ಮುಂಬೈ, ಸೆ. 19: ಒಂದೆಡೆ ಮಳೆಯಿಲ್ಲದೆ ಕಂಗಾಲಾಗಿರುವ ರೈತರು, ಬರದ ಬೇಗೆಯಲ್ಲಿ ಬೇಯುತ್ತಿರುವ ಜನಸಾಮಾನ್ಯರು, ಇನ್ನೊಂದೆಡೆ ಸಭೆಯಯಲ್ಲಿ ಆರಾಮಾಗಿ ಕೂತು ಗೋಡಂಬಿ-ಬಾದಾಮಿ ತಿನ್ನತ್ತಿರುವ ಜನಪ್ರತಿನಿಧಿಗಳು...ಮಹಾರಾಷ್ಟ್ರದ ನಾಂದೇಡ್‌ದಲ್ಲಿ ನಡೆದ ಬರದ ಕುರಿತ ಉನ್ನತ ಮಟ್ಟದ ಸಮೀಕ್ಷಾ ಸಭೆಯಲ್ಲಿ ನಡೆದ ಈ ಘಟನೆ (Drought review meeting) ಈಗ ರಾಜ್ಯಾದ್ಯಂತ ದೊಡ್ಡ ರಾಜಕೀಯ ಗದ್ದಲ ಹಾಗೂ ಆಕ್ರೋಶಕ್ಕೆ ದಾರಿ ಮಾಡಿ ಕೊಟ್ಟಿದೆ.
ಮಹಾರಷ್ಟ್ರಾದ ಮರಾಠವಾಡ ಭಾಗದಲ್ಲಿ ಕನಿಷ್ಠ ಮಳೆಯಾಗಿದ್ದು, ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ. ಈ ಹಿನ್ನಲೆಯಲ್ಲಿ ಕೃಷಿ ಸಚಿವ ದತ್ತಾತ್ರೇಯ ಭರಣ ಅಧ್ಯಕ್ಷತೆಯಲ್ಲಿ ನಾಂದೇಡ್‌ನಲ್ಲಿ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಗೆ ಸಚಿವರು, ಸಂಸದರು, ಶಾಸಕರು ಮತ್ತು ಉನ್ನತಾಧಿಕಾರಿಗಳಿಗೆ ಕರೆಯಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದೆ ತಟ್ಟೆಗಳಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾ ಹಾಗೂ ಒಣದ್ರಾಕ್ಷಿಗಳನ್ನು ಇಡಲಾಗಿತ್ತು. ಸಭೆಯಲ್ಲಿ ಗಂಭೀರವಾಗಿ ಬರದ ಬಗ್ಗೆ ಚರ್ಚಿಸುವ ಬದಲು, ಸಚಿವರು ಮತ್ತು ಸಂಸದರು ಡ್ರೈ ಫ್ರೂಟ್ಸ್‌ಗಳನ್ನು ಮೆಲ್ಲುತ್ತ ಮಾತುಕತೆಯಲ್ಲಿ ತೊಡಗಿರುವ ವಿಡಿಯೊ ತುಣುಕುಗಳು ಸಭೆ ಮುಗಿಯುವಷ್ಟರಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆದವು.
ವೈರಲ್ ವಿಡಿಯೊ:
ವಿರೋಧ ಪಕ್ಷಗಳ ಆಕ್ರೋಶ
ಸಂತ್ರಸ್ತ ರೈತರ ಪರವಾಗಿ ಧ್ವನಿಯೆತ್ತಿದ ವಿಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು, ಆಡಳಿತರೂಢ ನಾಯಕರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬರಗಾಲದಿಂದ ರೈತರು ಆತ್ಮಹತ್ಯೆ ಮಾಡುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಆದರೆ ರಾಜ್ಯದ ನಾಯಕರು ಮತ್ತು ಅಧಿಕಾರಿಗಳು ಬರ ಪರಿಶೀಲನಾ ಸಭೆಯನ್ನು ಡ್ರೈ ಫ್ರುಟ್ಸ್ ಪಾರ್ಟಿಯನ್ನಾಗಿ ಮಾಡಿಕೊಂಡಿದ್ದಾರೆ. ಇದು ಸರ್ಕಾರದ ಅಸಂವೇದನಾಶೀಲತೆಯನ್ನು ಏತ್ತಿ ತೋರಿಸುತ್ತದೆ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.
