ಹೊಸದೆಹಲಿ, ನ. 10: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಬಳಿ ನಿಲ್ಲಿಸಿದ್ದ ಕಾರು ಸೋಮವಾರ (ನವೆಂಬರ್ 10) ಸ್ಫೋಟಗೊಂಡು ಕನಿಷ್ಠ 9 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ (Delhi Blast). ಈ ಪ್ರಬಲ ಸ್ಫೋಟಕ್ಕೆ ದೇಶವೇ ಬೆಚ್ಚಿ ಬಿದ್ದಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಗೃಹ ಸಚಿವ ಅಮಿತ್ ಶಾ (Amit Shah) ಪರಿಸ್ಥಿತಿ ಅವಲೋಕಿಸಿದ್ದಾರೆ. ಅಮಿತ್ ಅವರಿಗೆ ಕರೆ ಮಾಡಿ ಪ್ರಧಾನಿ ಮಾಹಿತಿ ಪಡೆದುಕೊಂಡು ಕೆಲವು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ಅಮಿತ್ ಶಾ ದೆಹಲಿ ಪೊಲೀಸರ್ ಕಮಿಷನರ್ ಸತೀಶ್ ಗೋಲ್ಚಾ ಜತೆ ಮಾತನಾಡಿದ್ದರು. ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG), ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ವಿಧಿವಿಜ್ಞಾನ ವಿಭಾಗದ ವಿಶೇಷ ತಂಡಗಳನ್ನು ತಕ್ಷಣವೇ ಸ್ಥಳಕ್ಕೆ ಧಾವಿಸಿವೆ. ಈ ಕೃತ್ಯದ ಹಿಂದೆ ಉಗ್ರ ಕೈವಾಡವಿದೆಯೇ ಎನ್ನುವ ಆಯಾಮದಲ್ಲಿ ತನಿಖೆ ಕೈಗೊಳ್ಳಲಾಗುತ್ತಿದೆ.
ದೆಹಲಿ ಸ್ಫೋಟದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್:
ದೆಹಲಿಯಲ್ಲಿನ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡಲು ಅಮಿತ್ ಶಾ ಗುಪ್ತಚರ ಬ್ಯೂರೋ (IB) ನಿರ್ದೇಶಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Delhi Blast: ಕಾರು ಸ್ಫೋಟಕ್ಕೆ ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ ದೆಹಲಿ; ಇದು ಉಗ್ರರ ಕೃತ್ಯವೇ?
ಪೊಲೀಸ್ ಕಮಿಷನರ್ ಹೇಳಿದ್ದೇನು?
ಪೊಲೀಸ್ ಕಮಿಷನರ್ ಸತೀಶ್ ಗೋಲ್ಚಾ ಘಟನೆ ಬಗ್ಗೆ ಮಾತನಾಡಿ, ʼʼಇಂದು ಸಂಜೆ 6:52ರ ಸುಮಾರಿಗೆ ನಿಧಾನವಾಗಿ ಚಲಿಸುತ್ತಿದ್ದ ಕಾರು ಟ್ರಾಫಿಕ್ ಸಿಗ್ನಲ್‌ನಲ್ಲಿ ರೆಡ್ ಲೈಟ್ ಕಂಡಾಗ ನಿಂತಿತು. ಇದೇ ವೇಳೆ ಈ ಕಾರು ಭೀಕರ ಶಬ್ದದೊಂದಿಗೆ ಸ್ಫೋಟಗೊಂಡಿತು. ಇದರ ತೀವ್ರತೆಗೆ ಸಮೀಪದಲ್ಲಿದ್ದ ವಾಹನಗಳೂ ಜಖಂಗೊಂಡವು. ಕೆಲವು ಹೊತ್ತಿ ಉರಿದವು. ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖಾ ಸಂಸ್ಥೆಗಳಾದ ಎಫ್‌ಎಸ್‌ಎಸ್, ಎನ್‌ಐಎ ಸ್ಥಳಕ್ಕೆ ಧಾವಿಸಿವೆ. ಘಟನೆಯಲ್ಲಿ ಕೆಲವು ಮಂದಿ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಗೃಹ ಸಚಿವ ಅಮಿತ್ ಶಾ ನಮ್ಮೊಂದಿಗೆ ಮಾತನಾಡಿದ್ದಾರೆʼʼ ಎಂದು ವಿವರಿಸಿದರು.
ಮೇಲ್ನೋಟಕ್ಕೆ ಕಾರಿನಲ್ಲಿದ್ದ ಸಿಎನ್‌ಜಿ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನುಲಾಗುತ್ತಿದೆ. ಈ ಕೃತ್ಯದ ಹಿಂದೆ ಉಗ್ರ ಕೈವಾಡವಿರುವ ಬಗ್ಗೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. ದೆಹಲಿ ಸಮೀಪದ ಫರಿದಾಬಾದ್‌ನಲ್ಲಿ ಭದ್ರತಾ ಪಡೆ ಸಿಬ್ಬಂದಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ ಹಚ್ಚಿ, ಉಗ್ರರ ಸಂಚನ್ನು ವಿಫಲಗೊಳಿಸಿದ ಬೆನ್ನಲ್ಲೇ ಈ ಸ್ಫೋಟ ನಡೆದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಎಲ್ಲೆಡೆ ಕಟ್ಟೆಚ್ಚರ
ದೆಹಲಿ ಸ್ಫೋಟದ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನ ಏರ್‌ಪೋರ್ಟ್, ರೈಲ್ವೆ ಹಾಗೂ ಮೆಟ್ರೋ ನಿಲ್ದಾಣಗಳು ಸೇರಿ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆಗೆ ಡಿಜಿ-ಐಜಿಪಿ ಡಾ. ಸಲೀಂ ಸೂಚಿನೆ ನೀಡಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ, ಸ್ಥಳಗಳ ಮೇಲೆ ನಿಗಾ ಇಡುವಂತೆ ನಿರ್ದೇಶಿಸಲಾಗಿದ್ದು, ಲಾಡ್ಜ್‌ನಲ್ಲಿ ತಂಗಿರುವ ಹೊರ ರಾಜ್ಯದವರನ್ನೂ ಗಮನಿಸುವಂತೆ ಆದೇಶ ಹೊರಡಿಸಲಾಗಿದೆ.