ನವದೆಹಲಿ, ನ. 26: ಸಂವಿಧಾನ ದಿನಾಚರಣೆಯ ಅಂಗವಾಗಿ ಗುರುವಾರ ಪ್ರಕಟವಾದ ವಿಶೇಷ ಲೇಖನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಆಡಳಿತಾವಧಿಯ ಸಾಂವಿಧಾನಿಕ ನಿಲುವುಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತುರ್ತು ಪರಿಸ್ಥಿತಿ, ಸಂವಿಧಾನ ತಿದ್ದುಪಡಿಗಳು ಹಾಗೂ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ 370 ಮತ್ತು 35ಎ ವಿಧಿಗಳನ್ನು ಉಲ್ಲೇಖಿಸಿರುವ ಪ್ರಧಾನಿ, ಅಂದಿನ ನಾಯಕತ್ವವನ್ನು 'ಸಂವಿಧಾನ ವಿರೋಧಿ' (Power-hungry and anti-constitutional) ಎಂದು ಉಲ್ಲೇಖಿಸಿದ್ದಾರೆ.
1949ರ ನವೆಂಬರ್ 26ರಂದು ಸಂವಿಧಾನ ರಚನಾ ಸಭೆಯು ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ಸ್ಮರಿಸಿದ ಪ್ರಧಾನಿ, ಡಾ. ರಾಜೇಂದ್ರ ಪ್ರಸಾದ್, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಭೆಯ ಇತರ ಸದಸ್ಯರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಸಂವಿಧಾನದ ಮಹತ್ವವನ್ನು ಸಂಸತ್ತು ಮತ್ತು ನ್ಯಾಯಾಲಯಗಳ ಆಚೆಗೆ ಕೊಂಡೊಯ್ಯಲು ಹಾಗೂ ಯುವಜನರೊಂದಿಗೆ ಬೆಸೆಯಲು ತಮ್ಮ ಸರ್ಕಾರ ದಶಕದ ಹಿಂದೆಯೇ ನವೆಂಬರ್ 26 ಅನ್ನು 'ಸಂವಿಧಾನ ದಿನ'ವನ್ನಾಗಿ ಘೋಷಿಸಿತು ಎಂದು ಅವರು ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿ ಮತ್ತು 1, 38, 39, 42ನೇ ತಿದ್ದುಪಡಿಗಳ ಉಲ್ಲೇಖ
1951ರ ಮೊದಲ ಸಂವಿಧಾನ ತಿದ್ದುಪಡಿ ಮತ್ತು ತುರ್ತು ಪರಿಸ್ಥಿತಿಯ ಅವಧಿಯ ತಿದ್ದುಪಡಿಗಳನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮೂಲಭೂತ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಲು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ಅಂದಿನ ಸರ್ಕಾರ ಯತ್ನಿಸಿತ್ತು ಎಂದು ಆರೋಪಿಸಿದ್ದಾರೆ. ಜನರಿಂದ ನೇರವಾಗಿ ಆಯ್ಕೆಯಾಗದ ಸರ್ಕಾರವು ತಾತ್ಕಾಲಿಕ ಸಂಸತ್ತಿನಲ್ಲಿ ತನ್ನ ಬಹುಮತವನ್ನು ಬಳಸಿಕೊಂಡು ಮೂಲಭೂತ ಹಕ್ಕುಗಳಿಗೆ ನಿರ್ಬಂಧ ಹೇರಿತು. ಮೊದಲ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳುಗಳ ಮುನ್ನ ಈ ತಿದ್ದುಪಡಿ ತಂದಿರುವುದು ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಮತ್ತು ಸಾರ್ವಜನಿಕ ವಿರೋಧವನ್ನು ಹತ್ತಿಕ್ಕುವ ಉದ್ದೇಶ ಹೊಂದಿತ್ತು ಎಂದು ಪ್ರಧಾನಿ ಬರೆದಿದ್ದಾರೆ.
