ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚರ್ಚ್‌ ಸಮೀಪ ಹನುಮಾನ್‌ ಚಾಲೀಸಾ ಪಠಣ, 2 ಗುಂಪುಗಳ ನಡುವೆ ಮಾರಾಮಾರಿ; ಕ್ರಿಸ್‌ಮಸ್‌ ವೇಳೆ ವಿವಿಧ ಕಡೆ ಗೊಂದಲ

Christmas 2025: ಕರಿಸ್‌ಮಸ್‌ ಪ್ರಯುಕ್ತ ಕೇರಳದಲ್ಲಿ ಕರೋಲ್ ಗಾಯಕರ 2 ಗುಂಪುಗಳ ಮಧ್ಯೆ ಸಂಘರ್ಷ ಏರ್ಪಟ್ಟು ಕೆಲವರು ಗಾಯಗೊಂಡಿದ್ದಾರೆ. ಇನ್ನು ಹರಿಯಾಣದಲ್ಲಿ ವಿಶ್ವ ಹಿಂದೂ ಪರಿಷತ್‌, ಭಜರಂಗ ದಳ ಸೇರಿದಂತೆ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಚರ್ಚ್‌ ಸಮೀಪದ ಪಾರ್ಕ್‌ನಲ್ಲಿ ಸಾಮೂಹಿಕ ಹನುಮಾನ್‌ ಚಾಲೀಸಾ ಪಠಣ ಕಾರ್ಯಕ್ರಮ ಆಯೋಜಿಸಿದ್ದಾರೆ.

ಹರಿಯಾಣದ ಹಿಸಾರ್‌ನಲ್ಲಿ ಪೊಲೀಸ್‌ ಬಂದೋಬಸ್ತ್‌

ದೆಹಲಿ, ಡಿ. 25: ವಿಶ್ವಾದ್ಯಂತ ಗುರುವಾರ ಸಡಗರದಿಂದ ಕ್ರಿಸ್‌ಮಸ್‌ (Christmas) ಆಚರಿಸಲಾಗುತ್ತಿದೆ. ಇದಕ್ಕೆ ಭಾರತವೂ ಹೊರತಲ್ಲ. ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆ ಆಯೋಜಿಸುವ ಮೂಲಕ ಏಸುಕ್ರಿಸ್ತನ ಜನ್ಮದಿನವನ್ನು ಕೊಂಡಾಡಲಾಗುತ್ತಿದೆ. ಈ ಮಧ್ಯೆ ಕೇರಳದಲ್ಲಿ ಕರೋಲ್ ಗಾಯಕರ 2 ಗುಂಪುಗಳ ಮಧ್ಯೆ ಸಂಘರ್ಷ ಏರ್ಪಟ್ಟು ಕೆಲವರು ಗಾಯಗೊಂಡಿದ್ದಾರೆ. ಇನ್ನು ಹರಿಯಾಣದಲ್ಲಿ ವಿಶ್ವ ಹಿಂದೂ ಪರಿಷತ್‌, ಭಜರಂಗ ದಳ ಸೇರಿದಂತೆ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಚರ್ಚ್‌ ಸಮೀಪದ ಪಾರ್ಕ್‌ನಲ್ಲಿ ಸಾಮೂಹಿಕ ಹನುಮಾನ್‌ ಚಾಲೀಸಾ ಪಠಣ ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನ ಸೆಳೆದರು.

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದ ಮೆರವಣಿಗೆ ವೇಳೆ ಕ್ರಿಸ್‌ಮಸ್ ಕರೋಲ್ ಗಾಯಕರ ಎರಡು ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ರಾತ್ರಿ 11.30ರ ಸುಮಾರಿಗೆ ನೂರಾನಾಡ್ ಪ್ರದೇಶದಲ್ಲಿ ಸಂಭವಿಸಿದೆ. ಇಲ್ಲಿನ ಒಂದು ಯೂತ್‌ ಕ್ಲಬ್‌ನಲ್ಲಿ ಕೆಲವು ಸಮಯದಿಂದ ದೀರ್ಘಕಾಲದ ಆಂತರಿಕ ವಿವಾದವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಭಿನ್ನಾಭಿಪ್ರಾಯಗಳಿಂದಾಗಿ ಕ್ಲಬ್‌ನ ಒಂದು ಭಾಗವು ಹೊಸ ಗುಂಪನ್ನು ರಚಿಸಿ ಬೇರೆಯಾಗಿತ್ತು.

ಹರಿಯಾಣದಲ್ಲಿ ಸಾಮೂಹಿಕ ಹನುಮಾನ್‌ ಚಾಲೀಸಾ ಪಠಣದ ಮಾಹಿತಿ:



ಬುಧವಾರ ರಾತ್ರಿ ಎರಡೂ ಗುಂಪುಗಳು ತಮ್ಮ ಕರೋಲ್ ಮೆರವಣಿಗೆ ಸಮಯದಲ್ಲಿ ಪರಸ್ಪರ ಮುಖಾಮುಖಿಯಾದವು. ಈ ವೇಳೆ ಮಾತಿನ ಮೂಲಕ ಆರಂಭವಾದ ವಾಗ್ವಾದ ಬಳಿಕ ಹೊಡೆದಾಟಕ್ಕೆ ತಿರುಗಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತನಿಖೆ ಆರಂಭವಾಗಿದೆ. ಇದು ಯಾವುದೇ ರೀತಿಯ ಕೋಮು ಸಂಘರ್ಷವಲ್ಲ ಎಂದು ಸ್ಥಳೀಯರು ಸ್ಪಷ್ಟಪಡಿಸಿದ್ದಾರೆ.

