ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Motivational Story: ಹುಟ್ಟುತ್ತಲೇ ಕೈ ನಿಷ್ಕ್ರೀಯಗೊಂಡಿದ್ದರೂ ಛಲ ಬಿಡದೆ ಕಾಲಿನಲ್ಲೇ 10ನೇ ತರಗತಿ ಪರೀಕ್ಷೆ ಬರೆದ ದಿಟ್ಟೆ; ನಿಜವಾದ ಸ್ಫೂರ್ತಿ ಎಂದರೆ ಇದು

ಹುಟ್ಟುತ್ತಲೇ ಕೈ ನಿಷ್ಕ್ರೀಯಗೊಂಡ ಒಡಿಶಾದ ಮಲ್ಕಂಗಿರಿ ಜಿಲ್ಲೆಯ ಲಕ್ಷ್ಮೀ ಕಾಲಿನಲ್ಲಿಯೇ 10ನೇ ತರಗತಿ ಪರೀಕ್ಷೆ ಬರೆದು ಎಲ್ಲರಿಗೂ ಸ್ಫೂರ್ತಿಯಾಗಿದ್ದಾಳೆ. ಶಿಕ್ಷಕಿಯಾಗುವುದೇ ನನ್ನ ಗುರಿ ಎಂದು ಆಕೆ ತಿಳಿಸಿದ್ದಾಳೆ. ಸದ್ಯ ಆಕೆ ಪರೀಕ್ಷೆ ಬರೆಯುತ್ತಿರುವ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಗಮನ ಸೆಳೆದಿದೆ.

ಕಾಲಿನಲ್ಲೇ ಪರೀಕ್ಷೆ ಬರೆದ ಲಕ್ಷ್ಮೀ.

ಭುವನೇಶ್ವರ, ಫೆ. 21: ಸಾಧಿಸುವ ಛಲ, ಕಣ್ಣ ಮುಂದೆ ಗುರಿ ಇದ್ದರೆ ಈ ಪ್ರಪಂಚದಲ್ಲಿ ನಮ್ಮನ್ನು ತಡೆಯುವ ಶಕ್ತಿ ಯಾರಿಗೂ, ಯಾವುದಕ್ಕೂ ಇಲ್ಲ ಎನ್ನುವ ಮಾತೊಂದಿದೆ. ಇದೀಗ ಒಡಿಶಾದ ಬಾಲಕಿ ಈ ಮಾತು ಅಕ್ಷರಶಃ ಸತ್ಯ ಎಂದು ಸಾಬೀತುಪಡಿಸಿದ್ದಾಳೆ. ಹುಟ್ಟುತ್ತಲೇ ಕೈ ನಿಷ್ಕ್ರೀಯಗೊಂಡಿದ್ದರೂ, ಅದನ್ನೇ ತನ್ನ ದೌರ್ಬಲ್ಯ ಎಂದು ಕೊರಗುತ್ತ ಕೂರದೆ ಕಾಲಿನಲ್ಲಿಯೇ 10ನೇ ತರಗತಿ ಪರೀಕ್ಷೆ ಬರೆದು ಎಲ್ಲರಿಗೂ ಸ್ಫೂರ್ತಿಯಾಗಿದ್ದಾಳೆ (Motivational Story). ಹೌದು, ನಾವೀಗ ಹೇಳ ಹೊರಟಿರುವುದು ಕೊರತೆಯನ್ನು ಮೆಟ್ಟಿ ನಿಂತ ದಿಟ್ಟೆಯೊಬ್ಬಳ ಯಶಸ್ಸಿನ ಕಥೆಯನ್ನು.

ಒಡಿಶಾದ ಮಲ್ಕಂಗಿರಿ ಜಿಲ್ಲೆಯ ಸಿಂಧ್ರಿಮಾಲ್‌ ಪಂಚಾಯತ್‌ನ ಬಂಧ್‌ಗುಡ ಗ್ರಾಮದ ನಾರಾಯಣ ಮತ್ತು ಸುಭದ್ರಾ ಖೇಮುಡು ದಂಪತಿಯ ಪುತ್ರಿ ಲಕ್ಷ್ಮೀಯೇ ಈ ಸಾಧನೆ ತೋರಿದ ಬಾಲಕಿ. ಆಕೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಕಾಲಿನಲ್ಲೇ ಬರೆದು ಗಮನ ಸೆಳೆದಿದ್ದಾಳೆ.

