ದೆಹಲಿ, ಮೇ 4: ''ಭಾರತ್ ಮಾತಾ ಕೀ ಜೈʼʼ-ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಮತ್ತು ಕೇರಳಂ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ತೋರಿದ ಅಭೂತಪೂರ್ವ ಪ್ರದರ್ಶನದ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾತು ಆರಂಭಿಸಿದ ರೀತಿ ಇದು. ಬಿಜೆಪಿ ಪಾಲಿಗೆ ಇದು ಐತಿಹಾಸಿಕ ದಿನ ಎಂದು ಅವರು ಬಣ್ಣಿಸಿದರು. ಕಳೆದ ತಿಂಗಳು ನಡೆದ ಪಂಚ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರ ಬೀಳುತ್ತಿದ್ದು, ಬಿಜೆಪಿ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸುವತ್ತ ದಾಪುಗಾಲು ಇಡುತ್ತಿದೆ. ಇತ್ತ ಅಸ್ಸಾಂನಲ್ಲಿ ಸತತ 3ನೇ ಬಾರಿಗೆ ತಾವರೆ ಪಡೆಗೆ ಅಧಿಕಾರ ಸಿಕ್ಕಿದೆ. ಇನ್ನು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿಯೂ ಎನ್‌ಡಿಎ ಒಕ್ಕೂಟಕ್ಕೆ ಬಹುಮತ ಲಭಿಸಿದ್ದು, ಕೇರಳಂನಲ್ಲಿ ಇದೇ ಮೊದಲ ಬಾರಿಗೆ 3 ಕ್ಷೇತ್ರಗಳಲ್ಲಿ ಜಯ ಗಳಿಸಿದೆ.
ವಿಶೇಷ ಉಡುಗೆ ತೊಟ್ಟು ಬಿಜೆಪಿ ಕಚೇರಿಗೆ ಮೋದಿ ಆಗಮಿಸಿದರು. ಎಂದಿನಂತೆ ಈ ಬಾರಿಯೂ ಅವರು ತೊಟ್ಟ ಉಡುಗೆ ಗಮನ ಸೆಳೆಯಿತು. ಬೆಂಗಾಳಿ ಶೈಲಿಯಲ್ಲಿ ಧೋತಿ-ಕುರ್ತಾ ಧರಿಸಿ ಪಶ್ಚಿಮ ಬಂಗಾಳ ಜನತೆಗೆ ಪ್ರಬಲ ರಾಜಕೀಯ ಸಂದೇಶ ಸಾರಿದರು. ಬಿಳಿ ಕುರ್ತಾ ಮತ್ತು ಕೆಂಪು ಹೆಮ್‌ಲೈನ್ ಹೊಂದಿರುವ ಟಸ್ಸರ್ ರೇಷ್ಮೆ ಧೋತಿಯನ್ನು ಅವರು ಧರಿಸಿದ್ದರು. ಇದು ಬೆಂಗಾಳಿ ಪುರುಷರು ಧರಿಸುವ ಸಾಂಪ್ರದಾಯಿಕ ಉಡುಗೆ. ಅಷ್ಟೇ ಅಲ್ಲ ಬೆಂಗಾಳಿ ಪುರುಷರು ಮಾಡುವಂತೆ ಧೋತಿಯ ತುದಿಯನ್ನು ತಮ್ಮ ಕುರ್ತಾ ಜೇಬಿನೊಳಗೆ ಹಾಕಿಕೊಂಡು ಗಮನ ಸೆಳೆದರು. ಜತೆಗೆ ಅವರು ಬಳಸಿರುವ ಸ್ಕಾರ್ಫ್ ಕೂಡ ಬಂಗಾಳಿ ಸಂಸ್ಕೃತಿಯನ್ನು ಪ್ರತಿಬಿಂಬಿಸಿದೆ.
ಮೋದಿ ಅವರ ಭಾಷಣ:
ಬಂಗಾಳದಲ್ಲಿ ಬದಲಾವಣೆಯ ಗಾಳಿ
ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳಿಂದ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಭದ್ರಕೋಟೆಯನ್ನು ಛಿದ್ರಗೊಳಿಸಿದ ಬಿಜೆಪಿ 200ಕ್ಕಿಂತಲೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸಲಿದ್ದು, ಈ ಐತಿಹಾಸಿಕ ಸಾಧನೆಗೆ ಮೋದಿ ಕಾರ್ಯಕರ್ತರನ್ನು ಅಭಿನಂದಿಸಿದರು.
ʼʼಗಂಗೋತ್ರಿಯಿಂದ ಗಂಗಾಸಾಗರ ತನಕ ಎಲ್ಲ ಕಡೆಗಳಲ್ಲಿ ತಾವರೆ ಅರಳಿದೆ. ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ಈಗ ಪಶ್ಚಿಮ ಬಂಗಾಳ-ಎಲ್ಲೆಲ್ಲೂ ಬಿಜೆಪಿ ಜಯ ಗಳಿಸಿದೆ. ಪವಿತ್ರ ಗಂಗಾ ನದಿ ಹರಿಯುವ ರಾಜ್ಯಗಳಲ್ಲೆಲ್ಲ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆʼʼ ಎಂದು ಹೇಳಿದರು.
