ಮುಂಬೈ, ಸೆ. 2: ಇಂದಿನ ಕಾಲದಲ್ಲಿ ಹೆಣ್ಣು ಮಗು ಹುಟ್ಟಿದರೆ ಮುಖ ಗಂಟಿಕ್ಕುವ ಜನರ ಜಡುವೆ, ಮಹಾರಾಷ್ಟ್ರದ ಕುಟುಂಬವೊಂದು ನವಜಾತ ಹೆಣ್ಣು ಮಗುವನ್ನು ಮೆನೆಗೆ ಕರೆತರಲು ರಾಜಮನೆತನದ ವೈಭವವನ್ನೇ ಸೃಷ್ಟಿಸಿದೆ. ಪುಣೆ ಜಿಲ್ಲೆಯ ಖೇಡಕರ್ ಕುಟುಂಬದಲ್ಲಿ ಬರೋಬ್ಬರಿ 200 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಹೆಣ್ಣು ಮಗು ಜನಿಸಿದ್ದು, ಈ ಸಂತಸದ ಕ್ಷಣವನ್ನು ಇಡೀ ಗ್ರಾಮವೇ ಹಬ್ಬದಂತೆ ಆಚರಿಸಿದೆ (Viral Video). ಆಸ್ಪತ್ರೆಯಿಂದ ಮಗುವನ್ನು ಮನೆಗೆ ಕರೆತರಲು ವಿಶೇಷವಾಗಿ ಕುದುರೆ ರಥವನ್ನು ತರಿಸಿ, ಇಡೀ ಹಾದಿಯುದ್ದಕ್ಕೂ ಹೂವಿನ ಮಳೆ ಹರಿಸುತ್ತಾ ವಾದ್ಯಗಳ ಮೂಲಕ ವೈಭವದಿಂದ ಮೆರವಣಿಗೆ ನಡೆಸಲಾಗಿದೆ.
ಮಹಾರಾಷ್ಟ್ರದ ಶೀರೂರ್ ತಾಲೂಕಿನ ವೆಂಶಟ್ ಗ್ರಾಮದ ಜಿಲಾಜಿ ಖೇಡಕರ್ ಅವರ ಕುಟುಂಬದಲ್ಲಿ ಎರಡು ಶತಮಾನಗಳಿಂದ, ಸುಮಾರು ಏಳು ತಲೆಮಾರುಗಳಿಂದ ಕೇವಲ ಗಂಡು ಮಕ್ಕಳು ಮಾತ್ರ ಜನಿಸಿದ್ದು ಕುಟುಂಬದಲ್ಲಿ ಹೆಣ್ಣು ಮಕ್ಕಳ ಕೊರತೆ ಎದ್ದು ಕಾಣುತಿತ್ತು. ಹೀಗಾಗಿ ಜಿಲಾಜಿ ಅವರ ಸೊಸೆ ಅಕ್ಷತಾ 200 ವರ್ಷಗಳ ನಂತರ ಹೆಣ್ಣು ಮಗುವಿಗೆ ಜನ್ಮ ನೀಡುತ್ತಿದ್ದಂತೆ ಕುಟುಂಬದ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ಮಗುವಿಗೆ ಕುಟುಂಬ ಗಾರ್ಗಿ ಎಂದು ನಾಮಕರಣ ಮಾಡಿದೆ.
ಮಹಾರಾಷ್ಟ್ರದಲ್ಲಿ ಹೆಣ್ಣು ಮಗುವಿಗೆ ಸಂಭ್ರಮದ ಸ್ವಾಗತ:
ಕುದುರೆ ರಥದಲ್ಲಿ ರಾಜವೈಭವದ ಮೆರವಣಿಗೆ
ಮಗುವನ್ನು ಮತ್ತು ತಾಯಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆತರಲು ತಂದೆ ವಿಶಾಲ್ ಖೇಡಕರ್ ಮತ್ತು ಕುಟುಂಬಸ್ಥರು ವಿಶೇಷವಾಗಿ ಅಲಂಕರಿಸಿದ ಕುದುರೆ ರಥವನ್ನು ಏರ್ಪಾಡು ಮಾಡಿದ್ದರು. ಮಗುವನ್ನು ರಥದ ಮೇಲೆ ಕುರಿಸಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಶಹನಾಯಿ ಮತ್ತು ಡಿಜೆ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಹಾದಿಯುದ್ದಕ್ಕೂ ಗ್ರಾಮಸ್ಥರು ಹಾಗೂ ಕುಟುಂಬದವರು ಮಗುವಿನ ಮೇಲೆ ಹೂವಿನ ಮಳೆ ಸುರಿಸಿ ಆರ್ಶಿವದಿಸಿದರು.
ಮನೆಗೆ ಮಹಾಲಕ್ಷ್ಮೀ ಆಗಮನ
ಮಗುವಿನ ಆಗಮನದ ಬಗ್ಗೆ ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡ ಕುಟುಂಬಸ್ಥರು, ‘ʼನಮ್ಮ ಕುಟುಂಬಕ್ಕೆ ಕಳೆದ 200 ವರ್ಷಗಳಿಂದ ಹೆಣ್ಣು ಮಗುವಿನ ಆರ್ಶಿವಾದ ಸಿಕ್ಕಿರಲಿಲ್ಲ. ಈಗ ನಮ್ಮ ಮನೆಗೆ ಸಾಕ್ಷಾತ್ ಮಹಾಲಕ್ಷ್ಮೀಯೇ ಬಂದಿದ್ದಾಳೆ. ಈ ಸಂತಸವನ್ನು ಬಣ್ಣಿಸಲು ಪದಗಳೇ ಇಲ್ಲʼ’ ಎಂದು ಭಾವುಕರಾದರು. ಮನೆಗೆ ಬಂದ ಮಗುವಿಗೆ ಕಾಲಿಗೆ ಗೆಜ್ಜೆ ಮತ್ತು ಮಹಾರಾಷ್ಟ್ರ ಶೈಲಿಯ ಸಾಂಪ್ರದಾಯಿಕ ಉಡುಪುಗಳನ್ನು ತೊಡಿಸಿ ಆರತಿ ಬೆಳಗಿ ಮನೆಗೆ ಸ್ವಾಗತಿಸಿದರು.
ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣು ಮಕ್ಕಳ ಮೇಲಿನ ತಾರತಮ್ಯ ಈಗಲೂ ಜೀವಂತವಾಗಿರುವಾಗ, ಖೇಡಕರ್ ಕುಟುಂಬದ ಈ ಅಪರೂಪದ ಸಂಭ್ರಮಾಚರಣೆಯೂ ಸಮಾಜದಲ್ಲಿ ಮಾದರಿಯಾಗಲಿದೆ ಎಂದು ಸಾರ್ವಜನಿಕರು ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.