ʼʼಮಳೆ ಅಭಾವದಿಂದಾಗಿ ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದಾರೆ ಮತ್ತು ಕುಡಿಯುವ ನೀರಿನ ಅಭಾವವನ್ನೂ ಎದುರಿಸುತ್ತಿದ್ದಾರೆ. ಮರಾಠವಾಡ ಪ್ರದೇಶದಲ್ಲಿ 400ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಈ ನಾಯಕರು ಕಾಜು ಮತ್ತು ಬಾದಾಮಿಗಳನ್ನು ತಿನ್ನುವುದು ರೈತರು ಹಾಗೂ ಬರದ ಪರಿಸ್ಥಿತಿಯ ಬಗ್ಗೆ ಅವರಿಗಿರುವ ಅಸಂವೇದನಾಶೀಲತೆಯನ್ನು ತೋರಿಸುತ್ತದೆ" ಎಂದು ಶಿವಸೇನೆ ಶಾಸಕ ಅಂಬಾದಾಸ್ ದಾನ್ವೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯೆ
ವಿವಾದ ತಾರಕಕ್ಕೇರುತ್ತಿದ್ದಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, 'ʼಸಭೆಯಲ್ಲಿ ಉಪಹಾರ ಅಥವಾ ಅಲ್ಪೋಪಹಾರದ ವ್ಯವಸ್ಥೆಯನ್ನು ಸ್ಥಳೀಯ ಜಿಲ್ಲಾಡಳಿತ ಮಾಡುತ್ತದೆ. ಆದಾಗ್ಯೂ, ಇಂತಹ ಗಂಭೀರ ಪರಿಸ್ಥಿತಿಯ ಪರಿಶೀಲನಾ ಸಭೆಗಳು ನಡೆಯುವಾಗ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೆಚ್ಚಿನ ಸಂವೇದನಾಶೀಲತೆಯಿಂದ ನಡೆದುಕೊಳ್ಳುವುದು ಅಗತ್ಯʼ' ಎಂದು ಹೇಳಿದ್ದಾರೆ. ಜನಸಾಮಾನ್ಯರು ಮತ್ತು ಕೃಷಿಕರು ಸಂಕಷ್ಟದಲ್ಲಿರುವಾಗ ಜನಪ್ರತಿನಿಧಿಗಳ ಈ ಜವಾಬ್ದಾರಿ ರಹಿತ ನಡವಳಿಕೆ ಮಹಾರಾಷ್ಟ್ರ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಘಟನೆ ಕುರಿತು ಸ್ಪಷ್ಟನೆ ನೀಡಿರುವ ಸಂಸದ ಬಂಡೂ ಜಾಧವ್, ʼʼಬರಗಾಲವಿದೆ ಎಂದ ಮಾತ್ರಕ್ಕೆ ಯಾರು ಏನು ತಿನ್ನಬಾರದೇ? 50-60 ರೂ ಡ್ರೈಫ್ರೂಟ್ಸ್ ತಿಂದಿದಕ್ಕೆ ಇಷ್ಟೊಂದು ರಂಪಾಟ ಮಾಡುವ ಅಗತ್ಯವೇನಿದೆ?ʼʼ ಎಂದು ಪ್ರಶ್ನಿಸಿದ್ದು ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತಾಗಿದೆ.
ಮರಾಠವಾಡ-ಅಮರಾವತಿಯಲ್ಲಿ ಕರಗಿದ ಮಳೆ ಭರವಸೆ
ಮರಾಠವಾಡ ಪ್ರಾಂತ್ಯದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ 424.5 ಮಿ.ಮೀ. ಮಳೆಯಾಗಿದ್ದು, ಇದು ಈ ನಾಲ್ಕು ತಿಂಗಳುಗಳಲ್ಲಿ ದಾಖಲಾಗುವ ಸರಾಸರಿ 679.5 ಮಿ.ಮೀ. ಮಳೆಯ ಶೇಕಡಾ 69.2ರಷ್ಟಾಗಿದೆ. ಕಳೆದ ವರ್ಷ, ಮರಾಠವಾಡವು ತನ್ನ ಸರಾಸರಿ ಮಳೆಯ ಶೇಕಡಾ 119ರಷ್ಟು ಮಳೆಯನ್ನು ಪಡೆದಿತ್ತು.
