Ceasefire Violation : ಪಾಕಿಸ್ತಾನದಿಂದ LOC ಬಳಿ ಐದನೇ ದಿನವೂ ಗುಂಡಿನ ದಾಳಿ; ಭಾರತೀಯ ಸೇನೆಯಿಂದ ಪ್ರತ್ಯುತ್ತರ
ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಪಾಕಿಸ್ತಾನಿ ಪಡೆಗಳು ಸತತ ಐದನೇ ದಿನವೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಕುಪ್ವಾರಾ ಮತ್ತು ಪೂಂಚ್ ಜಿಲ್ಲೆಗಳ ಎದುರಿನ ಪ್ರದೇಶಗಳಲ್ಲಿ ಪಾಕಿಸ್ತಾನಿ ಸೇನಾ ನೆಲೆಗಳು ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ ಈಗಾಗಲೇ ಪಾಕಿಸ್ತಾನವನ್ನು ಕಟ್ಟಿಹಾಕಲು ರಾಜತಾಂತ್ರಿಕ ನಡೆಯನ್ನು ಬಳಸಿದ್ದು, ಪಾಕ್‌ಗೆ ಮತ್ತಷ್ಟು ಸಂಕಷ್ಟ ಎದರುಗಾಗಿದೆ. ಇಂತಹ ಸಮಯದಲ್ಲಿ ಪಾಕಿಸ್ತಾನ ಉದ್ಧಟನ ಮೆರೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಪಾಕಿಸ್ತಾನಿ ಪಡೆಗಳು ಸತತ ಐದನೇ ದಿನವೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಕುಪ್ವಾರಾ ಮತ್ತು ಪೂಂಚ್ ಜಿಲ್ಲೆಗಳ ಎದುರಿನ ಪ್ರದೇಶಗಳಲ್ಲಿ ಪಾಕಿಸ್ತಾನಿ ಸೇನಾ ನೆಲೆಗಳು ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನೊಂದೆಡೆ ಭಾರತ್ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಯುದ್ಧವನ್ನು ಸಾರಿದೆ. ಅಧಿಕಾರಿಗಳ ಪ್ರಕಾರ, ಏಪ್ರಿಲ್ 24 ರಿಂದ ನಾಲ್ಕು ದಿನಗಳಲ್ಲಿ ಒಂಬತ್ತು ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ 537 ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತವನ್ನು ತೊರೆದಿದ್ದಾರೆ. ಏತನ್ಮಧ್ಯೆ, ಕಳೆದ ನಾಲ್ಕು ದಿನಗಳಲ್ಲಿ 14 ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ ಒಟ್ಟು 850 ಭಾರತೀಯರು ಪಂಜಾಬ್‌ನಲ್ಲಿರುವ ಅಂತರರಾಷ್ಟ್ರೀಯ ಗಡಿ ದಾಟುವಿಕೆಯ ಮೂಲಕ ಪಾಕಿಸ್ತಾನದಿಂದ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾತ್ಕಾಲಿಕವಾಗಿ ಸಿಂಧೂ ನದಿ ಒಪ್ಪಂದವನ್ನು ರದ್ದು ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Fighter Jet: 26 ರಫೇಲ್ ಯುದ್ಧ ವಿಮಾನ ಖರೀದಿ; ಇಂದು ಭಾರತ-ಫ್ರಾನ್ಸ್ ಮಹತ್ವದ ಒಪ್ಪಂದಕ್ಕೆ ಸಹಿ; ಒಟ್ಟು ಮೊತ್ತ ಎಷ್ಟು ಗೊತ್ತಾ?
ಭಾನುವಾರ ನಡೆದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತೆ ಪ್ರತೀಕಾರದ ಮಾತನ್ನಾಡಿದ್ದಾರೆ. ಭಯೋತ್ಪಾದಕರು ಮತ್ತು ಅವರ ಬೆಂಬಲಿಗರಿಗೆ "ಕಠಿಣ" ಶಿಕ್ಷೆಯನ್ನು ನೀಡುವ ಪ್ರತಿಜ್ಞೆಯನ್ನು ಮಾಡಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೇಂದ್ರದ ಆದೇಶದ ಮೇರೆಗೆ ಒಬ್ಬ ಪಾಕಿಸ್ತಾನಿ ನಾಗರಿಕರನ್ನು ಹೊರತುಪಡಿಸಿ ಎಲ್ಲಾ ಪಾಕಿಸ್ತಾನಿ ನಾಗರಿಕರನ್ನು ಉತ್ತರ ಪ್ರದೇಶದಿಂದ "ಹೊರಹಾಕಲಾಗಿದೆ" ಎಂದು ರಾಜ್ಯ ಸರ್ಕಾರ ಸೋಮವಾರ ತಿಳಿಸಿದೆ. ಕೊನೆಯ ಪಾಕಿಸ್ತಾನಿ ಪ್ರಜೆಯನ್ನು ಬುಧವಾರ ಗಡೀಪಾರು ಮಾಡಲಾಗುವುದು ಮತ್ತು ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಅವರ ಮೇಲೆ ನಿರಂತರ ನಿಗಾ ಇಡುತ್ತಿವೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.