ದೆಹಲಿ, ಆ. 10: ʼʼಜಂತರ್-ಮಂತರ್‌ನಲ್ಲಿ ಇತ್ತೀಚೆಗೆ ಸಿಜೆಪಿ ಆಯೋಜಿಸಿದ್ದ ಪ್ರತಿಭಟನೆ ವೇಳೆ ಯಾವ ಗುಂಡಿನ ದಾಳಿಯೂ ನಡೆದಿಲ್ಲ. ತಪ್ಪು ಮಾಹಿತಿ ನೀಡುವ ಮೂಲಕ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ (Rahul Gandhi) ಜನತೆಯ ದಾ ರಿ ತಪ್ಪಿಸುತ್ತಿದ್ದಾರೆʼʼ ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ (JP Nadda) ತಿಳಿಸಿದ್ದಾರೆ. ಜಂತರ್ ಮಂತರ್ ಪ್ರತಿಭಟನೆ ಸೇರಿ ಪ್ರತಿಯೊಂದು ವಿಚಾರವನ್ನೂ ಸಂಸತ್‌ನಲ್ಲಿ ಚರ್ಚಿಸಲು ಸರ್ಕಾರ ಸಿದ್ಧ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ದೆಹಲಿಯ ಪ್ರತಿಭಟನೆ ವೇಳೆ ಗುಂಡಿನ ದಾಳಿ ನಡೆಸಲು ಗೃಹ ಸಚಿವ ಅಮಿತ್ ಶಾ ಆದೇಶ ಹೊರಡಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದು, ಈ ಬಗ್ಗೆ ಚರ್ಚೆ ನಡೆಸಬೇಕೆಂದು ಆಗ್ರಹಿಸಿ ಸಂಸತ್ ಕಲಾಪ ನಡೆಸಲು ವಿಪಕ್ಷಗಳು ಅಡ್ಡಿ ಪಡಿಸುತ್ತಿರುವ ಹಿನ್ನೆಲೆಯಲ್ಲಿ ಜೆ.ಪಿ. ನಡ್ಡಾ ಈ ಹೇಳಿಕೆ ನೀಡಿದ್ದಾರೆ.
ಮಾಧ್ಯಮದ ಜತೆ ಮಾತನಾಡಿದ ಜೆ.ಪಿ. ನಡ್ಡಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದೂ ತಿಳಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಜೆ.ಪಿ. ನಡ್ಡಾ ಹೇಳಿಕೆ:
ʼʼಜಂತರ್ ಮಂತರ್‌ನಲ್ಲಿ ಯಾವುದೇ ಗುಂಡಿನ ದಾಳಿ ನಡೆದಿಲ್ಲ. ಗೊಂದಲ ಮೂಡಿಸುವ ಹೇಳಿಕೆಯನ್ನು ನೀಡುವುದನ್ನು, ದಾರಿ ತಪ್ಪಿಸುವ ಮಾಹಿತಿ ಹರಡುವುದನ್ನು ನಿಲ್ಲಿಸಿʼʼ ಎಂದು ವಿಪಕ್ಷಗಳಿಗೆ ಅವರು ಸೂಚಿಸಿದ್ದಾರೆ. ವಿಪಕ್ಷಗಳು ಸಂಸತ್‌ನಲ್ಲಿ ಎತ್ತುವ ಪ್ರತಿ ವಿಚಾರವನ್ನು ಚರ್ಚಿಸಲು ಅಮಿತ್ ಶಾ ಸಿದ್ಧ ಎಂದೂ ಘೋಷಿಸಿದ್ದಾರೆ.
