ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ನಾಳೆಯಿಂದ ನವರಾತ್ರಿ ಜತೆಗೆ ಜಿಎಸ್‌ಟಿ ಉತ್ಸವ; ಪ್ರಧಾನಿ ಮೋದಿ ಬಣ್ಣನೆ

GST 2.0: ಕೇಂದ್ರ ಸರ್ಕಾರ ಜಿಎಸ್‌ಟಿ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತಂದಿದ್ದು, ನಾಳೆ (ಸೆಪ್ಟೆಂಬರ್‌ 22) ಜಾರಿಗೆ ಬರಲಿದೆ. ಸ್ವಾತಂತ್ರ್ಯೋತ್ಸವದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಪ್ರದಾನಿ ನರೇಂದ್ರ ಮೋದಿ ಈ ವರ್ಷದ ದೀಪಾವಳಿ ಕೊಡಗೆಯಾಗಿ ಮುಂದಿನ ಪೀಳಿಗೆಯ ಜಿಎಸ್‌ಟಿಯನ್ನು ಪರಿಚಯಿಸುವುದಾಗಿ ತಿಳಿಸಿದ್ದರು. ಅದರ ಪ್ರಕಾರ 4ರ ಬದಲು 2 ಸ್ತರದ ಜಿಎಸ್‌ಟಿ ಇರಲಿದೆ. ಶೇ. 5 ಮತ್ತು ಶೇ. 18ರ ವ್ಯಾಪ್ತಿಯಲ್ಲಿ ವ್ಯಾಪಾರ ನಡೆಯುವುದಾಗಿ ಘೋಷಿಸಿದ್ದರು. ಇದರ ಜತೆಗೆ ಐಷರಾಮಿ ಮತ್ತು ಸಿಗರೇಟ್‌ನಂತಹ ಪಾಪಪೂರಿತ ವಸ್ಥುಗಳಿಗೆ ಶೇ. 40ರಷ್ಟು ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ. ದೇಶದ ಸಾಮಾನ್ಯ ಮತ್ತು ಬಡ ಜನತೆಗೆ ಅನುಕೂಲವಾಗುವ ಈ ವ್ಯವಸ್ಥೆ ನಾಳೆ ಜಾರಿಯಾಗಲಿರುವುದರಿಂದ ಮೋದಿ ಈ ಬಗ್ಗೆ ಮಾತನಾಡಿದ್ದಾರೆ.

ನಾಳೆಯಿಂದ ನವರಾತ್ರಿ ಜತೆಗೆ ಜಿಎಸ್‌ಟಿ ಉತ್ಸವ: ಮೋದಿ

-

Ramesh B Ramesh B Sep 21, 2025 5:15 PM

ಬೆಂಗಳೂರು: ಸೆಪ್ಟೆಂಬರ್‌ 22ರಂದು ಹೊಸ ಜಿಎಸ್‌ಟಿ (GST 2.0) ದರ ದೇಶಾದ್ಯಂತ ಜಾರಿಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶವನ್ನುದ್ದೇಶಿಸಿ ಮಾತನಾಡಿದರು. ಎಲ್ಲರಿಗೂ ನವರಾತ್ರಿಯ ಶುಭಾಶಯ ತಿಳಿಸಿ ಅವರು ಮಾತ ಆರಂಭಿಸಿದರು. ʼ‌ʼನವರಾತ್ರಿಯ ಮೊದಲ ದಿನವಾದ ನಾಳೆ ಜಿಎಸ್‌ಟಿ ಉತ್ಸವ ಆರಂಭವಾಗಲಿದೆ. ನಮ್ಮ ದೇಶದ ಬಡವರು, ಮಧ್ಯಮ ವರ್ಗದವರಿಗೆ ಹೊಸ ಜಿಎಸ್‌ಟಿ ದರದಿಂದ ಅನುಕೂಲವಾಗಲಿದೆ. ಇದು ದೇಶದ ಪ್ರಗತಿಗೆ ವೇಗ ನೀಡಲಿದೆʼʼ ಎಂದರು.

ʼʼದಶಕಗಳವರೆಗೆ ಜನರು ತೆರಿಗೆಯ ಬಲೆಯಲ್ಲಿ ಸಿಲುಕಿದ್ದರು. ಬೇರೆ ಬೇರೆ ರೀತಿಯ ತೆರಿಗೆ ಜನರನ್ನು ಹೈರಾಣಾಗಿಸುತ್ತಿತ್ತು. ಅದನ್ನು ನಾವು ಬದಲಾಯಿಸಿದ್ದೇವೆ. ಇದೀಗ ಒಂದು ದೇಶ ಒಂದು ತೆರಿಗೆ ಕನಸು ನನಸಾಗಿದೆ. ಜನರ ಹಿತ, ದೇಶದ ಹಿತ ಜಿಎಸ್‌ಟಿಯಲ್ಲಿ ಅಡಗಿದೆ. ಹಿಂದೆಲ್ಲ ಬೆಂಗಳೂರಿನಿಂದ ಯುರೋಪ್‌ಗೆ ಉತ್ಪನ್ನ ಕಳಿಸಲು ಕಷ್ಟವಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಔಷಧ, ಹಾಲು ಸೇರಿದಂತೆ ಎಲ್ಲ ಅಗತ್ಯ ವಸ್ತುಗಳು ಅಗ್ಗವಾಗಲಿದೆʼʼ ಎಂದು ತಿಳಿಸಿದರು.



