ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಿ; ಪ್ರಬಲ ಪ್ರಹಾರದ ಸೂಚನೆ ನೀಡಿದ ಪ್ರಧಾನಿ ಮೋದಿ

Narendra Modi: ಪಾಕಿಸ್ತಾನದ ಯಾವುದೇ ದುಸ್ಸಾಹಸಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸಶಸ್ತ್ರ ಪಡೆಗಳಿಗೆ ನಿರ್ದೇಶನ ನೀಡಿದ್ದಾರೆ. ಆ ಮೂಲಕ ಭಾರತ ಬಹುದೊಡ್ಡ ಹೊಡೆತದ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ರವಾನಿಸಿದೆ. ಉನ್ನತ ಮಟ್ಟದ ಸಭೆ ನಡೆಸಿದ ಮೋದಿ ಸೇನೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಿದ್ದಾರೆ.

ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಜಾರಿಯಾಗಿದ್ದರೂ ಆಪರೇಷನ್ ಸಿಂದೂರ್‌ (Operation Sindoor) ಇನ್ನೂ ಮುಗಿದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಮೂಲಗಳ ಪ್ರಕಾರ ಪಾಕಿಸ್ತಾನದ ಯಾವುದೇ ದುಸ್ಸಾಹಸಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸಶಸ್ತ್ರ ಪಡೆಗಳಿಗೆ ನಿರ್ದೇಶನ ನೀಡಿದ್ದಾರೆ. ಆ ಮೂಲಕ ಭಾರತ ಬಹುದೊಡ್ಡ ಹೊಡೆತದ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ರವಾನಿಸಿದೆ. ಉನ್ನತ ಮಟ್ಟದ ಸಭೆ ನಡೆಸಿದ ಮೋದಿ ಸೇನೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಿದ್ದಾರೆ.

"ಆಪರೇಷನ್ ಸಿಂದೂರ್‌ ಇನ್ನೂ ಪೂರ್ಣಗೊಂಡಿಲ್ಲ. ಗಡಿಯಾಚೆಗಿನ ಭಯೋತ್ಪಾದನೆ ವಿಚಾರದಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲʼʼ ಎಂದು ಸ್ಪಷ್ಟಪಡಿಸಲಾಗಿದೆ. ಪಿಟಿಐ ವರದಿಯ ಪ್ರಕಾರ, ಪ್ರಧಾನಿ ಮೋದಿ ಸೇನೆಗೆ ಪಾಕ್‌ನ ಗುಂಡಿನ ದಾಳಿಗೆ ಕ್ಷಿಪಣಿ ಮೂಲಕ ಉತ್ತರಿಸಬೇಕು ಎಂದು ಸೂಚನೆ ನೀಡಿದ್ದಾರೆ.



ಈ ಸುದ್ದಿಯನ್ನೂ ಓದಿ: India-Pakistan Conflict: ಪಾಕಿಸ್ತಾನ ಹೇಳಿರುವ 7 ದೊಡ್ಡ ಸುಳ್ಳುಗಳು! ಸಾಕ್ಷಿ ಸಮೇತ ಮುಖವಾಡ ಕಳಚಿದ ಭಾರತ

ಪಾಕಿಸ್ತಾನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಮೇ 7ರಂದು ದಾಳಿ ನಡೆಸಿದ ನಂತರ ಭಾರತದ ಕಠಿಣ ನಿಲುವು ತಾಳಿದ್ದು, ಪಾಕಿಸ್ತಾನ ದಾಳಿ ನಡೆಸಿದೆ ಭಾರತವೂ ಪ್ರತಿದಾಳಿ ನಡೆಸಲಿದೆ, ಪಾಕಿಸ್ತಾನ ನಿಲ್ಲಿಸಿದರೆ, ಭಾರತವೂ ಸುಮ್ಮನಾಗಲಿದೆ. ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ನವದೆಹಲಿಯು ಇಸ್ಲಾಮಾಬಾದ್ ಜತೆ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ಮೂಲಕ ಮಾತ್ರ ಮಾತುಕತೆ ನಡೆಸಲಿದೆ ಎಂದು ತಿಳಿಸಿದ್ದಾಗಿ ಮೂಲಗಳು ವರದಿ ಮಾಡಿವೆ.

"ಸಿಂಧೂ ನದಿ ನೀರು ಒಪ್ಪಂದವು ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿದ್ದಾಗಿದ್ದು, ಪಾಕಿಸ್ತಾನ ಪ್ರಾಯೋಜಿತ ಉಗ್ರವಾದದ ವಿರುದ್ಧ ಭಾರತದ ಹೋರಾಟ ಮುಂದುವರಿಯುವವರೆಗೆ ಈ ಒಪ್ಪಂದವು ಸ್ಥಗಿತಗೊಳ್ಳುತ್ತದೆ" ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಮುಂದುವರಿಸಲು ನಿರ್ಧರಿಸಿದರೆ ಅದರೊಂದಿಗೆ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದೂ ತಿಳಿಸಿದೆ.

ಪಾಕಿಸ್ತಾನ ದಾಳಿ ಮಾಡಿದರೆ ಅದಕ್ಕೆ ನಾವು ನೀಡುವ ಪ್ರತಿಕ್ರಿಯೆ ಹೆಚ್ಚು ವಿನಾಶಕಾರಿ ಮತ್ತು ಬಲವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಆಪರೇಷನ್‌ ಸಿಂದೂರ್‌ ಕಾರಾಚರಣೆ ನಡೆದ ದಿನವೇ ರಾತ್ರಿ ಪಾಕಿಸ್ತಾನ ಭಾರತದ ಸುಮಾರು 26 ಕಡೆಗಳಲ್ಲಿ ದಾಳಿ ನಡೆಸಿದೆ ಎಂದು ಮೋದಿ ವಿವರಿಸಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದಕ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಮೇ 7ರಂದು ಭಾರತ ನಡೆಸಿದ ಆಪರೇಷನ್ ಸಿಂದೂರ್‌ ಕಾರ್ಯಾಚರಣೆಯ 3 ದಿನಗಳ ನಂತರ ಭಾರತ ಮತ್ತು ಪಾಕಿಸ್ತಾನ ಮೇ 10ರಂದು ಕದನ ವಿರಾಮ ಒಪ್ಪಂದಕ್ಕೆ ಬಂದಿದೆ. ಅದಾಗ್ಯೂ ಕದನ ವಿರಾಮ ಜಾರಿಯಾದ ಕೆಲವೇ ಹೊತ್ತಿನಲ್ಲಿ ಪಾಕಿಸ್ತಾನ ಗಡಿ ಪ್ರದೇಶಗಳಲ್ಲಿ ಅಪ್ರಚೋದಿತ ದಾಳಿ ನಡೆಸಿ ಒಪ್ಪಂದವನ್ನು ಮುರಿದಿದೆ. ಜಮ್ಮು ಕಾಶ್ಮೀರ, ರಾಜಸ್ಥಾನ, ಗುಜರಾತ್‌, ಪಂಜಾಬ್‌ನ ವಿವಿದ ಕಡೆಗಳಿಗೆ ದಾಳಿ ನಡೆಸಿದ್ದು, ಭಾರತ ಅದನ್ನು ದಿಟ್ಟವಾಗಿ ಎದುರಿಸಿದೆ. ಭಾನುವಾರ ಮತ್ತೆ ಪಾಕ್‌ ಬಾಲ ಬಿಚ್ಚಿದ್ದರೆ ಬುದ್ದಿ ಕಲಿಸಲು ಭಾರತೀಯ ಸೇನೆ ಸಜ್ಜಾಗಿ ನಿಂತಿದೆ.