ಫೆರಿಸ್ ವ್ಹೀಲ್‌ಗೆ ಸಿಲುಕಿದ ಕೂದಲು; ಕಿತ್ತು ಬಂದ ಮಹಿಳೆಯ ತಲೆ ಚರ್ಮ; ಮಹಾರಾಷ್ಟ್ರದಲ್ಲೊಂದು ಭೀಕರ ದುರಂತ
ಒಣಗಿದ ಬೆಳೆ
ಈ ಬಾರಿಯ ಖಾರಿಫ್ ಋತುವಿನಲ್ಲಿ ಮರಾಠವಾಡದ ಎಂಟು ಜಿಲ್ಲೆಗಳಾದ ಛತ್ರಪತಿ ಸಂಭಾಜಿನಗರ, ಬೀಡ್, ಜಾಲನಾ, ನಾಂದೇಡ್, ಪರ್ಭಣಿ, ಹಿಂಗೋಲಿ, ಧಾರಾಶಿವ್ ಮತ್ತು ಲಾತೂರ್‌ಗಳಲ್ಲಿ ಒಟ್ಟು 47.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್, ಹತ್ತಿ ಮತ್ತು ಜೋಳದಂತಹ ಬೆಳೆಗಳನ್ನು ಬಿತ್ತನೆ ಮಾಡಲಾಗಿತ್ತು. ಕೃಷಿ ಇಲಾಖೆಯ ಅಧಿಕಾರಿಗಳ ಪ್ರಕಾರ, ಮಣ್ಣಿನಲ್ಲಿ ತೇವಾಂಶದ ಕೊರತೆಯಿಂದಾಗಿ ಎಲೆಗಳು ತೆಳು ಹಳದಿ ಬಣ್ಣಕ್ಕೆ ತಿರುಗಿ, ಇಡೀ ಪ್ರದೇಶದಲ್ಲಿ ಗಣನೀಯ ಪ್ರಮಾಣದ ಸೋಯಾಬಿನ್ ಬೆಳೆ ಸಂಪೂರ್ಣವಾಗಿ ಒಣಗಿಹೋಗಿದೆ. ಹತ್ತಿ ಬೆಳೆ ಕೂಡ ಕುಂಠಿತ ಬೆಳವಣಿಗೆಯನ್ನು ಕಂಡಿದ್ದು, ಇದು ಇಳುವರಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಜೋಳ ಮತ್ತು ತೊಗರಿ ಸೇರಿಇತರ ಬೆಳೆಗಳ ಸ್ಥಿತಿಯೂ ಕಳಪೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರಾಠವಾಡ ಮಾತ್ರವಲ್ಲದೆ, ಅಮರಾವತಿ ವಿಭಾಗದ ಎಲ್ಲ ಐದು ಜಿಲ್ಲೆಗಳು ಸಹ ಸುದೀರ್ಘ ಒಣ ಹವೆಯ, ಮಳೆ ಕೊರತೆಯ ಪರಿಣಾಮಕ್ಕೆ ತೀವ್ರವಾಗಿ ತುತ್ತಾಗಿವೆ. "ಜೂನ್ ಮತ್ತು ಸೆಪ್ಟೆಂಬರ್ ನಡುವೆ ದಾಖಲಾಗುವ ಸರಾಸರಿ 693 ಮಿ.ಮೀ.ಗಿಂತ ಹೆಚ್ಚಿನ ಮಳೆಯ ಪೈಕಿ ಅಮರಾವತಿ ವಿಭಾಗವು ಇದುವರೆಗೆ ಶೇಕಡಾ 72ರಷ್ಟು ಮಳೆಯನ್ನು ಮಾತ್ರ ಪಡೆದಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.