ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SCO Summit: ಮೋದಿ ಚೀನಾ ಪ್ರವಾಸಕ್ಕೆ ಮುಹೂರ್ತ ಫಿಕ್ಸ್‌; ಗಲ್ವಾನ್‌ ಘರ್ಷಣೆಯ ಬಳಿಕ ಮೊದಲ ಭೇಟಿ

Narendra Modi: ಆಗಸ್ಟ್ 31ರಿಂದ ಸೆಪ್ಟೆಂಬರ್ 1ರವರೆಗೆ ನಡೆಯುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಚೀನಾದ ಟಿಯಾಂಜಿನ್‌ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2020ರಲ್ಲಿ ನಡೆದ ಗಲ್ವಾನ್‌ ಘರ್ಷಣೆಯ ಬಳಿಕ ಇದೇ ಮೊದಲ ಬಾರಿ ಮೋದಿ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ.

ಮೋದಿ ಚೀನಾ ಪ್ರವಾಸಕ್ಕೆ ಮುಹೂರ್ತ ಫಿಕ್ಸ್‌

Ramesh B Ramesh B Aug 6, 2025 6:57 PM

ದೆಹಲಿ: ಗಲ್ವಾನ್‌ ಘರ್ಷಣೆಯ (Galwan clash) 5 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ (Narendra Modi) ಮೋದಿ ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 1ರವರೆಗೆ ನಡೆಯುವ ಶಾಂಘೈ ಸಹಕಾರ ಸಂಸ್ಥೆ (Shanghai Cooperation Organisation-SCO) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಚೀನಾದ ಟಿಯಾಂಜಿನ್‌ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2020ರಲ್ಲಿ ನಡೆದ ಗಲ್ವಾನ್‌ ಘರ್ಷಣೆಯ ಬಳಿಕ ಹದಗೆಟ್ಟ ಭಾರತ-ಚೀನಾ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಕೊನೆಯ ಬಾರಿಗೆ ಚೀನಾಕ್ಕೆ 2019ರಲ್ಲಿ ತೆರಳಿದ್ದರು. ಅದಾದ ಬಳಿಕ ಭಾರತ ಮತ್ತು ಚೀನಾ ಮಧ್ಯೆ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ಮತ್ತೆ ಅಲ್ಲಿಗೆ ತೆರಳಿರಲಿಲ್ಲ. ಅದಾಗ್ಯೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಅವರನ್ನು ಮೋದಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಷ್ಯಾದ ಕಝಾನ್‌ ನಡೆದ ಬ್ರಿಕ್ಸ್‌ ಶೃಂಗಸಭೆಯಲ್ಲಿ (BRICS Summit) ಭೇಟಿಯಾಗಿದ್ದರು.



ಈ ಸುದ್ದಿಯನ್ನೂ ಓದಿ: Xi Jinping: ಮತ್ತೆ ಕ್ಯಾತೆ ತೆಗೆದ ಚೀನಾ... ತೈವಾನ್‌ ತಮಗೆ ಸೇರಿದ್ದು ಎಂದ ಕ್ಸಿ ಜಿನ್‌ಪಿಂಗ್

ರಷ್ಯಾದಿಂದ ತೈಲ ಖರೀದಿಸುವುದನ್ನೇ ನೆಪ ಮಾಡಿಕೊಂಡು ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಭಾರತದ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುತ್ತಿದ್ದು, ಇದರ ಬೆನ್ನಲ್ಲೇ ಮೋದಿ ಚೀನಾ ಭೇಟಿ ಮಹತ್ವ ಪಡೆದುಕೊಂಡಿದೆ. ಚೀನಾದೊಂದಿಗಿನ ಭಾರತದ ಸಂಬಂಧ ವೃದ್ಧಿ ಅಮೆರಿಕ ಜತೆಗಿನ ವ್ಯಾಪಾರ ಸಂಘರ್ಷವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಜಮ್ಮು ಕಾಶ್ಮೀರದ ಪಹಲ್ಗಾಮ್‌ ದಾಳಿಯ ವೇಳೆ ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲೂ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಈ ವರ್ಷದ ಜೂನ್‌ನಲ್ಲಿ ಶಾಂಘೈ ಸಹಕಾರ ಸಂಸ್ಥೆ ಅಡಿಯಲ್ಲಿ ನಡೆದ ರಕ್ಷಣಾ ಸಚಿವರ ಸಭೆಯಲ್ಲಿ ಜಂಟಿ ಹೇಳಿಕೆಗೆ ಸಹಿ ಹಾಕಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿರಾಕರಿಸಿದ್ದರು. ಈ ಹೇಳಿಕೆಯು ಏಪ್ರಿಲ್ 22ರಂದು 26 ಭಾರತೀಯರನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಯಾವುದೇ ಉಲ್ಲೇಖವನ್ನು ಒಳಗೊಂಡಿಲ್ಲ ಎಂದು ಅವರು ಈ ವೇಳೆ ವಾಗ್ದಾಳಿ ನಡೆಸಿದ್ದರು. ಪಾಕಿಸ್ತಾನದ ಆದೇಶದ ಮೇರೆಗೆ ಪಹಲ್ಗಾಮ್ ಹೆಸರನ್ನು ದಾಖಲೆಯಿಂದ ಹೊರಗಿಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು.

ಜುಲೈಯಲ್ಲಿ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾದ ದಿ ರೆಸಿಸ್ಟೆನ್ಸ್ ಫ್ರಂಟ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಅಮೆರಿಕ ಘೋಷಿಸಿದಾಗ ಚೀನಾ ಬೆಂಬಲ ನೀಡಿತ್ತು.

ಏನಿದು ಎಸ್‌ಸಿಒ?

2001ರಲ್ಲಿ ಸ್ಥಾಪನೆಯಾದ ಎಸ್‌ಸಿಒ ಪರಸ್ಪರ ಸಹಕಾರದ ಮೂಲಕ ಪ್ರಾದೇಶಿಕ ಸ್ಥಿರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಬೆಲಾರಸ್, ಚೀನಾ, ಭಾರತ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ ಈ ಬಣದ ಸದಸ್ಯ ರಾಷ್ಟ್ರಗಳು.

ಪೂರ್ವ ಲಡಾಖ್‌ನ ಗಲ್ವಾನ್‌ನಲ್ಲಿ 2020ರಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಚೀನಾದ ಕಡೆಯಿಂದಲೂ ಸಾಕಷ್ಟು ಕೂಡ ಸಾವುನೋವುಗಳು ವರದಿಯಾಗಿತ್ತು.