ದೆಹಲಿ, ಏ. 18: ಕೇಂದ್ರ ಸರ್ಕಾರದ ಮಹತ್ವಾಂಕಾಕ್ಷಿ ಮಹಿಳಾ ಮೀಸಲಾತಿ ಮಸೂದೆಗೆ (Women's Quota Bill) ಲೋಕಸಭೆಯಲ್ಲಿ ಸೋಲಾಗಿದೆ. ಇದರ ಬೆನ್ನಲ್ಲೇ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ದೇಶದ ಕ್ಷಮೆ ಯಾಚಿಸಿದರು. ʼʼನಾರಿಶಕ್ತಿ ಮಸೂದೆ ವಿಫಲವಾಗಿದ್ದನ್ನು ನೀವೆಲ್ಲ ನೋಡಿದ್ದೀರಿ. ಇದಕ್ಕಾಗಿ ದೇಶದ ತಾಯಂದಿರು, ಸಹೋದರಿಯರಲ್ಲಿ ಕ್ಷಮೆ ಕೋರುತ್ತೇನೆ. ಮಹಿಳೆಯರ ಸ್ವಾಭಿಮಾನಕ್ಕೆ ವಿಪಕ್ಷಗಳಿಂದ ಅವಮಾನವಾಗಿದೆ. ಇದನ್ನು ನಾವು ಎಂದಿಗೂ ಮರೆಯೋದಿಲ್ಲ. ನಾರಿಶಕ್ತಿ ಮಸೂದೆಯನ್ನು ಕಾಂಗ್ರೆಸ್ ಅವಮಾನಿಸಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼʼಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸಿದ ವಿಪಕ್ಷಗಳನ್ನು ದೇಶದ ಜನತೆ ಕ್ಷಮಿಸುವುದಿಲ್ಲ. ಮಹಿಳೆಯರು ಈ ನಾಯಕರನ್ನು ನೋಡಿದಾಗಲೆಲ್ಲ ಇದನ್ನು ನೆನಪಿಸಿಕೊಳ್ಳುತ್ತಾರೆ. ಜನರ ಶಿಕ್ಷೆಯಿಂದ ವಿಪಕ್ಷಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾರಿಶಕ್ತಿ ಮಸೂದೆ ವಿಫಲವಾಗುತ್ತಿದ್ದಂತೆ ವಿಪಕ್ಷಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿವೆ. ಮಹಿಳಾ ಮೀಸಲಾತಿ ಇಂದಿನ ಅಗತ್ಯವಾಗಿತ್ತುʼʼ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ:
ಷಡ್ಯಂತ್ರ
ʼʼನಾರಿಶಕ್ತಿ ಮಸೂದೆ ವಿಚಾರದಲ್ಲಿ ವಿಪಕ್ಷಗಳು ಪಾಪದ ಕೆಲಸ ಮಾಡಿವೆ. ಈ ಮೂಲಕ ಕಾಂಗ್ರೆಸ್ ಮಹಿಳೆಯರ ಪರ ನಿಲ್ಲುವ ಅವಕಾಶ ಕಳೆದುಕೊಂಡಿದೆ. ಕಾಂಗ್ರೆಸ್ ಯಾವತ್ತೂ ಹೆಣ್ಮಕ್ಕಳ ಏಳಿಗೆ ಸಹಿಸಲ್ಲ ಎನ್ನುವುದು ಇದರಿಂದ ಸಾಬೀತಾಗಿದೆ. ಮಹಿಳೆಯರು ಲೋಕಸಭೆಗೆ, ವಿಧಾನಸಭೆಗೆ ಬರಲು ಬಯಸಿದ್ದರು. ಆದರೆ ವಿಪಕ್ಷಗಳು ಅವರ ಹಕ್ಕನ್ನು ಕಸಿಯುವ ಷಡ್ಯಂತ್ರ ನಡೆಸಿವೆ. ಮಹಿಳಾ ಮೀಸಲಾತಿ ಮಸೂದೆ ಪಾಸ್ ಆಗಿದ್ದರೆ ದೇಶಕ್ಕೆ ಹೊಸ ದಾರಿ ಗೋಚರವಾಗುತ್ತಿತ್ತುʼʼ ಎಂದು ಮೋದು ಅಭಿಪ್ರಾಯಪಟ್ಟರು.
