ದೆಹಲಿ, ಜು. 30: ಬುಧವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡ ಪ್ರಶ್ನೆಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ವಿಧೇಯಕಕ್ಕೆ (Anti-paper leak Bill) ಗುರುವಾರ ರಾಜ್ಯಸಭೆಯೂ ಅಸ್ತು ಎಂದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಕಿತ ಬಿದ್ದರೆ ಕಾನೂನಾಗಿ ದೇಶಾದ್ಯಂತ ಜಾರಿಗೆ ಬರಲಿದೆ. ರಾಜ್ಯಸಭೆಯಲ್ಲಿ ಈ ಬಿಲ್ ಪಾಸ್ ಅಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತೊಂದು ವಿಡಿಯೊ ಸಂದೇಶ ಹಂಚಿಕೊಂಡಿದ್ದಾರೆ. ಬಿಲ್ ಸಂಸತ್‌ನಲ್ಲಿ ಅಂಗೀಕಾರಗೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ಮುಂದೆ ದೇಶದಲ್ಲಿ ವಿಶ್ವಸ್ಥ ಪರೀಕ್ಷಾ ಪದ್ಧತಿ ಇರಲಿದೆ ಎಂದು ಹೇಳಿ ಆ ಮೂಲಕ ವಿದ್ಯಾರ್ಥಿಗಳಿಗೆ ಅಭಯ ನೀಡಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬಳಿಕ ಇದೀಗ ಪ್ರಶ್ನೆಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ವಿಧೇಯಕ ಪಾಸ್ ಅಗಿದ್ದು, ಆ ಮೂಲಕ ಪ್ರತಿಪಕ್ಷಗಳಿಗೆ ಖಡಕ್ ಸಂದೇಶ ರವಾನಿಸಲಾಗಿದೆ. ಜತೆಗೆ ಮೋದಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.
ಅಲ್ಲದೆ ಅಕ್ರಮಗಳಿಗೆ ಕಠಿಣ ಶಿಕ್ಷೆ ನೀಡುವ ಪ್ರಶ್ನೆಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ವಿಧೇಯಕವನ್ನು ಮೋದಿ ಸ್ವಾಗತಿಸಿದ್ದಾರೆ. ಶಿಕ್ಷಣ ಸುಧಾರಣೆಗಳ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವುದರ ಜತೆಗೆ ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆಯನ್ನು ರಚಿಸಲು ಕೇಂದ್ರವು ನಿರಂತರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ಮೋದಿ ಅವರ 4ನೇ ವಿಡಿಯೊ ಸಂದೇಶ ಇದಾಗಿದೆ.
ನರೇಂದ್ರ ಮೋದಿ ಅವರ ವಿಡಿಯೊ ಸಂದೇಶ:
ಮೋದಿ ಹೇಳಿದ್ದೇನು?
ʼʼರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದಶಕಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆಯ ಸಮಸ್ಯೆ ಎದುರಿಸುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿದೆ. ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲು ನಮ್ಮ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅವುಗಳಲ್ಲಿ ಫಾಸ್ಟ್-ಟ್ರ್ಯಾಕ್ ಕೋರ್ಟ್ ಸ್ಥಾಪನೆಯೂ ಸೇರಿದೆ. ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ನಾವು ನಿರಂತರವಾಗಿ ಒಂದರ ನಂತರ ಒಂದರಂತೆ ಹೆಜ್ಜೆ ಇಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಫಾಸ್ಟ್-ಟ್ರ್ಯಾಕ್ ಕೋರ್ಟ್ ಜಾರಿಗೆ ತರಲಾಗುತ್ತಿದೆ ಮತ್ತು ತಜ್ಞರ ಸಲಹೆ ಪಡೆಯಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.
10 ವರ್ಷ ಜೈಲು, 10 ಕೋಟಿ ರುಪಾಯಿ ದಂಡ; ಕೇಂದ್ರ ಮಂಡಿಸಿದ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆಯಲ್ಲಿ ಏನಿದೆ?