ಕ್ರಿಸ್‌ಮಸ್‌ ಸಂಭ್ರಮ: ದೆಹಲಿ ಚರ್ಚ್‌ನಲ್ಲಿ ಮೋದಿ ಪ್ರಾರ್ಥನೆ; ಶಾಂತಿ–ಸೌಹಾರ್ದತೆ ಸಂದೇಶ ಸಾರಿದ ಪ್ರಧಾನಿ

ಹರಿಯಾಣದಲ್ಲಿ ಹನುಮಾನ್‌ ಚಾಲೀಸಾ

ಸೂರಾಜ್‌ಮಲ್‌ ಬಲಿದಾನ ದಿವಸದ ಪ್ರಯುಕ್ತ ಭಜರಂದ ದಳ ಮತ್ತು ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಹರಿಯಾಣದ ಹಿಸಾರ್‌ ನಗರದ ಚರ್ಚ್‌ ಒಂದರ ಸಮೀಪದ ಪಾರ್ಕ್‌ನಲ್ಲಿ ಸಾಮೂಹಿಕ ಹನುಮಾನ್‌ ಚಾಲೀಸಾ ಪಠಣ ಆಯೋಜಿಸಿತು. ಹಿಂದಿನ ಭರತ್‌ಪುರ ಸಾಮ್ರಾಜ್ಯದ ದೊರೆ ಮಹಾರಾಜ ಸೂರಾಜ್‌ಮಲ್‌ ರಾಷ್ಟ್ರದ ಏಕೀಕರಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅಲ್ಲದೆ ಸಾಮಾಜಿಕ ಅನ್ಯಾಯ, ಜನಾಂಗೀಯ ತಾರತಮ್ಯ, ಮೂಢನಂಬಿಕೆಗಳ ವಿರುದ್ಧ ಹೋರಾಡಿದ್ದರು. 1763ರ ಡಿಸೆಂಬರ್ 25ರಂದು ಅವರು ಪ್ರಾಣ ತ್ಯಾಗ ಮಾಡಿದ್ದರು. ಅವರ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇತ್ತ ಅಲ್ಲೇ ಸಮೀಪದ 160 ವರ್ಷ ಹಳೆಯದಾದ ಸೇಂಟ್ ಥಾಮಸ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಆಚರಣೆ ನಡೆದ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತವು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ.

"ಭದ್ರತೆಯ ದೃಷ್ಟಿಯಿಂದ ಚರ್ಚ್‌ ಪರಿಸರದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಎರಡೂ ಧಾರ್ಮಿಕ ಸಮುದಾಯಗಳ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯುವಂತೆ ಆಡಳಿತವು ಕ್ರಮ ಕೈಗೊಂಡಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಲ ಫಿರಂಗಿಗಳನ್ನು ಸಹ ನಿಯೋಜಿಸಲಾಗಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಯಾಕಾಗಿ ಇದೇ ಸ್ಥಳದಲ್ಲಿ ಧಾರ್ಮಿಕ ಕಾರ್ಯಕ್ರಮ?

ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಗುರುವಾರವೇ ಹನುಮಾನ್‌ ಚಾಲೀಸಾ ಪಠಣ ಆಯೋಜಿಸಲಾಗಿದೆ ಎಂದು ಭಜರಂಗ ದಳ ತಿಳಿಸಿದೆ. ʼʼಸರ್ಕಾರಿ ರಜೆ ಮತ್ತು ಮಹಾರಾಜ ಸೂರಾಜ್‌ಮಲ್‌ ಅವರ ಬಲಿದಾನದ ದಿನವಾದ್ದರಿಂದ ಇಂದು ಕಾರ್ಯಕ್ರಮ ಆಯೋಜಿಸಿದ್ದೇವೆ. ಅಲ್ಲದೆ ಈ ಉದ್ಯಾನ ನಗರದ ಮಧ್ಯ ಭಾಗದಲ್ಲಿರುವುದರಿಂದ ಕಾರ್ಯಕ್ರಮಕ್ಕೆ ಇದೇ ಸ್ಥಳವನ್ನು ಆಯ್ದುಕೊಂಡಿದ್ದೇವೆʼʼ ಎಂದು ವಿಚ್‌ಪಿ ಸದಸ್ಯ ದೀಪಕ್‌ ಕುಮಾರ್‌ ವಿವರಿಸಿದ್ದಾರೆ. ʼʼಅದುಬಿಟ್ಟು ಬೇರೆ ಯಾವುದೇ ಉದ್ದೇಶವಿಲ್ಲ. ನಾವು ಬೇಕಂತಲೇ ವಿವಾದ ಹುಟ್ಟುಹಾಕುತ್ತಿಲ್ಲ. ಪೊಲೀಸರೊಂದಿಗೆ ಸಂಪೂರ್ಣ ಸಹಕರಿಸಲು ಬದ್ಧʼʼ ಎಂದಿದ್ದಾರೆ.