ಮಹಿಳಾ ಮೀಸಲು ಮಸೂದೆ; ಭಾರತದ ಪ್ರಜಾಪ್ರಭುತ್ವದ ಪಯಣದಲ್ಲಿ ಕ್ರಾಂತಿಕಾರಕ ಹೆಜ್ಜೆ ಎಂದ ಎಚ್.ಡಿ. ಕುಮಾರಸ್ವಾಮಿ
ಸ್ವಾರ್ಥ ರಾಜಕೀಯ
ʼʼವಿಪಕ್ಷಗಳ ಸ್ವಾರ್ಥ ರಾಜಕೀಯ ನಾರಿಶಕ್ತಿ ಮಸೂದೆಯ ಹಳಿ ತಪ್ಪಿಸಿದೆ. ಎಲ್ಲ ರಾಜ್ಯಗಳಲ್ಲೂ ಸಮಾನ ಅನುಪಾತದಲ್ಲಿ ಸೀಟು ಹೆಚ್ಚಿಸುವ ಭರವಸೆ ನೀಡಿದ್ದೆವು. ಡಿಎಂಕೆಗೆ ಹೆಚ್ಚು ತಮಿಳು ಸಂಸದರನ್ನು ಲೋಕಸಭೆಗೆ ಕಳಿಸುವ ಅವಕಾಶವಿತ್ತು. ಆದರೆ ಡಿಎಂಕೆ ಇದನ್ನು ಕೈಯಾರೆ ಹಾಳು ಮಾಡಿಕೊಂಡಿದೆ. ಕಾಂಗ್ರೆಸ್‌ನದ್ದು ನಕಾರಾತ್ಮಕ ರಾಜಕೀಯ. 370 ವಿಧಿ ರದ್ದು ಮಾಡುವಾಗಲೂ, ತ್ರಿವಳಿ ತಲಾಖ್ ಕಾನೂನು ಜಾರಿ ಮಾಡುವಾಗಲೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಮಾತ್ರವಲ್ಲ ಒಂದು ದೇಶ-ಒಂದು ಚುನಾವಣೆ, ಎಸ್‌ಐಆರ್ ಅನ್ನೂ ವಿರೋಧಿಸುತ್ತಿದೆ. ಒಟ್ಟಿನಲ್ಲಿ ನಾವು ಯಾವುದೇ ಅಭಿವೃದ್ಧಿ ಕೆಲಸಕ್ಕೆ ಕೈ ಹಾಕಿದರೂ ಕೈ ಪಡೆ ಅಡ್ಡಿಪಡಿಸುತ್ತಿದೆʼʼ ಎಂದು ವಾಗ್ದಾಳಿ ನಡೆಸಿದರು.
ಸರಿಯಾದ ಉತ್ತರ
ʼʼರಾಷ್ಟ್ರೀಯ ಹಿತಾಸಕ್ತಿ ನಮಗೆ ಮುಖ್ಯ. ದೇಶ ಉದ್ಧಾರ ವಿರೋಧಿಸುವ ವಿಪಕ್ಷಗಳಿಗೆ ಮಕ್ಕಳು, ಮಹಿಳೆಯರು ಸರಿಯಾದ ಪಾಠ ಕಲಿಸಲಿದ್ದಾರೆ. ದೇಶದ ಶೇಕಡಾ ನೂರರಷ್ಟು ಮಹಿಳೆಯರ ಆಶೀರ್ವಾದ ನಮ್ಮ ಮೇಲಿದೆ. ದೇಶದ ಮಹಿಳೆಯರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆʼʼ ಎಂದು ತಿಳಿಸಿದರು.
ಮಹಿಳೆಯರ ಹಕ್ಕು ದೋಚಿದ ವಿಪಕ್ಷ
ʼʼಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿಯನ್ನೊಳಗೊಂಡ ವಿಪಕ್ಷಗಳು ಮಹಿಳೆಯರ ಹಕ್ಕನ್ನು ಕಸಿದುಕೊಂಡಿವೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ: ನಾರಿ ಶಕ್ತಿ ವಂದನ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ ಪಕ್ಷಗಳು ಭಾರತದ ಮಹಿಳೆಯರನ್ನು ಹಗುರವಾಗಿ ಪರಿಗಣಿಸುತ್ತವೆ. 21ನೇ ಶತಮಾನದ ಮಹಿಳೆ ಪ್ರತಿಯೊಂದು ನಡೆಯನ್ನೂ ಗಮನಿಸುತ್ತಿದ್ದಾಳೆ ಎಂಬುದನ್ನು ಅವರು ಅರಿತುಕೊಳ್ಳಲು ವಿಫಲರಾಗಿದ್ದಾರೆ. ಈ ಮೀಸಲಾತಿಯನ್ನು ನಿರ್ಬಂಧಿಸುವ ಮೂಲಕ ವಿರೋಧ ಪಕ್ಷಗಳು ಮಾಡಿದ ಪಾಪಕ್ಕಾಗಿ, ಖಂಡಿತವಾಗಿಯೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆʼʼ ಎಂದರು.
ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲು; 2/3 ಮತ ಪಡೆಯಲು NDA ವಿಫಲ
ʼʼಈ ತಿದ್ದುಪಡಿಯು ಯಾರಿಂದಲೂ ಏನನ್ನೂ ಕಸಿದುಕೊಳ್ಳುವ ಉದ್ದೇಶ ಹೊಂದಿರಲಿಲ್ಲ. 40 ವರ್ಷಗಳಿಂದ ಮಹಿಳೆಯರಿಗೆ ನಿರಾಕರಿಸಲ್ಪಟ್ಟ ಹಕ್ಕುಗಳನ್ನು ನೀಡುವ ಪವಿತ್ರ ಪ್ರಯತ್ನವಾಗಿತ್ತು. 2029ರ ಲೋಕಸಭಾ ಚುನಾವಣೆಯ ವೇಳೆಗೆ ಆ ಹಕ್ಕುಗಳನ್ನು ಒದಗಿಸುವ ಭಾಗವಾಗಿತ್ತು. ನಮ್ಮ ಜನಸಂಖ್ಯೆಯ ಶೇ. 50ರಷ್ಟು ಜನರಿಗೆ ಅವರ ನ್ಯಾಯಯುತ ಅರ್ಹತೆಯನ್ನು ನೀಡುವ ಪ್ರಾಮಾಣಿಕ ಪ್ರಯತ್ನಕ್ಕೆ ಸೋಲಾಗಿದೆ ಎಂದು ಮೋದಿ ಹೇಳಿದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.