ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rekha Gupta: ರೇಖಾ ಗುಪ್ತಾ ತಳಮಟ್ಟದ ನಾಯಕಿ; ದಿಲ್ಲಿಯ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ: ಅಭಿನಂದನೆ ತಿಳಿಸಿದ ಮೋದಿ

ಬರೋಬ್ಬರಿ 27 ವರ್ಷಗಳ ಬಳಿಕ ಭರ್ಜರಿ ಬಹುಮತ ಪಡೆದು ಬಿಜೆಪಿ ದಿಲ್ಲಿಯ ಗದ್ದುಗೆಗೆ ಏರಿದೆ. ಮುಖ್ಯಮಂತ್ರಿಯಾಗಿ 50 ವರ್ಷದ ರೇಖಾ ಗುಪ್ತಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರದಾನಿ ಮೋದಿ ,ಇಡೀ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

ನರೇಂದ್ರ ಮೋದಿ ಮತ್ತು ರೇಖಾ ಗುಪ್ತಾ.

ಹೊಸದಿಲ್ಲಿ: ಬರೋಬ್ಬರಿ 27 ವರ್ಷಗಳ ಬಳಿಕ ಭರ್ಜರಿ ಬಹುಮತ ಪಡೆದು ಬಿಜೆಪಿ (BJP) ದಿಲ್ಲಿಯ ಗದ್ದುಗೆಗೆ ಏರಿದೆ. ಮುಖ್ಯಮಂತ್ರಿಯಾಗಿ ಹಿರಿಯ ನಾಯಕಿ ರೇಖಾ ಗುಪ್ತಾ (Rekha Gupta) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದಿಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ಗುರುವಾರ (ಫೆ. 20) ಆಯೋಜಿಸಿದ್ದ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೆಂದ್ರ ಮೋದಿ (Narendra Modi) ಸಹಿತ ಹಲವು ಬಿಜೆಪಿ ನಾಯಕರು ಹಾಜರಿದ್ದರು. ಇದೀಗ ಮೋದಿ ಅವರು ನೂತನ ಮುಖ್ಯಮಂತ್ರಿ ರೇಖಾ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ರೇಖಾ ಅವರನ್ನು ತಳಮಟ್ಟದ ನಾಯಕಿ ಎಂದು ಕರೆದ ಮೋದಿ ರಾಷ್ಟ್ರ ರಾಜಧಾನಿಯನ್ನು ಅಭಿವೃದ್ಧಿಪಡಿಸಲು ಅವರು ಕೆಲಸ ಮಾಡಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಈ ಬಗ್ಗೆ ಮೋದಿ ಬರೆದುಕೊಂಡಿದ್ದು, "ದಿಲ್ಲಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರೇಖಾ ಗುಪ್ತಾ ಅವರಿಗೆ ಅಭಿನಂದನೆಗಳು. ಅವರು ತಳಮಟ್ಟದಿಂದ ಬೆಳೆದಿದ್ದಾರೆ. ಕ್ಯಾಂಪಸ್ ರಾಜಕೀಯ, ರಾಜ್ಯ ಸಂಘಟನೆ, ಪುರಸಭೆ, ವಿಧಾನಸಭೆಯಲ್ಲಿ ಗುರುತಿಸಿಕೊಂಡು ಇದೀಗ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ. ಅವರು ದಿಲ್ಲಿಯ ಅಭಿವೃದ್ಧಿಗೆ ಕೆಲಸ ಮಾಡುತ್ತಾರೆ ಎಂದು ನನಗೆ ವಿಶ್ವಾಸವಿದೆ. ಅವರಿಗೆ ನನ್ನ ಶುಭ ಹಾರೈಕೆಗಳು" ಎಂದು ತಿಳಿಸಿದ್ದಾರೆ.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಪರ್ವೇಶ್‌ ವರ್ಮಾ, ಆಶೀಷ್‌ ಸೂದ್‌, ಮಜಿಂದರ್‌ ಸಿಂಗ್‌ ಸಿರ್ಸಾ, ರವಿಂದರ್‌ ಇಂದ್ರಜಾ ಸಿಂಗ್‌ ಮತ್ತು ಒಂಕಜ್‌ ಕುಮಾರ್‌ ಸಿಂಗ್‌ ಅವರನ್ನೂ ಮೋದಿ ಅಭಿನಂದಿಸಿದ್ದಾರೆ. "ಈ ತಂಡವು ಖಂಡಿತವಾಗಿಯೂ ದಿಲ್ಲಿಗೆ ಉತ್ತಮ ಆಡಳಿತ ನೀಡಲಿದೆʼʼ ಎಂದು ಹೇಳಿದ್ದಾರೆ.



4ನೇ ಮಹಿಳಾ ಮುಖ್ಯಮಂತ್ರಿ

ಮೊದಲ ಬಾರಿಗೆ ಶಾಲಿಮಾರ್‌ ಭಾಗ್‌ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾದ ರೇಖಾ ಅವರಿಗೆ ಮುಖ್ಯಮಂತ್ರಿ ಗಾದಿ ಒಲಿದಿದೆ. ಇವರು ದಿಲ್ಲಿಯಲ್ಲಿ ಮುಖ್ಯಮಂತ್ರಿ ಗಾದಿಗೆ ಏರಿದ 4ನೇ ಮಹಿಳೆ ಎನಿಸಿಕೊಂಡಿದ್ದಾರೆ. ಈ ಹಿಂದೆ ಬಿಜೆಪಿಯ ಸುಷ್ಮಾ ಸ್ವರಾಜ್‌, ಕಾಂಗ್ರೆಸ್‌ನ ಶೀಲಾ ದೀಕ್ಷಿತ್‌ ಮತ್ತು ಆಪ್‌ನ ಅತಿಶಿ ಮುಖ್ಯಮಂತ್ರಿ ಪಟ್ಟಕ್ಕೇರಿದ್ದರು.

ಫೆ. 5ರಂದು ಒಂದೇ ಹಂತದಲ್ಲಿ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ 48 ಕಡೆ ಜಯಗಳಿಸಿ ಬಿಜೆಪಿ ಅಧಿಕಾರಕ್ಕೇರಿದೆ. ಇನ್ನು ಆಪ್‌ 22 ಸೀಟುಗಳಿಗೆ ಸೀಮಿತವಾಗಿದೆ. ಆ ಮೂಲಕ 1998ರ ಬಳಿಕ ಕೇಸರಿ ಪಕ್ಷ ರಾಷ್ಟ್ರ ರಾಜಧಾನಿಯಲ್ಲಿ ಆಡಳಿತಕ್ಕೆ ಮರಳಿದೆ. 1998ರಿಂದ 2013ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸತತ 3ನೇ ಬಾರಿಯೂ ಶೂನ್ಯ ಸಾಧನೆ ಮಾಡಿದೆ.

ರೇಖಾ ಗುಪ್ತಾ ಹಿನ್ನೆಲೆ

ವಿದ್ಯಾರ್ಥಿ ನಾಯಕಿಯಾಗಿ ಕೇಸರಿ ಪಾಳಯದೊಂದಿಗೆ ಗುರುತಿಸಿಕೊಂಡಿರುವ ರೇಖಾ ಗುಪ್ತಾ, ಸದ್ಯ ದಿಲ್ಲಿ ಬಿಜೆಪಿಯ ಜನರಲ್‌ ಸೆಕ್ರೆಟರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. 50 ವರ್ಷದ ರೇಖಾ ಗುಪ್ತಾ ಈ ಹಿಂದೆ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದರು. ರೇಖಾ ಗುಪ್ತಾ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶಾಲಿಮಾರ್ ಭಾಗ್ (ವಾಯುವ್ಯ) ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಗೊಂಡಿದ್ದರು.