ಭೋಪಾಲ್, ಜೂ. 7: ದೇಶ ಎಷ್ಟು ಮುಂದುವರಿದರೂ ವೈದ್ಯಕೀಯ ವ್ಯವಸ್ಥೆ ಇನ್ನೂ ಸಾಕಷ್ಟು ಸುಧಾರಿಸಬೇಕಿದೆ ಎನ್ನುವುದನ್ನು ಸಾಬೀತುಪಡಿಸುವ ಅನೇಕ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಮತ್ತೊಂದು ಮನಕಲುಕುವ ದೃಶ್ಯ ಚರ್ಚೆ ಹುಟ್ಟು ಹಾಕಿದೆ. ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದ ಕಾರಣ 12 ವರ್ಷದ ಬಾಲಕನನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಮನೆಯವರೇ ಸ್ಟ್ರೆಚರ್‌ನಲ್ಲಿ ಮಲಗಿಸಿ ಸುಡು ಬಿಸಿಲಿನಲ್ಲೇ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಸ್ಪತ್ರೆಯ ಸಿಬ್ಬಂದಿಯಾಗಲೀ, ವಾರ್ಡ್ ವಾಯ್ ಆಗಲೀ ಇರಲಿಲ್ಲ. ಸದ್ಯ ಮಧ್ಯ ಪ್ರದೇಶದಲ್ಲಿ ನಡೆದ ಈ ಘಟನೆಯ ದೃಶ್ಯ ವೈರಲ್ ಆಗಿದ್ದು (Viral Video), ದೇಶದ ಆಸ್ಪತ್ರೆಯ ಅವ್ಯವಸ್ಥೆಯನ್ನು ತೆರೆದಿಟ್ಟಿದೆ.
ʼʼಆಂಬ್ಯಲೆನ್ಸ್ ವ್ಯವಸ್ಥೆ ಇಲ್ಲದ ಕಾರಣ ಇಂದೋರ್‌ನ ಮಹಾರಾಜ ಯಶ್ವಂತರಾವ್ ಆಸ್ಪತ್ರೆಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬಾಲಕನನ್ನು ಸುಡು ಬಿಸಿಲಿನಲ್ಲೇ ಕರೆದೊಯ್ಯಲಾಯಿತುʼʼ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಬಾಲಕನನ್ನು ಸ್ಟ್ರೆಚರ್‌ನಲ್ಲಿ ಸಾಗಿಸಿದ ಹೆತ್ತವರು:
12 ವರ್ಷದ ಆದರ್ಶ್‌ಗೆ ಬೆನ್ನುಮೂಳೆಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಎಂ.ವೈ. ಆಸ್ಪತ್ರೆಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಆತನನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಸುಡುವ ಬಿಸಿಲಿನಲ್ಲೇ 1 ಕಿಲೋ ಮೀಟರ್ ತಳ್ಳಿಕೊಂಡು ಹೋಗಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
15 ವರ್ಷದ ಬುಡಕಟ್ಟು ಬಾಲಕಿಯ ಮೃತದೇಹವನ್ನು ಭುಜದ ಮೇಲೆ ಹೊತ್ತು ಸಾಗಿಸಿದ ಕುಟುಂಬ
ಮನಕಲಕುವ ವಿಡಿಯೊ
ಸದ್ಯ ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ನೋಡಿದ ಪ್ರತಿಯೊಬ್ಬರ ಕಣ್ಣಂಚು ಒದ್ದೆಯಾಗಿದೆ. ಸ್ಟ್ರೆಚರ್ ಜತೆಗೆ ಹೆಜ್ಜೆ ಹಾಕಿದ ಬಾಲಕನ ತಾಯಿ ಪದೇ ಪದೆ ಬಟ್ಟೆಯನ್ನು ನೀರಿಗೆ ಅದ್ದಿ ಅದರಿಂದ ಆತನ ಮೈ ಒರೆಸಿದ್ದಾರೆ. ಆ ಮೂಲಕ ಸೂರ್ಯ ಸುಡುವ ಬಿಸಿಲಿನಿಂದ ರಕ್ಷಿಸುವ ಪ್ರಯತ್ನ ಮಾಡುತ್ತಿರುವುದು ಕಂಡು ಬಂದಿದೆ. ತಂದೆ ಸ್ಟ್ರೆಚರ್ ತಳ್ಳಿದ್ದಾರೆ. ಈ ವೇಳೆ ವಾರ್ಡ್ ಬಾಯ್, ಅಟೆಂಡರ್ ಹೀಗೆ ಆಸ್ಪತ್ರೆಯ ಯಾವ ಸಿಬ್ಬಂದಿಯೂ ಇರಲಿಲ್ಲ. ಹೊರಗುತ್ತಿಗೆಗೆ ಕೋಟಿಗಟ್ಟಲೆ ಖರ್ಚು ಮಾಡುವ ಸರ್ಕಾರಿ ಆಸ್ಪತ್ರೆಗೆ ಸೂಕ್ತ ಅಂಬುಲೆನ್ಸ್ ವ್ಯವಸ್ಥೆಯೂ ಇಲ್ಲದಿರುವುದು ದುರಂತ ಎಂದು ಅನೇಕರು ಕಿಡಿಕಾರಿದ್ದಾರೆ.
ಅದರ್ಶ್ 15 ದಿನಗಳಿಂದ ಎಂ.ವೈ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಲಾಯಿತು. ಆಂಬ್ಯುಲೆನ್ಸ್ ಇಲ್ಲದ ಕಾರಣ ಸ್ಟ್ರೆಚರ್‌ನಲ್ಲಿ ಕರೆದೊಯ್ಯಲಾಯಿತು. ಈ ವಿಷಯ ಗಮನಕ್ಕೆ ಬಂದಿದೆ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಅಶೋಕ್ ಯಾದವ್ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಆಂಬುಲೆನ್ಸ್ ಸಿಗದೆ ಮೃತದೇಹ 4 ಕಿಲೋ ಮೀಟರ್ ಹೆಗಲ ಮೇಲೆ ಹೊತ್ತೊಯ್ದ ತೆಲಂಗಾಣದ ಕುಟುಂಬ
ಇದು ಮೊದಲ ಸಲವೇನಲ್ಲ
ಎಂ.ವೈ. ಆಸ್ಪತ್ರೆಯ ಅವ್ಯವಸ್ಥೆ ಬೆಳಕಿಗೆ ಬರುತ್ತಿರುವುದು ಇದು ಮೊದಲ ಸಲವೇನಲ್ಲ. 2026ರ ಮಾರ್ಚ್‌ನಲ್ಲಿ ಆಸ್ಪತ್ರೆಯೊಳಗೆ ಸಂಬಂಧಿಕರೇ ಸ್ಟ್ರೆಚರ್ ಮತ್ತು ವ್ಹೀಲ್‌ಚೇರ್‌ಗಳಲ್ಲಿ ರೋಗಿಯನ್ನು ಕರೆದೊಯ್ಯುತ್ತಿರುವುದು ಕಂಡು ಬಂದಿತ್ತು. ಇದು ಆಸ್ಪತ್ರೆಯ ನಿರ್ವಹಣೆಯ ಬಗ್ಗೆ ಕಳವಳ ಉಂಟು ಮಾಡಿತ್ತು. ಇಂತಹ ಘಟನೆ ಪದೇ ಪದೆ ಸಂಭವಿಸುತ್ತಿರುವುದು ಸದ್ಯ ಸ್ಥಳೀಯರ ಕಳವಳಕ್ಕೆ ಕಾರಣವಾಗಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.