ED Raid: ಭರ್ಜರಿ ಇಡಿ ರೇಡ್! ದೆಹಲಿ ಉದ್ಯಮಿಗೆ ಸೇರಿದ 80 ಕೋಟಿ ರೂ. ವಿದೇಶಿ ಆಸ್ತಿ ವಶಕ್ಕೆ
ದೆಹಲಿ ಮೂಲದ ಇಂಪೀರಿಯಲ್ ಗ್ರೂಪ್‌ನ ಅಧ್ಯಕ್ಷ ಮನ್ವಿಂದರ್ ಸಿಂಗ್ ಅವರ ಕುಟುಂಬ ಮತ್ತು ಸಹಚರರಿಗೆ ಸೇರಿದ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಸೆಪ್ಟೆಂಬರ್ 19 ಮತ್ತು 20 ರಂದು ಹಿಮಾಚಲ ಪ್ರದೇಶ ಮತ್ತು ದೆಹಲಿಯಾದ್ಯಂತ ಆರು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಂಘಟಿತ ದಾಳಿಗಳನ್ನು ನಡೆಸಿದ್ದು, 80 ಕೋಟಿ ರೂ. ಮೌಲ್ಯದ ವಿದೇಶಿ ಆಸ್ತಿಯನ್ನು ವಶಕ್ಕೆ ಪಡೆದಿದೆ.

-

ನವದೆಹಲಿ: ಜಾರಿ ನಿರ್ದೇಶನಾಲಯ (Enforcement Directorate)ವು ದೆಹಲಿ (Delhi) ಮೂಲದ ಇಂಪೀರಿಯಲ್ ಗ್ರೂಪ್‌ನ ಅಧ್ಯಕ್ಷ ಮನ್ವಿಂದರ್ ಸಿಂಗ್ ( Imperial Groups chairman Manvinder Singh), ಅವರ ಪತ್ನಿ ಸಗ್ರಿ ಸಿಂಗ್ ಮತ್ತು ಅವರ ಸಹಚರರಿಗೆ ಸೇರಿದ ಆಸ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಸುಮಾರು 80 ಕೋಟಿ ರೂ. ಮೌಲ್ಯದ ವಿದೇಶಿ ಆಸ್ತಿಯನ್ನು (foreign stash) ವಶಕ್ಕೆ ಪಡೆದಿದೆ. ಸೆಪ್ಟೆಂಬರ್ 19 ಮತ್ತು 20 ರಂದು ಹಿಮಾಚಲ ಪ್ರದೇಶ ಮತ್ತು ದೆಹಲಿಯಾದ್ಯಂತ ಆರು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಈ ದಾಳಿ ನಡೆಸಲಾಗಿದ್ದು, 80 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಬೇನಾಮಿ ವಿದೇಶಿ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಮನ್ವಿಂದರ್ ಸಿಂಗ್ ಮತ್ತು ಸಗ್ರಿ ಸಿಂಗ್ ಹಲವಾರು ವಿದೇಶಿ ಕಂಪೆನಿಗಳು ಮತ್ತು ಆಸ್ತಿಗಳಲ್ಲಿ ಬೇನಾಮಿಯಾಗಿ ಹೂಡಿಕೆ ಮಾಡಿರುವುದು ತನಿಖೆ ವೇಳೆ ಕಂಡು ಬಂದಿದೆ.
ಸಿಂಗಾಪುರ ಮೂಲದ ಏರೋಸ್ಟಾರ್ ವೆಂಚರ್ ಪ್ರೈವೇಟ್ ಲಿಮಿಟೆಡ್, ದುಬೈನ ಯುನೈಟೆಡ್ ಏರೋಸ್ಪೇಸ್ ಡಿಡಬ್ಲ್ಯೂಸಿ ಎಲ್‌ಎಲ್‌ಸಿಯಲ್ಲಿನ ಆಸ್ತಿಗಳೂ ಇದರಲ್ಲಿ ಸೇರಿವೆ. ಈ ಸಂಸ್ಥೆಗಳು ದುಬೈ ಮೂಲಕ ನಡೆಸಲಾದ ಕೋಟ್ಯಂತರ ಮೌಲ್ಯದ ಅಸುರಕ್ಷಿತ ಸಾಲಗಳು, ವೇತನ ಪಾವತಿಗಳನ್ನು ಒಳಗೊಂಡ ಸಂಕೀರ್ಣ ವಹಿವಾಟು ಜಾಲದಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಕಂಡು ಬಂದಿದೆ.
