ಚೆನ್ನೈ: ಹಲವು ತಿಂಗಳಿಂದ ತಮಿಳುನಾಡಿನಲ್ಲಿ ಸಿನಿಮಾ ಹೊರತಾಗಿ ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ನಟ ವಿಜಯ್ ಅವರ ರಾಜಕೀಯ ರ್ಯಾಲಿಯಲ್ಲಿ ಬಹುದೊಡ್ಡ ದುರಂತವೊಂದು ಇಂದು ಸಂಭವಿಸಿದೆ. ತಮಿಳುನಾಡಿನ ಕರೂರಿನಲ್ಲಿ ವಿಜಯ್ ಆಯೋಜಿಸಿದ್ದ ಪ್ರಚಾರ ರ್ಯಾಲಿಯಲ್ಲಿ(Vijay's Rally Stampede) ಭಾರೀ ಕಾಲ್ತುಳಿತ ಸಂಭವಿಸಿದ್ದು, 30ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಘಟನೆಯಲ್ಲಿ ನೂರಾರು ಗಂಭೀರವಾಗಿ ಗಾಯಗೊಂಡಿದ್ದು, ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಹಾಗಿದ್ದರೆ ಶನಿವಾರ ನಡೆದ ರ್ಯಾಲಿಯಲ್ಲಿ ನಿಜಕ್ಕೂ ನಡೆದಿದ್ದಾದರೂ ಏನು? ಈ ಕಾಲ್ತುಳಿತ ಸಂಭವಿಸಲು ಕಾರಣವಾದರೂ ಏನು ಇಲ್ಲಿದೆ ಸಂಪೂರ್ಣ ವಿವರ.
- ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷರಾಗಿರುವ ವಿಜಯ್, ಶನಿವಾರ ಮಧ್ಯಾಹ್ನದ ಸುಮಾರಿಗೆ ಕರೂರ್ ತಲುಪಬೇಕಿತ್ತು, ಆದರೆ ಸುಮಾರು ಆರು ಗಂಟೆಗಳ ಕಾಲ ವಿಳಂಬವಾಗಿತ್ತು.
- ವಿಜಯ್ ಬರುವ ಹೊತ್ತಿಗೆ, ಜನಸಂದಣಿ ಬಹಳ ಹೆಚ್ಚಾಗಿತ್ತು ಮತ್ತು ಜನದಟ್ಟಣೆ ಮತ್ತು ಶಾಖದಿಂದಾಗಿ ಹಲವಾರು ಜನರು ಮೂರ್ಛೆ ಹೋಗಲಾರಂಭಿಸಿದರು.
- ಇದನ್ನು ಗಮನಿಸಿದ ನಟ-ರಾಜಕಾರಣಿ ತಮ್ಮ ಭಾಷಣವನ್ನು ನಿಲ್ಲಿಸಿ ಕಸ್ಟಮ್-ನಿರ್ಮಿತ ಪ್ರಚಾರ ಬಸ್ಸಿನಿಂದ ನೀರಿನ ಬಾಟಲಿಗಳನ್ನು ಎಸೆಯಲು ಪ್ರಾರಂಭಿಸಿದರು.
- ನಟನ ಬಸ್ ಚಲಿಸುತ್ತಿದ್ದಂತೆ ನೂರಾರು ಜನ ವಿಜಯ್‌ರನ್ನು ಹತ್ತಿರದಿಂದ ನೋಡಲು ಮುಗಿ ಬಿದ್ದಿದ್ದಾರೆ. ಆಗ ಈ ಕಾಲ್ತುಳಿತ ಸಂಭವಿಸಿದೆ.
- ಆಂಬುಲೆನ್ಸ್‌ಗಳು ಜನಸಂದಣಿಯ ಮೂಲಕ ದಾರಿ ಮಾಡಿಕೊಂಡು ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಸಹ ಕಷ್ಟವಾಯಿತು.
ಪ್ರಧಾನಿ ಮೋದಿ ಸಂತಾಪ
ಇನ್ನು ದುರ್ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಅವರು, ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ರ್ಯಾಲಿಯ ಸಂದರ್ಭದಲ್ಲಿ ನಡೆದ ದುರಂತ ತೀವ್ರ ದುಃಖಕರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಸ್ಟ್ಯಾಲಿನ್ ಏನು ಹೇಳಿದ್ರು?
ಘಟನೆ ಬಗ್ಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟ್ಯಾಲಿನ್ ಪ್ರತಿಕ್ರಿಯಿಸಿದ್ದು, ಕರೂರಿನಿಂದ ಬರುತ್ತಿರುವ ಸುದ್ದಿ ಆತಂಕಕಾರಿಯಾಗಿದೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡುವಂತೆ ಮಾಜಿ ಸಚಿವ ವಿ. ಸೆಂಥಿಲ್‌ಬಾಲಾಜಿ, ಸಚಿವ ಸುಬ್ರಮಣಿಯನ್ ಮಾ ಮತ್ತು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದೇನೆ. ಹತ್ತಿರದ ತಿರುಚ್ಚಿ ಜಿಲ್ಲೆಯ ಸಚಿವ ಅನ್ಬಿಲ್ ಮಹೇಶ್ ಅವರಿಗೂ ಯುದ್ಧೋಪಾದಿಯಲ್ಲಿ ಅಗತ್ಯ ಸಹಾಯ ನೀಡುವಂತೆ ಆದೇಶಿಸಿದ್ದೇನೆ. ಸಾಧ್ಯವಾದಷ್ಟು ಬೇಗ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ಅಲ್ಲಿನ ಎಡಿಜಿಪಿ ಜೊತೆ ಮಾತನಾಡಿದ್ದೇನೆ. ವೈದ್ಯರು ಮತ್ತು ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.