GST Reforms: ನಾಗರಿಕ ದೇವೋಭವ ಮಂತ್ರ ಜಪಿಸಿದ ಮೋದಿ; ಒಂದು ರಾಷ್ಟ್ರ ಒಂದು ತೆರಿಗೆ ಕನಸು ನನಸು ಎಂದ ಪ್ರಧಾನಿ
Narendra Modi: ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೊಸ ಜಿಎಸ್‌ಟಿ ಪದ್ಧತಿಯಿಂದ ಜನಸಾಮಾನ್ಯರಿಗೆ ಯಾವ ರೀತು ಅನುಕೂಲವಾಗಲಿದೆ ಎಂದು ವಿವರಿಸಿದರು. ಜತೆಗೆ ನಾಗರಿಕ ದೇವೋಭವ ಮಂತ್ರ ಜಪಿಸಿದ ಅವರು, ಸ್ವದೇಶಿ ಉತ್ಪನ್ನಗಳ ಬಳಕೆಗೆ ಕರೆ ನೀಡಿದರು.

-

ದೆಹಲಿ: ದೇಶವನ್ನು ಉದ್ದೇಶಿಸಿ ಭಾನುವಾರ (ಸೆಪ್ಟೆಂಬರ್ 21) ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಹೊಸ ಜಿಎಸ್‌ಟಿ (GST Reforms) ಪದ್ಧತಿಯಿಂದ ಜನಸಾಮಾನ್ಯರಿಗೆ ಯಾವ ರೀತು ಅನುಕೂಲವಾಗಲಿದೆ ಎಂದು ವಿವರಿಸಿದರು. ಜತೆಗೆ ನಾಗರಿಕ ದೇವೋಭವ ಮಂತ್ರ ಜಪಿಸಿದ ಅವರು, ಸ್ವದೇಶಿ ಉತ್ಪನ್ನಗಳ ಬಳಕೆಗೆ ಕರೆ ನೀಡಿದರು. ʼʼಕಳೆದ 11 ವರ್ಷಗಳಲ್ಲಿ ದೇಶದ 25 ಕೋಟಿ ಜನರು ಬಡತನದಿಂದ ಮೇಲೆ ಬಂದಿದ್ದಾರೆ. ಹೀಗೆ ಬಡತನದಿಂದ ಹೊರಬಂದು ನವ-ಮಧ್ಯಮ ವರ್ಗ ಎಂದು ಕರೆಯಲ್ಪಡುವ 25 ಕೋಟಿ ಜನರ ಗುಂಪು ದೇಶದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ವರ್ಗ ತನ್ನದೇ ಕನಸನ್ನು ಹೊಂದಿದೆ. ಜಿಎಸ್‌ಟಿ ಕಡಿತದಿಂದ ನವ ಮಧ್ಯಮ ಮತ್ತು ಮಧ್ಯಮ ವರ್ಗವು 2 ಪಟ್ಟು ಲಾಭ ಗಳಿಸಿದೆʼʼ ಎಂದು ಹೇಳಿದರು.
ʼʼಈ ಹಿಂದೆ ನಮ್ಮ ಸರ್ಕಾರ 12 ಲಕ್ಷ ರೂ.ವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಿ ಲಕ್ಷಾಂತರ ಮಂದಿಗೆ ಅನುಕೂಲ ಕಲ್ಪಿಸಿತ್ತು. ಇದೀಗ ಜಿಎಸ್‌ಟಿ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಮೂಲಕ ಬಡವರ ಕನಸು ನನಸಾಗಿಸಲು ಮುಂದಾಗಿದ್ದೇವೆʼʼ ಎಂದರು.
