ನವದೆಹಲಿ : ದೇಶಾದ್ಯಂತ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಂದಿನಿಂದ (ಶನಿವಾರ) ದಿಢೀರ್ ಏರಿಕೆಯಾಗಿದ್ದು, ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ.
ಗೃಹಬಳಕೆಯ 14.2 ಕೆಜಿ ಸಿಲಿಂಡರ್ ಮೇಲೆ 60 ರೂ. ಹಾಗೂ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಮೇಲೆ 115 ರೂ. ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಗೃಹಿಣಿಯರು ಹಾಗೂ ಹೋಟೆಲ್, ರೆಸ್ಟೋರೆಂಟ್ ಉದ್ಯಮಿಗಳ ಜೇಬಿಗೆ ಕತ್ತರಿ ಬಿದ್ದಿದೆ. ಏಪ್ರಿಲ್ 2025ರ ನಂತರ ದೇಶೀಯ ಎಲ್‌ಪಿಜಿ ಬೆಲೆಯಲ್ಲಿ ಆಗಿರುವ ಮೊದಲ ಏರಿಕೆ ಇದಾಗಿದೆ.
ಪ್ರಮುಖ ನಗರಗಳಲ್ಲಿ ಪರಿಷ್ಕೃತ ಗೃಹಬಳಕೆ ಸಿಲಿಂಡರ್ ದರ (14.2 ಕೆಜಿ)
ಬೆಂಗಳೂರು 855.50ರಿಂದ 915.50 ರೂ.ಗೆ ಏರಿಕೆ. ನವದೆಹಲಿ 853ರಿಂದ 913 ರೂ., ಮುಂಬೈ 852.50ರಿಂದ 912.50 ರೂ., ಕೋಲ್ಕತ್ತಾ 879.00ರಿಂದ 930.00 ರೂ., ಚೆನ್ನೈ 868.50ರಿಂದ 928.50 ರೂ. ಏರಿಕೆ ದಾಖಲಿಸಿವೆ.
ವಾಣಿಜ್ಯ ಸಿಲಿಂಡರ್ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ. 19 ಕೆಜಿ ಸಿಲಿಂಡರ್‌ಗೆ ಬೆಂಗಳೂರಿನಲ್ಲಿ ₹1,814.00ರಿಂದ 1929.00 ರೂ., ನವದೆಹಲಿ 1,768.50ರಿಂದ 1,883.00 ರೂ., ಮುಂಬೈ 1,720.50ರಿಂದ 1,835.00 ರೂ., ಕೋಲ್ಕತ್ತಾ 1,875.50ರಿಂದ 1,990.00 ರೂ., ಚೆನ್ನೈ 1,929.00ರಿಂದ 2,043.50 ರೂ. ಏರಿಕೆ ಕಂಡಿವೆ.
ಇಂಧನ ಕೊರತೆಯಿಲ್ಲ: ಸರ್ಕಾರದ ಅಭಯ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬ ಆತಂಕದ ನಡುವೆಯೇ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ದೇಶದ ಜನತೆಗೆ ಭರವಸೆ ನೀಡಿದ್ದಾರೆ.
“ಭಾರತದಲ್ಲಿ ಸಾಕಷ್ಟು ಇಂಧನ ಲಭ್ಯವಿದ್ದು, ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ನಮ್ಮ ನಾಗರಿಕರಿಗೆ ಕೈಗೆಟುಕುವ ದರದಲ್ಲಿ ಇಂಧನ ಒದಗಿಸುವುದು ನಮ್ಮ ಮೊದಲ ಆದ್ಯತೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವದಂತಿಗಳಿಗೆ ಕಿವಿಗೊಡದಿರಲು ಇಂಡಿಯನ್ ಆಯಿಲ್ ಮನವಿ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೆಟ್ರೋಲ್-ಡೀಸೆಲ್ ಕೊರತೆಯ ವದಂತಿಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಕಟ್ಟುನಿಟ್ಟಾಗಿ ನಿರಾಕರಿಸಿದೆ.
“ದೇಶಾದ್ಯಂತ ಇಂಧನ ಪೂರೈಕೆ ಮತ್ತು ವಿತರಣಾ ಜಾಲವು ಎಂದಿನಂತೆ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ. ನಾಗರಿಕರು ಆತಂಕಗೊಂಡು ಪೆಟ್ರೋಲ್ ಬಂಕ್‌ಗಳಲ್ಲಿ ಜನಸಂದಣಿ ಮಾಡಬಾರದು. ನಿಖರ ಮಾಹಿತಿಗಾಗಿ ಕೇವಲ ಅಧಿಕೃತ ಮೂಲಗಳನ್ನು ಮಾತ್ರ ನಂಬಿ” ಎಂದು ಕಂಪನಿ ಮನವಿ ಮಾಡಿದೆ.