ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಿಶ್ಚಿತಾರ್ಥ ಆಗಿದ್ದ ಯುವತಿಯ ನಿಗೂಢ ಸಾವು; ಮೃತದೇಹವನ್ನೇ ವರಿಸಿದ ಭಾವಿ ವರ!

Viral News: ವಿವಾಹ ನಿಶಿತಾರ್ಥವಾಗಿದ್ದ ಯುವತಿ ಇದ್ದಕ್ಕಿದ್ಧಂತೆ ಮೃತಪಟ್ಟಿದ್ದರಿಂದ ವರ ಕುಸಿದು ಬಿದ್ದಿದ್ದಾನೆ. ಇತ್ತ ಆಕೆಯ ಸಾವಿಗೆ ಈತನೇ ಕಾರಣ ಎನ್ನುವ ಆರೋಪವೂ ಕೇಳಿ ಬಂದಿದ್ದರಿಂದ ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ ಆತ ಯುವತಿಯ ಮೃತದೇಹವನ್ನೇ ವರಿಸಿ ನೆರೆದವರ ಕಣ್ಣಂಚು ಒದ್ದೆಯಾಗುವಂತೆ ಮಾಡಿದ್ದಾನೆ.

ಸಾಂದರ್ಭಿಕ ಚಿತ್ರ

ರಾಂಚಿ, ಮೇ 17: 4 ತಿಂಗಳ ಹಿಂದೆ ಅವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು. ಎರಡೂ ಮನೆಯವರು ಸೇರಿ ಶಾಸ್ತ್ರೋಕ್ತವಾಗಿ ವಿವಾಹ ನಿಶ್ಚಿತಾರ್ಥ ನಡೆಸಿದ್ದರು. ನಿಶ್ಚಿತಾರ್ಥದ ಬಳಿಕ ಯುವತಿ ತನ್ನ ಭಾವಿ ಪತಿಯ ಮನೆಯಲ್ಲಿ ವಾಸಿಸತೊಡಗಿದಳು. ಒಂದರ್ಥದಲ್ಲಿ ಅವರಿಬ್ಬರು ಲಿವಿಂಗ್‌ ಟುಗೆದರ್‌ನಲ್ಲಿದ್ದರು. ಆದರೆ ಇದ್ದಕ್ಕಿದ್ದಂತೆ ಯುವತಿ ಮೃತಪಟ್ಟಿದ್ದಾಳೆ. ಅನುಮಾನಗೊಂಡ ಆಕೆಯ ಮನೆಯವರು ಭಾವಿ ಪತಿಯ ವಿರುದ್ಧ ದೂರು ನೀಡಿದರು. ಪೊಲೀಸ್‌ ಸಮ್ಮುಖದಲ್ಲಿ ಯುವತಿಯ ಅಂತಿಮ ದರ್ಶನಕ್ಕೆ ಬಂದ ಆತ ಮೃತದೇಹವನ್ನು ವರಿಸಿದ್ದಾನೆ. ಈ ದೃಶ್ಯ ನೋಡಿ ಅಲ್ಲಿದ್ದವರು ಕಣ್ಣಂಚು ಒದ್ದೆಯಾಗಿದೆ (Viral News). ಜಾರ್ಖಂಡ್‌ನ ಗಿರಿದಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವೈರಲ್‌ ಆಗಿದೆ.

ಸದ್ಯ ಯುವತಿಯ ಸಾವಿಗೆ ಯುವಕನೇ ಕಾರಣ ಎನ್ನುವ ಆರೋಪ ಕೇಳಿ ಬಂದಿದ್ದು, ಆತನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತ ಯುವಕನನ್ನು ಮನೀಶ್‌ ಮುರ್ಮು ಎಂದು ಗುರುತಿಸಲಾಗಿದೆ.

ಘಟನೆ ವಿವರ

ಮನೀಶ್‌ ಮುರ್ಮು ಮತ್ತು ಯುವತಿಯ ನಿಶ್ಚಿತಾರ್ಥ 4 ತಿಂಗಳ ಹಿಂದೆ ನಡೆದಿತ್ತು. ಮನೆಯವರ ಒಪ್ಪಿಗೆ ಮೇರೆಗೆ ಇಬ್ಬರು ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದರು. ನಿಶ್ಚಿತಾರ್ಥ ಮುಗಿಯುತ್ತಿದ್ದಂತೆ ಮನೀಶ್‌ ಮುರ್ಮು ತನ್ನ ಭಾವಿ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ. ಅಚ್ಚರಿ ಎಂದರೆ ಇದುವರೆಗೆ ಸುಮ್ಮನಿದ್ದ ಆಕೆಯ ಮನೆಯವರು ಆಕೆ ಮೃತಪಡುತ್ತಿದ್ದಂತೆ ಆಕೆಯನ್ನು ಬಲವಂತವಾಗಿ ಮನೀಶ್‌ ಮುರ್ಮು ಕರೆ ತಂದಿದ್ದ ಎಂದು ದೂರಿದ್ದಾರೆ.