ಕಾಲಿನಲ್ಲೇ ಪರೀಕ್ಷೆ ಬರೆದ ಬಾಲಕಿಯ ವಿಡಿಯೊ: ವಿಡಿಯೊ ಕೃಪೆ: Ommcom News



ಗಮನ ಸೆಳೆದ ಲಕ್ಷ್ಮೀ?

ಇತ್ತೀಚೆಗೆ ಮಲ್ಕಂಗಿರಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವೊಂದರಲ್ಲಿನ ದೃಶ್ಯ ಹಲವರ ಗಮನ ಸೆಳೆಯಿತು. ಎಲ್ಲ ವಿದ್ಯಾರ್ಥಿಗಳು ಬೆಂಚ್‌ ಮೇಲೆ ಕೂತು ಕತ್ತು ಬಗ್ಗಿಸಿ ಪರೀಕ್ಷೆ ಬರೆಯುತ್ತಿದ್ದರೆ, ಸಮವಸ್ತ್ರ ಧರಿಸಿದ ಬಾಲಕಿಯೊಬ್ಬಳು ನೆಲದ ಮೇಲೆ ಕಾಲಿನಲ್ಲಿ ಪೆನ್ನು ಹಿಡಿದು, ಆನ್ಸರ್‌ ಶೀಟ್‌ ಹೊಂದಿಸಿಕೊಳ್ಳುತ್ತ ಸರಸರನೆ ಉತ್ತರ ಬರೆದುಕೊಳ್ಳುತ್ತಿದ್ದಳು. ಆಕೆಯೇ ಲಕ್ಷ್ಮೀ. ಹುಟ್ಟುತ್ತಲೇ ನಿಷ್ಕೀಯಗೊಂಡ ಕೈಗಳೂ ಆಕೆಯ ಕನಸಿನ ಮುಂದೆ, ಛಲದ ಮಂಡಿಯೂರಿ ಬಿಟ್ಟವು.

ಲಕ್ಷ್ಮೀ ಬಾಲ್ಯದಿಂದಲೇ ಕಾಲಿನಲ್ಲಿ ಬರೆಯುವ ಅಭ್ಯಾಸ ಮಾಡುತ್ತಿದ್ದಳು. ಆರ್ಥಿಕ ಸಂಕಷ್ಟದ ಮಧ್ಯೆಯೂ ಹೆತ್ತವರು ಆಕೆಯ ಶಿಕ್ಷಣ ಮೊಟಕುಗೊಳ್ಳಲು ಬಿಡಲಿಲ್ಲ. ಈಕೆಯ ಈ ಸ್ಫೂರ್ತಿಯ ಕಥೆ ಮೇಲೆ ಎನ್‌ಡಿಟಿವಿ ಬೆಳಕು ಚೆಲ್ಲಿದ್ದು ವಿಶೇಷ ವರದಿ ಪ್ರಕಟಿಸಿದೆ.