'ಯಾವುದೇ ಶಕ್ತಿಯಿಂದಲೂ ಮಹಿಳಾ ಮೀಸಲಾತಿ ತಡೆಯಲು ಸಾಧ್ಯವಿಲ್ಲ': ಸಂವಿಧಾನ ದಿನದಂದು ವಿಪಕ್ಷಗಳಿಗೆ ಪ್ರಧಾನಿ ಮೋದಿ ಚಾಟಿ
ʼʼಅಧಿಕಾರ ದಾಹದ ಮತ್ತು ಸಂವಿಧಾನ ವಿರೋಧಿ ನಾಯಕತ್ವʼʼ
ತುರ್ತು ಪರಿಸ್ಥಿತಿಯ ಉತ್ತುಂಗದಲ್ಲಿದ್ದಾಗ ತರಲಾದ 42ನೇ ತಿದ್ದುಪಡಿಯು ನ್ಯಾಯಾಂಗ ವಿಮರ್ಶೆಯ ಅಧಿಕಾರವನ್ನು ಮೊಟಕುಗೊಳಿಸಿತು ಮತ್ತು ಸಾಂವಿಧಾನಿಕ ಸಂಸ್ಥೆಗಳ ನಡುವಿನ ಅಧಿಕಾರ ಸಮತೋಲನವನ್ನೇ ಬದಲಾಯಿಸಿತು ಎಂದಿದ್ದಾರೆ. ಅಧಿಕಾರ ದಾಹದ ಮತ್ತು ಸಂವಿಧಾನ ವಿರೋಧಿ ನಾಯಕತ್ವ ಏನೆಲ್ಲಾ ಮಾಡಬಲ್ಲದು ಎಂಬುದನ್ನು ತಿಳಿಯಲು ಇಂದಿನ ಯುವಜನತೆ ತುರ್ತು ಪರಿಸ್ಥಿತಿಯ ವೇಳೆ ಜಾರಿಗೆ ತಂದ 38 ಮತ್ತು 39ನೇ ತಿದ್ದುಪಡಿಗಳನ್ನು ಅಧ್ಯಯನ ಮಾಡಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಚುನಾಯಿತ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಲು ಒಂದೇ ಪಕ್ಷವು ಸುಮಾರು 100 ಬಾರಿ 356ನೇ ವಿಧಿಯನ್ನು ಬಳಸಿಕೊಂಡಿದ್ದು, ಒಬ್ಬ ಮಾಜಿ ಪ್ರಧಾನಿಯಂತೂ ಈ ವಿಷಯದಲ್ಲಿ 'ಅರ್ಧಶತಕ' ಬಾರಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಆರ್ಟಿಕಲ್ 370 ಮತ್ತು 35ಎ ರದ್ದತಿಯಿಂದ ಅನ್ಯಾಯಕ್ಕೆ ಅಂತ್ಯ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ಮತ್ತು 35ಎ ವಿಧಿಗಳ ಕುರಿತು ಪ್ರಸ್ತಾಪಿಸಿದ ಪ್ರಧಾನಿ ಮೋದಿ, "70 ವರ್ಷಗಳಿಗೂ ಹೆಚ್ಚು ಕಾಲ ಆರ್ಟಿಕಲ್ 370 ಮತ್ತು 35ಎ ಕಾರಣದಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಸಂವಿಧಾನವು ಸಂಪೂರ್ಣವಾಗಿ ಜಾರಿಯಾಗಲಿಲ್ಲ. ಇದರಿಂದ ಅಲ್ಲಿನ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳು ಮತ್ತು ಮಹಿಳೆಯರ ಹಕ್ಕುಗಳನ್ನು ತುಳಿಯಲಾಗಿತ್ತು. 2019ರಲ್ಲಿ ಈ ವಿಧಿಗಳನ್ನು ರದ್ದುಪಡಿಸುವ ಮೂಲಕ ಆ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲಾಯಿತು" ಎಂದು ಪ್ರತಿಪಾದಿಸಿದ್ದಾರೆ.
ಇಂಧನ ಟ್ಯಾಂಕರ್ ಸ್ಫೋಟ: 31 ಮಂದಿ ಸಾವು, 21ಕ್ಕೂ ಹೆಚ್ಚು ಜನರಿಗೆ ಗಾಯ
ಮಾವೋವಾದಿ ಬಂಡಾಯದ ಕುರಿತು ಪ್ರಸ್ತಾಪಿಸಿದ ಪ್ರಧಾನಿ, ದಶಕಗಳಿಂದ ನಕ್ಸಲರು ಬಂದೂಕಿನ ಬಲದಿಂದ ಬುಡಕಟ್ಟು ಪ್ರದೇಶದ ಬಡ ಜನರಿಗೆ ಸಂವಿಧಾನ ನೀಡಿದ ಹಕ್ಕುಗಳನ್ನು ನಿರಾಕರಿಸುತ್ತಿದ್ದರು ಎಂದು ಹೇಳಿದ್ದಾರೆ. "ಈ ವರ್ಷ ನಕ್ಸಲಿಸಂ ಅನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿರುವುದು ಅತ್ಯಂತ ಸಂತಸದ ವಿಚಾರ. ಇದರಿಂದ ಕಡುಬಡವರು ಈಗ ಭಯವಿಲ್ಲದೆ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸುವಂತಾಗಿದೆ. ''ಬಂದೂಕು ಹಿಡಿದ ನಕ್ಸಲರು ಮುಗಿದಿದ್ದಾರೆ, ಆದರೆ ಇಂದಿನ ವಾಸ್ತವ ಅರಿಯದೆ ದೇಶದ ಅಭಿವೃದ್ಧಿಗೆ ಅಡ್ಡಿ ಮಾಡುವ 'ಬೌದ್ಧಿಕ ನಕ್ಸಲರು' ಮಾತ್ರ ಇನ್ನೂ ಇದ್ದಾರೆ" ಎಂದು ಮೋದಿ ಟೀಕಿಸಿದ್ದಾರೆ.