ಯುವತಿಯ ಸಾವಿಗೆ ಮನೀಶ್‌ ಕಾರಣ ಎಂದು ಆಕೆಯ ತಂದೆ ದೂರು ನೀಡಿದ್ದಾರೆ. ಅದರಂತೆ ಮನೀಶ್‌ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಮನೀಶ್‌ ಮತ್ತು ಆಕೆ 4 ತಿಂಗಳಿಂದ ಲಿವಿಂಗ್‌ ಟುಗೆದರ್‌ನಲ್ಲಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ʼʼಆದಷ್ಟು ಬೇಗ ಮದುವೆ ಮಾಡುವಂತೆ ಆಗ್ರಹಿಸುತ್ತಲೇ ಇದ್ದೆವುʼʼ ಎಂದು ಯುವತಿ ಮನೆಯವರು ತಿಳಿಸಿದ್ದಾರೆ.

ಕಾಸರಗೋಡಿನ ಇನ್‌ಫ್ಲುಯೆನ್ಸರ್‌ ಚಿನ್ನು ಪಾಪು ಆತ್ಮಹತ್ಯೆಯ ಬಳಿಕ ಪ್ರಿಯಕರನೂ ಸಾವಿಗೆ ಶರಣು

ನಾಟಕೀಯ ಬೆಳವಣಿಗೆ

ಶುಕ್ರವಾರ (ಮೇ 15) ಮನೀಶ್‌ ಮನೆಯವರು ಯುವತಿಯ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಮಾಹಿತಿ ನೀಡಿದರು. ಹೀಗಾಗಿ ಧಾವಿಸಿ ಬಂದ ಆಕೆಯ ಮನೆಯವರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಾಗಲೇ ವೈದ್ಯರು ಯುವತಿ ಮೃತಪಟ್ಟಿದ್ದಾಗಿ ಘೋಷಿಸಿದರು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಿದರು. ಬಳಿಕ ಎರಡೂ ಕಡೆಯವರು ಮೃತದೇಹ ಪಡೆದುಕೊಳ್ಳಲು ನಿರಾಕರಿಸಿದ ಘಟನೆಯೂ ನಡೆಯಿತು.

ನಂತರ ಮೃತದೇಹವನ್ನು ಸ್ಥಳೀಯ ಪೊಲೀಸ್‌ ಠಾಣೆಗೆ ಕೊಂಡೊಯ್ಯಲಾಯಿತು. ಇಡೀ ದಿನ ಮೃತದೇಹ ಅಲ್ಲಿತ್ತು. ಶನಿವಾರ ಪೊಲೀಸರು ಮೃತದೇಹವನ್ನು ಮನೀಶ್‌ನ ಗ್ರಾಮಕ್ಕೆ ಸಾಗಿಸಿದರು. ಮನೀಶ್‌ ನಿರಂತರವಾಗಿ ಹಲ್ಲೆ ನಡೆಸಿದ್ದರಿಂದ ಆಕೆ ಮೃತಪಟ್ಟಿದ್ದಾಗಿ ಯುವತಿಯ ತಂದೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಅದಾಗಲೇ ಆತನನ್ನು ವಶಕ್ಕೆ ಪಡೆದಿದ್ದರು.

ಪೊಲೀಸರ ಸಮ್ಮುಖದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ಆಗಮಿಸಿದ ಮನೀಶ್‌ ಅಕ್ಷರಶಃ ಕುಸಿದು ಹೋಗಿದ್ದ. ಬಳಿಕ ಆಕೆಯ ಹಣೆಗೆ ಕುಂಕುಮ ಹಚ್ಚಿ, ಮೃತದೇಹಕ್ಕೆ ಮದುವೆಯ ವಿಧಿ ವಿಧಾನಗಳನ್ನು ಹನಿಗಣ್ಣಿನಿಂದಲೇ ನೆರವೇರಿಸಿದ. ಸದ್ಯ ಯುವತಿಯ ಸಾವಿಗೆ ಕಾರಣವೇನು ಎನ್ನುವುದು ಇನ್ನೂ ನಿಗೂಢವಾಗಿದ್ದು, ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರ ಬೀಳಲಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author