ಮೀರತ್‌ನಲ್ಲಿ ಸಂಚರಿಸಲಿದೆ ದೇಶದ ಅತೀ ವೇಗದ ಮೆಟ್ರೋ; ಗಂಟೆಗೆ ಬರೋಬ್ಬರಿ 120 ಕಿ.ಮೀ. ಸ್ಪೀಡ್‌

ಶಿಕ್ಷಕಿಯಾಗುವ ಕನಸು

ಪರೀಕ್ಷೆ ಬರೆಯುವ ಮುನ್ನ ಮಾತನಾಡಿದ ಲಕ್ಷ್ಮೀ, ʼʼಈ ವರ್ಷ ನಾನು 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದೇನೆ. ಇದಕ್ಕಾಗಿ ತುಂಬ ಖುಷಿಯಾಗುತ್ತಿದೆ. ಶಿಕ್ಷಕಿಯಾಗುವುದೇ ನನ್ನ ಗುರಿʼʼ ಎಂದಿದ್ದಾಳೆ. ಅಕೆಯ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ ತಂದೆ ನಾರಾಯಣ ಖೇಮುಡು, ʼʼಲಕ್ಷ್ಮೀ ಹುಟ್ಟಿದಾಗಿನಿಂದಲೇ ವಿಶೇಷ ಚೇತನ ಮಗು. ಆಕೆಗೆ ಹಲವು ರೀತಿಯ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ಹುಟ್ಟುತ್ತಲೇ ಆಕೆಯ ಎರಡೂ ಕೈಗಳು ನಿಷ್ಕ್ರೀಯಗೊಂಡಿವೆ. ಜತೆಗೆ ಕಾಲುಗಳು ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೈಗಳ ಚಲನೆ ಇಲ್ಲದಿದ್ದರೂ ಆಕೆ ಕಾಲುಗಳ ಸಹಾದಿಂದಲೇ ಬರೆಯುತ್ತಾಳೆ, ಆಹಾರ ಸೇವಿಸುತ್ತಾಳೆ ಮತ್ತು ಪ್ರತಿಯೊಂದು ಕೆಲಸವನ್ನೂ ನಿರ್ವಹಿಸುತ್ತಾಳೆʼʼ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಇಷ್ಟು ಹೇಳುವಾಗ ಅವರ ಕಣ್ಣಗಳು ಅಭಿಮಾನದಿಂದ ಮಿಂಚುತ್ತಿದ್ದವು.

ಬದಲಿ ಬರಹಗಾರರಿಗೆ ಅನುಮತಿ ನೀಡಿದ್ದ ಅಧಿಕಾರಿಗಳು

ಲಕ್ಷ್ಮೀಯ ಆರೋಗ್ಯ ಸ್ಥಿತಿ ಕಂಡು ಅಧಿಕಾರಿಗಳು ಪರೀಕ್ಷೆಗಾಗಿ ಬದಲಿ ಬರಹಗಾರರ ವ್ಯವಸ್ಥೆ ಮಾಡಲು ಅನುಮತಿ ನೀಡಿದ್ದರು. ಅದಾಗ್ಯೂ ಲಕ್ಷ್ಮೀ ಸ್ವತಃ ತಾನೇ ಪರೀಕ್ಷೆ ಬರೆಯಲು ಮುಂದಾಗಿದ್ದಾಳೆ. ಆಕೆಯ ಛಲ ಮತ್ತು ವಿಲ್‌ ಪವರ್‌ ಅನ್ನು ಅಧಿಕಾರಿಗಳು, ಶಿಕ್ಷಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಲಕ್ಷ್ಮೀ ಚೆನ್ನಾಗಿ ಬರೆಯುತ್ತಾಳೆ. ಪರೀಕ್ಷೆಯ ತಯಾರಿಗೆ ಸಹಾಯ ಮಾಡಿದ್ದೇವೆ. ಆಕೆ ಪಾಠವನ್ನು ಶೀಘ್ರವಾಗಿ ಅರ್ಥ ಮಾಡಿಕೊಳ್ಳುತ್ತಾಳೆ. ನಾವು ಆಕೆ ವಿಶೇಷ ಚೇತನ ಬಾಲಕಿ ಎಂದುಕೊಂಡಿಲ್ಲ. ಉಳಿದ ವಿದ್ಯಾರ್ಥಿಗಳಂತೆ ಆಕೆಯನ್ನೂ ನಾವು ನೋಡುತ್ತಿದ್ದೆವು. ಪರೀಕ್ಷೆಗಾಗಿ ಸೂಕ್ತ ಸಿದ್ಧತೆ ಮಾಡಿಕೊಂಡಿದ್ದಾಳೆ. ಉತ್ತಮ ಅಂಕ ಗಳಿಸುವ ನಿರೀಕ್ಷೆ ಇದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

ಎಲ್ಲವೂ ಸರಿಯಾಗಿ ಇದ್ದರೂ ನಾನಾ ನೆಪ ಒಡ್ಡಿ ಸಾಧನೆಯಿಂದ ಮುಖ ತಿರುಗಿಸಿ ಓಡುವ ಹಲವರಿಗೆ ಈಕೆಯ ಬದುಕೇ ಸ್ಫೂರ್ತಿ. ಸದ್ಯ ಆಕೆಯನ್ನು ಇಡೀ ದೇಶವೇ ತಿರುಗಿ ನೋಡುವಂತಾಗಿದೆ.

Ramesh Ballamoole

View all posts by this author