ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬುದ್ಧ ದೇಗುಲದಲ್ಲಿನ 20 ನಿಮಿಷಗಳ ವಿಳಂಬ 31 ಕೇರಳಂ ಪ್ರವಾಸಿಗರ ಜೀವ ಉಳಿಸಿತು; ಕೂದಲೆಳೆ ಅಂತರದಲ್ಲಿ ಪಾರಾದ ರೋಮಾಂಚನಕಾರಿ ಅನುಭವ ಹಂಚಿಕೊಂಡ ಯಾತ್ರಿಕರು

Nepal Flood: ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಸಿಲುಕಿ ನೂರಾರು ಭಾರತೀಯರು ಅತಂತ್ರಗೊಂಡಿದ್ದಾರೆ. ಈ ಪೈಕಿ ಇದೀಗ 31 ಕೇರಳಿಗರು ತವರಿಗೆ ಮರಳಿದ್ದಾರೆ. ಪ್ರವಾಹದ ಭೀಕರ ಅನುಭವವನ್ನು ಅವರು ವಿವರಿಸಿದ್ದು, ಬುದ್ಧ ದೇಗುಲದಲ್ಲಿನ ವಿಳಂ ಹೇಗೆ ತಮ್ಮ ಜೀವ ಉಳಿಸಿತು ರಂದು ತಿಳಿಸಿದ್ದಾರೆ.

ನೇಪಾಳ ಪ್ರವಾಹದ ದೃಶ್ಯ

ತಿರುವನಂತಪುರಂ, ಆ. 30: ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದ ದಿಢೀರ್‌ ಪ್ರವಾಹ ಹಲವರ ಜೀವವನ್ನೇ ಕಸಿದುಕೊಂಡರೆ, ಇನ್ನು ಕೆಲವರ ಬದುಕನ್ನು ಅತಂತ್ರಗೊಳಿಸಿದೆ (Nepal Floods). ಸ್ಥಳೀಯರು ಮಾತ್ರವಲ್ಲದೆ ಪ್ರವಾಸಕ್ಕೆ ತೆರಳಿದ್ದ ಭಾರತೀಯರು ಕೂಡ ಈ ಹೊಡೆತಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ. ಇದೀಗ ಈ ಪೈಕಿ ಕೆಲವರು ತಾಯ್ನಾಡಿಗೆ ಮರಳಿದ್ದಾರೆ. ಜತೆಗೆ ಅವರು ಅಲ್ಲಿ ಎದುರಿಸಿದ ಭಯಾನಕ ಅನುಭವಗಳನ್ನು ತೆರೆದಿಟ್ಟಿದ್ದಾರೆ. ಅದರಲ್ಲೂ ಕೇರಳಂನ 31 ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪ್ರವಾಹದ ಹೊಡೆತದಿಂದ, ಸಾವಿನಿಂದ ತಪ್ಪಿಸಿಕೊಂಡಿದ್ದು, ಮರುಜನ್ಮ ಪಡೆದುಕೊಂಡಿರುವುದಾಗಿ ಹೇಳಿದ್ದಾರೆ. ಬುದ್ಧ ದೇಗುಲದಲ್ಲಿ ಸುಮಾರು 20 ನಿಮಿಷ ತಡವಾಗಿದ್ದರಿಂದ ತಮ್ಮ ಜೀವ ಉಳಿಯಿತು ಎಂದು ಹೇಳಿದ್ದಾರೆ.

ಪ್ರವಾಹ ಪೀಡಿತ ನೇಪಾಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮಕ್ಕಳು, ವೃದ್ಧರು, ಮಹಿಳೆಯರನ್ನೊಳಗೊಂಡ 31 ಪ್ರವಾಸಿಗರ ಗುಂಪು ಭಾನುವಾರ (ಆಗಸ್ಟ್‌ 30) ಸುರಕ್ಷಿತವಾಗಿ ಕೊಚ್ಚಿಗೆ ಬಂದಿಳಿಯಿತು. ತವರಿಗೆ ಮರಳುವ ಆಸೆಯನ್ನೇ ಕೈಬಿಟ್ಟಿದ್ದ ಕೆಲವರು ಸುರಕ್ಷಿತವಾಗಿ ವಿಮಾನ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ತಮ್ಮ ಸಂಬಂಧಿಕರನ್ನು ಕಂಡು ಭಾವುಕರಾಗಿ ಕಣ್ಣೀರಿಟ್ಟರು.

ನೇಪಾಳದಿಂದ ಸುರಕ್ಷಿತವಾಗಿ ತವರಿಗೆ ಬಂದಿಳಿದ ಕೇರಳಂ ಪ್ರವಾಸಿಗರು:



ಕಠ್ಮಂಡುವಿನಿಂದ ಪೋಖರಾಗೆ ಪ್ರಯಾಣಿಸುತ್ತಿದ್ದಾಗ ಹಠಾತ್ ಪ್ರವಾಹ ಅಪ್ಪಳಿಸಿತು ಎಂದು ಪ್ರವಾಸಿಗರ ಗುಂಪು ಹೇಳಿದೆ. ಕಣ್ಣೆದುರೇ, ಕ್ಷಣಾರ್ಧದಲ್ಲಿ ಕಟ್ಟಡಗಳು ಕೊಚ್ಚಿ ಹೋದ ಭಯಾನಕ ಅನುಭವವನ್ನು ನೆನಪಿಸಿಕೊಂಡಿದ್ದಾರೆ. ಸೂಕ್ತ ಆಹಾರ, ಮೂಲಭೂತ ಅಗತ್ಯಗಳನ್ನು ಪಡೆದುಕೊಳ್ಳಲು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಲೆದಾಡಿದ್ದನ್ನು ಸ್ಮರಿಸಿಕೊಂಡಿದ್ದಾರೆ.