4 ರಾಜ್ಯ, 1 ಕೇಂದ್ರಾಡಳಿತ ಪ್ರದೇಶದ ಚುನಾವಣಾ ಫಲಿತಾಂಶ; ಯಾವ ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬಂದ್ರು?
ಈ ಸಂದರ್ಭದಲ್ಲಿ ಮೋದಿ ಪಶ್ಚಿಮ ಬಂಗಾಳದ ಜನತೆಗೆ 2 ಪ್ರಮುಖ ಭರವಸೆಗಳನ್ನು ನೀಡಿದರು. ಒಳನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮತ್ತು ರಾಜ್ಯದಲ್ಲಿ ಕೇಂದ್ರ ಆರೋಗ್ಯ ಯೋಜನೆಯನ್ನು ತಕ್ಷಣ ಸಕ್ರಿಯಗೊಳಿಸುವುದು ಹೇಳಿದರು.
"ಇಂದಿನಿಂದ ಬಂಗಾಳದ ಭವಿಷ್ಯಕ್ಕೆ ಹೊಸ ಅಧ್ಯಾಯ ಸೇರ್ಪಡೆಯಾಗಿದೆ. ಬಂಗಾಳ ಭಯದಿಂದ ಮುಕ್ತವಾಗಿದೆ ಮತ್ತು ಈಗ ಅಭಿವೃದ್ಧಿಯ ವಿಶ್ವಾಸ ತುಂಬಿದೆʼʼ ಎಂದು ಮೋದಿ ಬಣ್ಣಿಸಿದರು. ಈ ವೇಳೆ ಅವರು ಬೆಂಗಾಳಿಯಲ್ಲಿ ʼʼಬಂಗಾಳ ಪೊರಿಬೋರ್ಟನ್ ಹೊಯೆಚೆʼʼ (ಬಂಗಾಳದಲ್ಲಿ ಬದಲಾವಣೆ ಬಂದಿದೆ) ಎಂದು ಹೇಳಿದರು. "ಬಂಗಾಳದಲ್ಲಿ ಬಿಜೆಪಿಯ ಯಶಸ್ಸಿನ ಕೀರ್ತಿಯನ್ನು ನಾನು ಬಂಗಾಳದ ಜನರಿಗೆ ಅರ್ಪಿಸುತ್ತೇನೆ. ಪವಿತ್ರ ಭೂಮಿ ಬಂಗಾಳದಲ್ಲಿ ಹೊಸ ಸೂರ್ಯೋದಯವಾಗಿದೆ" ಎಂದರು.
ಇದೇ ವೇಳೆ ವಿಪಕ್ಷಗಳನ್ನು ಟೀಕಿಸಿದ ಪ್ರದಾನಿ ಮೋದಿ, ʼʼಸಂಸತ್ತಿನಲ್ಲಿ ಮೀಸಲಾತಿ ಮಸೂದೆಯ ಸೋಲಿನಿಂದ ಕೋಪಗೊಂಡ ಮಹಿಳೆಯರು ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಮಸೂದೆಯನ್ನು ತಡೆದ ಎಲ್ಲ ಪಕ್ಷಗಳಿಗೂ ಇದೇ ರೀತಿ ಆಗಲಿದೆ. ಸಹೋದರಿಯರು, ಮಾತೆಯರು ಕಾಂಗ್ರೆಸ್, ಟಿಎಂಸಿ ಮತ್ತು ಡಿಎಂಕೆ ಪಾಠ ಕಲಿಸಿದ್ದಾರೆʼʼ ಎಂದು ತಿಳಿಸಿದರು.
ʼಮೋದಿಮಯ್ ಭಾರತ್ʼ ನಕ್ಷೆ ಬಿಡುಗಡೆ ಮಾಡಿದ ಬಿಜೆಪಿ: ಪಶ್ಚಿಮ ಬಂಗಾಳವನ್ನು ತಲುಪಿದೆ ಕೇಸರಿ ಅಲೆ
"ಕೇರಳಂನಲ್ಲಿ ಎಡಪಕ್ಷಗಳ 10 ವರ್ಷಗಳ ದುರಾಡಳಿತದಿಂದ ಕಾಂಗ್ರೆಸ್ ಖಂಡಿತವಾಗಿಯೂ ಲಾಭ ಪಡೆದಿದೆ. ಆದರೆ ಮುಂದಿನ ಚುನಾವಣೆಯಲ್ಲಿ ಕೇರಳಂನ ಸಹೋದರಿಯರು ಕಾಂಗ್ರೆಸ್‌ಗೆ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ ಮಹಿಳೆಯರು ಸಮಾಜವಾದಿ ಪಕ್ಷದ ವಿರುದ್ಧ ತಿರುಗಿ ಬೀಳಲಿದ್ದಾರೆ. ಮಹಿಳಾ ವಿರೋಧಿ ಸಮಾಜವಾದಿ ಪಕ್ಷವು ಎಷ್ಟೇ ಪ್ರಯತ್ನಿಸಿದರೂ ತನ್ನ ಪಾಪಗಳನ್ನು ಎಂದಿಗೂ ತೊಳೆಯಲು ಸಾಧ್ಯವಾಗುವುದಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದರು.