕೆಗಳನ್ನು ಸೋರಿಕೆ ಮಾಡಿದ ತಪ್ಪಿತಸ್ಥರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಲಕ್ಷ ರುಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಸಂಘಟಿತ ಪ್ರಶ್ನೆ ಪತ್ರಿಕೆ ಸೋರಿಕೆ ಸಿಂಡಿಕೇಟ್‌ಗಳು 10 ಕೋಟಿ ರುಪಾಯಿವರೆಗೆ ದಂಡ ಎದುರಿಸಬೇಕಾಗುತ್ತದೆ.

ದೆಹಲಿ ಪ್ರತಿಭಟನೆ; ಕ್ರಿಮಿನಲ್ ಹಿನ್ನೆಲೆ ಇಲ್ಲದ ಅಪ್ರಾಪ್ತರನ್ನು ಬಿಡುಗಡೆ ಮಾಡಿ; ಸುಪ್ರೀಂ ಆದೇಶ

ಜೂನ್ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಆರಂಭವಾದ ರಾಷ್ಟ್ರವ್ಯಾಪಿ ಬೃಹತ್ ಆಂದೋಲನದ ಹಿನ್ನೆಲೆಯಲ್ಲಿ ಈ ಕಾನೂನು ಜಾರಿಗೆ ಬಂದಿದೆ. ಜೂನ್ 28ರಂದು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್‌ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ನಂತರ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತು.

ಜುಲೈ 20ರಂದು ಸಂಸತ್ತಿನ ಕಡೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸುತ್ತಿದ್ದುದನ್ನು ಪೊಲೀಸರು ತಡೆದ ನಂತರ ಚಳುವಳಿ ತೀವ್ರ ಸ್ವರೂಪ ಪಡೆದುಕೊಂಡಿತು. ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್‌ಗಳನ್ನು ಬಳಸಲಾಗಿದೆ ಎಂಬ ಆರೋಪವೂ ಕೇಳಿಬಂತು. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಸೇರಿ ಪ್ರತಿಭಟನಾಕಾರರ ಹಲವು ಪ್ರಮುಖ ಬೇಡಿಕೆಗಳನ್ನು ಸರ್ಕಾರ ಅಂಗೀಕರಿಸಿದ ನಂತರ 36 ದಿನಗಳ ಪ್ರತಿಭಟನೆ ಜುಲೈ 25ರಂದು ಕೊನೆಗೊಂಡಿತು.

ಪರೀಕ್ಷಾ ಗುಣಮಟ್ಟ ಸುಧಾರಣೆಗೆ ಟಾಸ್ಕ್‌ಫೋರ್ಸ್‌ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ; ನಂದನ್‌ ನಿಲೇಕಣಿ ನೇತೃತ್ವ

ಕೇಂದ್ರ ಸರ್ಕಾರದ ಉದ್ದೇಶವೇನು?

ಕೇಂದ್ರ ಸರ್ಕಾರದ ಪ್ರಕಾರ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಅಕ್ರಮಗಳಿಂದ ಪರೀಕ್ಷೆಗಳು ರದ್ದಾಗುವುದು, ಮರುಪರೀಕ್ಷೆ ನಡೆಸಬೇಕಾಗುವುದು, ಅಭ್ಯರ್ಥಿಗಳ ಸಮಯ, ಹಣ ಮತ್ತು ಶ್ರಮ ವ್ಯರ್ಥವಾಗುವುದರ ಜತೆಗೆ, ಸಾರ್ವಜನಿಕ ಪರೀಕ್ಷೆಗಳ ಮೇಲಿನ ವಿಶ್ವಾಸಕ್ಕೂ ಧಕ್ಕೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘಟಿತ ಪೇಪರ್ ಲೀಕ್ ಜಾಲಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು, ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ನಂಬಿಕೆ ಮರುಸ್ಥಾಪಿಸುವುದು, ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಯನ್ನು ವೇಗಗೊಳಿಸುವುದು ಮತ್ತು ತಪ್ಪಿತಸ್ಥರಿಗೆ ತ್ವರಿತ ಹಾಗೂ ಕಠಿಣ ಶಿಕ್ಷೆ ವಿಧಿಸುವುದೇ ಈ ತಿದ್ದುಪಡಿಗಳ ಪ್ರಮುಖ ಉದ್ದೇಶ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author