ಇದು ಹೊಸ ಭಾರತ; ಶತ್ರುಗಳ ಮನೆಗೆ ನುಗ್ಗಿ ಹೊಡೆದುರುಳಿಸುತ್ತೇವೆ: ಹುಟ್ಟುಹಬ್ಬದಂದೇ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಮೋದಿ
PM Modi Birthday: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಯಶಸ್ಸನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ದೇಶ ಎಂದಿಗೂ ಪರಮಾಣು ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಪುನರುಚ್ಚರಿಸಿದರು. 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಧ್ಯ ಪ್ರದೇಶದ ಧಾರ್‌ನಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದರು.

-

ಭೋಪಾಲ್: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯ ಯಶಸ್ಸನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶ ಎಂದಿಗೂ ಪರಮಾಣು ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಪುನರುಚ್ಚರಿಸಿದರು. ʼʼಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ವೇಳೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ತನ್ನ ಭಯೋತ್ಪಾದಕ ಶಿಬಿರ ಸಾಕಷ್ಟು ಹಾನಿಗೊಳಗಾಗಿದೆ ಎಂದು ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (Jaish-e-Mohammed) ಈಗಾಗಲೇ ಒಪ್ಪಿಕೊಂಡಿದ್ದು, ಇದು ಉಗ್ರ ಪೋಷಕ ಪಾಕ್‌ನ ಬಣ್ಣ ಬಯಲು ಮಾಡಿದೆʼʼ ಎಂದು ಅವರು ಗುಡುಗಿದರು.
75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಧ್ಯ ಪ್ರದೇಶದ ಧಾರ್‌ನಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ʼʼಇದು ಹೊಸ ಭಾರತ. ಯಾವುದೇ ದುಷ್ಟ ಶಕ್ತಿಗೆ ಹೆದರುವುದಿಲ್ಲ. ಭಾರತೀಯ ಸೇನೆ ಶತ್ರುಗಳ ಮನೆಗೆ ನುಗ್ಗಿ ಅವರನ್ನು ಹೊಡೆದುರುಳಿಸಿವ ಸಾಮರ್ಥ್ಯ ಹೊಂದಿದೆ. ಹೊಸ ಭಾರತ ಪರಮಾಣು ಬೆದರಿಕೆಗೆ ಹೆದರುವುದಿಲ್ಲʼʼ ಎಂದು ಗುಡುಗಿದರು. ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಈ ಹಿಂದೆ ಹಾಕಿದ್ದ ಪರಮಾಣು ಶಸ್ತ್ರಾಸ್ತ್ರ ಬಳಕೆಯ ಬೆದರಿಕೆಯನ್ನು ಉಲ್ಲೇಖಿಸಿ ಮೋದಿ ಈ ಹೇಳಿಕೆ ನೀಡಿದರು. ಈ ಹಿಂದೆ ಅಸಿಮ್ ಮುನೀರ್, ಭಾರತದೊಂದಿಗೆ ನಡೆಯುವ ಭವಿಷ್ಯದ ಯುದ್ಧದಲ್ಲಿ ಇಸ್ಲಾಮಾಬಾದ್ ಅಸ್ತಿತ್ವಕ್ಕೆ ಬೆದರಿಕೆ ಉಂಟಾದರೆ ಅರ್ಧ ಪ್ರಪಂಚವನ್ನು ನಾಶಮಾಡುವುದಾಗಿ ಹೇಳಿದ್ದರು.
ಮೋದಿ ಅವರ ಎಕ್ಸ್ ಪೋಸ್ಟ್:
Delighted to be in Dhar, Madhya Pradesh! Speaking at the launch of women-centric initiatives, which will strengthen health and well-being at the grassroots level. PM MITRA Park is also being inaugurated. https://t.co/oRNGJjSLpU
— Narendra Modi (@narendramodi) September 17, 2025
ಈ ಸುದ್ದಿಯನ್ನೂ ಓದಿ: PM Modi Birthday: ಪ್ರಧಾನಿ ಮೋದಿ ಬರ್ತ್‌ಡೇಗೆ ವಿಶ್ ಮಾಡಿದ ಸೂಪರ್‌ಸ್ಟಾರ್ ರಜನೀಕಾಂತ್; ಎಕ್ಸ್ ಪೋಸ್ಟ್‌ನಲ್ಲೇನಿದೆ?
