ದೆಹಲಿ, ಜು. 25: ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರಿಂದ ತೆರವಾದ ಕೇಂದ್ರ ಶಿಕ್ಷಣ ಖಾತೆಯನ್ನು ಬಿಜೆಪಿ ಹಿರಿಯ ನಾಯಕ, ಕರ್ನಾಟಕದ ಪ್ರಲ್ಹಾದ್ ಜೋಶಿ (Pralhad Joshi) ಹೊತ್ತುಕೊಂಡಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಹೊತ್ತಿಕೊಂಡ ವಿರೋಧದ ಕಿಡಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆವರೆಗೆ ಬಂದು ತಲುಪಿದೆ. ಕಾಕ್ರೋಚ್ ಜನತಾ ಪಾರ್ಟಿ, ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಪ್ರಧಾನ್ ಹುದ್ದೆಯಿಂದ ಕೆಳಗಿಳಿದಿದ್ದು, ಕೇಂದ್ರ ಸಚಿವ ಜೋಶಿ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ನೂತನ ಶಿಕ್ಷಣ ಸಚಿವರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಜೋಶಿ ಈ ಜವಾಬ್ದಾರಿಯನ್ನು ಮಾನವೀಯತೆಯಿಂದ, ನಿಷ್ಠೆಯಿಂದ ನಿರ್ವಹಿಸುವುದಾಗಿ ತಿಳಿಸಿದರು. ಜತೆಗೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.
"ಪ್ರಧಾನಿ ನನ್ನ ಮೇಲೆ ನಂಬಿಕೆ ಇಟ್ಟು ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದಾರೆ. ಸಂಪೂರ್ಣ ನಮ್ರತೆ ಮತ್ತು ಜವಾಬ್ದಾರಿಯೊಂದಿಗೆ ನಾನು ಈ ಕರ್ತವ್ಯವನ್ನು ಪೂರೈಸುತ್ತೇನೆ. ಈ ಮಹತ್ವದ ಜವಾಬ್ದಾರಿಯನ್ನು ನನಗೆ ನೀಡಿದ್ದಕ್ಕಾಗಿ ಮತ್ತು ನನ್ನ ಮೇಲೆ ವಿಶ್ವಾಸವನ್ನು ಇರಿಸಿದ್ದಕ್ಕಾಗಿ ನಾನು ಪ್ರಧಾನಿಗೆ ಧನ್ಯವಾದ ಹೇಳುತ್ತೇನೆ. ಅವರ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ, ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಮತ್ತು ಈ ಇಲಾಖೆಯಲ್ಲಿನ ಅವರ ನಿರೀಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತೇನೆ. ಸಂಪೂರ್ಣ ಸಮರ್ಪಣೆ, ನಮ್ರತೆ ಮತ್ತು ಪ್ರಾಮಾಣಿಕತೆಯಿಂದ ನಾನು ಈ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆʼʼ ಎಂದರು.
ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ:
ಪ್ರಧಾನ್ ಬಗ್ಗೆ ಮೆಚ್ಚುಗೆ
ಇದೇ ವೇಳೆ ಅವರು ನಿರ್ಗಮಿತ ಸಚಿವ ಪ್ರಧಾನ್ ಅವರ ಕಾರ್ಯ ನಿರ್ವಹಣೆಗೆ ಮೆಚ್ಚುಗೆ ಸೂಚಿಸಿದರು. ʼʼನರೇಂದ್ರ ಮೋದಿ ನೇತೃತ್ವದ ಸರ್ಕಾರ 12 ವರ್ಷಗಳಲ್ಲಿ ಅನೇಕ ಐತಿಹಾಸಿಕ ಸಾಧನೆ ಮಾಡಿದೆ. ನಾಲ್ಕೈದು ವರ್ಷಗಳಲ್ಲಿ ಧರ್ಮೇಂದ್ರ ಪ್ರಧಾನ್ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಸೇರಿ ಹಲವು ಪ್ರಮುಖ ಯೋಜನೆ ಜಾರಿಗೆ ತಂದಿದ್ದಾರೆ. ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ದೇಶವು ಗಮನಾರ್ಹ ಪ್ರಗತಿ ಸಾಧಿಸಿದೆ. ಪ್ರಧಾನ ಮಂತ್ರಿ ಅವರ ಮಾರ್ಗದರ್ಶನದಲ್ಲಿ, ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆʼʼ ಎಂದು ಪುನರುಚ್ಚರಿಸಿದರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನಂತರ ಕಾಕ್ರೋಚ್ ಜನತಾ ಪಾರ್ಟಿಯ ಮುಂದಿನ ನಡೆ ಏನು?
ಸಿಜೆಪಿ ಹೋರಾಟಕ್ಕೆ ಮಣಿದ ಕೇಂದ್ರ
ಮೇ 3ರಂದು ನಡೆದ ನೀಟ್‌ನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪರೀಕ್ಷೆಯನ್ನು ರದ್ದುಪಡಿಸಲಾಯಿತು. ಅದಾದ ಬಳಿಕ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂಬ ಕೂಗು ಕೇಳಿ ಬರತೊಡಗಿತು. ಕಾಕ್ರೋಚ್ ಜನತಾ ಪಾರ್ಟಿ ಈ ಆಗ್ರಹದೊಂದಿಗೆ ರಂಗಕ್ಕೆ ಇಳಿಯುವುದರೊಂದಿಗೆ ಹೋರಾಟದ ಚಿತ್ರಣವೇ ಬದಲಾಯಿತು. ದೆಹಲಿಯ ಜಂತರ್ ಮಂತರ್‌ನಲ್ಲಿ ಹಮ್ಮಿಕೊಂಡ ಸಿಜೆಪಿಯ ಪ್ರತಿಭಟನೆಗೆ ಸಾವಿರಾರು ವಿದ್ಯಾರ್ಥಿಗಳು, ಯುವ ಜನರು ಕೈ ಜೋಡಿಸಿದರು. ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಕೂಡ ಉಪವಾಸ ಕೈಗೊಂಡರು. ಪ್ರಧಾನ್ ರಾಜೀನಾಮೆ ನೀಡಬೇಕು ಎನ್ನುವುದೇ ಇವರೆಲ್ಲ ಪ್ರಮುಖ ಬೇಡಿಕೆಯಾಗಿತ್ತು. ಅದಂತೆ ಜುಲೈ 25ರಂದು ಪ್ರಧಾನ್ ರಾಜೀನಾಮೆ ಸಲ್ಲಿಸಿದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.