ಈ ಸುದ್ದಿಯನ್ನೂ ಓದಿ: Narendra Modi: ನಾಳೆಯಿಂದ ನವರಾತ್ರಿ ಜತೆಗೆ ಜಿಎಸ್‌ಟಿ ಉತ್ಸವ; ಪ್ರಧಾನಿ ಮೋದಿ ಬಣ್ಣನೆ
ʼʼ2014ರಲ್ಲಿ ದೇಶವು ನನಗೆ ಪ್ರಧಾನ ಮಂತ್ರಿಯ ಜವಾಬ್ದಾರಿಯನ್ನು ವಹಿಸಿದಾಗ, ಆ ಆರಂಭಿಕ ಅವಧಿಯಲ್ಲಿ ಒಂದು ಕುತೂಹಲಕಾರಿ ಘಟನೆ ವಿದೇಶಿ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದು ದೇಶದಲ್ಲಿನ ಕಂಪನಿಯ ತೊಂದರೆಗಳನ್ನು ವಿವರಿಸಿತ್ತು. ಬೆಂಗಳೂರಿನಿಂದ 570 ಕಿ.ಮೀ. ದೂರದಲ್ಲಿರುವ ಹೈದರಾಬಾದ್‌ಗೆ ತನ್ನ ಸರಕುಗಳನ್ನು ಕಳುಹಿಸಲು ತುಂಬ ಕಷ್ಟ ಪಡಬೇಕಾಗಿದೆ ಎಂದು ಕಂಪನಿ ಹೇಳಿದೆ ಎಂದು ವರದಿಯಲ್ಲಿ ಅಂದಿನ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಕಂಪನಿಯು ಮೊದಲು ತನ್ನ ಸರಕುಗಳನ್ನು ಬೆಂಗಳೂರಿನಿಂದ ಯುರೋಪಿಗೆ ಕಳುಹಿಸಿ ನಂತರ ಅದೇ ಸರಕುಗಳನ್ನು ಹೈದರಾಬಾದ್‌ಗೆ ಕಳುಹಿಸುವ ಪರಿಸ್ಥಿತಿ ಇತ್ತು ಎಂದು ವರದಿಯಲ್ಲಿ ವಿವರಿಸಲಾಗಿತ್ತುʼʼ ಎಂದು ತಿಳಿಸಿದರು.
ʼʼಆಗ ತೆರಿಗೆಗಳು ಮತ್ತು ಸುಂಕಗಳ ಸಂಕೀರ್ಣತೆ ಹಾಗಿತ್ತು. ಆ ವೇಳೆ ವಿವಿಧ ತೆರಿಗೆಗಳ ಜಟಿಲತೆಯಿಂದ ಕಂಪನಿಗಳು ಸಮಸ್ಯೆ ಎದುರಿಸುತ್ತಿದ್ದವು. ಒಂದು ನಗರದಿಂದ ಇನ್ನೊಂದು ನಗರಕ್ಕೆ ಸರಕುಗಳನ್ನು ಸಾಗಿಸಲು ಹೆಚ್ಚಿನ ವೆಚ್ಚ ಭರಿಸಬೇಕಾಗಿತ್ತು. ಹೀಗಾಗಿ ಈ ವ್ಯವಸ್ಥೆಯಿಂದ ದೇಶವನ್ನು ಕಾಪಾಡಲುವುದು ಅಗತ್ಯವಾಗಿತ್ತುʼʼ ಎಂದರು.
ʼʼನಮಗೆ ಅಧಿಕಾರ ನೀಡಿದಾಗ ಜಿಎಸ್‌ಟಿಯ ಜಾರಿಯನ್ನು ಆದ್ಯತೆಯನ್ನಾಗಿ ಪರಿಗಣಿಸಿದೆವು. 2017ರಲ್ಲಿ ಜಿಎಸ್‌ಟಿ ಜಾರಿಗೆ ತರುವ ಮೂಲಕ ಇರಿಹಾಸ ನಿರ್ಮಿಸಿದೆವು. ಆಕ್ಟ್ರಾಯ್, ಪ್ರವೇಶ ತೆರಿಗೆ, ಮಾರಾಟ ತೆರಿಗೆ, ಅಬಕಾರಿ, ವ್ಯಾಟ್, ಸೇವಾ ತೆರಿಗೆ ಹೀಗೆ ನಮ್ಮ ದೇಶದಲ್ಲಿ ಹಲವು ತೆರಿಗೆಗಳು ಅಸ್ತಿತ್ವದಲ್ಲಿದ್ದವುʼʼ ಎಂದು ಹೇಳಿದರು.
ಸ್ಥಳೀಯ ಕೈಗಾರಿಕೆಗಳನ್ನು ಬೆಂಬಲಿಸುವ ಮಹತ್ವವನ್ನು ಎತ್ತಿ ತೋರಿಸಿದ ಅವರು, "ನಾವು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಬೇಕು. ನಮ್ಮ ದೇಶದ ಯುವಕರ ಕಠಿಣ ಪರಿಶ್ರಮಕ್ಕೆ ಬೆಲೆ ನೀಡಬೇಕು. ನಾವು ಪ್ರತಿಯೊಂದು ಮನೆಯನ್ನು ಸ್ವದೇಶಿಯ ಸಂಕೇತವನ್ನಾಗಿ ಮಾಡಬೇಕು ಮತ್ತು ಪ್ರತಿಯೊಂದು ಅಂಗಡಿಯನ್ನು ಸ್ವದೇಶಿಯಿಂದ ಅಲಂಕರಿಸಬೇಕು" ಎಂದು ಕರೆ ನೀಡಿದರು.