"ನಾಳೆ, ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆ ಜಾರಿಗೆ ಬರಲಿದೆ. ಆ ಮೂಲಕ ಜಿಎಸ್‌ಟಿ ಉಳಿತಾಯ ಹಬ್ಬ ಆರಂಭವಾಗಲಿದೆ. ನಿಮ್ಮ ಉಳಿತಾಯ ಹೆಚ್ಚಾಗುತ್ತದೆ ಮತ್ತು ನೀವು ನಿಮ್ಮ ನೆಚ್ಚಿನ ವಸ್ತುಗಳನ್ನು ಸುಲಭವಾಗಿ ಖರೀದಿಸಬಹುದು" ಎಂದು ಅವರು ಹೇಳಿದರು. ʼʼಬಡವರು, ಮಧ್ಯಮ ವರ್ಗ, ಯುವಜನತೆ, ಮಹಿಳೆಯರು ಮತ್ತು ವ್ಯಾಪಾರಿಗಳು ಜಿಎಸ್‌ಟಿ ಸುಧಾರಣೆಯಿಂದ ಅಪಾರ ಪ್ರಯೋಜನ ಪಡೆಯುತ್ತಾರೆʼʼ ಎಂದರು.

"ಈ ಸುಧಾರಣೆಗಾಗಿ ನಾನು ಕೋಟ್ಯಂತರ ದೇಶದ ಜನರನ್ನು ಅಭಿನಂದಿಸುತ್ತೇನೆ. ಈ ಸುಧಾರಣೆ ವ್ಯವಹಾರವನ್ನು ಹೆಚ್ಚಿಸುತ್ತವೆ, ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸುತ್ತವೆ ಮತ್ತು ಪ್ರತಿಯೊಂದು ರಾಜ್ಯವು ರಾಷ್ಟ್ರದ ಅಭಿವೃದ್ಧಿಯಲ್ಲಿ ಸಮಾನ ಪಾಲುದಾರರಾಗುವುದನ್ನು ಖಚಿತಪಡಿಸುತ್ತದೆ" ಎಂದು ಪ್ರಧಾನಿ ಹೇಳಿದರು.

ʼʼಒಂದು ಕಾಲದಲ್ಲಿ ಶೇ. 12ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಸುಮಾರು ಶೇ. 99ರಷ್ಟು ಸರಕುಗಳನ್ನು ಶೇ. 5ರಷ್ಟು ತೆರಿಗೆ ವ್ಯಾಪ್ತಿಗೆ ತಂದಿದ್ದೇವೆ. ಈ ಹಿಂದೆ ಶೇ. 28ರಷ್ಟು ತೆರಿಗೆ ಇದ್ದ ಶೇ. 90ರಷ್ಟು ವಸ್ತುಗಳಿಗೆ ಶೇ. 18 ಜಿಎಸ್‌ಟಿ ಅನ್ವಯವಾಗಲಿದೆ. ಅದಾಗ್ಯೂ ಐಷಾರಾಮಿ ಮತ್ತು ಪಾಪದ ಸರಕುಗಳಿಗೆ ಶೇ. 40ರಷ್ಟು ಪರಿಹಾರ ಸೆಸ್ ವಿಧಿಸಲಾಗಿದೆʼʼ ಎಂದು ಅವರು ವಿವರಿಸಿದರು.

2017ರಲ್ಲಿ ತಮ್ಮ ಸರ್ಕಾರ ಜಾರಿಗೊಳಿಸಿದ ಜಿಎಸ್‌ಟಿ ವ್ಯವಸ್ಥೆ ಇತಿಹಾಸ ಎಂದು ಪ್ರಧಾನಿ ಹೇಳಿದರು. "ದಶಕಗಳಿಂದ, ನಮ್ಮ ಜನರು ವಿಭಿನ್ನ ತೆರಿಗೆಗಳ ಜಾಲದಲ್ಲಿ ಸಿಲುಕಿದ್ದರು. ಆದ್ದರಿಂದ ನಾವು ರಾಷ್ಟ್ರೀಯ ಹಿತಾಸಕ್ತಿಗಾಗಿ ಜಿಎಸ್‌ಟಿಯನ್ನು ಜಾರಿಗೆ ತಂದಿದ್ದೇವೆ. ನಾವು ಎಲ್ಲ ರಾಜ್ಯಗಳ ಆತಂಕವನ್ನು ಪರಿಹರಿಸಿದ್ದೇವೆ. ಎಲ್ಲ ರಾಜ್ಯಗಳ ಬೆಂಬಲದೊಂದಿಗೆ, ಈ ಬೃಹತ್ ತೆರಿಗೆ ಸುಧಾರಣೆಯನ್ನು ಜಾರಿಗೆ ತರಬಹುದು" ಎಂದು ಅವರು ಹೇಳಿದರು.

ಕಾಲಕ್ಕೆ ತಕ್ಕ ಬದಲಾವಣೆ

"ಕಾಲ ಬದಲಾದಾಗ, ದೇಶದ ಅಗತ್ಯಗಳು ಬದಲಾಗುತ್ತವೆ ಮತ್ತು ಮುಂದಿನ ಪೀಳಿಗೆಗೆ ಸುಧಾರಣೆಗಳು ಅಗತ್ಯ. ದೇಶದ ಪ್ರಸ್ತುತ ಸುಧಾರಣೆಗಳನ್ನು ಗಮನದಲ್ಲಿಟ್ಟುಕೊಂಡು, ಹೊಸ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ" ಎಂದು ಮೋದಿ ಹೇಳಿದರು.