ಕಾಂಗ್ರೆಸ್‌ನ ಇಬ್ಬಗೆಯ ನೀತಿಯನ್ನು ಪ್ರಶ್ನಿಸಿದ ಅವರು, ಸರ್ಕಾರ ಸಿದ್ಧವಿದ್ದರೂ ರಾಹುಲ್ ಗಾಂಧಿ ಚರ್ಚೆಯಿಂದ ತಪ್ಪಿಸಿಕೊಳ್ಳುತ್ತಿರುವ ರೀತಿಯನ್ನು ಖಂಡಿಸಿದ್ದಾರೆ. ʼʼಅಮಿತ್ ಶಾ ಪ್ರತಿ ಪ್ರಶ್ನೆಗೆ ಉತ್ತರಿಸಲು ಸಿದ್ಧ. ಆದರೆ ಕಾಂಗ್ರೆಸ್ ಓಡಿ ಹೋಗುತ್ತಿರುವುದೇಕೆ?ʼʼ ಎಂದು ಕೇಳಿದ್ದಾರೆ. "ಅವರ ಉದ್ದೇಶ ಮಾತುಕತೆಯಲ್ಲ, ವಿವಾದ. ಸದನ ನಡೆಯುವುದನ್ನು ಅವರು ಬಯಸುವುದಿಲ್ಲ. 15 ದಿನಗಳಿಂದ ವಿಪಕ್ಷವು ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಿದೆʼʼ ಎಂದು ಆರೋಪಿಸಿದ್ದಾರೆ.
ʼʼಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR), ಹಣದುಬ್ಬರ ಮತ್ತು ಜಂತರ್ ಮಂತರ್‌ನಲ್ಲಿನ ಬೆಳವಣಿಗೆ ಸೇರಿ ವಿಪಕ್ಷಗಳು ಕೋರಿರುವ ಎಲ್ಲ ವಿಷಯಗಳ ಕುರಿತು ಚರ್ಚೆಗೆ ಸರ್ಕಾರ ಒಪ್ಪಿಕೊಂಡಿದೆ. ಆದರೆ ಕಾಂಗ್ರೆಸ್ ಸದಸ್ಯರು ಭಾಗವಹಿಸದಿರಲು ನಿರ್ಧರಿಸಿದ್ದಾರೆʼʼ ಎಂದು ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಉಲ್ಲೇಖಿಸಿದ ನಡ್ಡಾ, ʼʼರಾಜ್ಯದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ಮುಳ್ಳುತಂತಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ಈ ಬಗ್ಗೆ ರಾಹುಲ್ ಗಾಂಧಿ ಮೌನ ತಾಳಿದ್ದಾರೆʼʼ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ನ ಡಬಲ್ ಸ್ಟ್ಯಾಂಡರ್ಡ್ ನೀತಿಗೆ ವಿರೋಧ
ಜಾರ್ಖಂಡ್‌ನಲ್ಲಿ ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್, ದೆಹಲಿ ಪ್ರತಿಭಟನೆಗಳ ಕುರಿತು ಕೇಂದ್ರವನ್ನು ಟೀಕಿಸುತ್ತಾ, ಅಲ್ಲಿನ ವಿದ್ಯಾರ್ಥಿಗಳ ಸಮಸ್ಯೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಡಬಲ್ ಸ್ಟ್ಯಾಂಡರ್ಡ್ ನೀತಿ ಅಳವಡಿಸಿಕೊಂಡಿದೆ ಎಂದು ಹೇಳಿರುವ ನಡ್ಡಾ, ಪಕ್ಷವು ರಚನಾತ್ಮಕ ಚರ್ಚೆಯಲ್ಲಿ ತೊಡಗಿಸಿಕೊಳ್ಳುವ ಬದಲು ಅರಾಜಕತೆ ಸೃಷ್ಟಿಸುವ ನಕಾರಾತ್ಮಕ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ.
"ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಳವಡಿಸಿಕೊಂಡ ಇಬ್ಬಗೆಯ ನೀತಿ ಅರಾಜಕತೆಯನ್ನು ಸೃಷ್ಟಿಸುವುದು, ನಕಾರಾತ್ಮಕ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದರತ್ತಲೇ ಗಮನ ಹರಿಸಿದೆ. ಬೇಜವಾಬ್ದಾರಿಯುತ ವಿರೋಧ ಪಕ್ಷ ದೇಶದ ಪ್ರಗತಿಗೆ ಯಾವ ಕೊಡುಗೆಯನ್ನೂ ನೀಡಲು ಸಾಧ್ಯವಿಲ್ಲʼʼ ಎಂದಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.