ನವದೆಹಲಿ, ನ. 12: ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಮಿಲನ್ (Diwali Milan) ಕಾರ್ಯಕ್ರಮದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಮೂರು ದಶಕಗಳಲ್ಲಿ ಮಾಧ್ಯಮ ಲೋಕದಲ್ಲಿ ಆಗಿರುವ ಕ್ರಾಂತಿಕಾರಿ ಬದಲಾವಣೆಗಳನ್ನು ಮತ್ತು ಅನುಭವಗಳನ್ನು ಸ್ವಾರಸ್ಯಕರವಾಗಿ ಹಂಚಿಕೊಂಡಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ತಮ್ಮ ರಾಜಕೀಯ ಜೀವನದಲ್ಲಿ ಮಾಧ್ಯಮದೊಂದಿಗಿನ ಆರಂಭಿಕ ದಿನಗಳು ಮತ್ತು ಪಕ್ಷದಲ್ಲಿನ ಮಾಧ್ಯಮ ಜವಾಬ್ದಾರಿ ನಿರ್ವಹಿಸುತ್ತಿದ್ದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ''ದೀಪಾವಳಿ ಹಬ್ಬ ಮುಗಿದಿದೆ, ಛತ್ ಪೂಜೆಯ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ಹಬ್ಬಗಳ ನಡುವಿನಲ್ಲಿಯೂ ಪತ್ರಕರ್ತರು ತಮ್ಮ ಕುಟುಂಬಗಳೊಂದಿಗೆ ಕಾಲ ಕಳೆಯುವ ಬದಲು ವೃತ್ತಿಜೀವನದ ನಡುವೆಯೂ ಕಾರ್ಯಕ್ರಮಕ್ಕೆ ಆಗಮಿಸಿರುವುದಕ್ಕೆ ಧನ್ಯವಾದಗಳು'' ಎಂದು ಮೋದಿ ಹೇಳಿದರು.
ದೀಪಾವಳಿ ಮಿಲನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ:
ಮಾಧ್ಯಮ ಕ್ಷೇತ್ರದಲ್ಲಿನ ಬೆಳವಣಿಗೆ ವಿವರಿಸಿದ ಮೋದಿ
ತಾವು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಆರಂಭಿಕ ದಿನಗಳನ್ನು ನೆನೆದ ಮೋದಿ, "ಆಗ ಪಕ್ಷದ ಕಾರ್ಯಕ್ರಮಗಳ ಮಾಹಿತಿಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಲು ಪ್ರೆಸ್ ರಿಲೀಸ್ಗಳನ್ನು ಸಿದ್ಧಪಡಿಸಿ ಪತ್ರಕರ್ತರಿಗೆ ತಲುಪಿಸುವುದೇ ದೊಡ್ಡ ಕೆಲಸವಾಗಿತ್ತು" ಎಂದು ಹೇಳಿದರು. ''ನಾನು ರಾಜಕೀಯಕ್ಕೆ ಬಂದಾಗ ಮುದ್ರಣ ಮಾಧ್ಯಮವೇ ಪ್ರಧಾನವಾಗಿತ್ತು. ನಂತರ ಟಿವಿ ಚಾನೆಲ್ಗಳ ಯುಗ ಬಂತು. ಈಗ ನೋಡಿದರೆ ಕಾಲ ಸಂಪೂರ್ಣ ಬದಲಾಗಿದ್ದು, ಇಡೀ ಜಗತ್ತು 'ಇನ್ಸ್ಟಾಗ್ರಾಮ್ ರೀಲ್ಸ್' ಹಿಂದೆ ಓಡುತ್ತಿದೆ" ಎಂದು ತಂತ್ರಜ್ಞಾನದ ವೇಗವನ್ನು ಬಣ್ಣಿಸಿದರು. ದಶಕಗಳಿಂದ ತಾವು ಕಂಡ ಹಿರಿಯ ಪತ್ರಕರ್ತರು ಮತ್ತು ಇಂದಿನ ಯುವ ಪತ್ರಕರ್ತರ ನಡುವಿನ ವ್ಯತ್ಯಾಸಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ರಾಜಕೀಯ ಮತ್ತು ಮಾಧ್ಯಮ ಕ್ಷೇತ್ರಗಳು ಪರಸ್ಪರ ಪೂರಕವಾಗಿ ಬೆಳೆದುಬಂದ ಹಾದಿಯನ್ನು ವಿವರಿಸಿದರು.