ನೇಪಾಳ ಪ್ರವಾಹ: ಸುರಕ್ಷಿತವಾಗಿ ದೆಹಲಿಗೆ ಬಂದಿಳಿದ 21 ಮಂದಿ ತಮಿಳುನಾಡಿನ ಯಾತ್ರಿಕರು

ಕೂದಲೆಳೆ ಅಂತರದಲ್ಲಿ ಪಾರು

ಈ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾದ ರೀತಿಯನ್ನು ವಿವರಿಸಿದ್ದಾರೆ. ʼʼಮಹಿಳೆಯರು ಮತ್ತೂ 20-25 ನಿಮಿಷ ಹೆಚ್ಚುವರಿಯಾಗಿ ಬುದ್ಧ ದೇಗುಲದಲ್ಲಿ ತಂಗಲು ಕೋರಿಕೊಂಡಿದ್ದರಿಂದ ಭೀಕರ ಆಪತ್ತಿನಿಂದ ಪಾರಾದೆವು. ದಿಢೀರ್‌ ಆಗಿ ಕಾಣಿಸಿಕೊಂಡ ಪ್ರವಾಹವು ನಾವು ತೆರಳಬೇಕಾಗಿದ್ದ ರಸ್ತೆ, ಸೇತುವೆಯನ್ನು ಕೊಚ್ಚಿಕೊಂಡು ಹೋಗಿತ್ತು. ಜೀವ ಉಳಿದುಕೊಂಡರೂ ನಾವು ಹೊರ ಬರಲಾಗದೆ ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದೆವುʼʼ ಎಂದು ತಿಳಿಸಿದ್ದಾರೆ.

ʼʼಕಠ್ಮಂಡುವಿನಿಂದ ಪೊಖಾರಗೆ ತೆರಳುತ್ತಿದ್ದ ನಮ್ಮನ್ನು ಪೊಲೀಸರು ತಡೆದು ನಿಲ್ಲಿಸಿದರು. ನಮ್ಮ ಕಣ್ಣೆದುರೇ ಪ್ರವಾಹ ನುಗ್ಗಿ ಬಂದು ಕಟ್ಟಡಗಳನ್ನೆಲ್ಲ ನೆಲಸಮಗೊಳಿಸಿತು. ಕ್ಷಣಾರ್ಧದಲ್ಲೇ ಅಲ್ಲಿ ಬಯಲು ನಿರ್ಮಾಣವಾಯಿತುʼʼ ಎಂದು ಮತ್ತೊಬ್ಬರು ವಿವರಿಸಿದ್ದಾರೆ.

ಇನ್ನು ಮಹಿಳೆಯರು ಆ ದಿನ ರಾತ್ರಿ ಎದುರಿಸಿದ ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ʼʼಸುರಕ್ಷಿತ ಜಾಗವನ್ನು ಹುಡುಕುತ್ತ ಆ ದಿನ ರಾತ್ರಿ ಅಲೆದಾಡಿದೆವು. ಆಹಾರ ಸೇರಿ ಯಾವುದೇ ಮೂಲಭೂತ ಸೌಕರ್ಯವೂ ಇರಲಿಲ್ಲ. ಅಲೆದಾಡುತ್ತಲೇ ಆ ರಾತ್ರಿ ಕಳೆದವು. ಆಗ ನಾವೆಷ್ಟು ಭಯಾನಕ ಸ್ಥಿತಿಯಲ್ಲಿದ್ದೇವೆ ಎನಿಸಿತು. ಅದಾದ ಬಳಿಕ ಮರುದಿನ ದುರಂತದಲ್ಲಿ ಅನೇಕರು ಮೃತಪಟ್ಟಿದ್ದಾರೆ ಎಂದು ತಿಳಿಯಿತು. ಈ ಪರಿಸ್ಥಿತಿಗೆ ಹೋಲಿಸಿದರೆ ನಮ್ಮ ಸ್ಥಿತಿ ಎಷ್ಟೋ ಪಾಲು ಉತ್ತಮ ಎನಿಸಿದ್ದು ಸುಳ್ಳಲ್ಲʼʼ ಎಂದು ತಿಳಿಸಿದ್ದಾರೆ. ಈ ಗುಂಪು ಸಮಯಕ್ಕೆ ಸರಿಯಾಗಿ ಬುದ್ಧ ದೇಗುಲದಿಂದ ತೆರಳಿದ್ದರೆ ಪ್ರವಾಹಕ್ಕೆ ಸಿಲುಕುವ ಅಪಾಯವಿತ್ತು. ಪ್ರವಾಸಿಗರು ತೆರಳಬೇಕಿದ್ದ ಮಾರ್ಗದಲ್ಲಿ ನದಿ ಮೇರೆ ಮೀರಿ ಹರಿದಿತ್ತು.

ನೇಪಾಳ ಪ್ರವಾಹದ ಬಳಿಕ ಚೀನಾದ ಮೆಗಾ ಡ್ಯಾಂ ಆತಂಕ: ಭಾರತದ ಮಗ್ಗುಲಲ್ಲೇ ಇದೆ ಡ್ರ್ಯಾಗನ್‌ ದೇಶದ ʼವಾಟರ್‌ ಬಾಂಬ್‌ʼ

ಸದ್ಯ ಕೇಂದ್ರ ಸರ್ಕಾರ ನೇಪಾಳ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಇನ್ನೂ ಪತ್ತೆಯಾಗದ ಪ್ರವಾಸಿಗರ ಪತ್ತೆಗಾಗಿ ಮನವಿ ಮಾಡಿದೆ. ಜತೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author