ಮನ್ವಿಂದರ್ ಸಿಂಗ್ ದಂಪತಿ ದುಬೈ ಮೂಲದ ಕಂಪೆನಿಯು ಕಳೆದ ಮೇ ತಿಂಗಳಲ್ಲಿ 7 ಕೋಟಿ ರೂ. ಮೌಲ್ಯದ ರಾಬಿನ್ಸನ್- 66 ಹೆಲಿಕಾಪ್ಟರ್ ಅನ್ನು ಖರೀದಿಸಿದೆ. ಇದಕ್ಕಾಗಿ ಹಾಂಗ್ ಕಾಂಗ್ ಮೂಲದ ಸಂಸ್ಥೆಯಿಂದ ಸಾಲ ನೀಡಿದೆ. ಈ ಹೆಲಿಕಾಪ್ಟರ್ ಅನ್ನು ಹಿಮಾಚಲ ಪ್ರದೇಶದ ಔರಮಾ ಕಣಿವೆ ಯೋಜನೆಗಾಗಿ ಭಾರತಕ್ಕೆ ತರಲಾಗಿದೆ ಎಂದು ಇಡಿ ಹೇಳಿದೆ.
ಮನ್ವಿಂದರ್ ಸಿಂಗ್ ದಂಪತಿ ದುಬೈ ಘಟಕದಲ್ಲಿ ಸುಮಾರು 38 ಕೋಟಿ ರೂ. ಮೌಲ್ಯದ ವಿದೇಶಿ ಆಸ್ತಿಗಳನ್ನು ಹೊಂದಿದ್ದಾರೆ. ಅಲ್ಲದೇ ಥೈಲ್ಯಾಂಡ್‌ನ ಕೊಹ್ ಸಮುಯಿಯಲ್ಲಿರುವ ಐಷಾರಾಮಿ ವಿಲ್ಲಾ ಸಮಯ್ರಾ ಮೌಲ್ಯ ಅಂದಾಜು 16 ಕೋಟಿ ರೂ. ಗಳಾಗಿವೆ.ಇದರಲ್ಲಿ ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ನೋಂದಾಯಿಸಲಾದ ಕಂಪೆನಿಗಳು, ಸಿಂಗಾಪುರದಲ್ಲಿರುವ ವಿದೇಶಿ ಬ್ಯಾಂಕ್ ಖಾತೆಗಳು ಸೇರಿವೆ.
ಇದನ್ನೂ ಓದಿ: Narendra Modi: ನಾಳೆಯಿಂದ ನವರಾತ್ರಿ ಜತೆಗೆ ಜಿಎಸ್‌ಟಿ ಉತ್ಸವ; ಪ್ರಧಾನಿ ಮೋದಿ ಬಣ್ಣನೆ
ಶಿಮ್ಲಾದ ನಾಲ್ದೇರಾದಲ್ಲಿರುವ ಔರಮಾ ಕಣಿವೆ ಯೋಜನಾ ಸ್ಥಳದಲ್ಲಿ ದಾಳಿ ನಡೆಸಿರುವ ಇಡಿ ಅಪಾರ ಪ್ರಮಾಣಡಾ ನಗದು ವ್ಯವಹಾರಗಳ ದಾಖಲೆಗಳನ್ನು ವಶಕ್ಕೆ ಪಡೆದಿವೆ. ಇದರಲ್ಲಿ ಅಪಾರ ಪ್ರಮಾಣದ ನಗದು ಹಣವನ್ನು ಅನಧಿಕೃತ ಮಾರ್ಗಗಳ ಮೂಲಕ ವಿದೇಶಗಳಿಗೆ ಸಾಗಿಸಲಾಗಿದೆ ಎಂದು ಇಡಿ ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಮುಂದುವರಿಸಲಾಗಿದ್ದು, ಇನ್ನು ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.