ವ್ಯವಸ್ಥಿತ ಸುಧಾರಣೆಗಳಿಗೆ ಕರೆ ನೀಡಿದ ಪ್ರಧಾನಿ ಮೋದಿ, ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸುವ ಮತ್ತು ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳುವ ಅಗತ್ಯವನ್ನು ತಿಳಿಸಿದ್ದಾರೆ. "ಎಲ್ಲ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳು ಅತ್ಯಗತ್ಯ. ಇದಕ್ಕಾಗಿ ತಂತ್ರಜ್ಞಾನದ ವ್ಯಾಪಕ ಬಳಕೆಯ ಅಗತ್ಯವೂ ಇದೆʼʼ ಎಂದಿದ್ದಾರೆ.
ಮಾಫಿಯಾಕ್ಕೆ ಜಾಗವಿಲ್ಲ
ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವವರಿಗೆ ಪ್ರಧಾನಿ ಕಠಿಣ ಎಚ್ಚರಿಕೆಯನ್ನೂ ನೀಡಿದ್ದಾರೆ. "ಯಾವುದೇ ಪತ್ರಿಕೆ ಮಾಫಿಯಾ, ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಯಾವುದೇ ಗ್ಯಾಂಗ್ ಮತ್ತು ದೇಶದ ಮಕ್ಕಳ ಭವಿಷ್ಯದ ಜತೆ ಆಟವಾಡುವವರುನ್ನು ಬಿಡುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುತ್ತೇವೆʼʼ ಎಂದು ಎಚ್ಚರಿಸಿದ್ದಾರೆ.
ʼʼಇದಕ್ಕಾಗಿ ಕಟ್ಟುನಿಟ್ಟಿನ ಕಾನೂನು ಸಹ ಅಗತ್ಯ. ನಾವು ಸಂಸತ್ತಿಗೆ ಮಸೂದೆಯನ್ನು ತಂದಿದ್ದೇವೆ ಮತ್ತು ನಾನು ನಿಮಗೆ ಭರವಸೆ ನೀಡಿದ್ದಂತೆ ಎರಡು ದಿನಗಳಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಸಂಸದರು ಅದನ್ನು ವಿವರವಾಗಿ ಚರ್ಚಿಸಿದ್ದಾರೆʼʼ ಎಂದು ಹೇಳಿದ್ದಾರೆ.
ಪರೀಕ್ಷಾ ಗುಣಮಟ್ಟ ಸುಧಾರಣೆಗೆ ಟಾಸ್ಕ್‌ಫೋರ್ಸ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ; ನಂದನ್ ನಿಲೇಕಣಿ ನೇತೃತ್ವ
ಫ್ರೆಂಡ್ಸ್ ಬದಲು ಸಾಥಿಯೊಂ
ಪ್ರಧಾನಿ ಅವರ ಈ 4ನೇ ಸೆಲ್ಫಿ ವಿಡಿಯೊ ಮತ್ತೊಮ್ಮೆ ನೆಟ್ಟಿಗರ ಗಮನ ಸೆಳೆದಿದೆ. ಆರಂಭದ 3 ವಿಡಿಯೊಗಳಲ್ಲಿ ಅವರು ಫ್ರೆಂಡ್ಸ್ ಎಂದು ಸಂಭೋದಿಸಿದ್ದರೆ ಈ ಬಾರಿ ಸಾಥಿಯೊಂ ಎಂದು ಕರೆದಿದ್ದಾರೆ. ಜೆನ್ ಝೀ ತಲೆಮಾರಿನ ಯುವ ಜನತೆಯ ಗಮನ ಸೆಳಯುವ ಉದ್ದೇಶದಿಂದ ಪ್ರಧಾನಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ಸೆಲ್ಫಿ ವಿಡಿಯೊ ಮೂಲಕ ಚರ್ಚಿಸುತ್ತಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.