"ಆಪರೇಷನ್ ಸಿಂದೂರ್ ಸಮಯದಲ್ಲಿ ನಾವು ಭಯೋತ್ಪಾದಕರ ತಾಣಗಳನ್ನು ನಾಶಪಡಿಸಿದ್ದೇವೆ. ಜೈಶ್ ಭಯೋತ್ಪಾದಕರು ಪಾಕಿಸ್ತಾನದ ಬೆಂಬಲವನ್ನು ಬಹಿರಂಗಪಡಿಸಿದ್ದಾರೆ" ಎಂದರು. ಆಪರೇಷನ್ ಸಿಂದೂರ್ ಸಮಯದಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಕುಟುಂಬವನ್ನು ಬಹಾವಲ್ಪುರದಲ್ಲಿ ಭಾರತೀಯ ಪಡೆಗಳು ಹೊಡೆದುರುಳಿಸಿವೆ ಎಂದು ಸದಸ್ಯ ಮಸೂದ್ ಇಲ್ಯಾಸ್ ಕಾಶ್ಮೀರಿ ಇತ್ತೀಚೆಗೆ ಹೇಳಿಕೆ ನೀಡಿದ್ದ.
ಮಧ್ಯ ಪ್ರದೇಶದ ಧಾರ್ ಜಿಲ್ಲೆಯಲ್ಲಿ ದೇಶದ ಮೊದಲ ಪ್ರಧಾನ ಮಂತ್ರಿ ಮೆಗಾ ಇಂಟಿಗ್ರೇಟೆಡ್ ಜವಳಿ ಪ್ರದೇಶ ಮತ್ತು ಉಡುಪು (PM MITRA) ಉದ್ಯಾನವನಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಜತೆಗೆ 'ಸ್ವಸ್ಥ ನಾರಿ ಸಶಕ್ತ ಪರಿವಾರ್' ಮತ್ತು 'ರಾಷ್ಟ್ರೀಯ ಪೋಷಣ್ ಮಾಹ್' ಅಭಿಯಾನಗಳಿಗೂ ಚಾಲನೆ ನೀಡಿದರು.
ಮಧ್ಯ ಪ್ರದೇಶ, ತೆಲಂಗಾಣ, ಗುಜರಾತ್, ಕರ್ನಾಟಕ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ 7 ಕಡೆಗಳಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಸೌಲಭ್ಯಗಳೊಂದಿಗೆ ದೊಡ್ಡ ಪ್ರಮಾಣದ ಜವಳಿ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವುದು ಪಿಎಂ ಮಿತ್ರ ಯೋಜನೆಯ ಉದ್ದೇಶ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ಧಾರ್ ಜಿಲ್ಲೆಯ ಭೈನ್ಸೋಲಾ ಗ್ರಾಮದಲ್ಲಿ ಸುಮಾರು 2,158 ಎಕ್ರೆಯಲ್ಲಿ ಪಿಎಂ ಮಿತ್ರ ಪಾರ್ಕ್ ತಲೆ ಎತ್ತಲಿದೆ. ಇದು ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿದ್ದು, ಹತ್ತಿ ಉತ್ಪಾದಕರಿಗೆ ನೆರವಾಗಲಿದೆ ಎಂದು ತಿಳಿಸಿದೆ. 2022ರಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಮೋದಿ ಮಧ್ಯ ಪ್ರದೇಶಕ್ಕೆ ಮೋದಿ ಭೇಟಿ ನೀಡುತ್ತಿರುವುದು ಇದು 2ನೇ ಬಾರಿ.