ಸಂಸತ್ತಿನಲ್ಲಿ ನರೇಂದ್ರ ಮೋದಿ-ಮಲ್ಲಿಕಾರ್ಜುನ ಖರ್ಗೆ ನಡುವೆ ಲಘು ಹಾಸ್ಯ, ಹಸ್ತಲಾಘವ
ಆ ದಿನಗಳಲ್ಲಿ ಕಲಿತ ಪಾಠಗಳು ಇಂದಿಗೂ ತಮ್ಮ ಕೆಲಸಕ್ಕೆ ನೆರವಾಗುತ್ತಿವೆ ಎಂದು ತಿಳಿಸಿದ ಮೋದಿ, ಪತ್ರಕರ್ತರೊಂದಿಗಿನ ಮತ್ತೊಂದು ಸ್ವಾರಸ್ಯಕರ ಘಟನೆಯನ್ನೂ ಹಂಚಿಕೊಂಡರು. ಕಳೆದ ತಿಂಗಳು ತಾವು ಸರ್ಕಾರದ ಮುಖ್ಯಸ್ಥರಾಗಿ ನಿರಂತರ 25 ವರ್ಷಗಳನ್ನು ಪೂರ್ಣಗೊಳಿಸಿದ್ದನ್ನು ನೆನಪಿಸಿಕೊಂಡ ಅವರು, ಪತ್ರಕರ್ತರು ತಮ್ಮನ್ನು ಹೇಗೆ ಕೆಲವೊಮ್ಮೆ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು ಎಂಬುದನ್ನು ಹಾಸ್ಯಭರಿತವಾಗಿ ವಿವರಿಸಿದರು. ಒಂದು ದಿನ ಪತ್ರಕರ್ತರ ಗುಂಪೊಂದು ತಮ್ಮ ಕೊಠಡಿಗೆ ಬಂದಿತ್ತು. ಸಾಮಾನ್ಯವಾಗಿ ಹೀಗೆ ಗುಂಪಾಗಿ ಬರುವುದು ಅಪರೂಪವಾಗಿತ್ತು. ಪತ್ರಕರ್ತೆಯರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ನಮಗೆ ಸಿಹಿ ತಿನಿಸು ನೀಡಿ, ನೀವು ಗುಜರಾತ್ಗೆ ಹೋಗುತ್ತಿದ್ದೀರಿ, ಮುಖ್ಯಮಂತ್ರಿಯಾಗಲಿದ್ದೀರಿ ಎಂದು ಅವರು ಹೇಳಿದ್ದರು. ಆ ಸಂದರ್ಭವನ್ನು ಮೋದಿ ಮೆಲುಕು ಹಾಕಿದರು.
ಆಡಳಿತ ಜೀವನದ ಪಯಣ ನೆನೆದ ಪ್ರಧಾನಿ
ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಂದಿನ ಪ್ರಧಾನಿ ಹುದ್ದೆಯವರೆಗೆ ತಾವು ಒಂದೇ ಒಂದು ದಿನವೂ ರಜೆ ಅಥವಾ ವಿಶ್ರಾಂತಿ ಪಡೆದಿಲ್ಲ ಎಂದು ಮೋದಿ ತಿಳಿಸಿದರು. ಅಧಿಕಾರವು ಕೇವಲ ಕಚೇರಿಗೆ ಸೀಮಿತವಲ್ಲ, ಸದಾ ಜನರ ನಡುವೆ ಇದ್ದು ದೇಶದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುವುದೇ ತಮ್ಮ ಆಡಳಿತದ ಮೂಲ ಮಂತ್ರವಾಗಿದೆ ಎಂದರು. ದಶಕಗಳ ಈ ಸುದೀರ್ಘ ಪಯಣದಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿನಿಲ್ಲಲು ದೇಶದ ಜನತೆ ತೋರಿದ ಪ್ರೀತಿ ಮತ್ತು ನಂಬಿಕೆಯೇ ತಮಗೆ ದೊಡ್ಡ ಬಲ ನೀಡಿದೆ ಎಂದು ಅವರು ಸ್ಮರಿಸಿದರು.